Site icon Vistara News

Fried Oil: ಒಮ್ಮೆ ಕರಿದ ಎಣ್ಣೆಯನ್ನು ಮತ್ತೊಮ್ಮೆ ಬಳಸಬಹುದೆ?

Fried Oil

ಎಣ್ಣೆಯಿಲ್ಲದೆ ಅಡುಗೆಯಿಲ್ಲ. ನಿತ್ಯವೂ ಅಡುಗೆ ಮನೆಯಲ್ಲಿ ಅವರರವರ ಆಯ್ಕೆಯ ಎಣ್ಣೆಯನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಕೆಲವರು ಬಳಸುವ ಪ್ರಮಾಣ ಕಡಿಮೆಯಿರಬಹುದು, ಕೆಲವರು ಹೆಚ್ಚು ಬಳಸಬಹುದು. ಆದರೆ, ಒಂದಲ್ಲ ಒಂದು ವಿಧದಲ್ಲಿ ಎಣ್ಣೆ ದೇಹ ಸೇರಿಯೇ ಸೇರುತ್ತದೆ. ಮಳೆ ಬಂದಾಗ ಬಿಸಿಬಿಸಿ ಪಕೋಡ ಕರಿಯಲು, ಸಿಂಪಲ್‌ ಮೊಸರನ್ನ ಮಾಡಿದಾಗ ಹಪ್ಪಳ ಸೆಂಡಿಗೆ ಕರಿದುಕೊಳ್ಳಲು, ಹಬ್ಬ ಬಂದಾಗ, ಚಕ್ಕುಲಿ ಕೋಡುಬಳೆ ಮಾಡಲು, ನಿತ್ಯವೂ ಮಾಡಿದ ಅಡುಗೆಗೆ ಒಗ್ಗರಣೆ ಹಾಕಲು ಎಣ್ಣೆ ಒಂದಿಲ್ಲೊಂದು ಬಗೆಯಲ್ಲಿ ಬಳಕೆಯಾಗುತ್ತಲೇ ಇರುತ್ತದೆ. ಆದರೆ, ಕರಿಯಲು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೊಮ್ಮೆ ಬಳಸುವುದು ಭಾರತೀಯ ಮನೆಗಳಲ್ಲಿ ಸಾಮಾನ್ಯ ಸಂಪ್ರದಾಯ. ಒಮ್ಮೆ ಪೂರಿಯೋ, ಚಕ್ಕುಲಿಯನ್ನು ಕರಿದ ಎಣ್ಣೆಯನ್ನು ಮತ್ತೊಮ್ಮೆ ಹಪ್ಪಳ ಕರಿಯಲು ಅಥವಾ ಇನ್ನೇನನ್ನೋ ಕರಿಯಲು ಬಳಸಿಬಿಡುತ್ತೇವೆ. ಅದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎಂದು ಯೋಚಿಸುವುದೂ ಇಲ್ಲ. ಬಹಳಷ್ಟು ಮಂದಿಗೆ ಹಾಗೆ ಒಮ್ಮೆ ಕರಿದ ಎಣ್ಣೆಯನ್ನು (fried oil) ಇನ್ನೊಮ್ಮೆ ಬಳಸಬಾರದು ಎಂದೂ ತಿಳಿದಿರುವುದಿಲ್ಲ.

ಅಧ್ಯಯನಗಳ ಪ್ರಕಾರ, ಒಮ್ಮೆ ಕರಿದ ಎಣ್ಣೆಯಲ್ಲಿ ಟ್ರಾನ್ಸ್‌ ಫ್ಯಾಟ್‌ ಅಧಿಕವಾಗಿರುತ್ತದೆ. ಅದು ಆರೋಗ್ಯಕ್ಕೆ ಬಹಳ ಕೆಟ್ಟದ್ದು. ಕೋಲ್ಡ್‌ ಪ್ರೆಸ್‌ ಮಾಡಿದ ಎಣ್ಣೆಗಳಲ್ಲಿ ಬಹುಮುಖ್ಯವಾಗಿ ಕಡಿಮೆ ಸ್ಮೋಕಿಂಗ್‌ ಪಾಯಿಂಟ್‌ ಇರುವುದರಿಂದ ಬಿಸಿ ಮಾಡಿದ ತಕ್ಷಣ ಹಾನಿಕಾರಕ ಫ್ರೀ ರ್ಯಾಡಿಕಲ್ಸ್‌ಗಳನ್ನು ಉತ್ಪತ್ತಿ ಮಾಡುತ್ತವೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಟ್ಟ ಕೊಲೆಸ್ಟೆರಾಲ್‌ ಮಟ್ಟ ಏರುವ ಮೂಲಕ ಹೃದಯಕ್ಕೆ ಮತ್ತಷ್ಟು ಹಾನಿಕಾರಕವಾಗಿ ಪರಿಣಮಿಸುತ್ತದೆ. ತಜ್ಞರ ಪ್ರಕಾರ, ಒಮ್ಮೆ ಕರಿದ ಎಣ್ಣೆಯನ್ನು ಮತ್ತೆ ಬಳಸುವುದೇ ಆರೋಗ್ಯಕ್ಕೆ ಹಿತವಲ್ಲ. ಕೇವಲ ಒಗ್ಗರಣೆ ಹಾಕಲು ಇತ್ಯಾದಿ ಬೇರೆ ಬಳಕೆಗೂ ಅದು ಯೋಗ್ಯವಲ್ಲ. ಆದರೂ, ಒಮ್ಮೆ ಬಳಸಿದ ಎಣ್ಣೆಯನ್ನು ಎಸೆಯಲು ಬಹುತೇಕರು ಮನಸ್ಸು ಮಾಡದ ಕಾರಣ ಇನ್ನೊಮ್ಮೆ ಕರಿಯಲು ಬಳಸಬಹುದು ಎನ್ನಲಾಗುತ್ತದೆ. ಆದರೆ ಎರಡಕ್ಕಿಂತ ಹೆಚ್ಚು ಬಾರಿ ಬಳಕೆ ಸಲ್ಲದು.

ಎಸೆಯುವುದು ಒಳ್ಳೆಯದು

ಎಫ್‌ಎಸ್‌ಎಸ್‌ಎಐ ರೆಗ್ಯುಲೇಶನ್‌ ಪ್ರಕಾರ, ವೆಜಿಟೇಬಲ್‌ ಆಯಿಲ್‌ನ ಪೋಲಾರ್‌ ಕಾಂಪೌಂಡ್‌ ಶೇ.25 ದಾಟಿದ ತಕ್ಷಣ ಅದು ಅಡುಗೆಗೆ ಅನರ್ಹ. ಹಾಗಾಗಿ, ಎರಡಕ್ಕಿಂತ ಹೆಚ್ಚಿ ಬಾರಿ ಒಂದೇ ಎಣ್ಣೆಯಲ್ಲಿ ಕರಿಯುವುದು ಆರೋಗ್ಯದ ದೃಷ್ಟಿಯಿಂದ ಯೋಗ್ಯವಲ್ಲ. ಎರಡು ಬಾರಿ ಕರಿದ ಮೇಲೆ ಎಣ್ಣೆಯನ್ನು ಎಸೆಯುವುದು ಒಳ್ಳೆಯದು.

ಹೊಗೆಯಾಡುವವರೆಗೆ ಕುದಿಸಬೇಡಿ

ಅಡುಗೆ ಎಣ್ಣೆ ಯಾವುದೇ ಇರಲಿ, ಅದು ಹೊಗೆಯಾಡುವವರೆಗೆ ಕುದಿಸಬೇಡಿ. ಯಾವಾಗಲೂ ಕಡಿಮೆ ಉಷ್ಣತೆಯಲ್ಲಿಟ್ಟು ಅದನ್ನು ಅಡುಗೆಗೆ, ಕರಿಯಲು ಬಳಸುವುದು ಯೋಗ್ಯ. ಸ್ಮೋಕಿಂಗ್‌ ಪಾಯಿಂಟ್‌ ಮೀರಿ ಹೋಗಲು ಬಿಡಬೇಡಿ.

ತಣಿಯಲು ಬಿಡಿ

ಕರಿದ ಮೇಲೆ ಎಣ್ಣೆಯನ್ನು ತಣಿಯಲು ಬಿಡಿ ಹಾಗೂ ಅದರಲ್ಲಿ ಕರಿದ ಪದಾರ್ಥಗಳ ತುಣುಕುಗಳಿದ್ದರೆ ಅದನು ಸೋಸಿ ತೆಗೆಯಿರಿ. ನಂತರ ಅದನ್ನು ಗಾಳಿಯಾಡದ ಬಾಟಲಿಯಲ್ಲಿ ಹಾಕಿಟ್ಟು ಮತ್ತೆ ಬಳಸಬಹುದು. ಎರಡಕ್ಕಿಂತ ಹೆಚ್ಚು ಬಾರಿ ಎಣ್ಣೆಯನ್ನು ಬಳಸಬೇಡಿ.

ಹೆಚ್ಚು ಕಾಲ ಇಡಬೇಡಿ

ಒಮ್ಮೆ ಬಳಸಿದ ಎಣ್ಣೆಯನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಇಡಬೇಡಿ. ಒಂದು ತಿಂಗಳೊಳಗಾಗಿ ಮತ್ತೊಮ್ಮೆ ಕರಿಯಲು ಬಳಸಿ ಆಮೇಲೆ ಬಿಸಾಕಿ.

ಆಗಾಗ ಪರಿಶೀಲಿಸಿ

ಒಮ್ಮೆ ಬಳಸಿದ ಮೇಲೆ ಶೇಖರಿಸಿಟ್ಟ ಎಣ್ಣೆಯನ್ನು ಆಗಾಗ ಚೆಕ್‌ ಮಾಡಿ. ಅದರ ಬಣ್ಣ ವಾಸನೆಯಲ್ಲಿ ಬದಲಾವಣೆಯಾದರೆ ಬಳಸಬೇಡಿ.

ಹೊಗೆ ಏಳುತ್ತಿದೆಯೇ ನೋಡಿ

ಎಣ್ಣೆ ಸರಿಯಾಗಿ ಬಿಸಿಯಾಗುವ ಮೊದಲೇ ಹೊಗೆಯೇಳಲು ಆರಂಭವಾದರೆ ಆ ಎಣ್ಣೆ ಕರಿಯಲು ಯೋಗ್ಯವಲ್ಲ. ಹೊಗೆಯಾಡುವ ಆದರೆ ಬಿಸಿ ಸರಿಯಾಗಿ ಆಗದ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಸರಿಯಾಗಿ ಫ್ರೈ ಆಗಲಾರದು.

ಇದನ್ನೂ ಓದಿ: Drinking Water Before Meals: ಊಟಕ್ಕಿಂತ ಎಷ್ಟು ಮೊದಲು ನೀರು ಕುಡಿದರೆ ಒಳ್ಳೆಯದು?

ಬೇಕಾದಷ್ಟೇ ತೆಗೆದುಕೊಳ್ಳಿ

ಬಾಣಲೆಯಲ್ಲಿ ಕರಿಯಲು ಎಣ್ಣೆ ತೆಗೆದುಕೊಳ್ಳುವಾಗಲೇ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಆಗ ಹೆಚ್ಚು ಎಣ್ಣೆ ಉಳಿಯುವುದು ತಪ್ಪಿಸಬಹುದು.

Exit mobile version