ಕೆಲವರು ಗ್ಯಾಸ್ಟ್ರಿಕ್‌ನಿಂದ (Gastric) ಆಗುವ ಎದೆಯುರಿಯನ್ನು ಹೃದಯಾಘಾತ (Heart Attack) ಎಂದು ತಿಳಿದುಕೊಂಡು ಗಾಬರಿಯಾಗಿಬಿಡುತ್ತಾರೆ. ಇನ್ನು ಹಲವರು ನಿಜವಾಗಿ ಹೃದಯಾಘಾತವೇ ಆಗಿದ್ದರೂ, ಇದು ಗ್ಯಾಸ್ಟ್ರಿಕ್‌ನಿಂದ ಆಗಿರಬಹುದು (Gastric or Heart Attack) ಎಂದು ಭಾವಿಸಿ ಉಪೇಕ್ಷಿಸಿ ಬಿಡುತ್ತಾರೆ. ಎರಡನೇ ಸಾಧ್ಯತೆಯಲ್ಲಿ ಜೀವಾಪಾಯವಿರುತ್ತದೆ.
ಹೃದಯಾಘಾತದಿಂದ ತೀರಿಕೊಂಡ ಗಾಯಕ ಕೆಕೆ, ಸಕಾಲದಲ್ಲಿ ವೈದ್ಯರ ಬಳಿ ಹೋಗದಿರಲು ಕಾರಣವೂ ಇದೇ ಎನ್ನಲಾಗುತ್ತದೆ. ಇದು ಹೃದಯಾಘಾತವೋ ಅಥವಾ ಗ್ಯಾಸ್ಟ್ರಿಕ್‌ನಿಂದ ಆಗುತ್ತಿರುವ ಎದೆಯುರಿಯೋ ಎಂದು ಪ್ರತ್ಯೇಕೀಕರಿಸಲು ಆಗದೆ ಹೋಯಿತು. ಆರ್ಕೆಸ್ಟ್ರಾಗೆ ಮೊದಲು, ಎದೆಯುರಿ ತಣಿಸಲು ಕೆಕೆ ಆಂಟಾಸಿಡ್ ಗುಳಿಗೆ ತೆಗೆದುಕೊಂಡು, ಕೆಕೆ ಸ್ಟೇಜ್ ಮೇಲೆ ಹೋದರು. ಆದರೆ ಅತಿಯಾದ ಬಳಲಿಕೆಯಿಂದ ಸ್ಟೇಜ್ ಮೇಲೆ ಸರಿಯಾಗಿ ಪ್ರದರ್ಶನ ಕೊಡಲಾಗದೆ ಮರಳಿ ಬಂದರು. ಆದರೆ ಅಷ್ಟು ಹೊತ್ತಿಗಾಗಲೇ ತಡವಾಗಿ ಹೋಗಿತ್ತು.
ಹೀಗಾಗಿ, ಮೊದಲನೆಯದಾಗಿ, ಮರೆಯಬಾರದ ಮಾತು-
ನಿಮಗೆ ಎದೆಯುರಿ ಅಥವಾ ಎದೆನೋವು ಇದ್ದರೆ, ಅದು ಗ್ಯಾಸ್ಟ್ರಿಕ್‌ನಿಂದ ಆಗಿರುವುದು ಎಂಬುದು ನಿಮಗೆ ಖಚಿತವಿಲ್ಲದೇ ಇದ್ದಲ್ಲಿ, ಎದೆಯುರಿಯೂ ಇರಬಹುದು ಅಥವಾ ಹೃದಯ ಸಮಸ್ಯೆಯೂ ಇರಬಹುದು ಎಂಬ ಅನುಮಾನ ಇದ್ದಲ್ಲಿ, ಯಾವುದೇ ಚಾನ್ಸ್ ತೆಗೆದುಕೊಳ್ಳದೆ ಕೂಡಲೇ ವೈದ್ಯರ ಮೊರೆ ಹೋಗುವುದು (health tips) ಒಳ್ಳೆಯದು.
ಗ್ಯಾಸ್ಟ್ರಿಕ್ ಎದೆಯುರಿಯ ಲಕ್ಷಣಗಳೇನು?
– ಎದೆಯಲ್ಲಿ ಉರಿಯುವಂಥ ಅನುಭವ, ಹೊಟ್ಟೆಯ ಮೇಲುಭಾಗದಲ್ಲೂ ವ್ಯಾಪಿಸಿರಬಹುದು. ಸಾಮಾನ್ಯವಾಗಿ ಊಟ ಮಾಡಿದ ಮೇಲೆ, ಮಲಗಿದಾಗ ಅಥವಾ ಕೆಳಮುಖವಾಗಿ ಬಗ್ಗಿದಾಗ ಕಾಣಿಸಿಕೊಳ್ಳುತ್ತದೆ.
– ಮಲಗಲು ಹೋಗುವ ಮೊದಲಿನ ಎರಡು ಗಂಟೆಗಳ ಒಳಗಿನ ಅವಧಿಯಲ್ಲಿ ನೀವು ಆಹಾರ ಸೇವಿಸಿದ್ದರೆ, ಈ ಉರಿ ನಿಮ್ಮನ್ನು ನಡುರಾತ್ರಿ ನಿದ್ರೆಯಿಂದ ಎಬ್ಬಿಸಬಹುದು.
– ಆಂಟಾಸಿಡ್ ಗುಳಿಗೆಯನ್ನು ತೆಗೆದುಕೊಂಡಾಗಿ ಸಾಮಾನ್ಯವಾಗಿ ಇದು ಉಪಶಮನಗೊಳ್ಳುತ್ತದೆ.
– ಬಾಯಿಯಲ್ಲಿ ಒಂದು ಬಗೆಯ ಕಹಿ ರುಚಿಯ ಅನುಭವ ಆಗುತ್ತದೆ.
– ಹೊಟ್ಟೆಯಲ್ಲಿ ಇರುವುದು ಗಂಟಲಿನವರೆಗೆ ಬಂದಂತೆ ಅನುಭವ ಆಗುತ್ತದೆ.
ಹೃದಯದ ಸಮಸ್ಯೆ ತಲೆದೋರಿದಾಗ…
ಸಾಮಾನ್ಯವಾಗಿ ಹೃದಯದ ತೊಂದರೆಯಿಂದ ಉಂಟಾಗುವ ಎದೆನೋವುಗಳು ದಿಡೀರ್ ಎಂದು ಕಾಣಿಸಿಕೊಳ್ಳುತ್ತವೆ. ಅದು ತೀವ್ರ ನೋವು ಆಗಿರುತ್ತದೆ. ಉಸಿರಾಟದಲ್ಲಿ ಕಷ್ಟ ಕಾಣಿಸಿಕೊಳ್ಳಬಹುದು.
ಆದರೆ ಈ ಲಕ್ಷಣಗಳೆಲ್ಲಾ ಕಾಣಿಸಿಕೊಳ್ಳಬೇಕೆಂದಿಲ್ಲ. ಮತ್ತು ಇವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆ ಹೊಂದಿರಲೂಬಹುದು.
ಇನ್ನಿತರ ಲಕ್ಷಣಗಳಲ್ಲಿ ಎದೆಯ ಮೇಲೆ ಒತ್ತಡದ ಅನುಭವ, ಬಿಗಿಹಿಡಿದಂತೆ, ಬೆನ್ನು ನೋವು, ಸೀನುವ ಅಥವಾ ಎದೆಯುಬ್ಬುವ ಅನಿಸಿಕೆ, ಈ ಲಕ್ಷಣಗಳು ತೋಳಿಗೆ ಹಾಗೂ ಕುತ್ತಿಗೆಗೆ ಹಬ್ಬುವುದು, ಗಲ್ಲಕ್ಕೆ ಅಥವಾ ಬೆನ್ನಿಗೆ ಹರಡುವುದು ವಾಕರಿಕೆ, ಅಜೀರ್ಣ, ಎದೆಯುರಿ, ಹೊಟ್ಟೆ ನೋವು, ಉಸಿರಾಟದ ತೊಂದರೆ, ಚಳಿ ಬೆವರು, ಸುಸ್ತು, ಹಗುರಾಗಿ ತೇಲಿದಂತೆ ಆಗುವುದು, ದಿಡೀರ್ ಅಮಲು- ಇವೆಲ್ಲವೂ ಇರಬಹುದು. ಆದರೆ ಈ ಲಕ್ಷಣಗಳೆಲ್ಲವೂ ಹೃದಯಾಘಾತಕ್ಕೆ ಒಳಗಾದ ಎಲ್ಲರಿಗೂ ಇರುತ್ತದೆ ಎಂದಲ್ಲ.
ಹಾಗಿದ್ದರೆ ವ್ಯತ್ಯಾಸ ಏನು?
ಇದನ್ನು ಹೇಳುವುದು ವೈದ್ಯರಿಗೂ ತುಸು ಕಷ್ಟವೇ. ಆದರೆ ಇವುಗಳನ್ನು ಮುಖ್ಯವಾಗಿ ಗಮನಿಸಬೇಕು:
– ಆ್ಯಸಿಡಿಟಿಯಿದ್ದರೆ ಅದು ನಮ್ಮನ್ನು ಸುಸ್ತು ಮಾಡುವುದಿಲ್ಲ; ಅಮಲಾದಂತೆ ಅನಿಸುವುದಿಲ್ಲ.
– ಆ್ಯಸಿಡಿಟಿಯ ನೋವು ತೋಳಿಗೆ, ಕುತ್ತಿಗೆಗೆ, ಗದ್ದಕ್ಕೆ ಹರಡುವುದಿಲ್ಲ.
– ಆ್ಯಸಿಡಿಟಿ ನಿಮ್ಮನ್ನು ಎದ್ದು ನಡೆಯುವಂತೆ ಪ್ರೇರೇಪಿಸುತ್ತದೆ. ಆದರೆ ಹೃದಯಾಘಾತವು ನಿಮ್ಮಲ್ಲಿ ಎದ್ದೇಳಲೂ ಸಾಧ್ಯವಾಗದ ಸುಸ್ತು ಉಂಟುಮಾಡುತ್ತದೆ.
ವೈದ್ಯರೇನು ಹೇಳುತ್ತಾರೆ?
ಹೃದಯಾಘಾತಗಳನ್ನು ʼಸೈಲೆಂಟ್ ಕಿಲ್ಲರ್ʼಗಳೆಂದು (silent killer) ಕರೆಯುವುದು ಅವು ಆ್ಯಸಿಡಿಟಿ ಎಂದು ತಪ್ಪಾಗಿ ಭಾವಿತವಾಗುವುದರಿಂದ. ಆ್ಯಸಿಡಿಟಿ ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ಆಂಟಾಸಿಡ್ ತೆಗೆದುಕೊಂಡರೆ ಶಮನವಾಗುತ್ತದೆ. ಹೀಗಾಗಿ ಹೆಚ್ಚು ಕಾಲ ನೋವು ಉಳಿದರೆ ಡಾಕ್ಟರ್ ಬಳಿಗೆ ಹೋಗಲೇಬೇಕು. myocardial infarction (SMI) ಇಂದಿನ ನಗರ ನಿವಾಸಿ ಯುವಜನರಲ್ಲಿ ಹೆಚ್ಚಾಗುತ್ತಿದೆ. ಇದರ ಲಕ್ಷಣಗಳು ಆರಂಭದಲ್ಲಿ ಸೌಮ್ಯವಾಗಿರುತ್ತವೆ. ಹೀಗಾಗಿ ಇವನ್ನು ಗೊಂದಲ ಮಾಡಿಕೊಳ್ಳಲಾಗುತ್ತದೆ. ಆದರೆ ಇವು ಮರುಕಳಿಸುತ್ತಲೇ ಇದ್ದರೆ ಮಾರಣಾಂತಿಕ ಆಗಬಹುದು. ಸೈಲೆಂಟ್ ಹೃದಯಾಘಾತಗಳು ಗಂಡಸರಲ್ಲಿ ಸಾಮಾನ್ಯ. ಆದರೆ ಹೆಂಗಸರಿಗೂ ಮಾರಕ. ವಯಸ್ಸಾದವರು ಆಗಾಗ ಇಸಿಜಿ (ECG) ಮಾಡಿಸಬೇಕು. ಮಧುಮೇಹ, ರಕ್ತದೊತ್ತಡ, ಕೊಬ್ಬು ಇರುವವರು ಎಚ್ಚರವಾಗಿರಬೇಕು (health guide)- ಎಂದು ಫೋರ್ಟಿಸ್ ಆಸ್ಪತ್ರೆಯ ತಜ್ಞವೈದ್ಯ ಡಾ.ಹರ್ಷ ಮೆಹ್ತಾ ಹೇಳುತ್ತಾರೆ.
ಹೃದಯಾಘಾತಕ್ಕೆ ಒಳಗಾದವರು ತಮ್ಮ ಪ್ರಥಮ ಅನುಭವವನ್ನು ʼಮೇಲುಹೊಟ್ಟೆಯ ಭಾಗದಲ್ಲಿ ವಿಚಿತ್ರವಾದ ತಳಮಳ, ಎದೆಯಲ್ಲಿ ಒಂಥರಾ ತಳಮಳʼ ಎಂದು ವಿವರಿಸುತ್ತಾರೆ. ಆ್ಯಸಿಡಿಟಿಯಲ್ಲಿ ಆ್ಯಸಿಡ್ ಹೆಚ್ಚಳವಾಗುವುದರಿಂದ ಗಂಟಲಲ್ಲಿ ಉರಿ ಹಾಗೂ ಬಾಯಿಯಲ್ಲಿ ಹುಳಿ ಅನುಭವ ಉಂಟಾಗುತ್ತದೆ. ಇದು ಹೃದಯಾಘಾತದಲ್ಲಿ ಇರುವುದಿಲ್ಲ. ಹೃದಯಾಘಾತದಲ್ಲಿ ಆಗುವ ನೋವನ್ನು ಅವನು ಹಿಂದೆ ಎಂದೂ ಅನುಭವಿಸಿರುವುದಿಲ್ಲ- ಎಂದು ಇನ್ನೊಬ್ಬ ತಜ್ಞ ವೈದ್ಯ ಡಾ.ವಿವೇಕ್ ಮಹಾಜನ್ ತಿಳಿಸುತ್ತಾರೆ.
ಇದನ್ನೂ ಓದಿ: Acidity relief: ಅಸಿಡಿಟಿ, ಗ್ಯಾಸ್‌ನಿಂದ ಒತ್ತಡವೇ? ಈ ಹಣ್ಣುಗಳು ನಿಮಗೆ ರಿಲೀಫ್‌ಗೆ ತುಂಬಾ ಸಹಕಾರಿ!