Site icon Vistara News

Reverse Premature Graying: ಕೂದಲು ಬಿಳಿಯಾಗುತ್ತಿದೆಯೇ? ಈ ಆಹಾರಗಳು ನಿಮಗೆ ಬೇಕು!

Reverse Premature Graying

ಭಾರತೀಯರಿಗೆ ಬಿಳಿ ಬಣ್ಣದ ಮೇಲಿರುವ ಮೋಹ ಸಣ್ಣಾಟದ್ದಲ್ಲ. ಮನೆಯ ಗೋಡೆ ಬಿಳಿಯಿದ್ದರೆ ಸೊಗಸು, ವಸ್ತ್ರವು ಶುಭ್ರ ಶ್ವೇತವಾಗಿದ್ದರೆ ಚೆನ್ನ, ಹಲ್ಲುಗಳು ಬೆಳ್ಳಗೆ ಹೊಳೆಯುತ್ತಿರಬೇಕು, ಮೈ ಬಣ್ಣ ಬೆಳ್ಳಗಿದ್ದಷ್ಟೂ ಚೆಲುವು, ಕೂದಲು ಬಿಳಿಯಾದರೆ…? ಕೆಲಸ ಕೆಟ್ಟಿತು! ಏನಕ್ಕೇನ ಮಾಡಿ ಬಿಳಿ ಕೂದಲನ್ನು ಕಪ್ಪಾಗಿಸಲು ಪ್ರಯತ್ನಿಸುತ್ತೇವೆ. ಅಂಗಡಿಯ ಡೈಗಳು, ಜಾಹೀರಾತುಗಳ ಎಣ್ಣೆಗಳು, ಮಿತ್ರರು ಹೇಳಿದ ಹೇರ್‌ಪ್ಯಾಕ್‌ಗಳು… ಏನಾದರೂ ಸರಿ, ಅಂತೂ ಕೂದಲು ಕಪ್ಪಾಗಬೇಕು. ಇದಕ್ಕೆ ಕಾರಣಗಳನ್ನು ಪ್ರತ್ಯೇಕವಾಗಿ ಹುಡುಕಬೇಕಿಲ್ಲ. ಬಿಳಿಗೂದಲೆಂದರೆ ನೆರೆಗೂದಲು ಎಂಬ ಕಲ್ಪನೆ ನಮ್ಮಲ್ಲಿರುವುದು ಇದಕ್ಕೆಲ್ಲ ಕಾರಣ. ಇದಕ್ಕೆ ವ್ಯತಿರಿಕ್ತವಾಗಿ, ಸಾಲ್ಟ್‌-ಪೆಪ್ಪರ್‌ (ಬಿಳಿ-ಕಪ್ಪು) (Reverse Premature Graying) ಕೂದಲು ಇತ್ತೀಚಿನ ಅಲೆ ಎನಿಸಿದ್ದರೂ, ಬಿಳಿ ಕೂದಲಿನ ಬಗ್ಗೆ ಪ್ರೀತಿ ಇರುವುದು ಅಪರೂಪ.
ಕೂದಲೊಂದರ ಜೀವನಚಕ್ರದ ಬಗ್ಗೆ ಹೇಳುವುದಾದರೆ- ಹುಟ್ಟಿದ ಕೂದಲು ಮತ್ಮತ್ತೆ ಮರುಹುಟ್ಟು ಪಡೆಯುತ್ತಲೇ ಇರುತ್ತದೆ. ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಕೂದಲಿನ ಕೋಶಗಳು ದುರ್ಬಲಗೊಂಡು, ಅದರಲ್ಲಿ ಮೆಲನಿನ್‌ ಎಂಬ ವರ್ಣದ್ರವ್ಯದ ಉತ್ಪತ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಇದರಿಂದ ಕೂದಲಿನ ಬಣ್ಣ ಗೌರವಕ್ಕೆ ಪಾತ್ರವಾಗದಂಥ ಗೌರವರ್ಣಕ್ಕೆ ತಿರುಗುತ್ತದೆ. ದೇಹಕ್ಕೆ ವಯಸ್ಸಾಗುವುದನ್ನು ತಡೆಯಲು ಸಾಧ್ಯವಿಲ್ಲ, ನಿಜ. ಆದರೆ ಕೂದಲುಗಳ ಕೋಶದಲ್ಲಿ ಮೆಲನಿನ್‌ ವರ್ಣದ್ರವ್ಯ ಉತ್ಪಾದನೆ ಆಗುವುದನ್ನು ಪ್ರಚೋದಿಸಬಹುದೇ? ಈ ಮೂಲಕ ಕೂದಲು (Reverse Premature Graying) ಬಿಳಿಯಾಗುವುದನ್ನು ಮುಂದೂಡಬಹುದೇ?

ಸಾಧ್ಯವಿದೆ!

ಕೂದಲಿನಲ್ಲಿ ಮೆಲನಿನ್‌ ಹೆಚ್ಚುವಂತೆ ಮಾಡುವುದಕ್ಕೆ ಸಾಧ್ಯವಿದೆ ಎನ್ನುತ್ತಾರೆ ಚರ್ಮ ಮತ್ತು ಕೂದಲಿನ ತಜ್ಞರು. ಎಲ್ಲಕ್ಕಿಂತ ಮುಖ್ಯವಾಗಿ ಕೂದಲು ಬಿಳಿಯಾಗುವುದಕ್ಕೆ ಇರುವಂಥ ಕಾರಣಗಳನ್ನು ಹೇಗೆ ಸರಿ ಪಡಿಸಬಹುದು ಎಂಬುದನ್ನು ಗಮನಿಸಬೇಕಾಗುತ್ತದೆ. ಮೊದಲಿಗೆ, ವಿಟಮಿನ್‌ಗಳ ಕೊರತೆಯಿಂದ ಮೆಲನಿನ್‌ ಉತ್ಪತ್ತಿ ಕುಂಠಿತವಾಗಿರಬಹುದು. ಆಹಾರದ ಮೂಲಕ ಜೀವಸತ್ವಗಳು ಹೇರಳವಾಗಿ ದೊರೆಯುವಂತೆ ಜಾಗ್ರತೆ ಮಾಡುವುದು ಸೂಕ್ತ. ಅಗತ್ಯವಾದ ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳಿಂದ ಕೂಡಿದ ಆಹಾರ ಸೇವಿಸಿದರೆ, ಕೂದಲಿನಲ್ಲಿ ಮೆಲನಿನ್‌ ಉತ್ಪಾದನೆಯನ್ನು ಉತ್ತೇಜಿಸಬಹುದು.

ಇವು ಮುಖ್ಯ

ಸಮತೋಲನೆಯ ಆಹಾರವನ್ನೇ ಸೇವಿಸುತ್ತಿದ್ದೀವಲ್ಲ, ಆದರೂ ಕೂದಲು ಬಿಳಿಯಾಗುವುದು ನಿಂತಿಲ್ಲ ಎಂದು ದೂರುವವರ ಸಂಖ್ಯೆ ಕಡಿಮೆಯಿಲ್ಲ. ಆಹಾರದಲ್ಲಿ ವಿಟಮಿನ್‌ ಬಿ12, ಫೋಲೇಟ್‌ ಮತ್ತು ತಾಮ್ರ- ಈ ಮೂರು ಅಂಶಗಳು ಕೊರತೆಯಾಗದಿದ್ದರೆ ಮಾತ್ರ ಕೂದಲು ಬಿಳಿಯಾಗುವುದನ್ನು ತಡೆಯಲು ಸಾಧ್ಯ. ಈ ಅಂಶಗಳಿಲ್ಲದೆ ಉಳಿದಂತೆ ಎಷ್ಟೇ ಆರೋಗ್ಯಕರ ಆಹಾರ ಸೇವಿಸಿದರೂ, ಇದೊಂದು ವಿಷಯದಲ್ಲಿ ಹಿಂದೆಯೇ ಉಳಿಯುವಂತಾಗುತ್ತದೆ. ಹಾಗಾದರೆ ಯಾವೆಲ್ಲ ಆಹಾರಗಳಲ್ಲಿ ಈ ಮೂರು ಅಂಶಗಳು ಹೇರಳವಾಗಿವೆ?

ವಿಟಮಿನ್‌ ಬಿ12

ಪ್ರಾಣಿಗಳ ಅಂಗಾಂಗಗಳಲ್ಲಿ ಅಂದರೆ ಯಕೃತ್ತು, ಕಿಡ್ನಿಯಂಥ ಅಂಗಾಂಗಗಳ ಮಾಂಸದಲ್ಲಿ ವಿಟಮಿನ್‌ ಬಿ12 ಹೇರಳವಾಗಿದೆ. ಹಾಲು, ಮೊಸರು, ಬೆಣ್ಣೆಯಂಥ ಯಾವುದೇ ಡೈರಿಯ ಉತ್ಪನ್ನಗಳಲ್ಲಿ ಈ ಅಂಶ ಲಭ್ಯವಿದೆ. ಹಾಗಾಗಿ ಸಸ್ಯಾಹಾರಿಗಳು ವಿಟಮಿನ್‌ ಬಿ12 ಕೊರತೆಯನ್ನು ಅನುಭವಿಸುವ ಅಗತ್ಯವೇ ಇಲ್ಲ.

ಮೊಟ್ಟೆ, ಮೀನು

ವಿಟಮಿನ್‌ ಬಿ12 ಮಾತ್ರವೇ ಅಲ್ಲ, ಹಲವು ರೀತಿಯ ಪೋಷಕಾಂಶಗಳನ್ನು ಪೂರೈಸುವ, ಪ್ರಚಲಿತವಿರುವ ಮತ್ತು ಕೈಗೆಟುಕುವ ಆಹಾರವಿದು. ಮತ್ಸಾಹಾರಿಗಳಂತೂ ವಿಟಮಿನ್‌ ಬಿ12 ಕೊರತೆಯನ್ನು ಸುಲಭದಲ್ಲಿ ನೀಗಿಸಿಕೊಳ್ಳಬಹುದು. ಟ್ಯೂನಾ, ಸಾಲ್ಮನ್‌ ರೀತಿಯ ಮೀನುಗಳಲ್ಲಿ ಪ್ರೊಟೀನ್,‌ ಫಾಸ್ಫರಸ್‌, ವಿಟಮಿನ್‌ ಎ, ವಿಟಮಿನ್‌ ಬಿ೩ ಯಂಥ ಬಗೆಬಗೆಯ ಪೋಷಕಾಂಶಗಳು ಲಭ್ಯವಿವೆ.

ಫಾರ್ಟಿಫೈಡ್‌ ಸೀರಿಯಲ್‌

ಅಂದರೆ, ಪ್ರಾಕೃತಿಕವಾಗಿ ಇಲ್ಲದ ಫೋಷಕಗಳನ್ನು ಕೃತಕವಾಗಿ ಸೇರಿಸಿ ತಯಾರಿಸಿದ ಸೀರಿಯಲ್‌. ಕೆಲವು ರೀತಿಯ ಆಹಾರಕ್ಕೆ ಅಲರ್ಜಿ ಇರುವವರಿಗೂ ಇಂಥ ಆಯ್ಕೆಗಳು ಲಭ್ಯವಿದೆ. ಉಳಿದಂತೆ, ಪೋಷಕಾಂಶಗಳು ನೈಸರ್ಗಿಕವಾಗಿಯೇ ದೇಹಕ್ಕೆ ದೊರಕಿದರೆ ಉತ್ತಮ.

ತಾಮ್ರ ಮತ್ತು ಫೋಲೇಟ್

ಪಾಲಕ್‌, ಎಲೆಕೋಸು, ಬ್ರೊಕೊಲಿಯಂಥ ಹಸಿರು ಸೊಪ್ಪು ಮತ್ತು ತರಕಾರಿಗಳು, ಇಡೀ ಧಾನ್ಯಗಳು, ಬೇಳೆ-ಕಾಳುಗಳು, ಮೀನುಗಳು- ಇವೆಲ್ಲವುಗಳನ್ನು ಫೋಲೇಟ್‌ ಹೇರಳವಾಗಿದೆ. ಕೂದಲು ಬಿಳಿಯಾಗದಂತೆ ತಡೆಯಲು ಅಗತ್ಯವಾದ ಆಹಾರಗಳಲ್ಲಿ ಇವೆಲ್ಲವೂ ಸೇರುತ್ತವೆ. ತಾಮ್ರವನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಕಷ್ಟವಲ್ಲ. ಗೋಡಂಬಿ, ಸೂರ್ಯಕಾಂತಿಯಂಥ ಬೀಜಗಳು, ಇಡೀ ಧಾನ್ಯಗಳು, ಕಾಳುಗಳು, ಪ್ರೂನ್‌, ಎಪ್ರಿಕಾಟ್‌ನಂಥ ಒಣಹಣ್ಣುಗಳಲ್ಲಿ ತಾಮ್ರ ಹೇರಳವಾಗಿ ದೊರೆಯುತ್ತದೆ.

ಇದನ್ನೂ ಓದಿ: Health Benefits Of Rosemary Tea: ರೋಸ್‌ಮೆರಿ ಚಹಾದಿಂದ ಆರೋಗ್ಯಕ್ಕೇನು ಲಾಭ?

Exit mobile version