ಚಳಿಗಾಲ ಸಮೀಪಿಸುತ್ತಿದೆ. ಋತುಮಾನಕ್ಕೆ ತಕ್ಕಂತೆ ಎಲ್ಲೆಡೆ ಪ್ರಕೃತಿ ಒಣಗಿ ನಿಲ್ಲುತ್ತದೆ. ಎಲೆಗಳು ಉದುರುತ್ತವೆ. ಹವೆಯೂ ಶುಷ್ಕ ಎನಿಸುತ್ತದೆ. ಇಂಥ ಲಕ್ಷಣಗಳೆಲ್ಲ ನಮ್ಮ ಚರ್ಮದ ಮೇಲೂ ಕಾಣತೊಡಗುತ್ತವೆ. ಅಡಿಯಿಂದ ಮುಡಿಯವರೆಗೆ ಒಣ, ಶುಷ್ಕ ಚರ್ಮ, ತುರಿಕೆ, ಕೆಲವೊಮ್ಮೆ ಉರಿ. ಇಷ್ಟು ಸಾಲದಂತೆ, ತಲೆಯಲ್ಲಿ ಒಣ ಚರ್ಮದಿಂದಾಗಿ ಹೊಟ್ಟು ಮತ್ತು ಕೂದಲು ಉದುರುವುದು ಹೆಚ್ಚುತ್ತದೆ.
ಚಳಿಗಾಲಕ್ಕೆಂದೇ ಕಾದಿರಿಸಿದ್ದ ವಿವಿಧ ರೀತಿಯ ಪ್ಯಾಕಿಂಗ್ ಇರುವ ಹೇರ್‌ಕೇರ್ ಉತ್ಪನ್ನಗಳನ್ನು ನಾನಾ ಕಂಪನಿಗಳು ಸ್ಪರ್ಧೆಯ ಮೇಲೆ ಮಾರುಕಟ್ಟೆಗೆ ತರುತ್ತವೆ. ಈ ಕುರಿತ ಜಾಹೀರಾತುಗಳನ್ನು ನೋಡಿದರೆ, ತಲೆ ಕೂದಲು ಸರಿಯಾಗುತ್ತದೋ ಇಲ್ಲವೋ, ತಲೆ ಕೆಡುವುದಂತೂ ಹೌದೇಹೌದು. ನಮ್ಮ ಜೇಬಿಗೂ ದೊಡ್ಡ ಕನ್ನವನ್ನೇ ಹಾಕುತ್ತವೆ ಈ ದುಬಾರಿ ಬೆಲೆಯ ಉತ್ಪನ್ನಗಳು. ಚಳಿಗಾಲದಲ್ಲಿ ಕೂದಲ ಹೊಟ್ಟು, ಉದುರುವುದು ಹೆಚ್ಚಾಗುವುದು ನಿಜವಾದರೂ, ಇದನ್ನು ಸರಿಮಾಡಿಕೊಳ್ಳುವುದಕ್ಕೆ ದುಬಾರಿ ಬೆಲೆಯನ್ನೇ ತೆರಬೇಕೆನ್ನುವುದು ನಿಜವಲ್ಲ. ಸರಳವಾದ ಮನೆಮದ್ದುಗಳೂ ಪರಿಣಾಮಕಾರಿ ಆಗಿರುತ್ತವೆ.
ಮೆಂತೆ: ಮೆಂತೆ ಕಾಳುಗಳನ್ನು ಸ್ವಲ್ಪ ಕಾಲ ನೆನೆಸಿಟ್ಟುಕೊಳ್ಳಿ. ನಂತರ ಇದನ್ನು ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ರುಬ್ಬುವಾಗ ಈರುಳ್ಳಿಯನ್ನು ಸೇರಿಸುವುದರಿಂದ ಪರಿಣಾಮವನ್ನು ಹೆಚ್ಚಿಸಬಹುದು. ಆದರೆ ಈರುಳ್ಳಿ ಸೇರಿಸುವುದರಿಂದ ಬರುವ ಕಿರುಘಾಟು ಕೆಲವರಿಗೆ ಇಷ್ಟವಾಗುವುದಿಲ್ಲ. ಹಾಗಿದ್ದಾಗ ಮೆಂತೆಯನ್ನು ಮಾತ್ರವೇ ರುಬ್ಬಿಕೊಳ್ಳಬಹುದು. ಇದನ್ನು ಕೂದಲ ಬುಡಕ್ಕೆ ಆಮೂಲಾಗ್ರವಾಗಿ ಹಚ್ಚಿ, ಸ್ವಲ್ಪ ಸಮಯದ ನಂತರ ತಲೆಯನ್ನು ಚನ್ನಾಗಿ ತೊಳೆಯಿರಿ.
ಎಣ್ಣೆ: ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಗಳನ್ನು ತಲೆಯ ಬುಡಕ್ಕೆ ಮಸಾಜ್ ಮಾಡಿ. ಈ ಎಣ್ಣೆಗಳಿಗೆ ಕರ್ಪೂರದೆಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬೆರೆಸಿ ಹಚ್ಚುವುದು ಸಹ ಪರಿಣಾಮಕಾರಿ. ಕೂದಲ ಬುಡಕ್ಕೆ ಎಣ್ಣೆ ಹಚ್ಚುವುದರಿಂದ ಚರ್ಮ ಒಣಗುವುದನ್ನು ತಡೆಯಲು ಸಾಧ್ಯ. ಚರ್ಮ ಒಣಗಿದಂತೆ ಹೊಟ್ಟಾಗುವುದು ಹೆಚ್ಚುತ್ತದೆ.
ಇದನ್ನೂ ಓದಿ | Mental health | ಸ್ಥಿರತೆ ಕಾಪಾಡಿಕೊಳ್ಳಲು ಕೆಲವು ಸರಳ ಸೂತ್ರಗಳು
ಲೋಳೆಸರ: ಅಥವಾ ಅಲೋವೇರಾ ಕೂದಲುಗಳನ್ನು ರಿಪೇರಿ ಮಾಡುವಲ್ಲಿ ಒಳ್ಳೆಯ ಫಲಿತಾಂಶ ನೀಡುತ್ತದೆ. ಲೋಳೆಸರದ ಎಲೆಯಂಥವುಗಳಿಂದ ರಸ ತೆಗೆದು ಕೂದಲಿಗೆ ಹಚ್ಚಿಕೊಳ್ಳಬಹುದು. ಲೋಳೆಸರ ಇಲ್ಲದಿದ್ದರೆ ಮಾರುಕಟ್ಟೆಯಲ್ಲಿರುವ ಉತ್ತಮ ಗುಣಮಟ್ಟದ ಅಲೋವೇರಾ ಜೆಲ್ ಸಹ ಬಳಸಬಹುದು.
ನಿಂಬೆ ರಸ: ಇದನ್ನು ನೇರವಾಗಿ ಕೂದಲಿಗೆ ಹಚ್ಚುವಂತಿಲ್ಲ. ಹಾಗೆ ಮಾಡಿದಲ್ಲಿ ಶುಷ್ಕತೆ ಹೆಚ್ಚಿ, ಕೂದಲಿಗೆ ಹಾನಿಯಾಗಬಹುದು. ನಿಂಬೆ ರಸವನ್ನು ಅಷ್ಟೇ ಪ್ರಮಾಣದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ. ಅದನ್ನು ಕೂದಲಿಗೆ ಹಚ್ಚಿ ಕೆಲಕಾಲ ಬಿಟ್ಟು ಚನ್ನಾಗಿ ತೊಳೆಯಿರಿ.
ಮೊಸರು: ಇದೂ ಸಹ ಹೊಟ್ಟು ತೆಗೆಯುವುದಕ್ಕೆ ಒಳ್ಳೆಯ ಉಪಾಯ. ತಲೆಯ ಒಂದಿಂಚೂ ಬಿಡದಂತೆ ಸಂಪೂರ್ಣವಾಗಿ ಮೊಸರು ಹಚ್ಚಿ. ಸ್ವಲ್ಪ ಕಾಲ ಬಿಟ್ಟು ಚೆನ್ನಾಗಿ ತೊಳೆಯಿರಿ. ಇವಿಷ್ಟೇ ಎಂದಲ್ಲ, ಶುದ್ಧ ಮದರಂಗಿ, ಮೊಟ್ಟೆ ಹೀಗೆ ನಾನಾ ವಸ್ತುಗಳನ್ನು ಮೊಸರಿಗೆ ಮಿಶ್ರ ಮಾಡಿ ಹಚ್ಚಿಕೊಳ್ಳಬಹುದು. ಕೂದಲ ಬುಡದ ಚರ್ಮದ ಶುಷ್ಕತೆಯನ್ನು ಹೋಗಲಾಡಿಸಿ, ಅದನ್ನು ಮೃದುವಾಗಿಸಿ, ಕೂದಲ ಆರೈಕೆ ಮಾಡುವುದರಿಂದ ಚಳಿಗಾಲದಲ್ಲೂ ನೀಳವೇಣಿಯರಾಗೇ ಉಳಿಯಬಹುದು.
ಇದನ್ನೂ ಓದಿ | ಅಪಾನವಾಯು: ಪಕ್ಕದವರು ಮೂಗು ಮುಚ್ಚದಿರಲು ಏನು ಮಾಡಬಹುದು?