Site icon Vistara News

Fruit Juice Side Effects: ಹಣ್ಣು ತಿಂದರೆ ಒಳ್ಳೆಯದೋ, ಹಣ್ಣಿನ ಜ್ಯೂಸ್‌ ಕುಡಿದರೆ ಒಳ್ಳೆಯದೋ?

Fruit Juice Side Effects

ಬೇಸಿಗೆ ಕಾಲ ಹಾಗೂ ಜ್ಯೂಸ್‌ಗಳಿಗೆ ಇರುವ ಸಂಬಂಧ ದೊಡ್ಡದು. ಬೇಸಿಗೆಯ ಬಿಸಿಲಿಗೆ ತಂಪಾದ ಜ್ಯೂಸ್‌ ಹೀರಿದರೆ ಆಗುವ ನೆಮ್ಮದಿ, ಸುಖ ಪದಗಳಲ್ಲಿ ವರ್ಣಿಸುವುದು ಕಷ್ಟವೇ. ಆದರೂ, ಆರೋಗ್ಯದ ವಿಚಾರಕ್ಕೆ ಬಂದರೆ, ಹಲವರು, ನೈಸರ್ಗಿಕವಾದ ಜ್ಯೂಸ್‌ಗಳನ್ನು ಮಾಡಿ ಕುಡಿಯುವುದು ಒಳ್ಳೆಯದೇ ಹೊರತು, ಹೊರಗೆ ರೆಡಿಮೇಡ್‌ ಆಗಿ ಟೆಟ್ರಾ ಪ್ಯಾಕ್‌ಗಳಲ್ಲಿ ಸಿಗುವ ಕೃತಕ ರುಚಿಗಳ ಹಣ್ಣುಗಳ ಪೇಯಗಳು ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಜ್ಯೂಸ್‌ ಅಂಗಡಿಗಳಲ್ಲಿ ಬೇಸಿಗೆಯಲ್ಲಿ ನೆರೆದಿರುವ ಕಿಕ್ಕಿರಿದ ಜನಸಂದಣಿಯೇ ಇದಕ್ಕೆ ಸಾಕ್ಷಿ. ಆದರೆ, ತಾಜಾ ಹಣ್ಣುಗಳ ಜ್ಯೂಸ್‌ಗಳಿಂದಲೂ ಕೆಲವು ಸಮಸ್ಯೆಗಳಿವೆ. ಇವೂ ಕೂಡಾ ನಾವು ಅಂದುಕೊಂಡಷ್ಟು ಆರೋಗ್ಯಕರವಲ್ಲ. ಬನ್ನಿ, ಹಣ್ಣುಗಳ ಜ್ಯೂಸ್‌ ಕೂಡಾ ಅತಿಯಾಗಬಾರದು (Fruit Juice Side Effects) ಯಾಕೆ ಎಂಬುದನ್ನು ನೋಡೋಣ.

ಅಧಿಕ ಸಕ್ಕರೆಯ ಅಂಶ

ತಾಜಾ ಹಣ್ಣಿನ ಜ್ಯೂಸ್‌ಗಳನ್ನು, ಮಿಲ್ಕ್‌ ಶೇಕ್‌ಗಳನ್ನು ಮಾಡಲು ಒಂದಷ್ಟು ಸಕ್ಕರೆ ಸುರಿದಿರುತ್ತೇವೆ. ಅಧಿಕವಾಗಿ ಸಕ್ಕರೆ ಸುರಿದು ಜ್ಯೂಸ್‌ಗಳನ್ನು ಮಾಡುವಿದರಿಂದ ಹಣ್ಣುಗಳು ತಾಜಾ ಆಗಿದ್ದರೂ ಕೂಡಾ ಅದರಲ್ಲಿರುವ ಸಕ್ಕರೆಯಿಂದಾಗಿ ಇವು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ಹಣ್ಣಿನ ಜ್ಯೂಸ್‌ ದ್ರವರೂಪದಲ್ಲಿರುವುದರಿಂದ ಬಹುಬೇಗನೆ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರ್ಪಡೆಯಾಗುತ್ತದೆ. ಸಕ್ಕರೆಯ ಮಟ್ಟ ಏರಲು ಇದೂ ಕಾರಣವಾಗಬಹುದು. ಹೀಗಾಗಿ, ಹಣ್ಣನ್ನು ಜ್ಯೂಸ್‌ ಮಾಡಿ ಕುಡಿಯುವ ಬದಲು, ಹಾಗೆಯೇ ತಿನ್ನಬಹುದು. ಹಣ್ಣುಗಳಲ್ಲಿರುವ ನಾರಿನಂಶವೂ ಹೊಟ್ಟೆ ಸೇರುವುದರಿಂದ ಸಕ್ಕರೆ ಬಹುಬೇಗನೆ ರಕ್ತಕ್ಕೆ ಸೇರದು. ಹೀಗಾಗಿ ಜ್ಯೂಸ್‌ ಕುಡಿಯುವ ಯೋಚನೆಯಿದ್ದರೆ ಆರೋಗ್ಯದ ದೃಷ್ಟಿಯಿಂದ ತರಕಾರಿಗಳ ಜ್ಯೂಸ್‌ ಹಣ್ಣಿನ ಜ್ಯೂಸ್‌ಗಳಿಗಿಂತ ಒಳ್ಳೆಯದು. ಇವುಗಳಲ್ಲಿ ಸಕ್ಕರೆಯ ಅಂಶ ಅತ್ಯಂತ ಕಡಿಮೆ ಇರುತ್ತದೆ.

ನಾರಿನಂಶ ಕಡಿಮೆ ಇರುತ್ತದೆ

ಜ್ಯೂಸ್‌ ಮಾಡಿದಾಗ, ಹಣ್ಣುಗಳಲ್ಲಿರುವ ನಾರಿನಂಶ ವ್ಯರ್ಥವಾಗುತ್ತದೆ. ಹಣ್ಣಿನಿಂದ ಜ್ಯೂಸನ್ನು ಹಿಂಡಿ ಉಳಿದೆಲ್ಲವನ್ನೂ ಸೋಸಿ ಎಸೆಯುವುದರಿಂದ ಇದರ ನಾರಿನಂಶವು ನಷ್ಟವಾಗುತ್ತದೆ. ಒಳ್ಳೆಯ ಪೋಷಕಾಂಶಗಳು ನಷ್ಟವಾಗುವುದರಿಂದ ಜ್ಯೂಸ್‌ನಲ್ಲಿರುವ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರುತ್ತದೆ. ಹಾಗಾಗಿ ಜ್ಯೂಸ್‌ ಕುಡಿಯುವ ಇರಾದೆಯಿದ್ದರೆ, ಹೆಚ್ಚು ಸೋಸಬೇಡಿ. ಸೋಸಿದರೂ ಬೀಜ ಬೇರ್ಪಡಿಸಿ ಹಣ್ಣಿನ ನಾರಿನಂಶವನ್ನು ಮತ್ತೆ ಜ್ಯೂಸ್‌ಗೆ ಹಾಕಿ.

ಪೋಷಕಾಂಶ ನಷ್ಟವಾಗಬಹುದು

ಜ್ಯೂಸ್‌ ಮಾಡುವುದರಿಂದ ಹಣ್ಣನ್ನು ಮಿಕ್ಸಿಯಲ್ಲಿ ತಿರುಗಿಸಿ ಸೋಸುವ ಕಾರಣ ಅದರ ಪೋಷಕಾಂಶ ನಷ್ಟವಾಗುವ ಸಾಧ್ಯತೆ ಹೆಚ್ಚು. ಹಣ್ಣಿನಲ್ಲಿರುವ ನಾರಿನಂಶ ಮಾತ್ರ ನಷ್ಟವಾಗುವುದಲ್ಲ, ಅದರಲ್ಲಿರುವ ವಿಟಮಿನ್‌ಗಳು, ಖನಿಜಾಂಶಗಳು, ಆಂಟಿ ಆಕ್ಸಿಡೆಂಟ್‌ಗಳೂ ನಾಶವಾಗುತ್ತವೆ. ಹಾಗಾಗಿ ಹಣ್ಣನ್ನು ಹಾಗೆಯೇ ತಿನ್ನುವುದೇ ಬಹಳ ಉತ್ತಮ.

ಅಧಿಕ ಕ್ಯಾಲರಿ ಇರುತ್ತವೆ

ಜ್ಯೂಸ್‌ಗೆ ಒಂದಷ್ಟು ಸಕ್ಕರೆಯನ್ನೂ ಹಾಕಿರುವುದರಿಂದ ಕ್ಯಾಲರಿಯ ವಿಚಾರಕ್ಕೆ ಬಂದರೆ ಇದರಲ್ಲಿ ಅಧಿಕ ಕ್ಯಾಲರಿ ಇರುತ್ತದೆ. ಹೀಗಾಗಿ ಫಿಟ್‌ನೆಸ್‌ ಬಯಸುವ ಮಂದಿಗೆ, ಹೃದ್ರೋಗ, ಮಧುಮೇಹ, ಕೊಲೆಸ್ಟೆರಾಲ್‌ ಇತ್ಯಾದಿಗಳ ಸಮಸ್ಯೆ ಇರುವ ಮಂದಿಗೆ ಇದು ಖಂಡಿತವಾಗಿ ಒಳ್ಳೆಯದಲ್ಲ.

ಅಸಿಡಿಟಿ ಸಮಸ್ಯೆ

ಕೆಲವು ಹಣ್ಣಿನ ಜ್ಯೂಸ್‌ಗಳು, ಬಹಳ ಮುಖ್ಯವಾಗಿ ಸಿಟ್ರಸ್‌ ಹಣ್ಣಿನ ಜ್ಯೂಸ್‌ಗಳು ಕೆಲವು ಮಂದಿಯಲ್ಲಿ ಅಸಿಡಿಟಿ ಸಮಸ್ಯೆಯನ್ನೂ ಹುಟ್ಟು ಹಾಕುತ್ತದೆ. ಅಸಿಡಿಕ್‌ ಜ್ಯೂಸ್‌ಗಳು ಈ ಸಮಸ್ಯೆ ತರುತ್ತವೆ ಎಂದಾದಲ್ಲಿ ಅವಕ್ಕೆ ಹೆಚ್ಚು ನೀರು ಸೇರಿಸಿ ಜ್ಯೂಸ್‌ ಮಾಡಿ. ನೀರು ಸಾಕಷ್ಟು ಕುಡಿಯಿರಿ.

ಇದನ್ನೂ ಓದಿ: Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

ಹಲ್ಲು ಹುಳುಕಾಗಬಹುದು

ಜ್ಯೂಸ್‌ನಲ್ಲಿ ಸಕ್ಕರೆಯ ಅಂಶ ಹೆಚ್ಚಿರುವುದರಿಂದ ನೇರವಾಗಿ ಹಲ್ಲಿನ ಸಂಪರ್ಕಕ್ಕೆ ಬರುವುದರಿಂದ ಜ್ಯೂಸ್‌ನ ಸಕ್ಕರೆಯ ಅಂಶ ಹಲ್ಲಿನ ಭಾಗದಲ್ಲಿ ಸೇರಿಕೊಳ್ಳುವುದರಿಂದ ಹಲ್ಲು ಹುಳುಕಾಗಬಹುದು.
ಇವಿಷ್ಟಲ್ಲದೆ, ಸರಿಯಾದ ಶುದ್ಧ ನೀರಿನ ಬಳಕೆಯಿಲ್ಲದೆ ಮಾಡಿದ ರಸ್ತೆ ಬದಿಯ ಹಣ್ಣಿನ ಜ್ಯೂಸ್‌ ಅಂಗಡಿಗಳಲ್ಲಿ ಕುಡಿಯುವುದರಿಂದ ಆರೋಗ್ಯ ಕೈಕೊಡುವ ಸಂಭವವೂ ಅಧಿಕ. ಐಸ್‌ ಹಾಕಿ ಕುಡಿಯುವುದರಿಂದ ನೆಗಡಿ, ಗಂಟಲು ನೋವು, ಜ್ವರ ಇತ್ಯಾದಿಗಳ ಸಂಭವವೂ ಇರುತ್ತದೆ. ಜೊತೆಗೆ ಈಗಾಗಲೇ ನಿತ್ಯವೂ ತಮ್ಮ ಆರೋಗ್ಯ ಸಮಸ್ಯೆಗಳಿಗಾಗಿ ಮಾತ್ರೆಗಳನ್ನು ತಿನ್ನುವ ಮಂದಿ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಮತ್ತಷ್ಟು ಸಮಸ್ಯೆಗಳನ್ನೂ ಆಹ್ವಾನಿಸುವ ಸಂದರ್ಭಗಳೂ ಬರಬಹುದು. ಉದಾಹರಣೆಗೆ ಮಧುಮೇಹ, ಹೃದ್ರೋಗ ಅಥವಾ ಇನ್ನೂ ಅನೇಕ ಸಮಸ್ಯೆಗಳಿರುವ ಮಂದಿ ನಿತ್ಯವೂ ಮಾತ್ರೆಗಳನ್ನು ಸೇವಿಸುತ್ತಿರುವಾಗ ಆರೋಗ್ಯಕರ ಆಹಾರದ ಕಾಳಜಿ ವಹಿಸಲೇ ಬೇಕಾಗುತ್ತದೆ. ಇಂಥವರೂ ಜ್ಯೂಸ್‌ ಬದಲು ಹಣ್ಣನ್ನೇ ನೆಚ್ಚಿದರೆ ಒಳ್ಳೆಯದು.

Exit mobile version