ನವ ದೆಹಲಿ: ಜಿಎಸ್‌ಟಿ ಮಂಡಳಿ ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಐಸಿಯು ಹೊರತುಪಡಿಸಿದ ಕೊಠಡಿಗಳಲ್ಲಿ ದಿನಕ್ಕೆ ೫,೦೦೦ ರೂ.ಗಿಂತ ಹೆಚ್ಚಿನ ಬಾಡಿಗೆಯ ಮೇಲೆ ೫% ಜಿಎಸ್‌ಟಿಯನ್ನು ವಿಧಿಸಿದೆ. ಇದರ ಪರಿಣಾಮ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೆಚ್ಚ ಹೆಚ್ಚಳವಾಗಲಿದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್‌ಎ ತಿಳಿಸಿದೆ.
ಜಿಎಸ್‌ಟಿ ಮಂಡಳಿಯ ೪೭ನೇ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಿಂದ ಆರೋಗ್ಯ ಸೇವೆ ಜಿಎಸ್‌ಟಿ ವ್ಯಾಪ್ತಿಗೆ ಬಂದಂತಾಗಿದೆ. ಆದರೆ ೫,೦೦೦ ರೂ.ಗಿಂತ ಹೆಚ್ಚಿನ ಬಾಡಿಗೆಯ ಕೊಠಡಿಗೆ ಜಿಎಸ್‌ಟಿಯಲ್ಲಿ ಇನ್‌ಪುಟ್ ಕ್ರೆಡಿಟ್ ಟ್ಯಾಕ್ಸ್ ಸಿಗುವುದಿಲ್ಲ. ಹೀಗಾಗಿ ಆಸ್ಪತ್ರೆಗಳು ಜಿಎಸ್‌ಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ. ಇದರಿಂದಾಗಿ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ವೆಚ್ಚ ಹೆಚ್ಚಲಿದೆ ಎಂದು ಐಸಿಆರ್‌ಎ ಸಹಾಯಕ ಉಪಾಧ್ಯಕ್ಷೆ ಮೈತ್ರಿ ಮಚೇರ್ಲಾ ತಿಳಿಸಿದ್ದಾರೆ.
” ಸಾಮಾನ್ಯವಾಗಿ ಒಟ್ಟಾರೆ ವೈದ್ಯಕೀಯ ವೆಚ್ಚದಲ್ಲಿ ಕೊಠಡಿ ಮತ್ತು ಹಾಸಿಗೆಯ ಸರಾಸರಿ ವೆಚ್ಚ ೧೦-೧೨% ಇರುತ್ತದೆ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯದ ಕೊರತೆಯಿಂದಾಗಿ ಆಸ್ಪತ್ರೆಗಳು ಜಿಎಸ್‌ಟಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆʼʼ ಎಂದು ಅವರು ವಿವರಿಸಿದ್ದಾರೆ. ಜುಲೈ ೧೮ರಿಂದ ಈ ಜಿಎಸ್‌ಟಿ ದರ ಜಾರಿಯಾಗಲಿದೆ.