ಚಳಿಗಾಲದ ರಾತ್ರಿಗಳಲ್ಲಿ ಕೆಲವೊಮ್ಮೆ ನಿದ್ದೆಗಾಗಿ ತಡಕಾಡುವುದಿದೆ. ಬೆಚ್ಚಗೆ ಹೊದ್ದುಕೊಂಡು ಮಲಗಿದರೆ ನಿದ್ದೆ (Good Sleep) ಬಾರದೆ ಎಲ್ಲಿ ಹೋಗುತ್ತದೆ ಎನ್ನುತ್ತೀರಾ? ಆದರೆ ʻಕಾಲು ತಣ್ಣಗಾಗಿ ನಿದ್ದೆ ಬರುವುದಿಲ್ಲʼ ಎನ್ನುವವರೂ ಬಹಳಷ್ಟು ಮಂದಿ ಇದ್ದಾರಲ್ಲ! ಕಾಲು ತಣ್ಣಗಾದರೆ ಈ ಭಾಗದಲ್ಲಿ ರಕ್ತ ಸಂಚಾರ ಸರಿಯಾಗದೆ ಇನ್ನಷ್ಟು ಕಷ್ಟವಾಗುತ್ತದೆ. ಹಾಗಾದರೆ ಕಾಲು ಬೆಚ್ಚಗಿಡುವುದು ಹೇಗೆ? ಉತ್ತರ ಸರಳ, ಸಾಕ್ಸ್ ಹಾಕಬಹುದು.
ಮಲಗುವ ಹೊತ್ತಿನಲ್ಲಿ ಕಾಲನ್ನು ಬೆಚ್ಚಗಿಟ್ಟುಕೊಳ್ಳುವುದರಿಂದ ನಿದ್ದೆ, ಮಾಡುವುದಕ್ಕೆ ದೇಹ ಅಣಿಯಾಗಿದೆ ಎಂಬ ಸಂಕೇತವನ್ನು ಮೆದುಳಿಗೆ ರವಾನಿಸಿದಂತಾಗುತ್ತದೆ ಎನ್ನುತ್ತಾರೆ ತಜ್ಞರು. ಇದರಿಂದ ಮಲಗಿದ ಮೇಲೆ ನಿದ್ದೆ ಬರುವುದಕ್ಕೆ ಹೊರಳಾಡುತ್ತಿರುವ ಅಗತ್ಯವಿಲ್ಲ, ನಿದ್ರಾಂಗನೆ ಬೇಗನೇ ಒಲಿಯುತ್ತಾಳೆ ಎನ್ನುತ್ತವೆ ಅಧ್ಯಯನಗಳು. ರಾತ್ರಿಡೀ ಕಾಲನ್ನು ಬೆಚ್ಚಗೇ ಇರಿಸಿಕೊಳ್ಳುವ ಸುಲಭ ಮಾರ್ಗವಂತೂ ಹೌದು.
ಎಂಥಾ ಚಳಿಗಾಲದಲ್ಲೂ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಹಲವಾರು ದಾರಿಗಳನ್ನು ಜನ ಈಗಾಗಲೇ ಕಂಡುಕೊಂಡಿದ್ದಾರೆ. ಹಳೆಯ ಕಾಲದ ಕಂಬಳಿಗಳಿಂದ ಹಿಡಿದು, ಬಿಸಿ ನೀರಿನ ಬಾಟಲಿಯನ್ನು ಹೊದಿಕೆಗಳ ಒಳಗೆ ಇರಿಸಿಕೊಳ್ಳುವುದನ್ನೂ ಕಳೆದು, ಆಧುನಿಕ ಹೀಟಿಂಗ್ ಹೊದಿಕೆಗಳವರೆಗೆ ಬಹಳಷ್ಟು ಆಯ್ಕೆಗಳಿವೆ. ಈ ಬಗ್ಗೆ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಕೈ-ಕಾಲುಗಳನ್ನು ಬೆಚ್ಚಗೆ ಇರಿಸಿಕೊಂಡು ಮಲಗಿದವರು ಬಲುಬೇಗನೇ ನಿದ್ರೆಗೆ ಜಾರುವುದು ಮಾತ್ರವಲ್ಲ, ಬೆಳಗಿನವರೆಗೆ ಸುಖನಿದ್ರೆಯಲ್ಲಿರುತ್ತಾರೆ.
ಮಾನವ ದೇಹದ ಉಷ್ಣತೆ ಸಾಮಾನ್ಯವಾಗಿ 98.6 ಡಿಗ್ರಿ ಫ್ಯಾರನ್‌ಹೀಟ್ ಇರುವುದು ಹೌದಾದರೂ, 24 ತಾಸುಗಳ ಅವಧಿಯಲ್ಲಿ ಸುಮಾರು ಒಂದಿರಿಂದ ಎರಡು ಡಿಗ್ರಿ ಫ್ಯಾ. ವರೆಗೂ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಆದರೆ ರಾತ್ರಿ ಮಲಗಿದ್ದಾಗ ಎಲ್ಲರ ದೇಹದ ಉಷ್ಣತೆಯೂ ಕುಸಿಯುತ್ತದೆ. ಅದರಲ್ಲೂ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಈ ತಾಪಮಾನ ಕನಿಷ್ಟಕ್ಕೆ ಕುಸಿಯುತ್ತದೆ. ಹಾಗಾಗಿ ಬೆಚ್ಚಗೆ ಮಲಗುವುದು ಸುಖನಿದ್ದೆಯನ್ನು ತರುತ್ತದೆ.
ಹಾಗಾದರೆ ಸಾಕ್ಸ್ ಅಥವಾ ಕಾಲುಚೀಲ ಧರಿಸಿ ಮಲಗುವುದು ಎಲ್ಲರಿಗೂ ಸೂಕ್ತವೇ? ಇಲ್ಲ ಎನ್ನುತ್ತಾರೆ ಪರಿಣಿತರು. ಮೊದಲನೆಯದಾಗಿ, ಕಾಲಿನಲ್ಲಿ ಯಾವುದೇ ರೀತಿಯ ಗಾಯವಿದ್ದರೆ ಸಾಕ್ಸ್ ಧರಿಸಿ ಮಲಗುವುದು ಸರಿಯಲ್ಲ. ಇದರಿಂದ ಸರಿಯಾಗಿ ಗಾಳಿಯಾಡದೆ ಗಾಯ ಎನ್ನುವುದು ವ್ರಣವಾಗಬಹುದು. ಇನ್ನು, ಚರ್ಮದ ಸೋಂಕು ಇದ್ದವರಿಗೂ ಇದು ಹೇಳಿಸಿದ್ದಲ್ಲ. ಅದರಲ್ಲೂ ಫಂಗಸ್ ಸೋಂಕು ಇದ್ದಾಗ ಹೀಗೆ ಸಾಕ್ಸ್ ಧರಿಸಿ ಮಲಗಿದರೆ ಅದು ಉಲ್ಭಣಿಸುವ ಸಾಧ್ಯತೆಯಿದೆ. ತೇವಾಂಶ ಹೆಚ್ಚಿರುವ ವಾತಾವರಣಕ್ಕೂ ಈ ಕ್ರಮ ಸೂಕ್ತವಲ್ಲ.
ಇಂಥ ಯಾವುದೇ ಸಮಸ್ಯೆ ಇಲ್ಲದಿದ್ದವರು ಸಾಕ್ಸ್ ಧರಿಸಿ ಮಲಗುವಾಗ ಕೆಲವು ಕ್ರಮಗಳನ್ನು ಪಾಲಿಸುವ ಅಗತ್ಯವಿದೆ. ಧರಿಸುವ ಸಾಕ್ಸ್ ಹತ್ತಿಯದ್ದಾಗಿರಲಿ ಮತ್ತು ಸಡಿಲವಾಗಿರಲಿ. ನೈಲಾನ್ ರೀತಿಯ ಸಿಂಥೆಟಿಕ್ ಸಾಕ್ಸ್‌ಗಳು ಅಷ್ಟೇನೂ ಸೂಕ್ತವಲ್ಲ. ಸಾಧ್ಯವಾದರೆ ಸಾಕ್ಸ್ ಪ್ರತಿದಿನವೂ ಬದಲಿಸಿ, ಅಂದರೆ ಶುಚಿತ್ವವೂ ಬಹಳ ಮುಖ್ಯವಾಗುತ್ತದೆ.
ಕಾಲು ಬೆಚ್ಚಗೆ ಇಟ್ಟುಕೊಳ್ಳುವುದಕ್ಕೆ ಸಾಕ್ಸ್ ಬೇಡ ಅಥವಾ ಉಪಯೋಗ ಮಾಡಲು ಸಾಧ್ಯವಿಲ್ಲ ಎಂದಾದವರಿಗೆ ಪರ್ಯಾಯ ಆಯ್ಕೆಗಳು ಸಹ ಇವೆ. ಮಲಗುವ ಮುನ್ನ ಪಾದವನ್ನು ಬೆಚ್ಚಗಿನ ನೀರಿನ ಟಬ್‌ನಲ್ಲಿ ಕೆಲವು ನಿಮಿಷ ಇಟ್ಟುಕೊಳ್ಳಬಹುದು. ಬೆಚ್ಚಗಿನ ಶೂಗಳನ್ನು ಧರಿಸಬಹುದು. ಬಿಸಿ ನೀರಿನ ಬಾಟಲಿಯನ್ನು ಹೊದಿಕೆಗಳ ಒಳಗೆ, ಅಂದರೆ ಕಾಲಿನ ಬಳಿ ಇರಿಸಿಕೊಳ್ಳುವ ಆಯ್ಕೆಯೂ ಒಂದು. ಮಲಗುವ ಒಂದು ತಾಸಿನ ಮೊದಲು ಬಿಸಿನೀರ ಸ್ನಾನವೂ ಉಪಯುಕ್ತ.
ಇದನ್ನೂ ಓದಿ| Mental Health | ಒತ್ತಡ ಹೆಚ್ಚಿದೆಯೇ? ಇವು ನೆರವಾಗಬಹುದು!