ಸೌಂದರ್ಯದಲ್ಲಿ (beauty care) ಕೂದಲಿನ (Hair care) ಪಾತ್ರ ದೊಡ್ಡದು. ತಾನು ಸುಂದರವಾಗಿ ಕಾಣಬೇಕೆಂದರೆ ಕೂದಲಿಗೂ ಅಷ್ಟೇ ಮಹತ್ವ ನೀಡಬೇಕು ಎಂಬುದು ಕೇವಲ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಗೊತ್ತಿದೆ. ಹಲವರಿಗೆ ದೇಹದ ಬೇರೆಲ್ಲ ಅಂಗಗಳಿಗಿಂತಲೂ ಕೂದಲಿನದೇ ಚಿಂತೆ. ಯಾಕೆಂದರೆ, ಒಂದು ವಯಸ್ಸಿನಲ್ಲಿ, ಒಂದು ಹಂತದಲ್ಲಿ ಕೆಲವರನ್ನು ಕೂದಲುದುರುವುದು (hair fall) ಎಷ್ಟು ತೀವ್ರವಾಗಿ ಕಾಡುತ್ತದೆ ಎಂದರೆ ರಾತ್ರಿ ಹಗಲಿನ ದುಸ್ವಪ್ನವಾಗಿಬಿಡುತ್ತದೆ. ಕೂದಲ ಆರೋಗ್ಯಕ್ಕಾಗಿ ಸಿಕ್ಕಿಸಿಕ್ಕಿದ ಎಣ್ಣೆ, ಸೀರಂ ಎಂದೆಲ್ಲ ದುಡ್ಡು ಸುರಿದು, ಪಾರ್ಲರಿಗೆ ಹೋಗಿ ಅವರು ಹೇಳಿದ್ದನ್ನೂ ಮಾಡಿ, ಮಸಾಜ್ ಇತ್ಯಾದಿಗಳನ್ನು ಮಾಡಿಸಿಕೊಂಡರೂ ಕೂದಲ ಸಮಸ್ಯೆ ಬೆನ್ನು ಬಿಡುವುದೇ ಇಲ್ಲ.
ಕೆಲವರಿಗೆ ಇದು ವಂಶವಾಹಿನಿಯ ಪರಿಣಾಮವಿರಬಹುದು, ಇನ್ನೂ ಕೆಲವರಿಗೆ ಅತಿಯಾದ ಕೆಲಸದೊತ್ತಡ, ತಿನ್ನುವ ಆಹಾರದಲ್ಲಿ ಪೋಷಕಾಂಶ ಇಲ್ಲದೆ ಇರುವುದು ಅಥವಾ ಲೈಫ್‌ಸ್ಟೈಲ್ (lifestyle problems) ಕೂಡಾ ಇರಬಹುದು. ಆದರೆ ಒಂದು ನೆನಪಿಡಿ. ಯಾವಾಗಲೂ, ಕೂದಲು, ಚರ್ಮ ಇತ್ಯಾದಿಗಳೆಲ್ಲವೂ ಹೊರಗಿನಿಂದ ಹೊಳೆಯುತ್ತಿರಬೇಕಾದರೆ, ಖಂಡಿತಾ ದೇಹದ ಒಳಗೆ ನಾವು ನಮ್ಮ ಕಾಳಜಿ ಮಾಡಿಕೊಳ್ಳಬೇಕು. ಶಿಸ್ತುಬದ್ಧ ಆಹಾರ ಕ್ರಮ, ಪೋಷಕಾಂಶಯುಕ್ತ ಆಹಾರ ಸೇವನೆ (healthy food) ಅತ್ಯಂತ ಅಗತ್ಯ. ಯಾವುದೇ ಒಂದೇ ಒಂದು ಬಗೆಯ ಆಹಾರವನ್ನು ತಿನ್ನುವ ಮೂಲಕ ನಾವು ಅದ್ಭುತ ಕೂದಲನ್ನು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಸಮತೋಲಿತ ಪೋಷಕಾಂಶಗಳಿರುವ ಆಹಾರ ಬೇಕೇ ಬೇಕು. ಹಾಗಾಗಿ ಇಲ್ಲಿರುವ ಐದು ಹಣ್ಣುಗಳಲ್ಲಿರುವ ಬಗೆಬಗೆಯ ಪೋಷಕಾಂಶಗಳು (nutrient rich) ಕೂದಲ ಆರೋಗ್ಯಕ್ಕೆ ಅತ್ಯಂತ ಅವಶ್ಯಕ ಎಂಬುದನ್ನು ನೆನಪಿಟ್ಟುಕೊಳ್ಳಬೇಕು!
ಹಾಗಾದರೆ ಬನ್ನಿ, ಯಾವ ಐದು ಬಗೆಯ ಹಣ್ಣುಗಳನ್ನು ತಿನ್ನುವುದರಿಂದ ಕೂದಲುದುರುವಿಕೆಯಿಂದ ಮುಕ್ತಿ ಪಡೆದು, ಕೂದಲ ಆರೋಗ್ಯವನ್ನು ಹೆಚ್ಚಿಸಿಕೊಂಡು ಸೊಂಪಾದ ಕೂದಲು ಪಡೆಯಬಹುದು ನೋಡೋಣ.
1. ಬೆರ್ರಿ: ಬೆರ್ರಿ ಜಾತಿಗೆ ಸೇರಿದ ಹಣ್ಣುಗಳಾದ ಸ್ಟ್ರಾಬೆರ್ರಿ, ಬ್ಲೂಬೆರ್ರಿ, ರಸ್‌ಬೆರ್ರಿ ಮತ್ತಿತರ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳಾದ ವಿಟಮಿನ್ ಸಿ ಮತ್ತಿತರ ಪೋಷಕಾಂಶಗಳು ಹೇರಳವಾಗಿರುತ್ತದೆ. ಇದು ಕೂದಲ ಫಾಲಿಕಲ್‌ಗಳನ್ನು ರಕ್ಸಿಸಿ, ಫ್ರೀ ರಾಡಿಕಲ್‌ಗಳಿಂದಾಗುವ ಹಾನಿಯನ್ನು ತಪ್ಪಿಸುತ್ತವೆ. ಇಷ್ಟೇ ಅಲ್ಲ, ವಿಟಮಿನ್ ಸಿ ಕೊಲಾಜೆನ್ ಉತ್ಪಾದನೆಯನ್ನು ಪ್ರಚೋದಿಸಿ ಕೂದಲಿಗೆ ಶಕ್ತಿ ಹಾಗೂ ಸಾಮರ್ಥ್ಯವನ್ನು ನೀಡುವಲ್ಲಿ ಸಹಾಯ ಮಾಡುತ್ತದೆ.
2. ಸಿಟ್ರಸ್ ಹಣ್ಣುಗಳು: ಕಿತ್ತಳೆ, ಮುಸಂಬಿ, ನಿಂಬೆ ಇತ್ಯಾದಿ ಹಣ್ಣುಗಳು ಸಿಟ್ರಸ್ ಹಣ್ಣುಗಳಾಗಿದ್ದು ಇವುಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಕಬ್ಬಿಣಾಂಶವನ್ನು ಹೀರಿಕೊಳ್ಳುವಲ್ಲಿ ಮುಖ್ಯಪಾತ್ರ ವಹಿಸುವ ಮೂಲಕ ಕೂದಲುದುರುವಿಕೆಯ ವಿರುದ್ಧ ಹೋರಾಡುತ್ತದೆ. ಹಾಗಾಗಿ ಕಬ್ಬಿಣಾಂಶದ ಕೊರತೆಯೂ ಕೂಡಾ ಕೂದಲುದುರುವಿಕೆ ಪ್ರಮುಖ ಕಾರಣವಾಗಿರುವುದರಿಂದ ಕಬ್ಬಿಣಾಂಶವನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುವ ಪೂರಕ ಪೋಷಕಾಂಶಗಳ ಅಗತ್ಯವೂ ಇದೆ.
ಇದನ್ನೂ ಓದಿ: Lips Health Tips: ನಿಮಗೆ ತಿಳಿದಿರಲಿ, ತುಟಿಯಂಚಲ್ಲಿದೆ ಆರೋಗ್ಯದ ಸೂಚನೆ!
3. ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಪೊಟಾಶಿಯಂ ಹೆಚ್ಚಿದೆ. ಪೊಟಾಶಿಯಂ ಎಂಬ ಈ ಖನಿಜಾಂಶ ಕೂದಲ ಬುಡವನ್ನು ಶಕ್ತಿಶಾಲಿಯಾಗಿ ಮಾಡುವ ಮೂಲಕ ಕೂದಲ ಬೆಳವಣಿಗೆಗೆ ಇಂಬು ನೀಡುತ್ತದೆ. ಇಷ್ಟೇ ಅಲ್ಲ, ಬಾಳೆಹಣ್ಣಿನಲ್ಲಿ ವಿಟಮಿನ್ ಎ ಕೂಡಾ ಇರುವುದರಿಂದ, ಇದು ಕೂದಲ ಬುಡದಲ್ಲಿ ಸೆಬಮ್ ಉತ್ಪಾದನೆಯನ್ನು ಹೆಚ್ಚು ಮಾಡಲು ಪ್ರೇರಣೆ ನೀಡುವುದರಿಂದ ಈ ನೈಸರ್ಗಿಕವಾದ ತೈಲ ಕೂದಲ ಬುಡದಲ್ಲಿ ಸರಿಯಾದ ಪ್ರಮಾಣದಲ್ಲಿ ಉತ್ಪಾದನೆಯಾಗುವ ಮೂಲಕ ಕೂದಲನ್ನು ಹೊಳಪಾಗಿಸಿ, ಗಟ್ಟಿಮುಟ್ಟಾಗಿಸಿ, ಉದುರದಂತೆ ತಡೆಯುವಲ್ಲಿ ಸಹಾಯ ಮಾಡುತ್ತದೆ.
4. ಅವಕಾಡೋ (ಬೆಣ್ಣೆಹಣ್ಣು): ಬೆಣ್ಣೆಹಣ್ಣಿನಲ್ಲಿ ಆರೋಗ್ಯಕರ ಕೊಬ್ಬು ಶ್ರೀಮಂತವಾಗಿರುವುದರಿಂದ ಕೂದಲು ಹಾಗೂ ಚರ್ಮ ಪಳಪಳಿಸುವಲ್ಲಿ ಅತ್ಯುತ್ತಮ ಕಾಣಿಕೆ ನೀಡುತ್ತದೆ. ಇದರಲ್ಲಿ ವಿಟಮಿನ್ ಇ ಕೂಡಾ ಹೆಚ್ಚಿರುವುದರಿಂದ ಕೂದಲ ಬುಡದಲ್ಲಿ ರಕ್ತಸಂಚಾರವನ್ನು ಉತ್ತೇಜಿಸಿ ಕೂದಲಿಗೆ ಶಕ್ತಿಯನ್ನು ನೀಡಿ, ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
5. ಪಪ್ಪಾಯಿ: ವಿಟಮಿನ್ ಎ ಹಾಗೂ ಸಿ ಇಂದ ಸಮೃದ್ಧವಾಗಿರುವ ಪಪ್ಪಾಯಿ ಹಣ್ಣು ಕೂದಲ ಆರೋಗ್ಯಕ್ಕೆ ಬಹುಮುಖ್ಯ ಕಾಣಿಕೆ ನೀಡುತ್ತದೆ. ವಿಟಮಿನ್ ಎ ಸೆಬಮ್ ಉತ್ಪಾದನೆಗೆ ಪ್ರೇರೇಪಿಸಿದರೆ, ವಿಟಮಿನ್ ಸಿ ಕೊಲಾಜೆನ್ ಉತ್ಪತ್ತಿಗೆ ಇಂಬು ನೀಡುತ್ತದೆ. ಇವೆರಡೂ ಕೂಡಾ ಕೂದಲಿಗೆ ಶಕ್ತಿ ನೀಡಿ, ತುಂಡಾಗುವಿಕೆಯನ್ನು ಹಾಗೂ ಉದುರುವುದನ್ನು ತಡೆದು ಕೂದಲು ಶಕ್ತಿಶಾಲಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!