Site icon Vistara News

Giving Up Tea: ಒಂದು ತಿಂಗಳು ಟೀ ಕುಡಿಯೋದನ್ನ ನಿಲ್ಲಿಸಿ; ಆಮೇಲೇನಾಗುತ್ತೆ ನೋಡಿ!

Giving Up Tea

ಕಾಲ, ದೇಶ, ಪಾತ್ರಗಳನ್ನೆಲ್ಲಾ ಮೀರಿ ಮನಸ್ಸುಗಳನ್ನು ಏಕತ್ರಗೊಳಿಸುವ ಒಂದು ಸಾಧನಕ್ಕೆ ʻಚಹಾʼ (Giving up tea) ಎಂದು ಹೆಸರು. ಅದರಲ್ಲೂ ಭಾರತೀಯರ ಬಗ್ಗೆ ಹೇಳುವುದಾದರೆ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲಾಗುವ ಕೆಲವೇ ವಿಷಯಗಳಲ್ಲಿ ಇದೂ ಒಂದು. ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ- ಎಲ್ಲೇ ಹೋದರೂ ಒಂದು ಕಪ್‌ ಚಹಾದಲ್ಲಿ ಬಾಂಧವ್ಯಗಳು ಬೆಸೆಯುತ್ತವೆ. ಬೆಳಗ್ಗೆದ್ದು ಒಂದು ಕಪ್‌ ಚಹಾ ಹೊಟ್ಟೆಗೆ ಬಿದ್ದರೆ, ದಿನಕ್ಕೊಂದು ಲವಲವಿಕೆಯ ಬೆಳಗು. ಮಾತ್ರವಲ್ಲ, ಸುಸ್ತಾಯಿತೇ- ಇರಲಿ ಒಂದು ಚಹಾ, ಬೋರಾಯಿತೇ- ಬರಲಿ ಒಂದು ಚಹ, ಪ್ರಯಾಣ, ಆಯಾಸ, ನಿದ್ದೆ, ತಲೆನೋವು, ಒತ್ತಡ- ಸರ್ವ ಸಮಸ್ಯೆಗೂ ಒಂದೇ ಮದ್ದು- ಚಹಾ.

ದಿನಕ್ಕೊಂದೆರಡು ಕಪ್‌ ಚಹಾದಲ್ಲಿ ಸುಧಾರಿಸಿದರೆ ತೊಂದರೆಯಿಲ್ಲ. ಅದಕ್ಕಿಂತ ಹೆಚ್ಚಾಗಿ, ಮದ್ದೇ ರೋಗವಾದರೆ? ಆಗ ಇಂಥ ʻಸಂಜೀವಿನಿʼಯನ್ನು ಬಿಡುವಂಥ (giving up tea) ಪ್ರಮೇಯ ಬಂದರೆ? ಮನೆಹಾಳು ಕೆಲಸ ಎಂದು ಬೈಯ್ಯಬಹುದು; ದುಷ್ಟ ಹಂಚಿಕೆ ಎಂದು ಟೀಕಿಸಬಹುದು; ಜನವಿರೋಧಿ ಕ್ರಮವೆಂದು ಜರಿಯಬಹುದು; ಲೋಕಕಂಟಕ ಇರಾದೆ ಎಂದು ಕಿಡಿ ಕಾರಬಹುದು. ಆದರೂ, ಪ್ರಾಯೋಗಿಕವಾಗಿ ಒಂದು ತಿಂಗಳು ಚಹಾದಿಂದ ದೂರ ಇದ್ದರೆ (giving up tea) ಆರೋಗ್ಯದ ಮೇಲೆ ಆಗಬಹುದಾದ ಪರಿಣಾಮಗಳೇನು? ಯಾವುದೇ ಅಭ್ಯಾಸವನ್ನು ಬಿಡುವಾಗ ಆಗುವಂಥ ಅಲ್ಪ ಸ್ವಲ್ಪ ತೊಡಕುಗಳು ಇದ್ದೇ ಇರುತ್ತವೆ. ಉಳಿದಂತೆ, ಆರೋಗ್ಯದ ಮೇಲೆ ಪೂರಕ ಪರಿಣಾಮವೇ ಉಂಟಾಗುತ್ತದೆ ಎನ್ನುವುದು ಪೌಷ್ಟಿಕಾಂಶ ತಜ್ಞರ ಅಂಬೋಣ.

ಕೆಫೇನ್‌ ಕಡಿಮೆ

ದೇಹಕ್ಕೆ ಕಾಲಕಾಲಕ್ಕೆ ದೊರೆಯುವ ಕೆಫೇನ್‌ ಕಡಿಮೆಯಾದರೆ ಅದರಿಂದ ಒಂದಿಷ್ಟು ತಳಮಳ ಹುಟ್ಟುವುದು ನಿಜ. ಆದರೆ ಇದು ಹೆಚ್ಚಾಗಿ ಚಟಗಳನ್ನು ಬಿಡುವಾಗ ಉಂಟಾಗುವಂತೆ ಮಾನಸಿಕ ಸ್ಥರದಲ್ಲಿ ಇರುವಂಥದ್ದು. ಆದರೆ ಕೆಫೇನ್‌ ಸೇವನೆ ಕಡಿಮೆಯಾದಂತೆ ನಿದ್ದೆ ಸುಸೂತ್ರವಾಗುತ್ತದೆ. ನಿದ್ರಾಹೀನತೆಯಿಂದ ದೇಹದ ಮೇಲೆ ಆಗುವಂಥ ಎಲ್ಲಾ ದುಷ್ಪರಿಣಾಮಗಳು ಕ್ರಮೇಣ ಕಡಿಮೆಯಾಗಿ ಆರೋಗ್ಯ ವೃದ್ಧಿಸುತ್ತದೆ.

ಅಧಿಕ ಪ್ರಮಾಣದಲ್ಲಿ ಚಹಾ ಹೀರಿದಂತೆ ಹುರುಪು ಹೆಚ್ಚಾದರೂ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಹೌದು, ಚಹಾಗೆ ಡೈಯುರೇಟಿಕ್‌ ಗುಣವೂ ಇದೆ. ಅಂದರೆ ಮೂತ್ರವನ್ನು ಹೆಚ್ಚಾಗಿ ಉತ್ಪತ್ತಿ ಮಾಡಿ, ದೇಹದಲ್ಲಿ ನೀರಿನಂಶ ಕಡಿಮೆಯಾಗುವಂತೆ ಮಾಡುತ್ತದೆ. ಹಾಗಾಗಿ ಹೆಚ್ಚಿನ ಚಹಾ ಸೇವನೆಯಿಂದ ಸುಸ್ತು ಹೆಚ್ಚಾಗುತ್ತದೆ. ಇದು ಅರ್ಥವಾಗದಿದ್ದಾಗ ಸುಸ್ತು ಕಡಿಮೆ ಮಾಡಿಕೊಳ್ಳಲು ಮತ್ತೂ ಚಹಾ ಕುಡಿದರೆ!

ದೇಹದಲ್ಲಿ ಎಲ್ಲೆಂದರಲ್ಲಿ ಓಡಾಡಿ ರೋಗ ಹರಡುವಂಥ ಮುಕ್ತ ಕಣಗಳನ್ನು ಕಡಿಮೆ ಮಾಡಲು ಚಹಾ ಬಿಡುವುದು ಉಪಯುಕ್ತ. ಇದರಿಂದ ದೇಹದ ಮೂಲ ಕೋಶಗಳ ಮಟ್ಟದಲ್ಲಿ ಆರೋಗ್ಯವರ್ಧನೆ ಸಾಧ್ಯವಿದೆ. ಆಸಿಡಿಟಿ, ಎದೆಯುರಿಯಂಥ ಕೆಲವು ಜೀರ್ಣಾಂಗಗಳ ಸಮಸ್ಯೆಯನ್ನು ಕಡಿಮೆ ಮಾಡಲೂ ಚಹಾದಿಂದ ಮುಕ್ತರಾಗುವುದು ಅನುಕೂಲಕರ.

ಕೊಸರೂ ಉಂಟು!

ಈ ಪೌಷ್ಟಿಕಾಂಶ ತಜ್ಞರ ಮಾತುಗಳನ್ನು ಕೇಳುತ್ತಿದ್ದರೆ ಚಹಾ ಬಿಟ್ಟರೇ ಒಳ್ಳೆಯದೆಂಬ ವರಸೆ ಇದೆಯಲ್ಲ ಎಂದು ಬಹಳಷ್ಟು ಮಂದಿ ಹುಬ್ಬೇರಿಸಬಹುದು. ಚಹಾ ರುಚಿಸಿದಷ್ಟು ಸತ್ಯ ರುಚಿಸುವುದಿಲ್ಲ! ಇರಲಿ. ಆದರೆ ಚಹಾ ಬಿಟ್ಟರೆ ತಲೆನೋವು, ಅತಿ ನಿದ್ದೆ ಮುಂತಾದ ಏನೇನೋ ದೂರುಗಳನ್ನು ಹೇಳುವ ಜನರನ್ನು ಕಂಡಿರಬಹುದು. ಇದೂ ಸುಳ್ಳಲ್ಲ. ಚಹಾ ಬಿಡುವಾಗ ಒಂದಿಷ್ಟು ಕೊಸರೂ ಉಂಟು.

ಕೆಫೇನ್‌ ಪ್ರಿಯರಿಗೆ ದೊರೆಯುತ್ತಿದ್ದ ಮನಸ್ಸಿನ ಆರಾಮ, ಸಮಾಧಾನದಂಥ ಭಾವಗಳು ಈಗ ಇಲ್ಲವಾಗುವುದು ಹೌದು. ಚಟಮುಕ್ತರಾಗುವಾಗ ಇರುವಂಥ ಲಕ್ಷಣಗಳು ಕೊಂಚ ಇಲ್ಲೂ ಕಾಣಿಸಿಕೊಳ್ಳಬಹುದು. ಮಂಕಾಗುವುದು, ಸುಸ್ತು. ಆಯಾಸ, ಒತ್ತಡ ಹೆಚ್ಚಿದಂಥ ಅನುಭವ, ನಿದ್ದೆಬಡುಕತನ, ತಲೆನೋವು- ಇಂಥ ಯಾವುದೇ ಲಕ್ಷಣಗಳಿದ್ದರೂ ಅದು ಸಹಜ. ಆದರೆ ಇವೆಲ್ಲಾ ತಾತ್ಕಾಲಿಕ. ಕೆಫೇನ್‌ ಕಡಿಮೆಯಾದರೆ ಅದಕ್ಕೂ ಶರೀರ ಹೊಂದಿಕೊಳ್ಳಬೇಕಲ್ಲ… ಆವರೆಗೆ ಇಂಥ ಲಕ್ಷಣಗಳಿರುತ್ತವೆ. ಇವು ಎಷ್ಟು ತೀವ್ರವಾಗಿರುತ್ತವೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಮುಂದೇನು?

ಚಹಾ ಬಿಟ್ಟಾಯಿತು, ಮುಂದೇನು? ಆ ಹೊತ್ತಿಗೆ ಹೀರುವುದಕ್ಕೇನಾದರೂ ಬೇಕಲ್ಲ… ಏನುಂಟು ನಿಮ್ಮ ಸಲಹೆ ಎಂದು ಕೇಳಬಹುದು. ಯಾವುದೇ ರೀತಿ ಹರ್ಬಲ್‌ ಚಹಾಗಳನ್ನು ಪ್ರಯತ್ನಿಸಬಹುದು. ಕ್ಯಾಮೊಮೈಲ್‌, ನಿಂಬೆಹುಲ್ಲು, ಗುಲಾಬಿ, ಪೆಪ್ಪರ್‌ಮಿಂಟ್‌ ಮುಂತಾದವು ಕೆಫೇನ್‌ ಇಲ್ಲದೆಯೇ, ತಮ್ಮ ಪರಿಮಳದ ಮೂಲಕವೇ ಮನಸ್ಸನ್ನು ತಾಜಾ ಇರಿಸಬಲ್ಲವು. ನಿಂಬೆ ರಸ ಮತ್ತು ಸ್ವಲ್ಪವೇ ಜೇನುತುಪ್ಪ ಸೇರಿಸಿದ ಬಿಸಿ ನೀರು ಸಹ ಹಿತವಾದ ಅನುಭವವನ್ನೇ ನೀಡುತ್ತದೆ. ಬಿಸಿಯಾದ ಇಂಥ ಪೇಯಗಳ ಬದಲು ತಂಪಾದ ಹಣ್ಣಿನ ರಸಗಳ ಸೇವನೆಗೆ ಪ್ರಯತ್ನಿಸಬಹುದು. ಆದರೆ ಇಂಥ ಪರ್ಯಾಯ ಆಯ್ಕೆಗಳು ದೇಹಕ್ಕೆ ತ್ವರಿತವಾಗಿ ಒಗ್ಗಿದರೂ ಮನಸ್ಸಿಗೆ ಒಗ್ಗುವುದಕ್ಕೆ ಸಮಯ ಬೇಕು.

FAQ

ದಿನಕ್ಕೆಷ್ಟು ಕಪ್‌ ಚಹಾ ಕುಡಿಯಬಹುದು?

ಎರಡರಿಂದ ಮೂರ್‌ ಕಪ್‌ ಚಹಾ ಹೀರುವುದರಿಂದ ಆರೋಗ್ಯಕ್ಕೆ ತೊಂದರೆಯಿಲ್ಲ. ಅದಕ್ಕಿಂತ ಹೆಚ್ಚಾದರೆ ತೊಂದರೆಗಳು ಕ್ರಮೇಣ ಕಾಣಿಸಿಕೊಳ್ಳುತ್ತವೆ

ರಾತ್ರಿ ಮಲಗುವಾಗ ಚಹಾ ಕುಡಿಯಬಹುದೇ?

ಮಲಗುವ ನಾಲ್ಕಾರು ತಾಸುಗಳ ಮುನ್ನ ಚಹಾ ಕುಡಿದರೆ ತೊಂದರೆಯಿಲ್ಲ. ಆನಂತರವೂ ಚಹಾ ಹೀರುವುದರಿಂದ ನಿದ್ದೆಗೆ ತೊಂದರೆಯಾಗಬಹುದು.

ಇದನ್ನೂ ಓದಿ: Dental Health: ಸದಾ ಜಗಿಯುತ್ತಿರುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ ಅನ್ನೋದು ನಿಜವೆ?

Exit mobile version