Site icon Vistara News

ಜಾಗತಿಕ ತಾಪಮಾನ | ಭೂಮಿ ಬಿಸಿಯಾಗುತ್ತಿದೆ, ಮಕ್ಕಳ ದೈಹಿಕ ಸಾಮರ್ಥ್ಯ ಕುಸಿಯುತ್ತಿದೆ

play

ಜಗತ್ತಿನೆಲ್ಲೆಡೆ ಇತ್ತೀಚೆಗೆ ಹೆಚ್ಚುತ್ತಿರುವ ತಾಪಮಾನ ಮತ್ತು ಬಿಸಿಗಾಳಿಯಿಂದಾಗಿ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದ್ದು, ಹೊರಗೆ ಆಡಲಾರದ ಮಕ್ಕಳು ಹೆಚ್ಚೆಚ್ಚು ಜಡರಾಗುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.

ತಾಪಮಾನದ ವೈಪರಿತ್ಯವನ್ನು ಎದುರಿಸಲು ದೈಹಿಕ ಸಾಮರ್ಥ್ಯ ಮುಖ್ಯವಾಗುವುದು ಹೌದಾದರೂ, ಅದೇ ಕಾರಣದಿಂದಾಗಿ ಮಕ್ಕಳಲ್ಲಿ ಫಿಟ್‌ನೆಸ್‌ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಕ್ಕಳ ತೂಕ ಹೆಚ್ಚುತ್ತಿದ್ದು, ದೈಹಿಕ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ಪರಿಸರ-ವ್ಯಾಯಾಮ-ಶರೀರಶಾಸ್ತ್ರಜ್ಞೆ ಡಾ. ಶೌನ್ಡಾ ಮೊರಿಸ್ಸನ್‌ ಅಭಿಪ್ರಾಯಪಟ್ಟಿದ್ದಾರೆ. ನಿರ್ಜಲೀಕರಣ, ಸನ್‌ಸ್ಟ್ರೋಕ್‌, ಆಯಾಸದಂಥ ಅತೀವ ತಾಪಮಾನದಿಂದ ಉಂಟಾಗುವ ಅಪಾಯಗಳಿಗೆ ಮಕ್ಕಳು ತುತ್ತಾಗುವುದು ಹೆಚ್ಚು. ದಿನದಿಂದ ದಿನಕ್ಕೆ ಬಿಸಿಯಾಗುತ್ತಿರುವ ಈ ಭೂಮಿಯನ್ನು ಎದುರಿಸಲು ಮಕ್ಕಳಿಗೆ ಸರಿಯಾದ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯ ಇಲ್ಲದಿದ್ದರೆ ಸಮಸ್ಯೆ ಹೆಚ್ಚುತ್ತದೆ. ಹಾಗಾಗಿ ವ್ಯಾಯಾಮವನ್ನು ಮಕ್ಕಳ ದೈನಂದಿನ ಚಟುವಟಿಕೆಯನ್ನಾಗಿಸಲು ಪ್ರೋತ್ಸಾಹಿಸಬೇಕು ಎಂಬುದು ಅವರ ನಿಲುವು.

ಇದನ್ನೂ ಓದಿ: Parenting tips: ನಿಮ್ಮ ಮಕ್ಕಳು ದೊಡ್ಡವರಾಗಿಬಿಡುವ ಮೊದಲೇ ನೀವು ಮಕ್ಕಳಾಗಿಬಿಡಿ!

ಭೂಮಿಯ ಬಿಸಿಯೇರುತ್ತಿರುವ ಸಂದರ್ಭದಲ್ಲಿ, ವ್ಯಾಯಾಮ ಮತ್ತು ಶಾರೀರಿಕ ಚಟುವಟಿಕೆಯ ಮೂಲಕ ಮಕ್ಕಳು ಇದನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬ ಬಗ್ಗೆ ಡಾ. ಮೊರಿಸ್ಸನ್‌ ನೇತೃತ್ವದ ತಂಡ, ಸುಮಾರು ೧೫೦ ವೈದ್ಯಕೀಯ ಅಧ್ಯಯನಗಳ ಪರಾಮರ್ಶೆ ನಡೆಸಿತ್ತು. ಇದರಲ್ಲಿ ಪ್ರಾಥಮಿಕ ಶಾಲೆಯ ವಯಸ್ಸಿನ, ಅಂದರೆ ೫-೧೨ ವರ್ಷ ವಯೋಮಾನದ, ೪೫೭ ಗಂಡು ಮಕ್ಕಳನ್ನು ಗಮನಿಸಿದ್ದ ಥಾಯ್ಲೆಂಡ್‌ನ ಅಧ್ಯಯನವೊಂದನ್ನು ಉಲ್ಲೇಖಿಸಿರುವ ಅವರು, ನಿತ್ಯ ಚಟುವಟಿಕೆಯಿಂದಿರುವ ಮಕ್ಕಳಿಗೆ ಹೋಲಿಸಿದಲ್ಲಿ, ಹೆಚ್ಚು ತೂಕವಿರುವ ಮಕ್ಕಳು ತಾಪಮಾನದ ವೈಪರಿತ್ಯವನ್ನು ಎದುರಿಸಲು ದುಪ್ಪಟ್ಟು ಶ್ರಮಪಡುತ್ತಾರೆ ಎಂದು ಹೇಳಿದ್ದಾರೆ.

ಅಮೆರಿಕದ ಮಕ್ಕಳ ಆಸ್ಪತ್ರೆಯೊಂದರ ಮಾಹಿತಿಯನ್ನು ಉದ್ಧರಿಸಿದ ಆಕೆ, ಬಿಸಿಗಾಳಿಯ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲೂ ಚಿಕ್ಕ ಮಕ್ಕಳ ಆರೋಗ್ಯ ಇನ್ನಷ್ಟು ಸೂಕ್ಷ್ಮವಾಗಿರುತ್ತದೆ ಎಂದು ಹೇಳಿದ್ದಾರೆ. ʻಮಕ್ಕಳು ತಮ್ಮ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಅವರ ಭವಿಷ್ಯದ ದೃಷ್ಟಿಯಿಂದ ಅತಿಮುಖ್ಯ. ಅದೊಂದು ʻಕೆಲಸʼ ಎಂದು ಭಾವಿಸದೆ, ಶಾರೀರಿಕ ಚಟುವಟಿಕೆಯನ್ನು ಉಲ್ಲಾಸದಿಂದ ಸ್ವೀಕರಿಸಲು ಮಕ್ಕಳನ್ನು ಪ್ರೋತ್ಸಾಹಿಸಬೇಕಿದೆʼ ಎಂದು ಅವರ ಅಭಿಮತ.

ಕಳೆದ ೩೦ ವರ್ಷಗಳಲ್ಲಿ ಮಕ್ಕಳ ದೈಹಿಕ ಚಟುವಟಿಕೆ ಕ್ರಮೇಣ ಇಳಿಮುಖವಾಗಿದೆ. ದಿನಂಪ್ರತಿ ಕನಿಷ್ಟ ೬೦ ನಿಮಿಷಗಳಷ್ಟು ಶಾರೀರಿಕ ಚಟುವಟಿಕೆಯನ್ನು ಮಕ್ಕಳು ಮಾಡಲೇಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯು ಬಹುತೇಕ ದೇಶಗಳಲ್ಲಿ ಉಲ್ಲಂಘನೆಗೊಳ್ಳುತ್ತಿದೆ. ಅದರಲ್ಲೂ ಕಳೆದೆರಡು ವರ್ಷಗಳಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಎಲ್ಲಾ ದೇಶಗಳಲ್ಲೂ ಮಕ್ಕಳ ದೈಹಿಕ ಸಾಮರ್ಥ್ಯ ಇಳಿಮುಖವಾಗಿದೆ.

ಇದನ್ನೂ ಓದಿ | video viral | ಈ ಮಕ್ಕಳು ಶಾಲೆಗೆ ಹೋಗಬೇಕು ಎಂದರೆ ಅಪ್ಪ-ಅಮ್ಮ ಹೆಗಲಲ್ಲಿ ಹೊತ್ತು ನದಿ ದಾಟಿಸಬೇಕು

Exit mobile version