Site icon Vistara News

Gastric Problems In Monsoon: ಮಳೆಗಾಲದಲ್ಲಿ ಕಾಡುವ ಹೊಟ್ಟೆಯುಬ್ಬರದ ಸಮಸ್ಯೆಗೆ ನಮ್ಮಲ್ಲೇ ಇದೆ ಸಿಂಪಲ್‌ ಪರಿಹಾರ!

gastric

ಮಳೆಗಾಲ ಬಂದರೆ ನಾವು ತಿನ್ನುವ ಪ್ರಮಾಣವೂ ಏರುತ್ತದೆ. ಬಗೆಗಳೂ ಏರುತ್ತವೆ. ಮಳೆಗೆ ಹಿತವಾಗಿ ಬಗೆಬಗೆಯ ತಿನಿಸುಗಳನ್ನು ತಿನ್ನುವ ಜೊತೆಗೆ ಮಳೆಗಾಲದಲ್ಲಿ ವಾತಾವರಣದಲ್ಲಿ ಹೆಚ್ಚಿರುವ ತೇವಾಂಶದಿಂದಾಗಿ ಹೊಟ್ಟೆ ಕೆಡುವ ಸಂಭವವೂ ಹೆಚ್ಚು. ಗ್ಯಾಸ್‌, ಹೊಟ್ಟೆಯುಬ್ಬರ ಇತ್ಯಾದಿಗಳು ಮಳೆಗಾಲದಲ್ಲಿ ಸಾಮಾನ್ಯ. ಬನ್ನಿ, ಮಳೆಗಾಲದಲ್ಲಿ ಕಾಡುವ ಹೊಟ್ಟೆಯ ಸಮಸ್ಯೆಗಳಿಗೆ ನಮ್ಮ ಅಡುಗೆ ಮನೆಯಲ್ಲೇ ಇರುವ ಯಾವೆಲ್ಲ ಪದಾರ್ಥಗಳಲ್ಲಿ ಸಮರ್ಥವಾಗಿ ಪರಿಹಾರ ದೊರೆಯುತ್ತದೆ ಎಂಬುದನ್ನು (gastric problems in monsoon) ನೋಡೋಣ.

ಶುಂಠಿ

ಹೊಟ್ಟೆಗೆ ಬಹಳ ಒಳ್ಳೆಯದು ಈ ಶುಂಠಿ. ಶುಂಠಿ ಚಹಾ ಮಾಡಿ ಕುಡಿದರೆ ಸಾಕು, ಅನೇಕ ಜೀರ್ಣಕ್ರಿಯೆಯ ಸಮಸ್ಯೆಗಳೂ ಮಂಗ ಮಾಯ. ಗ್ಯಾಸ್‌ ಮತ್ತಿತರ ಸಮಸ್ಯೆಗಳಿಗೂ ಇದು ರಾಮ ಬಾಣ. ಹೊಟ್ಟೆಯಲ್ಲಿ ಏನೇ ತಳಮಳವಾದರೂ, ಶುಂಠೀ ಚಹಾ ಮಾಡಿ ಕುಡಿದರೆ ಪರಿಹಾರ ಪಡೆಯಬಹುದು.

ಬಡೇಸೊಂಪು

ಚೆನ್ನಾಗಿ ಉಂಡ ಮೇಲೆ ಚಮಚದಲ್ಲಿ ಬಡೇಸೋಂಪು ಬಾಯಿಗೆ ಹಾಕಿಕೊಳ್ಳುವುದು ರೂಢಿ. ರೆಸ್ಟೊರೆಂಟುಗಳಲ್ಲಿ ಈ ಪದ್ಧತಿ ಅನುಸರಿಸಿ ಅನೇಕರಿಗೆ ಗೊತ್ತಿದೆ. ಇದು ಕೇವಲ ಬಾಯಿಯ ಸುಗಂಧಕ್ಕಾಗಿ ಎಂದುಕೊಂಡರೆ ಅದು ತಪ್ಪು. ಇದು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಗ್ಯಾಸ್‌ನಿಂದ ಹೊಟ್ಟೆ ಉಬ್ಬರಿಸಿದಂತಾಗುವ ಸಮಸ್ಯೆಗೆ ಹೇಳಿ ಮಾಡಿಸಿದ ಮದ್ದು.

ಪುದಿನ ಎಲೆ

ಈ ತಾಜಾ ಎಲೆಗಳು ಮೂಗಿಗೆ ಮಾತ್ರ ತಾಜಾ ಅಲ್ಲ. ಇದು ಹೊಟ್ಟೆಗೂ ಸಾಕಷ್ಟು ಒಳ್ಳೆಯದನ್ನೇ ಮಾಡುತ್ತದೆ. ಪುದಿನ ಹೊಟ್ಟೆಗೆ ತಂಗಾಳಿಯಂತೆ ಜೀವ ಕೊಟ್ಟು, ಹೊಟ್ಟೆಯನ್ನು ಪ್ರಫುಲ್ಲಗೊಳಿಸಿ, ಗ್ಯಾಸ್‌, ಹೊಟ್ಟೆಯುಬ್ಬರದ ಲಕ್ಷಣಗಳನ್ನು ದೂರ ಓಡಿಸುತ್ತದೆ.

ಮೊಸರು

ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಇದೆ. ಇದು ನಮ್ಮ ಹೊಟ್ಟೆಗೆ ಒಳ್ಳೆಯದನ್ನೇ ಮಾಡುತ್ತದೆ. ಮೊಸರು ಅಥವಾ ಮಜ್ಜಿಗೆಯ ಸೇವನೆ ಹೊಟ್ಟೆಯನ್ನು ತಂಪಾಗಿಡುತ್ತದೆ. ಗ್ಯಾಸ್‌, ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಗಳನ್ನು ಹತ್ತಿರ ಸುಳಿಯಲೂ ಬಿಡದು.

ಸೌತೆಕಾಯಿ

ಸೌತೆಕಾಯಿ ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ದೂರ ಓಡಿಸಿ ದೇಹಕ್ಕೆ ಬೇಕಾದ ನೀರನ್ನು ಒದಗಿಸಿ ದೇಹವನ್ನು ತಂಪಾಗಿರಿಸುತ್ತದೆ. ಅಷ್ಟೇ ಅಲ್ಲ, ಇದು ಹೊಟ್ಟೆಯ್ಲಿದ್ದರೆ, ಹೊಟ್ಟೆಯುಬ್ಬರ, ಗ್ಯಾಸ್‌ ಇತ್ಯಾದಿಗಳ ಸಮಸ್ಯೆಯೇ ಬರದು.

ಪಪ್ಪಾಯಿ

ಪಪ್ಪಾಯಿ ಜೀರ್ಣಕ್ರಿಯೆಗೆ ಬಹಳ ಒಳ್ಳೆಯ ಹಣ್ಣು. ಇದು ಆಹಾರವನ್ನು ಜೀರ್ಣವಾಗುವಂತೆ ನೋಡಿಕೊಳ್ಳುವ ಜೊತೆಗೆ ಹೊಟ್ಟೆಯುಬ್ಬರವನ್ನೂ ಹತ್ತಿರ ಸುಳಿಯಲು ಬಿಡುವುದಿಲ್ಲ.

ಬಾಳೆಹಣ್ಣು

ಪೊಟಾಶಿಯಂ ಹೇರಳವಾಗಿರುವ ಈ ಹಣ್ಣು ನಮ್ಮ ದೇಹದಲ್ಲಿ ಸೋಡಿಯಂನ ಮಟ್ಟವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಆ ಮೂಲಕ ದೇಹದಲ್ಲಿ ಅತಿಯಾಗಿ ನೀರು ನಿಲ್ಲುವುದಿಲ್ಲ. ಹೊಟ್ಟೆಯುಬ್ಬರದಂತಹ ಸಮಸ್ಯೆಗಳೂ ಬರದು.

ಕಲ್ಲಂಗಡಿಹಣ್ಣು

ಪ್ರಕೃತಿಯೇ ನೀಡಿರುವ ಡಿಟಾಕ್ಸ್‌ ಡ್ರಿಂಕ್‌ ಈ ಕಲ್ಲಂಗಡಿಹಣ್ಣಿನ ರಸ. ತಾಜಾ ಅನುಭವ ನೀಡುವ ಈ ಹಣ್ಣೂ ಕೂಡಾ ಹೊಟ್ಟೆಯುಬ್ಬರ ಬರದಂತೆ ಕಾಪಾಡುತ್ತದೆ.

ನಿಂಬೆ ರಸ

ನಿಂಬೆಹಣ್ಣಿನ ರಸ ಹಿಂಡಿದ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಸಾಕಷ್ಟು ಸಮಸ್ಯೆಗಳನ್ನು ದೂರವಿಡಬಹುದು.

ಇಂಗು

ಭಾರತೀಯ ಮನೆಗಳಲ್ಲಿ ಹೊಟ್ಟೆಯುಬ್ಬರಕ್ಕೆ ಮನೆಮದ್ದಾಗಿರುವ ಇಂಗು ಹೊಟ್ಟೆಗೆ ಹಿತ. ಘಾಟು ಇದ್ದರೂ, ಒಂದು ಚಿಟಿಕೆ ಇಂಗನ್ನು ಬಿಸಿನೀರಿನಲ್ಲೋ, ಮಜ್ಜಿಗೆಯಲ್ಲೋ ಹಾಕಿ ಕುಡಿದರೆ ಹೊಟ್ಟೆ ನಿರಾಳವಾಗುತ್ತದೆ.

ಇದನ್ನೂ ಓದಿ: Health Article Kannada: ಸ್ವೀಟ್‌ ತಿನ್ನುವ ಚಪಲವೇ? ಆರೋಗ್ಯಕರವಾಗಿ ಸಿಹಿ ತಿನ್ನುವ ಉಪಾಯ ಇಲ್ಲಿದೆ!

ಈ ಎಲ್ಲಕ್ಕಿಂತ ಮುಖ್ಯ, ಮಳೆಗಾಲವಾದರೂ ಸರಿಯಾಗಿ ನೀರು ಕುಡಿಯುವುದು ಬಃಳ ಮುಖ್ಯ. ದೇಹ ಹೈಡ್ರೇಟ್‌ ಆಗಿದ್ದರೆ ಯಾವ ಸಮಸ್ಯೆಯೂ ಬಾರದು. ಮಳೆಗಾಲವೆಂದುಕೊಂಡು ನೀರು ಕುಡಿಯುವುದು ಕಡಿಮೆ ಮಾಡಿದಾಗ ಇಂತಹ ಹೊಟ್ಟೆಯ ಸಮಸ್ಯೆಗಳು ಬರುತ್ತವೆ. ಒಮ್ಮೆಲೇ ಹೊಟ್ಟೆ ಬಿರಿಯ ಉಣ್ಣಬೇಡಿ. ಹೊಟ್ಟೆಯಲ್ಲಿ ಇನ್ನೂ ಐದಾರು ತುತ್ತು ಹಿಡಿಸಬಹುದು ಎಂದನಿಸುವಾಗಲೇ ಊಟ ನಿಲ್ಲಿಸಿ. ಆಗಾಗ ಸ್ವಲ್ಪ ಸ್ವಲ್ಪವೇ ತಿನ್ನಿ. ಕಾರ್ಬೋನೇಟೆಡ್‌ ಡ್ರಿಂಕ್‌ಗಳನ್ನು ಕುಡಿಯಬೇಡಿ. ಹೆಚ್ಚು ಉಪ್ಪು ಹಾಕಿ ಅಡುಗೆ ಮಾಡಬೇಡಿ. ಊಟವನ್ನು ಚೆನ್ನಾಗಿ ಜಗಿದು ಉಣ್ಣಿ. ಮಳೆಗಾಲವೆಂದು ವ್ಯಾಯಾಮಕ್ಕೆ ಆಲಸ್ಯ ಮಾಡಬೇಡಿ. ಯೋಗ, ನಡಿಗೆ, ವ್ಯಾಯಾಮ ಯಾವುದೇ ಆಗಿರಲಿ, ಅದಕ್ಕೊಂದಿಷ್ಟು ಸಮಯ ಮೀಸಲಿಡಿ.

Exit mobile version