ನವ ದೆಹಲಿ: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ಮನೆ ಬಾಗಿಲಿನಲ್ಲಿಯೇ ವೈದ್ಯಕೀಯ ಆರೈಕೆಯನ್ನು ಕಲ್ಪಿಸಲು ” ಪಿಎಂ ಸ್ಪೆಷಲ್ʼ ಎಂಬ ಯೋಜನೆಯನ್ನು ಜಾರಿಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಮುಂದಿನ ಮೂರು ವರ್ಷಗಳಲ್ಲಿ ಹಿರಿಯ ನಾಗರಿಕರ ವೈದ್ಯಕೀಯ ಆರೈಕೆಗೆ ಸಹಕರಿಸಲು ೧ ಲಕ್ಷ ಮಂದಿಗೆ ಜೆರಿಯಾಟ್ರಿಕ್ ತರಬೇತಿ (Geriatric care ) ನೀಡಲು ಉದ್ದೇಶಿಸಿದೆ. ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಇಲಾಖೆಯು ಇನ್ನೊಂದು ವಾರದೊಳಗೆ ಈ ತರಬೇತಿಯನ್ನು ನೀಡಲಿದೆ. ಸೆಪ್ಟೆಂಬರ್‌ನಿಂದ ಈ ಯೋಜನೆ ಚಾಲನೆಯಾಗುವ ನಿರೀಕ್ಷೆ ಇದೆ. ಸಾಮಾಜಿಕ ನ್ಯಾಯ ಇಲಾಖೆಯು ಈ ನಿಟ್ಟಿನಲ್ಲಿ ವೆಬ್ ಪೋರ್ಟಲ್ ವ್ಯವಸ್ಥೆಯನ್ನು ಕಲ್ಪಿಸಲಿದೆ. ಹಿರಿಯ ನಾಗರಿಕರ ವೈದ್ಯಕೀಯ ಆರೈಕೆ ನೀಡುವ ಸೇವೆಗೆ ಜೆರಿಯಾಟ್ರಿಕ್ ಕೇರ್ ಎಂದು ಕರೆಯಲಾಗುತ್ತದೆ. ಇದಕ್ಕೆ ಸೂಕ್ತ ತರಬೇತಿಯ ಅಗತ್ಯ ಇರುತ್ತದೆ.
ಹಿರಿಯ ನಾಗರಿಕರ ವೈದ್ಯಕೀಯ ಆರೈಕೆಯನ್ನು ನೋಡಿಕೊಳ್ಳುವ ಜೆರಿಯಾಟ್ರಿಕ್ ವೃತ್ತಿಪರರ ಕೊರತೆ ಇದ್ದು, ಈ ತರಬೇತಿಯ ಮೂಲಕ ಬಗೆಹರಿಸಲು ಸರ್ಕಾರ ಯತ್ನಿಸುತ್ತಿದೆ. ತರಬೇತಿ ಹೊಂದಿದವರ ಕೊರತೆಯಿಂದ ಹಿರಿಯ ನಾಗರಿಕರ ವೈದ್ಯಕೀಯ ಆರೈಕೆಗೆ ಅಡಚಣೆ ಉಂಟಾಗಿದೆ ಎನ್ನುತ್ತಾರೆ ಸಾಮಾಜಿಕ ನ್ಯಾಯ ಇಲಾಖೆಯ ಕಾರ್ಯದರ್ಶಿ ಆರ್. ಸುಬ್ರಮಣಿಯನ್.
ಯಾರು ಜೆರಿಯಾಟ್ರಿಕ್ ತರಬೇತಿ ಪಡೆಯಬಹುದು?
ಹಿರಿಯ ನಾಗರಿಕರ ವೈದ್ಯಕೀಯ ಆರೈಕೆ ಮಾಡಲು ಅಗತ್ಯವಿರುವ ಜೆರಿಯಾಟ್ರಿಕ್ ತರಬೇತಿಯನ್ನು ಪದವಿ ಪೂರ್ವ ಶಿಕ್ಷಣ (ಪಿಯುಸಿ) ಪೂರೈಸಿದವರು ಪಡೆಯಬಹುದು. ಎಸ್‌ಸಿ ಮತ್ತು ಎಸ್‌ಟಿ ಮತ್ತು ಇತರ ಹಿಂದುಳಿದ ಸಮುದಾಯದಿಂದ ಕನಿಷ್ಠ ೧೦,೦೦೦ ಮಂದಿಗೆ ಉಚಿತವಾಗಿ ತರಬೇತಿ ನೀಡಲು ಕೂಡ ಸರ್ಕಾರ ಉದ್ದೇಶಿಸಿದೆ. ತರಬೇತಿ ಪಡೆದವರ ವಿವರಗಳನ್ನು ಸಾಮಾಜಿಕ ನ್ಯಾಯ ಇಲಾಖೆಯು ವೆಬ್ ಪೋರ್ಟಲ್ ಮೂಲಕ ಒದಗಿಸಲಿದೆ. ಪಿಎಂ ಸ್ಪೆಶಲ್ ಸೇವೆ ಪಡೆಯಲು ಬಯಸುವವರಿ ಈ ವೆಬ್ ಪೋರ್ಟಲ್ ಮೂಲಕ ಜೆರಿಯಾಟ್ರಿಕ್ ತರಬೇತುದಾರರ ಮಾಹಿತಿ ಪಡೆಯಬಹುದು.
ಈ ಯೋಜನೆಯಿಂದ ದೇಶದಲ್ಲಿ ಹಿರಿಯ ನಾಗರಿಕರ ವೈದ್ಯಕೀಯ ಆರೈಕೆ ಸೇವೆಗೆ ತಗಲುವ ವೆಚ್ಚ ಇಳಿಕೆಯಾಗಲಿದೆ. ಜತೆಗೆ ೧ ಲಕ್ಷ ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ.