ಜಗತ್ತಿನಲ್ಲಿ ಸುಲಭಕ್ಕೆ ದೊರೆಯುವುದೆಂದರೆ ವೈದ್ಯ ವಿದ್ಯೆ ಎಂಬ ಮಾತಿದೆ. ಸುಮ್ಮನೆ ʻತಲೆ ನೋವುʼ ಎಂದೊಮ್ಮೆ ಹೇಳಿ ನೋಡಿ, ಹಾಗೆ ಮಾಡಿ… ಹೀಗೆ ಮಾಡಿ… ಎನ್ನುತ್ತ ಹತ್ತಾರು ಸಲಹೆಗಳು, ಔಷಧಿಗಳು ದೊರೆಯುತ್ತವೆ. ಅದರಲ್ಲೂ ಈಗಿನ ಇಂಟರ್ನೆಟ್ ಭರಾಟೆಯಲ್ಲಿ ಸರ್ವರೋಗಕ್ಕೂ ಮದ್ದು ಸುಲಭದಲ್ಲಿ ದೊರೆಯುತ್ತದೆ. ಆದರೆ ಯಾವುದನ್ನು ಎಷ್ಟು ನಂಬಬೇಕು ಎಂಬ ಗೊಂದಲಕ್ಕೆ ಮಾತ್ರ ಮದ್ದಿಲ್ಲದಂತಾಗಿದೆ. ʻಗೋಲ್ಡನ್ ಪೇಸ್ಟ್ʼ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ಅರಿಶಿನ ಮತ್ತು ಅಗಸೆಬೀಜದ ಪೇಸ್ಟ್ (Golden Paste) ಬಗ್ಗೆ ಕೇಳಿದ್ದೀರಾ? ಏನಿದು, ಏನುಪಯೋಗ ಎಂಬ ಬಗ್ಗೆ ಒಂದಿಷ್ಟು ವಿವರಗಳು ಇಲ್ಲಿವೆ.
ಮಾಡುವುದು ಹೇಗೆ?
ಮೊದಲಿಗೆ ಗೋಲ್ಡನ್ ಪೇಸ್ಟ್ ಅಥವಾ ಹೊಂಬಣ್ಣದ ಮಿಶ್ರಣವನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೇಕಾಗುವ ವಸ್ತುಗಳು: ಅರಿಶಿನ ಪುಡಿ- 3 ಟೇಬಲ್ ಚಮಚ, ಅಗಸೆ ಬೀಜದ ಪುಡಿ- 3 ಟೇಬಲ್ ಚಮಚ, ಶುಂಠಿ ಪುಡಿ- 3 ಟೇಬಲ್ ಚಮಚ, ಕರಿ ಮೆಣಸಿನ ಪುಡಿ- 1/2 ಟೇಬಲ್ ಚಮಚ, ಜೇನುತುಪ್ಪ- 1/2 ಕಪ್, ಆಪಲ್ ಸೈಡರ್ ವಿನೇಗರ್- 2 ಟೇಬಲ್ ಚಮಚ.
ಮುಂದೆ?
ಇವೆಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ ಬಿಗಿ ಮುಚ್ಚಲಿನ ಗಾಜಿನ ಡಬ್ಬಿಗೆ ಹಾಕಿಡಿ. ಪ್ರತಿ ದಿನ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಒಂದು ಚಮಚ ಸೇರಿಸಿ, ಬೆಚ್ಚಗಿನ ನೀರು ಕುಡಿಯಿರಿ. ಇದರಿಂದ ಕೊಲೆಸ್ಟ್ರಾಲ್ ಸಮಸ್ಯೆ, ಉರಿಯೂತ, ಕೀಲು ನೋವು, ಮತ್ತು ರಕ್ತದ ಏರೊತ್ತಡದ ಸಮಸ್ಯೆಗಳು ನಿಯಂತ್ರಣ ಬರುತ್ತವೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಅಂಥ ಯಾವ ಅಂಶಗಳಿವೆ ಈ ಮಿಶ್ರಣದಲ್ಲಿ?
ಯಾವುದರಲ್ಲಿ ಏನೇನಿದೆ?
ಈ ಮಿಶ್ರಣಕ್ಕೆ ಉಪಯೋಗಿಸುವ ವಸ್ತುಗಳಲ್ಲಿ ಯಾವುದರಲ್ಲಿ ಏನೇನು ಮಾಡುವ ಸಾಮರ್ಥ್ಯವಿದೆ ಎಂಬುದನ್ನು ನೋಡೋಣ.
ಅರಿಶಿನ
ಇದು ಅತ್ಯಂತ ಪ್ರಬಲವಾದ ಉತ್ಕರ್ಷಣ ನಿರೋಧಕ. ಹಾಗಾಗಿ ಕೀಲುಗಳಲ್ಲಿ ನೋವು ಕಡಿಮೆ ಮಾಡುವ, ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುವ ಮತ್ತು ಮೆದುಳಿನ ಯೋಗಕ್ಷೇಮ ವಿಚಾರಿಸಿಕೊಳ್ಳುವ ಕೆಲಸವನ್ನಿದು ಮಾಡಬಲ್ಲದು.
ಅಗಸೆ ಬೀಜ
ಉರಿಯೂತ ಶಮನ, ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ರಕ್ತದೊತ್ತಡ ಹತೋಟಿಯಲ್ಲಿ ಇರಿಸುವ ಗುಣಗಳಿವೆ.
ಶುಂಠಿ
ಉತ್ಕರ್ಷಣ ನಿರೋಧಕ ಗುಣವಿರುವ ಇದು ಸಹ ಉರಿಯೂತವನ್ನು ನಿವಾರಿಸುತ್ತದೆ. ಜೊತೆಗೆ ದೇಹದ ಪ್ರತಿರೋಧಕ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಹಾಗೂ ವಯಸ್ಸಾಗುವುದನ್ನು ಮುಂದೂಡುವ ಶಕ್ತಿಯೂ ಇದಕ್ಕಿದೆ.
ಕರಿಮೆಣಸು
ದೇಹದಲ್ಲಿನ ಮುಕ್ತಕಣಗಳನ್ನು ನಿರ್ಬಂಧಿಸುವ ಸಾಮರ್ಥ್ಯ ಇದರದ್ದು. ಇದಲ್ಲದೆ, ಮೆದುಳು ಚುರುಕುಗೊಳಿಸಿ ಅರಿಶಿನದ ಗುಣಗಳನ್ನು ಹೀರಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ
ಆಪಲ್ ಸೈಡರ್ ವಿನೇಗರ್
ತೂಕ ಇಳಿಸುವ, ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮತ್ತು ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುವ ಹಿರಿಮೆ ಇದರದ್ದು.
ಜೇನುತುಪ್ಪ
ಇದರ ಗುಣಗಳು ಒಂದೆರಡೇ ಅಲ್ಲ. ಉತ್ಕರ್ಷಣ ನಿರೋಧಕಗಳ ಖನಿಯಿದು. ರೋಗನಿರೋಧಕ ಶಕ್ತಿ ಹೆಚ್ಚಿಸುವ , ಹೃದಯವನ್ನು ಕಾಪಾಡುವ ಸಾಮರ್ಥ್ಯ ಇದರದ್ದು.
ಇವಿಷ್ಟೂ ಗುಣಗಳು ಈ ವಸ್ತುಗಳಲ್ಲಿ ಮತ್ತು ಆನಂತರದ ಮಿಶ್ರಣದಲ್ಲಿ ಇರುವುದು ಹೌದು. ಆದರೆ ಅವರವರ ದೇಹಕ್ಕೆ ಯಾವುದು ಸರಿ ಎಂಬುದನ್ನು ಪರಾಮರ್ಶೆ ಮಾಡಿ, ಸೂಕ್ತವೆನಿಸಿದ್ದನ್ನು ಮಾತ್ರವೇ ಅನುಸರಿಸುವುದು ಸರಿಯಾದ ಕ್ರಮ.
ಇದನ್ನೂ ಓದಿ: Garlic And Honey Health Benefits: ಆರೋಗ್ಯ ಸುಧಾರಣೆಗೆ ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಮಿಶ್ರಣ ಸೂಕ್ತ