Site icon Vistara News

Ginger Benefits: ಮಳೆಗಾಲದ ಸೋಂಕುಗಳಿಗೆ ಬೇಕು ಶುಂಠಿಯೆಂಬ ಮದ್ದು!

ginger

ಕೆಲವು ಸರಳವಾದ ಅಡುಗೆಮನೆಯ ವಸ್ತುಗಳು ಸೋಂಕು ನಿವಾರಣೆಗೆ, ಆರೋಗ್ಯ ರಕ್ಷಣೆಗೆ ಮತ್ತು ಉರಿಯೂತ ಶಮನದಂಥ ಮಹತ್ವದ ಕೆಲಸಗಳಲ್ಲಿ ನೆರವಾಗಬಲ್ಲವು. ಉದಾ, ಶುಂಠಿಯ ಬೇರನ್ನೇ ತೆಗೆದುಕೊಂಡರೆ, ಅಡುಗೆಯನ್ನು ರುಚಿಗಟ್ಟಿಸುವ ಕೆಲಸದ ಜೊತೆಗೆ ಇನ್ನೂ ಎಷ್ಟೋ ರೀತಿಯಲ್ಲಿ ನಮ್ಮ ಸ್ವಾಸ್ಥ್ಯ ರಕ್ಷಣೆಯಲ್ಲಿ ಇದು ಸಹಾಯ ಮಾಡಬಲ್ಲದು. ಮಳೆಗಾಲದಲ್ಲಿ ಆಗಾಗ ಕಾಡುವ ಜ್ವರ-ಶೀತ-ಕೆಮ್ಮಿನಂಥ ಸೋಂಕುಗಳ ಜೊತೆ ಹೋರಾಡುವುದಕ್ಕೆ, ಆಗೀಗ ವಕ್ಕರಿಸಿಕೊಳ್ಳುವ ಅಜೀರ್ಣವನ್ನು ಸರಿಪಡಿಸುವುದಕ್ಕೆ, ಜೀರ್ಣಾಂಗಗಳ ಆರೋಗ್ಯವನ್ನು ಚೆನ್ನಾಗಿರಿಸುವುದಕ್ಕೆ- ನೋಡಿ, ಎಷ್ಟೊಂದು ಕೆಲಸಗಳಲ್ಲಿ ಶುಂಠಿಯ ಪರಿಚಾರಿಕೆ ನಮ್ಮ ಗಮನಕ್ಕೇ ಬರುವುದಿಲ್ಲ. ಇನ್ನೂ ಏನೆಲ್ಲ ಲಾಭಗಳಿವೆ ಇದನ್ನು ಸೇವಿಸುವಲ್ಲಿ ಮತ್ತು ಹೇಗೆಲ್ಲ ಶುಂಠಿಯನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು (Ginger Benefits) ಎಂಬುದನ್ನು ನೋಡೋಣ.

ಪ್ರತಿರೋಧಕ ಶಕ್ತಿ

ಶುಂಠಿಯಲ್ಲಿರುವ ಜಿಂಜರಾಲ್‌ ಮತ್ತು ಶೋಗಾಲ್‌ನಂಥ ಅಂಶಗಳ ಬಗ್ಗೆ ವಿಸ್ತೃತವಾಗಿ ಅಧ್ಯಯನಗಳು ನಡೆದಿವೆ. ದೇಹದ ರಕ್ಷಣಾ ಕಾಯಗಳನ್ನು ಪ್ರಚೋದಿಸುವ ಇದರ ಶಕ್ತಿಯೇ ಈ ಎಲ್ಲ ಕುತೂಹಲಗಳಿಗೆ ಕಾರಣ. ಸೋಂಕುಗಳಿದ್ದಾಗ ನೆಗಡಿ, ಕೆಮ್ಮು, ಕಫ, ಮೈ-ಕೈ ನೋವು ಮುಂತಾದ ಲಕ್ಷಣಗಳಿರುವಾಗ, ಶುಂಠಿಯ ಚಹ, ಕಷಾಯಗಳ ಸೇವನೆಯಿಂದ ಅನಾರೋಗ್ಯದ ಅವಧಿಯನ್ನು ಮೊಟಕುಗೊಳಿಸಬಹುದು ಎಂಬುದು ಮಹತ್ವದ್ದು. ಹಾಗಾಗಿ ಮಳೆಗಾಲದ ದಿನಗಳಲ್ಲಿ ಒಂದು ಖಡಕ್‌ ಶುಂಠಿ ಕಷಾಯ ದೇಹಕ್ಕೆ ಬಹಳಷ್ಟು ಆರಾಮ ನೀಡಬಲ್ಲದು

ಪಚನಕಾರಿ

ಇದರ ಜಿಂಜರಾಲ್‌ ಅಂಶವು ಜೀರ್ಣಾಂಗಗಳನ್ನು ಚುರುಕು ಮಾಡುತ್ತದೆ. ಜಠರದಲ್ಲಿ ಅಗತ್ಯಕ್ಕಿಂತ ಹೆಚ್ಚು ಸಮಯ ಉಳಿಯಲು ಬಿಡದಂತೆ ಆಹಾರವನ್ನು ಮುಂದೂಡುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಮಲಬದ್ಧತೆಯಂಥ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯ. ಕೆಲವು ಸಂದರ್ಭಗಳಲ್ಲಿ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚಿನ ಪರಿಣಾಮ ಕಾಣಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಶುಂಠಿ ಸೇವಿಸುವುದು ಕೆಲವರಿಗೆ ಹೊಂದಿಕೆಯಾಗದಿರುವ ಸಾಧ್ಯತೆಯಿದೆ.

ಉತ್ಕರ್ಷಣ ವಿರೋಧಿ

ಶುಂಠಿಯಲ್ಲಿ ಹಲವು ರೀತಿಯ ಪ್ರಬಲ ಉತ್ಕರ್ಷಣ ನಿರೋಧಕಗಳಿವೆ. ದೇಹದಲ್ಲಿ ಉರಿಯೂತ ನಿವಾರಣೆಗೆ ಉತ್ತಮ ಮದ್ದು ಇದು ಎಂಬುದು ಈಗಾಗಲೇ ತಿಳಿದಿರುವ ವಿಷಯ. ಯಾವುದೇ ಸೋಂಕುಗಳ ಬೆನ್ನಿಗೆ ಉರಿಯೂತ ಭುಗಿಲೇಳುವುದು ಸಾಮಾನ್ಯ. ಇದರಿಂದ ಗಂಟುಗಳಲ್ಲಿ ನೋವು, ಶ್ವಾಸನಾಳದಲ್ಲಿ ಕಫ ಬಿಗಿಯುವುದು ಮುಂತಾದ ಹಲವು ತೊಂದರೆಗಳು ಕಾಣುತ್ತವೆ. ಇಂಥ ದಿನಗಳಲ್ಲಿ ಶುಂಠಿಯ ಬಳಕೆಯನ್ನು ಹೆಚ್ಚಿಸಿದರೆ ಬೇಗನೇ ಆರಾಮ ದೊರೆಯುತ್ತದೆ.

ಗರ್ಭಿಣಿಯರಿಗೆ

ಬೆಳಗಿನ ಹೊತ್ತು ವಾಂತಿ, ಓಕರಿಕೆಯಂಥ ಮಾರ್ನಿಂಗ್‌ ಸಿಕ್‌ನೆಸ್‌ನಿಂದ ಒದ್ದಾಡುತ್ತಿರುವ ಗರ್ಭಿಣಿಯರಿಗೆ ಶುಂಠಿ ನೆರವಾಗಬಲ್ಲದು. ಹಸಿ ಶುಂಠಿಯ ರಸ, ಕಷಾಯ ಅಥವಾ ಶುಂಠಿಯನ್ನೇ ಬಾಯಲ್ಲಿರಿಸಿಕೊಂಡರೂ, ಹೊಟ್ಟೆ ತೊಳೆಸುವುದನ್ನು ಕಡೆಯಬಹುದು. ಪರಂಪರಾಗತ ಔಷಧಿಯಲ್ಲಿ ಈ ಸಮಸ್ಯೆಗೆ ಶುಂಠಿಯೇ ಮದ್ದು.

ಮಧುಮೇಹಿಗಳಿಗೆ

ದೇಹದ ಚಯಾಪಚಯ ಹೆಚ್ಚಿಸುವ ಇದರ ಸಾಮರ್ಥ್ಯದಿಂದಾಗಿ ಮಧುಮೇಹಿಗಳು ಇದನ್ನು ತಮ್ಮ ಆಹಾರದ ಭಾಗವಾಗಿಸಿಕೊಳ್ಳಬಹುದು. ಜೀರ್ಣಕ್ರಿಯೆಯನ್ನು ಸರಾಗ ಮಾಡಿ, ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರದಂತೆ ಇದು ತಡೆಯಬಲ್ಲದು. ಜೊತೆಗೆ ರಕ್ತ ಪರಿಚಲನೆಯನ್ನೂ ಇದು ಉತ್ತೇಜಿಸುವುದರಿಂದ, ಅಂಗಾಂಗಗಳ ಯೋಗಕ್ಷೇಮ ಕಾಪಾಡುವಲ್ಲೂ ಶುಂಠಿ ಸಹಕಾರಿ.

ಇದನ್ನೂ ಓದಿ: Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

ತೂಕ ನಿರ್ವಹಣೆ

ದೇಹದ ಚಯಾಪಚಯ ಹೆಚ್ಚಿಸಿ, ಕೊಬ್ಬು ಕಡಿತ ಮಾಡುವಲ್ಲಿ ಶುಂಠಿ ಅತ್ಯಂತ ಪ್ರಯೋಜನಕಾರಿ. ಅನಗತ್ಯ ಹಸಿವೆಯನ್ನು ನಿರ್ಬಂಧಿಸಿ, ತಿಂದಿದ್ದೆಲ್ಲ ಸೂಕ್ತ ರೀತಿಯಲ್ಲಿ ರಕ್ತ ಸೇರುವಂತೆ ಮಾಡುವುದರಿಂದ, ಆಹಾರ ಸೇವನೆಯ ಸಂತೃಪ್ತಿ ಹೆಚ್ಚುತ್ತದೆ. ಈ ಎಲ್ಲ ಕಾರಣಗಳಿಂದಾಗಿ ತೂಕ ನಿರ್ವಹಣೆಯಲ್ಲಿ ಸವಾಲುಗಳಿದ್ದರೆ, ಶುಂಠಿಯನ್ನು ಆಹಾರದಲ್ಲಿ ಸೇರಿಸಿಕೊಂಡು ಪ್ರಯತ್ನಿಸಬಹುದು. ಆದರೊಂದು, ಬೆಳಗಿನ ಖಾಲಿ ಹೊಟ್ಟೆಯಲ್ಲಿ ಜಿಂಜರ್‌ ಶಾಟ್‌ಗಳನ್ನು ಸೇವಿಸುವ ಮುನ್ನ ಅಥವಾ ಅತಿಯಾಗಿ ಶುಂಠಿಯನ್ನು ಬಳಸುವ ಮುನ್ನ, ಅವರವರ ಆರೋಗ್ಯಕ್ಕೆ ಇದು ಎಷ್ಟು ಒಗ್ಗುತ್ತದೆ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ.

Exit mobile version