Site icon Vistara News

FSSAI Warning: ಎದೆಹಾಲು ಮಾರಾಟ ಮಾಡುವಂತಿಲ್ಲ: ಎಫ್‌ಎಸ್‌ಎಸ್‌ಎಐ ಖಡಕ್ ಎಚ್ಚರಿಕೆ

FSSAI Warning

ವಾಣಿಜ್ಯ ಉದ್ದೇಶಗಳಿಗಾಗಿ ಮನುಷ್ಯರ ಎದೆಹಾಲು (Breast Milk ) ಮತ್ತು ಅದರಿಂದ ಪಡೆದ ಉತ್ಪನ್ನಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆಹಾರ ವ್ಯಾಪಾರ ನಿರ್ವಾಹಕರಿಗೆ (FBO) ಎಚ್ಚರಿಕೆಯನ್ನು (FSSAI Warning) ನೀಡಿದೆ. 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSS) ಕಾಯಿದೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳ ಅಡಿಯಲ್ಲಿ ಇಂತಹ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರಾಟಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಆಹಾರ ಸುರಕ್ಷತಾ ನಿಯಂತ್ರಕ ಶುಕ್ರವಾರ ನೀಡಿದ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪರವಾನಗಿ ನೀಡುವುದಿಲ್ಲ

ಮಾನವ ಹಾಲು ಮತ್ತು ಅದರ ಉತ್ಪನ್ನಗಳ ಬಗ್ಗೆ ವಾಣಿಜ್ಯ ಉದ್ದೇಶಗಳಿಗಾಗಿ ವಿವಿಧ ಸಮಾಜದ ನಾಗರಿಕರನ್ನು ಸಂಪರ್ಕಿಸಲಾಗಿದೆ ಎನ್ನುವ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಮಾಹಿತಿ ಬಂದಿದ್ದು, ಎಫ್‌ಎಸ್‌ಎಸ್‌ಎಐ ಯು ಇಂತಹ ಯಾವುದೇ ಅಭ್ಯಾಸಗಳಲ್ಲಿ ತೊಡಗಿರುವ ಘಟಕಗಳಿಗೆ ಯಾವುದೇ ರೀತಿಯ ಪರವಾನಗಿಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಪರವಾನಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಮಾನವ ಹಾಲು ಅಥವಾ ಅದರ ಉತ್ಪನ್ನಗಳ ವಾಣಿಜ್ಯೀಕರಣದಲ್ಲಿ ತೊಡಗಿರುವ ಯಾವುದೇ ಆಹಾರ ವ್ಯಾಪಾರ ನಿರ್ವಾಹಕರು ಭಾರಿ ದಂಡವನ್ನು ತೆರಬೇಕಾಗುವುದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಚ್ಚರಿಸಿದೆ.

ಎಚ್ಚರಿಕೆ ಏನು?

ಮಾನವನ ಎದೆ ಹಾಲು ಮಾರಾಟಕ್ಕೆ ಸಂಬಂಧಿಸಿ ಯಾವುದೇ ಉಲ್ಲಂಘನೆಯ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಚ್ಚರಿಕೆಯನ್ನು ನೀಡಿದೆ. ಮಾನವ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಲಹೆ ನೀಡಲಾಗಿದೆ.

ಇದರ ಯಾವುದೇ ಉಲ್ಲಂಘನೆಯನ್ನು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳಿಗೆ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ: Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಪ್ರೊಟೀನ್‌ ಪುಡಿಗಳಿಂದ ದೂರವಿರಿ: ಎಚ್ಚರಿಕೆ

ಬಹಳಷ್ಟು ಮಂದಿಗೆ ನಿತ್ಯವೂ ಪ್ರೊಟೀನ್‌ ಪುಡಿಗಳಿಂದ ಮಾಡಿದ ಶೇಕ್‌ಗಳನ್ನು ಕುಡಿಯುವ ಅಭ್ಯಾಸವಿರಬಹುದು. ಜಿಮ್‌ಗೆ ಹೋಗುವ, ವ್ಯಾಯಾಮ ಮಾಡುವ, ತೂಕ ಇಳಿಸುವ ಪ್ರಯತ್ನದಲ್ಲಿರುವ ಎಲ್ಲ ಮಂದಿಯೂ ಈಗ ಯಾವ ವೈದ್ಯರ ಸಲಹೆಯನ್ನೂ ಕೇಳದೆ ನೇರವಾಗಿ ಪ್ರೊಟೀನ್‌ ಪೌಡರ್‌ಗಳು ಸಿಗುವ ಔಟ್‌ಲೆಟ್‌ಗಳಿಂದ ಪೌಡರನ್ನು ಕೊಂಡು ತಂದು ಸೇವಿಸಲು ಆರಂಭಿಸುತ್ತಾರೆ.

ಮಾಂಸಖಂಡಗಳ ಬಲವರ್ಧನೆಗೆ, ಪ್ರೊಟೀನ್‌ ಡಯಟ್‌ನಲ್ಲಿರುವ ಮಂದಿ, ಅಥ್ಲೀಟ್‌ಗಳು ಸೇರಿದಂತೆ ಎಲ್ಲರೂ ಇತ್ತೀಚೆಗೆ ಪ್ರೊಟೀನ್‌ ಪೌಡರ್‌ ಶೇಕ್‌ ಮಾಡಿ ಕುಡಿಯುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆಯೋ ಅಥವಾ ಇದರಿಂದ ಅಡ್ಡ ಪರಿಣಾಮಗಳೇನಾದರೂ ಇವೆಯೇ ಎಂಬ ಯೋಚನೆಯನ್ನೂ ಮಾಡುವುದಿಲ್ಲ.

ಇತ್ತೀಚೆಗೆ ಹೆಚ್ಚುತ್ತಿರುವ ಈ ಟ್ರೆಂಡ್‌ಗೆ ಉತ್ತರವಾಗಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌- ನ್ಯಾಷನಲ್‌ ಆಫ್‌ ನ್ಯೂಟ್ರಿಷನ್‌ ಇದೀಗ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದ್ದು ಪ್ರೊಟೀನ್‌ ಪೌಡರುಗಳ ಕುರಿತಾದ ಆಘಾತಕಾರಿ ಸತ್ಯವನ್ನು ವಿವರಿಸಿದೆ. ಇದರ ಅಧಿಕ ಸೇವನೆಯಿಂದ ಯಾವೆಲ್ಲ ಪರಿಣಾಮಗಳನ್ನು ಎದುರಿಸಬೇಕಾದೀತು ಎಂಬ ಎಚ್ಚರವನ್ನೂ ನೀಡಿದೆ.

ಅಥ್ಲೀಟ್‌ಗಳೂ ಸೇರಿದಂತೆ, ಕ್ರೀಡಾಳುಗಳಿಗೆ ನಿತ್ಯವೂ ಆಹಾರ ಮೂಲಗಳಿಂದಲೇ ಪ್ರೊಟೀನ್‌ ನಮ್ಮ ದೇಹಕ್ಕೆ ಸೇರುವಂತೆ ಮಾಡಬೇಕು ಎಂಬ ನಿಯಮಾವಳಿ ಇದೆ. ಸಪ್ಲಿಮೆಂಟ್‌ಗಳ ಮೂಲಕ ಪ್ರೊಟೀನ್‌ ಅಥವಾ ಪೋಷಕಾಂಶಗಳು ದೇಹಕ್ಕೆ ಸೇರುವಂತೆ ಮಾಡುವುದು ಉತ್ತಮ ವಿಧಾನವಲ್ಲ ಎಂದು ಹೇಳಿದೆ.

ನಿತ್ಯವೂ ಹೀಗೆ ಪ್ರೊಟೀನ್‌ ಪುಡಿಗಳು ಹಾಗೂ ಇತರ ಸಪ್ಲಿಮೆಂಟ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುತ್ತಲೇ ಇದ್ದರೆ ಎಲುಬಿನಲ್ಲಿ ಖನಿಜಾಂಶಗಳ ನಷ್ಟ ಸೇರಿದಂತೆ ಕಿಡ್ನಿಯ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚು ಎಂದು ಎಚ್ಚರಿಕೆ ನೀಡಿದೆ.

Exit mobile version