Site icon Vistara News

Preventing Grey Hair Growth: ಕೂದಲು ಬಿಳಿಯಾಗುತ್ತಿದೆಯೇ? ಇಲ್ಲಿದೆ ಪರಿಹಾರ!

Preventing grey hair growth

ಕೂದಲಿಗೆ ಬಣ್ಣ ಹಾಕುವುದು ಎಷ್ಟೋ ಜನರಿಗೆ ಇಷ್ಟವಾಗುತ್ತದೆ. ಕೆಂಪು, ನೇರಳೆ, ನೀಲಿ, ಗುಲಾಬಿ, ಹಸಿರಿನಿಂದ ಹಿಡಿದು ನಾನಾ ಛಾಯೆಗಳನ್ನು ಕೂದಲಲ್ಲಿ ಕಾಣುವುದು ಇಂದು ಬಹಳಷ್ಟು ಜನರಿಗೆ ಅಚ್ಚುಮೆಚ್ಚು. ನಮ್ಮಷ್ಟಕ್ಕೆ ನಾವು ಹಾಕುವ ಬಣ್ಣ ಬೇರೆ. ನಮ್ಮ ದೇಹವೇ ತಾನಾಗಿ ಕೂದಲಿಗೆ ಹಾಕುವ ಬಣ್ಣ ಬೇರೆ! ಅಂದರೆ ಕೂದಲಿಗೆ ತನ್ನಷ್ಟಕ್ಕೆ ಬಿಳಿ ಬಣ್ಣ ಬಂದರೆ ಅದು ಮಾತ್ರ ಯಾರಿಗೂ ಇಷ್ಟವಾಗುವುದಿಲ್ಲ. ಡೈನಂಥ ರಾಸಾಯನಿಕಗಳು ಇಷ್ಟವಿಲ್ಲದವರು ಮದರಂಗಿಯನ್ನಾದರೂ ಹಾಕಿ, ಬಿಳಿ ಕೂದಲಿಗೆ ಬಣ್ಣ ತರಿಸಲು ನೋಡುತ್ತಾರೆ. ಕೂದಲು ಬಿಳಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದೂ ಅಲ್ಲದೆ, ಕೂದಲು ಬಿಳಿಯಾಗುವ ವಯಸ್ಸು ಆನುವಂಶಿಕವಾಗಿ ಬರುವಂಥದ್ದು. ಆದರೆ ಕಾರಣ ಅದೊಂದೇ ಆಗಿರುವುದಿಲ್ಲ. ಕೂದಲಿಗೆ ಅತಿಯಾದ ರಾಸಾಯನಿಕಗಳ ಬಳಕೆ, ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳು ಇಲ್ಲದಿರುವುದು, ಕೂದಲಿನ ಕಾಳಜಿ ಸಾಕಾಗದಿರುವುದು, ಅತಿಯಾದ ಮಾನಸಿಕ ಒತ್ತಡ- ಇವೆಲ್ಲವೂ ತಂತಮ್ಮ ಕೊಡುಗೆಯನ್ನು ಕೂದಲು ಬಿಳಿಯಾಗಿಸುವಲ್ಲಿ ನೀಡುತ್ತವೆ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ (Preventing grey hair growth) ಕೂದಲು ಬಿಳಿಯಾಗುವುದನ್ನು ಮುಂದೂಡಲು ಸಾಧ್ಯವಿದೆ.

ಆಹಾರದಲ್ಲಿ ಸಮತೋಲನವಿರಲಿ

ಕೂದಲಿನ ಆರೋಗ್ಯ ಕಾಪಾಡುವುದಕ್ಕೆ ಅಗತ್ಯವಾಗಿ ಬೇಕಾಗಿದ್ದು ಆಹಾರದಲ್ಲಿ ಸಮತೋಲನೆ. ಅಂದರೆ ಪ್ರೊಟೀನ್‌, ವಿಟಮಿನ್‌ ಮತ್ತು ಖನಿಜಗಳಿಂದ ಭರಿತ ಆಹಾರ ನಮಗೆ ಬೇಕು. ಕೇವಲ ಪಿಷ್ಟ ಮತ್ತು ಕೊಬ್ಬು ಮಾತ್ರವಿದ್ದರೆ ಸಾಲದು. ಹಾಗಾಗಿ ತಾಜಾ ಹಣ್ಣು-ಸೊಪ್ಪು-ತರಕಾರಿಗಳು, ಕಾಳು-ಬೇಳೆಗಳು, ಕಾಯಿ ಮತ್ತು ಬೀಜಗಳು ಕಡ್ಡಾಯವಾಗಿ ಇರಲೇಬೇಕು.

ಒತ್ತಡ ನಿರ್ವಹಣೆ

ಬದುಕಿನಲ್ಲಿ ಒತ್ತಡ ಹೆಚ್ಚಾದಷ್ಟಕ್ಕೂ ಕೂದಲುಗಳು ಬೇಗ ಬಿಳಿಯಾಗುತ್ತವೆ. ಹಾಗಾಗಿ ಒತ್ತಡ ಕಡಿಮೆ ಮಾಡುವಂಥ ಕ್ರಮಗಳನ್ನು ಪ್ರಯತ್ನಿಸುವುದು ಆವಶ್ಯಕ. ಧ್ಯಾನ, ಪ್ರಾಣಾಯಾಮ, ಯೋಗದಂಥವು ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಬಲ್ಲವು. ಜೊತೆಗೆ ಮನಕ್ಕೊಪ್ಪುವ ಯಾವುದಾದರೂ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು, ಸಮಾನ ಮನಸ್ಕರೊಂದಿಗೆ ಚಾರಣ ಹೋಗುವುದು, ಲಲಿತ ಕಲೆಗಳಲ್ಲಿ ತೊಡಗಿಸಿಕೊಳ್ಳುವುದು- ಇಂಥ ಯಾವುದೇ ಕೆಲಸಗಳು ಬದುಕಿನ ಒತ್ತಡ ಕಡಿಮೆ ಮಾಡುವಲ್ಲಿ ನೆರವು ನೀಡುತ್ತವೆ.

ನೀರು

ದೇಹಕ್ಕೆ ಅಗತ್ಯವಾದಷ್ಟು ನೀರು ಒದಗಿಸುವುದು ಚರ್ಮದ ಹಿತ ದೃಷ್ಟಿಯಿಂದಲೂ ಬೇಕಾದಂಥದ್ದು. ತಲೆಯ ಚರ್ಮ ಒಣಗಿದಂತಾದರೆ, ಕೂದಲುಗಳಿಗೆ ಬೇಕಾಗುವ ಪೋಷಣೆ ದೊರೆಯದೆ ಹೋಗುತ್ತದೆ. ಆಗ ಕೂದಲು ತುಂಡಾಗುವುದು, ಬಿಳಿಯಾಗುವುದು, ಉದುರುವುದು ಹೆಚ್ಚುತ್ತದೆ. ಹಾಗಾಗಿ ದಿನಕ್ಕೆ ಮೂರು ಲೀಟರ್‌ ನೀರಿನ ಭಾಗವನ್ನು ತಪ್ಪಿಸದೆ ಕುಡಿದರೆ, ಇಂಥ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು.

ಧೂಮಪಾನ ಬೇಡ

ಕೂದಲು ಬಿಳಿಯಾಗುವುದಕ್ಕೆ ಮತ್ತು ಉದುರುವುದಕ್ಕೆ ಹಾಗೂ ಧೂಮಪಾನಕ್ಕೆ ನೇರವಾದ ನಂಟಿದೆ ಎನ್ನುತ್ತವೆ ಅಧ್ಯಯನಗಳು. ಸಿಗರೇಟ್‌ ಬಿಡುವುದರಿಂದ ಕೇವಲ ಕೂದಲಿಗೆ ಮಾತ್ರವಲ್ಲ, ಬದುಕಿನ ಇನ್ನೂ ಹಲವು ವಿಷಯಗಳು ಸುಧಾರಿಸಬಲ್ಲವು. ದೇಹಾರೋಗ್ಯವೂ ಉತ್ತಮಗೊಳ್ಳಲು ಸಾಧ್ಯ.

ಯುವಿ ಕಿರಣಗಳು

ಸದಾ ಕಾಲ ಬಿಸಿಲಲ್ಲೇ ಇರುವವರಾದರೆ ಕೂದಲ ಬೇಗ ಬಿಳಿಯಾಗಬಹುದು. ಸೂರ್ಯನ ತೀಕ್ಷ್ಣ ಕಿರಣಗಳಲ್ಲಿ ಇರಬಹುದಾದ ಅತಿನೇರಳೆ ಕಿರಣಗಳು ಇದಕ್ಕೆ ಕಾರಣ. ಹಾಗಾಗಿ ಬಿಸಿಲಿಗೆ ಹೋಗುವಂಥ ಸಂದರ್ಭಗಳಲ್ಲಿ ತಲೆಗೊಂದು ಟೋಪಿ ಧರಿಸಿ. ಯುವಿ ಫಿಲ್ಟರ್‌ ಇರುವಂಥ ಹೇರ್‌ಕೇರ್‌ ಉತ್ಪನ್ನಗಳೂ ಮಾರುಕಟ್ಟೆಯಲ್ಲಿವೆ, ಗಮನಿಸಿ.

ನೈಸರ್ಗಿಕ ಉಪಚಾರಗಳು

ಕೆಲವು ಪ್ರಾಕೃತಿಕ ಉಪಚಾರಗಳು ಕೂದಲು ಬಿಳಿಯಾಗುವುದನ್ನು ಮುಂದೂಡುತ್ತವೆ. ನೆಲ್ಲಿಕಾಯಿ ಎಣ್ಣೆ, ಕರಿಬೇವಿನ ಸೊಪ್ಪಿನ ಎಣ್ಣೆಗಳಿಂದ ಕೂದಲ ಬುಡಕ್ಕೆ ಲಘುವಾಗಿ ಮಸಾಜ್‌ ಮಾಡುವುದು, ಮದರಂಗಿ ಸೊಪ್ಪಿನೊಂದಿಗೆ ದಾಸವಾಳ ಸೊಪ್ಪಿನ ರಸವನ್ನು ಕಂಡೀಶನರ್‌ ಆಗಿ ಬಳಸುವುದು, ಈರುಳ್ಳಿ ರಸವನ್ನು ಲೇಪಿಸುವುದು ಮುಂತಾದವು ಕೂದಲ ಆರೈಕೆಯಲ್ಲಿ ನೆರವಾಗುತ್ತವೆ.

ಕಠೋರ…ದೂರ

ಉಗ್ರವಾದ ರಾಸಾಯನಿಕಗಳನ್ನು ಹೊಂದಿದ ಹೇರ್‌ಕೇರ್‌ ಉತ್ಪನ್ನಗಳು ಕೂದಲಿಗೆ ಹಾನಿ ಮಾಡುತ್ತವೆ. ಸಲ್ಫೇಟ್‌ ಮುಕ್ತವಾದ ಶಾಂಪೂಗಳು, ಲಘುವಾದ ಕಂಡೀಶನರ್‌ಗಳನ್ನು ಬಳಸಿ. ಕಠೋರವಾದ ರಾಸಾಯನಿಕಗಳ ಬಳಕೆಯಿಂದ ಸರಿಪಡಿಸಲಾಗದಷ್ಟು ಹಾನಿಯಾಗಿಬಿಡಬಹುದು ಕೂದಲಿಗೆ. ಕೂದಲು ಬಿಳಿಯಾಗಿ, ತುಂಡಾಗಿ, ಉದುರಲೂಬಹುದು.

ಇದನ್ನೂ ಓದಿ: Pet Dog Licking: ಸಾಕು ನಾಯಿ ನಿಮ್ಮ ಮುಖ ನೆಕ್ಕುತ್ತದೆಯೆ? ಹುಷಾರ್‌!

Exit mobile version