Site icon Vistara News

Hair And Skin Care Tips For Monsoon: ಮಳೆಗಾಲದಲ್ಲಿ ಕೂದಲು ಮತ್ತು ತ್ವಚೆಯ ಆರೈಕೆ ಹೇಗೆ?

Hair And Skin Care Tips For Monsoon

ಮಳೆಗಾಲ ಇಷ್ಟಪಡುವವರನ್ನು ʻಯಾಕಿಷ್ಟ?ʼ ಎಂದು ಕೇಳಿದರೆ, ʻನೆನೆಯುವುದಕ್ಕೆ!ʼ ಎನ್ನುವ ಉತ್ತರ ಸಲೀಸಾಗಿ ಬರುತ್ತದೆ. ಆಯಾ ಋತುವಿನಲ್ಲಿ ವಾತಾವರಣದಲ್ಲಿ ಯಾವುದು ಪ್ರಧಾನವಾಗಿರುತ್ತದೋ, ಅದನ್ನೇ ಜನ ಮೆಚ್ಚುತ್ತಾರೆ ಅಥವಾ ದೂರುತ್ತಾರೆ. ನಮ್ಮ ಇಷ್ಟಾನಿಷ್ಟಗಳು ಏನೇ ಇದ್ದರೂ, ಕಾಲಕಾಲಕ್ಕೆ ಏನಾಗಬೇಕೋ ಅದಾಗಿಯೇ ಆಗುತ್ತದೆ. ಉದಾ, ಚಳಿಗಾಲದಲ್ಲಿ ಕೂದಲು ಮತ್ತು ಚರ್ಮ ಒಣಗಿ ಒರಟಾದರೆ, ಮಳೆಗಾಲದಲ್ಲಿ ಎಣ್ಣೆ ಸೂಸುತ್ತದೆ. ಹಾಗಾದರೆ (hair and skin care tips) ಮಳೆಗಾಲದಲ್ಲಿ ಕೂದಲು ಮತ್ತು ತ್ವಚೆಯ ಆರೈಕೆಯನ್ನು ಹೇಗೆ ಮಾಡಬೇಕು?

ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚು. ಇದೇ ಕಾರಣದಿಂದ ನಮ್ಮ ಕೂದಲು ಮತ್ತು ಮುಖದ ಚರ್ಮದಲ್ಲೂ ಎಣ್ಣೆ ಸ್ರವಿಸುತ್ತದೆ. ಇದಲ್ಲದೆ, ಮಳೆ ನೀರಿಗೆ ಒಡ್ಡಿಕೊಂಡರೆ ಇನ್ನಷ್ಟು ಸಮಸ್ಯೆ. ಮಳೆನೀರಿನ ಆಮ್ಲೀಯ ಗುಣಗಳು ತ್ವಚೆ ಮತ್ತು ಕೂದಲುಗಳಿಗೆ (hair and skin care tips) ಹಾನಿ ಮಾಡಬಹುದು. ಕೂದಲಲ್ಲಿ ಹೊಟ್ಟು ಮತ್ತು ಫಂಗಸ್‌ ಸೋಂಕಿನಂಥವು ಕಾಣಿಸಿಕೊಂಡರೆ, ಚರ್ಮದ ಮೇಲೆ ಗುಳ್ಳೆಗಳು ಬರಬಹುದು. ಮಳೆಗಾಲದಲ್ಲಿ ಸೂಕ್ತ ಆರೈಕೆಯಿಂದ ಚರ್ಮವನ್ನು ಹೇಗೆ ಚಂದಗಾಣಿಸಬಹುದು ಎಂಬುದನ್ನು ಮೊದಲಿಗೆ ತಿಳಿದುಕೊಳ್ಳೋಣ.

ಚರ್ಮದ ಆರೈಕೆ

ಆಹಾರ: ಮಳೆ ನೋಡುತ್ತಾ ಬಿಸಿ ಕಾಫಿ ಹೀರುವುದು, ಜೊತೆಗೊಂದಿಷ್ಟು ಬಜ್ಜಿ-ಬೋಂಡಾ ತಿನ್ನುವುದು- ಇಂಥ ಬಯಕೆಗಳು ಯಾರಿಗೂ ಬರಬಹುದು. ಈಗಾಗಲೇ ಎಣ್ಣೆ ಸ್ರವಿಸುತ್ತಿರುವ ಚರ್ಮಕ್ಕೆ ಇನ್ನಷ್ಟು ಎಣ್ಣೆಯನ್ನೇ ನೀಡಿದರೆ, ಅದು ಸುಧಾರಿಸುವುದು ಹೇಗೆ? ಹಾಗಾಗಿ ಆಹಾರ ಸಮತೋಲನದಲ್ಲಿ ಇರಲಿ. ಅಂದರೆ, ಕಾರ್ಬ್‌ ಮಿತಿಯಲ್ಲಿ ಮತ್ತು ಪ್ರೊಟೀನ್‌ ಹೆಚ್ಚಿರುವ ಆಹಾರ ಸೂಕ್ತ. ಜೊತೆಗೆ, ವಿಟಮಿನ್‌ ಸಿ ಮತ್ತು ಎ ಹೆಚ್ಚಿರುವ ಆಹಾರಗಳು ಅಗತ್ಯ. ಮನೆಯ ಹೊರಗೆ ಮಳೆ ಸುರಿಯುತ್ತಿದ್ದರೆ, ಒಳಗಿರುವ ದೇಹಕ್ಕೆ ನೀರು ದೊರೆಯುವುದಿಲ್ಲವಲ್ಲ, ಹಾಗಾಗಿ ಚೆನ್ನಾಗಿ ನೀರು ಕುಡಿಯಿರಿ.

ಸ್ವಚ್ಛತೆಗೆ ಆದ್ಯತೆ: ತೇವಾಂಶದಿಂದ ಬೆವರು ಬರುವುದು ಹೆಚ್ಚುತ್ತಿದ್ದಂತೆಯೇ ತ್ವಚೆ ಗಲೀಜಾಗುವುದೂ ಹೆಚ್ಚುತ್ತದೆ. ಹಾಗಾಗಿ ಚರ್ಮದ ಗ್ರಂಥಿಗಳು ಮುಚ್ಚಿಹೋಗಿ, ತ್ವಚೆಗೆ ಉಸಿರಾಡಲು ತೊಂದರೆಯಾಗುತ್ತದೆ. ಇದರಿಂದ ತುರಿಕೆ, ಫಂಗಸ್‌ ಸೋಂಕು, ಹುಳುಕಡ್ಡಿಯಂಥ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಅದಕ್ಕಾಗಿ ಸ್ವಚ್ಛತೆಯತ್ತ ಗಮನ ನೀಡಿ. ಮಳೆಯಲ್ಲಿ ತೋಯ್ದರೆ ತಕ್ಷಣವೇ ಒದ್ದೆ ಬಟ್ಟೆಗಳನ್ನು ಬದಲಿಸಿ, ಮೈ ಮಣ್ಣಾಗಿದ್ದರೆ ಸ್ನಾನ ಮಾಡಿ. ಆದಷ್ಟೂ ಒಣಗಿದ ವಸ್ತ್ರಗಳಲ್ಲಿದ್ದರೆ ತೊಂದರೆಗಳು ಕಡಿಮೆ.

ಸಿ-ಟಿ-ಎಂ

ಅಂದರೆ, ಕ್ಲೆನ್ಸಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್-‌ ಈ ಮೂರು ಪ್ರಕ್ರಿಯೆಗಳಿಗೆ ಯಾವುದೇ ಋತುವಿನಲ್ಲೂ ರಜೆಯಿಲ್ಲ. ಮೃದುವಾದ ಕ್ಲೆನ್ಸರ್‌ ಬಳಸಿ ಚರ್ಮವನ್ನು ಸ್ವಚ್ಛ ಮಾಡಿ. ತೀರಾ ಎಣ್ಣೆಯುಕ್ತ ತ್ವಚೆ ನಿಮ್ಮದಾಗಿದ್ದರೆ ವಾರದಲ್ಲಿ ಮೂರು ದಿನ ಟೋನರ್‌ ಬಳಸಿ. ಒಣ ಚರ್ಮದವರು ನೀವಾದರೆ ವಾರಕ್ಕೊಮ್ಮೆ ಟೋನರ್‌ ಬಳಸಿದರೆ ಸಾಕು. ಮ್ಯಾಯಿಶ್ಚರೈಸರ್‌ ಮಾತ್ರ ಪ್ರತಿ ದಿನ ಬೇಕೇಬೇಕು.

ಸನ್‌ಸ್ಕ್ರೀನ್

ಬೇಸಿಗೆ ಹೋಯಿತಲ್ಲಾ, ಇನ್ನೇಕೆ ಸನ್‌ಬ್ಲಾಕ್‌ ಎಂಬ ಪ್ರಶ್ನೆ ಸಾಮಾನ್ಯ. ಬೇಸಿಗೆಯಷ್ಟು ಸನ್‌ಬ್ಲಾಕ್‌ ಬಳಕೆ ಬೇಕಾಗದಿದ್ದರೂ, ತೆಗೆದು ಬಿಸಾಡುವ ದಿನಗಳಲ್ಲ ಇವು. ಕಾರಣ, ಮೋಡದ ಕೆಳಗಿನ ಬಿಸಿಲು ಸುಡುವುದು ಹೆಚ್ಚು. ಹಾಗಾಗಿ 30 ಎಸೆಫ್‌ಪಿ ಸಾಮರ್ಥ್ಯ ಆದರೂ ಸಾಕು, ಸನ್‌ಸ್ಕ್ರೀನ್‌ ಬೇಕು.

ಕೂದಲಿನ ಆರೈಕೆ ಹೇಗೆ?

ತಲೆಹೊಟ್ಟು: ಹೆಚ್ಚು ಮಳೆ ಬೀಳುವ ಪ್ರದಶಗಳಲ್ಲಿ ನೆನೆಯದಂತೆ ಬಚಾವಾಗುವುದೇ ಸವಾಲು. ಒದ್ದೆಯಾದ ಕೂದಲನ್ನು ಆಗಿಂದಾಗ್ಗೆ ತೆಳುವಾದ ಒಣ ಹತ್ತಿ ಬಟ್ಟೆಯಲ್ಲಿ ಒರೆಸಿಕೊಳ್ಳಿ. ದೀರ್ಘಕಾಲದವರೆಗೆ ಕೂದಲ ಒದ್ದೆಯಾಗಿದ್ದರೆ ಸೋಂಕುಗಳನ್ನು ಆಹ್ವಾನಿಸುತ್ತದೆ. ಅತೀ ತೇವಾಂಶವೂ ತಲೆಹೊಟ್ಟಿನ ಸಮಸ್ಯೆಗೆ ನಾಂದಿ ಹಾಡುತ್ತದೆ. ಹಾಗಾಗಿ ಸೂಕ್ತ ಶಾಂಪೂ ಮತ್ತು ಕಂಡೀಶನರ್‌ಗಳನ್ನು ಬಳಸಬಹುದು. ಒಂದೊಮ್ಮೆ ರಾಸಾಯನಿಕ ಲೇಪನ ಬೇಡವೆನಿಸಿದರೆ. ಮದರಂಗಿ ಮತ್ತು ಲೋಳೆಸರದ ಹೇರ್‌ಪ್ಯಾಕ್‌ ಪ್ರಯೋಜನವಾದೀತು.

ಒಣಗೂದಲು

ವಿಚಿತ್ರವೆಂದರೆ ಕೂದಲ ಬುಡದಲ್ಲಿ ಎಣ್ಣೆ-ಪಸೆ ಇದ್ದರೂ, ಕೂದಲ ತುದಿಗೆ ಬರುವಷ್ಟರಲ್ಲಿ ಎಳೆಗಳು ಒಣಗಿ, ಸಿಕ್ಕಾಗಿರುತ್ತವೆ. ಅದರಲ್ಲೂ ಮಳೆಗಾಲದ ಗಾಳಿಗೆ ಸಿಲುಕಿದ ಕೂದಲು ಒಣಗಿ ಹುಲ್ಲಿನಂತಾಗಿ, ಹೊಳಪನ್ನೇ ಕಳೆದುಕೊಂಡಿರುತ್ತದೆ. ಇದರಿಂದ ಎಂಥ ನೀಳವೇಣಿಯೂ ಜಾಳಾಗಿ ಬಲಹೀನವಾಗುತ್ತದೆ. ಕೂದಲು ತುಂಡಾಗಲು ಪ್ರಾರಂಭವಾಗುತ್ತದೆ. ಈ ಸಮಸ್ಯೆಗಳನ್ನು ನಿಭಾಯಿಸಲು ಭೃಂಗರಾಜ, ದಾಸವಾಳ ಮತ್ತು ನೆಲ್ಲಿಕಾಯಿಯ ಹೇರ್‌ಪ್ಯಾಕ್‌ ನೆರವಾಗಬಹುದು. ವಾರದಲ್ಲಿ ಒಂದೆರಡು ಬಾರಿ ಹೆಚ್ಚು ಜಿಡ್ಡಿಲ್ಲದ, ಹಗುರವಾದ ಎಣ್ಣೆ ಬಳಸಿ ಬುಡವನ್ನು ಮಸಾಜ್‌ ಮಾಡಿ.

ಉದುರುವುದು

ಮಳೆನೀರಲ್ಲಿ ಆಗಾಗ ನೆನೆಯುವ ಕೂದಲು ಬಲಹೀನವಾಗಿ ತುಂಡಾಗುವುದು ಮಾತ್ರವೇ ಅಲ್ಲ, ಬುಡಸಮೇತ ಉದುರಲೂ ಆರಂಭಿಸುತ್ತದೆ. ಇದರಿಂದ ಕೂದಲ ಒಟ್ಟಾರೆ ಆರೋಗ್ಯ ಪೂರ್ಣ ಹಾಳಾದಂತೆ. ಈ ಸಂದರ್ಭದಲ್ಲಿ ಅತಿಯಾಗಿ ಡ್ರೈಯರ್‌ ಬಳಸುವುದು, ಸ್ಟೈಲ್‌ಗಾಗಿ ಹೀಟ್‌ ಥೆರಪಿಗಳ ಮೊರೆ ಹೋಗುವುದನ್ನು ನಿಲ್ಲಿಸಿ. ಕಾರಣ, ಸಮಸ್ಯೆ ಬಿಗಡಾಯಿಸುತ್ತದೆ. ಕೂದಲನ್ನು ತೆಳುವಾದ ಹತ್ತಿಯ ಬಟ್ಟೆಯಿಂದ ಲಘುವಾಗಿ ಒರೆಸಿ, ಫ್ಯಾನ್‌ ಗಾಳಿಯಲ್ಲೇ ಒಣಗಿಸಲು ಯತ್ನಿಸಿ. ಒದ್ದೆ ಕೂದಲನ್ನೆಂದೂ ಬಾಚಬೇಡಿ, ಕೂದಲು ಉದುರುವುದು ಹೆಚ್ಚುತ್ತದೆ. ಸೌಮ್ಯವಾದ ಹೇರ್‌ ಸೀರಂ ಬಳಸುತ್ತಿದ್ದರೆ ಮುಂದುವರಿಸಿ.

ಇದನ್ನೂ ಓದಿ: Health Tips: ಊಟದ ನಂತರದ ಸಿಹಿತಿಂಡಿ ಅಭ್ಯಾಸ ಬಿಡೋದು ಹೇಗೆ!

Exit mobile version