Site icon Vistara News

Ghee Benefits: ಇಲ್ಲಿವೆ ತುಪ್ಪದ ಬಗೆಗಿನ ತಪ್ಪು ತಿಳಿವಳಿಕೆಗಳು ಹಾಗೂ ಸತ್ಯದರ್ಶನ!

ghee

ಭಾರತೀಯರಿಗೆ ತುಪ್ಪ ಎಂದರೆ ನಿತ್ಯದ ಅವಿಭಾಜ್ಯ ಅಂಗ. ನಾವು ಬಾಲ್ಯದಿಂದ ತುಪ್ಪವನ್ನು ನಿತ್ಯವೂ ನಮ್ಮ ಆಹಾರದಲ್ಲಿ ಬಳಸುತ್ತಲೇ (Ghee uses) ಬಂದಿದ್ದೇವೆ. ದೋಸೆಗೆ, ಚಪಾತಿಗೆ, ಸಿಹಿತಿಂಡಿಗಳಿಗೆ ತುಪ್ಪವಿಲ್ಲದೆ ರುಚಿಯೇ ಇರದು. ಇಂತಿಪ್ಪ ತುಪ್ಪದ ಬಗೆಗೆ ಸಾಕಷ್ಟು ಅಪನಂಬಿಕೆಗಳೂ (myths about ghee) ಇತ್ತೀಚೆಗೆ ಬೆಳೆಯುತ್ತಿದೆ. ತುಪ್ಪ ತಿನ್ನುವುದು ಒಳ್ಳೆಯದಲ್ಲ ಎಂಬ ನಂಬಿಕೆ ಬಲಗೊಂಡು ಹಲವರು ತೂಕ ಇಳಿಸುವ ನೆಪದಲ್ಲಿ ತುಪ್ಪವನ್ನೇ ಬಿಡುತ್ತಿದ್ದಾರೆ. ಆದರೆ, ಒಮೆಗಾ 3 ಹಾಗೂ ಒಮೆಗಾ 6 ಪ್ಯಾಟಿ ಆಸಿಡ್‌ ಹೇರಳವಾಗಿರುವ ತುಪ್ಪದ ಸೇವನೆ ಅತ್ಯಂತ ಒಳ್ಳೆಯದು. ತೂಕ ಇಳಿಸುವಾಗಲೂ ಹಿತಮಿತವಾಗಿ ತುಪ್ಪ ತಿನ್ನುವುದು ಒಳ್ಳೆಯದು (ghee benefits) ಎಂಬುದನ್ನು ಆಯುರ್ವೇದವೂ ಪುಷ್ಟೀಕರಿಸುತ್ತದೆ.

ನಮ್ಮ ದೇಸೀ ತುಪ್ಪದಲ್ಲಿರುವುದು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಒಳ್ಳೆಯ ಕೊಬ್ಬು. ದೇಹದ ಅಂಗಾಗಗಳು ಚೆನ್ನಾಗಿ ಕಾರ್ಯ ನಿರ್ವಹಿಸಲು ಒಳ್ಳೆಯ ಕೊಬ್ಬು (good cholesterol) ಬೇಕು. ಆ ಕೆಲಸವನ್ನು ಮಾಡುವುದು ತುಪ್ಪ. ಅದಕ್ಕಾಗಿಯೇ, ಬೇಸಗೆ, ಚಳಿ, ಮಳೆ ಎಂಬ ಭೇದವಿಲ್ಲದೆ ನಾವು ತುಪ್ಪವನ್ನು ಸೇವಿಸಬೇಕು. ಇದು ದೇಹದ ತೇವಾಂಶವನ್ನು ಸಮತೋಲನದಲ್ಲಿಟ್ಟು ಆರೋಗ್ಯ ಕಾಪಾಡುತ್ತದೆ. ಅಷ್ಟೇ ಅಲ್ಲ, ತುಪ್ಪದಲ್ಲಿ ಬ್ಯುಟಿರಿಕ್‌ ಆಸಿಡ್‌ ಹೇರಳವಾಗಿದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹವನ್ನು ತಂಪಾಗಿಟ್ಟು, ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ.

ಹಾಗಾದರೆ ಬನ್ನಿ, ತುಪ್ಪದ ಬಗ್ಗೆ ಇರುವ ಅಪನಂಬಿಕೆಗಳೇನು ಎಂಬುದನ್ನು ನೋಡುತ್ತಾ ಸತ್ಯಾಂಶವನ್ನು ತಿಳಿಯೋಣ.

1. ತುಪ್ಪ ತಿಂದರೆ ದಪ್ಪಗಾಗುತ್ತೇವೆ: ಬಹುತೇಕರಲ್ಲಿ ಇಂದಿಗೂ ಇರುವ ಅತೀ ದೊಡ್ಡ ತಪ್ಪು ಕಲ್ಪನೆ ಎಂದರೆ, ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬುದು. ಹಾಗಾಗಿ ಬಹುತೇಕರು ತುಪ್ಪವನ್ನು ನಿರ್ಲಕ್ಷ್ಯ ಮಾಡುತ್ತಾರೆ. ನಿತ್ಯದ ಊಟದಲ್ಲಿ ಆದಷ್ಟೂ ತುಪ್ಪವನ್ನು ಸೇರದಂತೆ ನೋಡಿಕೊಳ್ಳುತ್ತಾರೆ. ಆದರೆ, ತುಪ್ಪದಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಇರುವುದು ನಿಜವಾದರೂ, ಇದನ್ನು ಹಿತಮಿತವಾಗಿ ಸೇವಿಸದರೆ ಖಂಡಿತಾ ತೂಕ ಹೆಚ್ಚುವುದಿಲ್ಲ. ಸಂಶೋಧನೆಗಳ ಪ್ರಕಾರ ನಾವು ಒಂದು ದಿನಕ್ಕೆ ಸೇವಿಸುವ ಸ್ಯಾಚುರೇಟೆಡ್‌ ಕೊಬ್ಬು, ನಾವು ಸೇವಿಸುವ ಕ್ಯಾಲರಿಯ ಶೇಕಡಾ 10ಕ್ಕಿಂತ ಕಡಿಮೆ ಇದ್ದರೆ ತೂಕ ಹೆಚ್ಚುವುದಿಲ್ಲ. ಆ ಸ್ಯಾಚುರೇಟೆಡ್‌ ಕೊಬ್ಬು, ಯಾವ ಮೂಲದಿಂದ ನೀವು ಪಡೆಯುವಿರೋ ಅದು ನಿಮಗೆ ಬಿಟ್ಟಿದ್ದು.

2. ತುಪ್ಪ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ: ತುಪ್ಪ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ತಪ್ಪು ಗ್ರಹಿಕೆ ಹಲವರಲ್ಲಿದೆ. ತುಪ್ಪದಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಇರುವುದರಿಂದ ಕೊಲೆಸ್ಟೆರಾಲ್‌ ಏರಿಕೆಗೆ ಇದು ಕಾರಣವಾಗುವ ಮೂಲಕ ತುಪ್ಪ ಹೃದಯಕ್ಕೆ ಒಳ್ಳೆಯದಲ್ಲ ಎಂದು ನಂಬಲಾಗುತ್ತದೆ ಎಂಬುದು ನಿಜವೇ ಆದರೂ, ಕೆಲವೊಮ್ಮೆ ತುಪ್ಪ ತಿನ್ನುವುದರಿಂದ ಸಮಸ್ಯೆಯೇನೂ ಆಗದು. ಆದರೆ, ಈ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಅಷ್ಟೇ.

3. ಲ್ಯಾಕ್ಟೋಸ್‌ ಅಲರ್ಜಿಯಿರುವ ಮಂದಿ ತುಪ್ಪ ತಿನ್ನಬಾರದು: ಇಂಥದ್ದೊಂದು ನಂಬಿಕೆಯನ್ನು ಬಹಳ ಮಂದಿ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಇದೇ ಸತ್ಯವಲ್ಲ. ತುಪ್ಪದಲ್ಲಿ ಹಾಲಿನ ಯಾವುದೇ ಅಂಶ ಇಲ್ಲದಿರುವುದರಿಂದ ಲ್ಯಾಕ್ಟೋಸ್‌ ಅಲರ್ಜಿಯ ಮಂದಿ ಯಾವುದೇ ಭಯವಿಲ್ಲದೆ ತಿನ್ನಬಹುದು.

4. ತುಪ್ಪ ಬೇಗ ಜೀರ್ಣವಾಗುವುದಿಲ್ಲ: ತುಪ್ಪ ಬೇಗನೆ ಹೊಟ್ಟೆಯಲ್ಲಿ ಕರಗದು ಎಂಬ ನಂಬಿಕೆ ಹಲವರದ್ದು. ಆದರೆ, ಇದು ತಪ್ಪು ನಂಬಿಕೆ. ಯಾಕೆಂದರೆ, ತುಪ್ಪ ಎಣ್ಣೆಗಿಂತಲೂ ಸುಲಭವಾಗಿ ಹಾಗೂ ಬೇಗನೆ ದೇಹದಲ್ಲಿ ಜೀರ್ಣವಾಗುತ್ತದೆ. ತುಪ್ಪದಲ್ಲಿ ಬ್ಯುಟಿರಿಕ್‌ ಆಸಿಡ್‌ ಇರುವುದರಿಂದ ಅದು ಜೀರ್ಣಕ್ರಿಯೆಯಲ್ಲಿ ಸಹಾಯಮಾಡುತ್ತದೆ. ಅಷ್ಟೇ ಅಲ್ಲ, ಇದು ಮಲಬದ್ಧತೆಯಾಗದಂತೆ ಸಹಾಯ ಮಾಡುತ್ತದೆ. ಆದರೆ, ತುಪ್ಪ ತಿನ್ನುವಾಗ ಹೆಚ್ಚು ಸೇವಿಸದಂತೆ ಜಾಗ್ರತೆ ವಹಿಸುವುದು ಒಳ್ಳೆಯದು. ಆಗಷ್ಟೇ ಅದು ನಿಮ್ಮ ಜೀರ್ಣ ಕ್ರಿಯೆಗೆ ಸಹಾಯ ಮಾಡಬಲ್ಲುದು.

ಇದನ್ನೂ ಓದಿ: Vitamin D: ದೇಹಕ್ಕೆ ಬೇಕಾದ ವಿಟಮಿನ್‌ ಡಿ ಪಡೆಯುವುದು ಹೇಗೆ?

5. ತುಪ್ಪ ಅಡುಗೆಗೆ ಒಳ್ಳೆಯದಲ್ಲ: ತುಪ್ಪದಿಂದ ಅಡುಗೆ ಮಾಡುವಾಗ ಯಾವುದೇ ಹಾನಿಕಾರಕ ರಸಾಯನಿಕ ಬಿಡುಗಡೆಯಾಗುವುದಿಲ್ಲ. ಹಾಗಾಗಿ ತುಪ್ಪ ಅಡುಗೆಗೆ ಒಳ್ಳೆಯದಲ್ಲ ಎಂಬ ನಂಬಿಕೆ ಸರಿಯಲ್ಲ. ತುಪ್ಪದಲ್ಲಿ ಇತರ ಎಣ್ಣೆಗಳಿಗಿಂತ ಅತೀ ಹೆಚ್ಚಿನ ಸ್ಮೋಕಿಂಗ್‌ ಪಾಯಿಂಟ್‌ ಇರುವುದು ಹೌದಾದರೂ, ಇದರಿಂದ ಯಾವ ಬಗೆಯ ಫ್ರೀ ರ್ಯಾಡಿಕಲ್‌ಗಳು ಬಿಡುಗಡೆಯಾಗದು. ಹಾಗಾಗಿ ತುಪ್ಪದಲ್ಲಿ ಕರಿಯುವುದು ಅಡುಗೆ ಮಾಡುವುದರಿಂದ ಸಮಸ್ಯೆಯೇನೂ ಇಲ್ಲ.‌ ಆದರೆ, ಆ ಮೂಲಕ ಹೆಚ್ಚು ತುಪ್ಪ ಸೇವಿಸುವುದನ್ನು ಮಾತ್ರ ಕಡಿಮೆ ಮಾಡಿ.

ತುಪ್ಪವನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು, ದಿನಕ್ಕೊಂದರಿಂದ ಎರಡು ಚಮಚ ತುಪ್ಪ ಹೊಟ್ಟೆ ಸೇರುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಈ ಮಿತಿ ಹೆಚ್ಚಾಗದಂತೆ ಎಚ್ಚರ ವಹಿಸಿ.

ಇದನ್ನೂ ಓದಿ: Potassium Deficiency: ಪೊಟಾಶಿಯಂ ಕೊರತೆಯನ್ನು ತುಂಬಿಕೊಳ್ಳುವುದು ಹೇಗೆ?

Exit mobile version