Site icon Vistara News

Guava Leaves Benefits: ಕೇವಲ ಸೀಬೆ ಹಣ್ಣಲ್ಲ, ಎಲೆಯಿಂದಲೂ ಎಷ್ಟೊಂದು ಪ್ರಯೋಜನಗಳು!

guava leaves benefits

ಪೇರಳೆ ಅಥವಾ ಸೀಬೆ ಹಣ್ಣಿನ (guava leaves benefits) ಮಹತ್ವದ ಬಗ್ಗೆ ನಿಮಗೆ ಕೇಳಿ ಗೊತ್ತಿರಬಹುದು. ಅದರ ಆರೋಗ್ಯದ ಲಾಭಗಳನ್ನು ನೀವು ಕೇಳಿ ತಿಳಿದುಕೊಂಡು ತಿನ್ನುತ್ತಲೂ ಇರಬಹುದು. ಆದರೆ ಸೀಬೆಕಾಯಿಯ ಎಲೆಯ ಲಾಭಗಳ ಬಗ್ಗೆ ನಿಮಗೆ ಗೊತ್ತೇ? ಸೀಬೆಯ ಎಲೆಯಿಂದ ನಿಮ್ಮ ಕೂದಲೂ ಸೇರಿದಂತೆ ನಿತ್ಯವೂ ಕಾಡುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತಹ ಉತ್ತರವಿದೆ. ಇದರಿಂದ ಆಗಬಹುದಾದ ಲಾಭಗಳನ್ನು ನೀವು ತಿಳಿದುಕೊಂಡರೆ ಖಂಡಿತಾ ನೀವು ಸೀಬೆ ಮರವನ್ನು ಅರಸಿಕೊಂಡು ಹೋಗುವುದರಲ್ಲಿ ಯಾವ ಸಂಶಯವೂ ಇಲ್ಲ. ಬನ್ನಿ ಸೀಬೆ ಮರದ ಎಲೆಯ ಲಾಭಗಳನ್ನು ತಿಳಿದುಕೊಳ್ಳೋಣ.

ಪೋಷಕಾಂಶಗಳು

ಸೀಬೆಯ ಎಲೆಯಲ್ಲಿ ಸಾಕಷ್ಟು ವಿಟಮಿನ್‌ಗಳೂ ಪೋಷಕಾಂಶಗಳೂ ಇರುವುದರಿಂದ ಕೂದಲನ್ನು ಶಕ್ತಿಯುತವಾಗಿಸುವಲ್ಲಿ ಇದರ ಪಾತ್ರ ದೊಡ್ಡದು. ಕೂದಲನ್ನು ಬೇರಿನಿಂದಲೇ ಶಕ್ತಿಯುತಗೊಳಿಸಿ ಗಟ್ಟಿಗೊಳಿಸುತ್ತದೆ. ಬುಡದಿಂದಲೇ ಕೂದಲನ್ನು ಆರೋಗ್ಯಯುತವಾಗಿಸಿ ಕೂದಲುದುರುವಿಕೆಯನ್ನು ತಡೆಯುತ್ತದೆ. ಕೂದಲು ಸೊಂಪಾಗಿ ದೃಢವಾಗಿ ಬೆಳೆಯುತ್ತದೆ.

ಕೂದಲು ದೃಢ

ಫ್ರೀ ರ್ಯಾಡಿಕಲ್ಸ್‌ ವಿರುದ್ಧ ಹೋರಾಡುವ ಗುಣವನ್ನು ಇದು ಹೊಂದಿರುವುದರಿಂದ ಕೂದಲಿನ ಬುಡಕ್ಕಾಗುವ ಹಾನಿಯನ್ನು ಇದು ತಪ್ಪಿಸುತ್ತದೆ. ಆ ಮೂಲಕ ಕೂದಲು ದೃಢವಾಗಿ ಬೆಳೆಯುತ್ತದೆ.

ರಕ್ತ ಸಂಚಾರ ಚುರುಕು

ಸೀಬೆ ಎಲೆಯು ಕೂದಲ ಬುಡದಲ್ಲಿ ರಕ್ತಸಂಚಾರವನ್ನು ಚುರುಕುಗೊಳಿಸುವಲ್ಲಿ ನೆರವಾಗುತ್ತದೆ. ಇದರಿಂದ ಕೂದಲ ಆರೋಗ್ಯ ಹೆಚ್ಚುತ್ತದೆ. ಕೂದಲಿಗೆ ಪೋಷಣೆ ಸರಿಯಾಗಿ ಆಗುವ ಮೂಲಕ ಸಂಪೂರ್ಣವಾಗಿ ಕೂದಲ ಆರೋಗ್ಯ ದ್ವಿಗುಣಗೊಳ್ಳುತ್ತದೆ.

ಕೂದಲ ಹೊಟ್ಟು ನಿವಾರಣೆ

ನಿಮಗೆ ಕೂದಲ ಹೊಟ್ಟಿನ ಸಮಸ್ಯೆ ಇದ್ದರೆ ಸೀಬೆ ಎಲೆ ಅತ್ಯುತ್ತಮ ಮನೆಮದ್ದು. ಸೀಬೆ ಎಲೆಯು ಕೂದಲ ಹೊಟ್ಟನ್ನು ತರುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಿ ಕೂದಲ ಬುಡವನ್ನು ನಯವಾಗಿಸುತ್ತದೆ. ಕೂದಲ ಬುಡದ ಚರ್ಮ ಒಣಗಿ ಏಳುವುದನ್ನು ಇದು ತಡೆಯುತ್ತದೆ. ತುರಿಕೆ ಮತ್ತು ಕಜ್ಜಿಯ ಸಮಸ್ಯೆಗಳಿಗೂ ಇದು ಒಳ್ಳೆಯದು.

ಕೂದಲ ಬೆಳವಣಿಗೆ

ಸೀಬೆ ಎಲೆಯನ್ನು ಆಗಾಗ ಬಳಸುವ ಮೂಲಕ ಕೂದಲ ತುದಿ ಕವಲೊಡೆಯವ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದು. ಕೂದಲು ನಯವಾಗಿ ಉದ್ದ ಬೆಳೆಯುತ್ತದೆ.

ಮಿದುಳಿನ ಆರೋಗ್ಯಕ್ಕೆ ಸಹಕಾರಿ

ಸೀಬೆ ಎಲೆಯಲ್ಲಿ ವಿಟಮಿನ್‌ ಬಿ3 ಹಾಗೂ ಬಿ6 ಇರುವುದರಿಂದ ಮಿದುಳಿನ ಆರೋಗ್ಯಕ್ಕೂ ಇದು ಒಳ್ಳೆಯದು.

ಹೊಟ್ಟೆ ನೋವಿಗೆ ಪರಿಹಾರ

ಕೇವಲ ಇವಷ್ಟೇ ಅಲ್ಲ, ಸೀಬೆಯ ಎಲೆಗಳಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಹೊಟ್ಟೆಯಲ್ಲಿ ಹುಣ್ಣು, ಅಲ್ಸರ್‌, ಹೊಟ್ಟೆ ನೋವು ಮತ್ತಿತರ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಸೀಬೆ ಎಲೆಗಿದೆ.

ಮಧುಮೇಹಕ್ಕೂ ಮದ್ದು

ಸೀಬೆ ಎಲೆ ಮಧುಮೇಹಕ್ಕೆ ಒಳ್ಳೆಯ ಮನೆಮದ್ದು. ಸೀಬೆ ಎಲೆಯ ಚಹಾ ಮಾಡಿ ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಸಮತೋಲನಕ್ಕೆ ತರಬಹುದು.

ಗಾಯಕ್ಕೆ ಔಷಧ

ಗಾಯ ಮಾಗಲು, ಗುಣವಾಗಲು, ನೋವು ನಿವಾರಕವಾಗಿ, ರೋಗ ನಿರೋಧಕವಾಗಿಯೂ ಸೀಬೆ ಎಲೆಯು ಸಹಾಯ ಮಾಡುತ್ತದೆ.

ಬಾಯಿ ಹುಣ್ಣು ನಿವಾರಣೆ

ಬಾಯಿಯ ಆರೋಗ್ಯಕ್ಕೂ ಸೀಬೆ ಎಲೆ ಒಳ್ಳೆಯದು. ಬಾಯಿಹುಣ್ಣು, ಹಲ್ಲು ನೋವು, ವಸಡಿನ ಸಮಸ್ಯೆ ಮತ್ತಿತರ ಸಮಸ್ಯೆಗಳಿಗೆ ಸೀಬೆ ಎಲೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಒಂದೆಡರಡು ಸೀಬೆ ಎಲೆಯನ್ನು ಅಥವಾ ಸೀಬೆಯ ಎಳೆ ಎಲೆಯನ್ನು ಬಾಯಲ್ಲಿಟ್ಟು ಜಗಿಯುವ ಮೂಲಕ ಇದರ ಪ್ರಯೋಜನ ಪಡೆಯಬಹುದು.

ಭೇದಿಗೆ ತಡೆ

ಭೇದಿಯ ಸಮಸ್ಯೆಗೆ ಸೀಬೆ ಎಲೆ ಒಳ್ಳೆಯ ಮನೆಮದ್ದು. ಇದು ಬೇದಿಯನ್ನು ತರುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುವ ಮೂಲಕ ಭೇದಿಯನ್ನು ತಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಸೀಬೆ ಎಲೆಯ ಟೀ ಮಾಡಿ ಕುಡಿಯುವ ಮೂಲಕ ಪರಿಹಾರ ಕಾಣಬಹುದು.

ಹೃದಯ ಆರೋಗ್ಯಕ್ಕೆ ಪೂರಕ

ಹೃದಯದ ಆರೋಗ್ಯಕ್ಕೂ ಸೀಬೆ ಎಲೆಯ ಉಪಯೋಗದಿಂದ ಫಲ ಕಾಣಬಹುದು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ಕೊಲೆಸ್ಟೆರಾಲ್‌ ಅನ್ನೂ ಕಡಿಮೆಗೊಳಿಸುವ ತಾಕತ್ತನ್ನು ಹೊಂದಿದೆ.

Exit mobile version