Site icon Vistara News

Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

Hair Conditioner

ಕೂದಲ ಪೋಷಣೆ ಎಷ್ಟು ಮಾಡಿದರೂ ಸಾಲದು. ಬಿಡದೆ ಕಾಡುವ ಕೂದಲ ಸಮಸ್ಯೆ ಒಂದೆರಡಲ್ಲ. ಒಂದೋ ತಲೆಹೊಟ್ಟು, ಸೀಳುತುದಿಗಳು, ಒಣಕಲಾಗುದು, ಉದುರುವುದು ಇತ್ಯಾದಿ ಇತ್ಯಾದಿ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಈಗ ಬೇಸಿಗೆಯಲ್ಲಂತೂ ತಿರುಗಾಡಿ ಮನೆಗೆ ಬಂದಾಗ ಕೂದಲು ಒಣಕಲಾಗಿ ಹಾರಾಡುತ್ತಾ, ಬಾಚಿಕೊಳ್ಳಲು ಕಷ್ಟವಾಗುತ್ತದೆ. ನುಣುಪಾಗಿ ನಯವಾಗಿ ಹೊಳಪಾಗಿದ್ದ ಕೂದಲು ನಿಸ್ತೇಜವಾಗಿ ಬಾಡುತ್ತದೆ. ಮಾರುಕಟ್ಟೆಯ ಜಾಹಿರಾತುಗಳನ್ನು ನೋಡಿ, ಏನಾದರೊಂದು ಹೊಸ ಶಾಂಪೂ, ಕಂಡೀಶನರ್‌ ಪ್ರಯತ್ನಿಸುವ ಮಂದಿ ನೈಸರ್ಗಿಕವಾದ ಕಂಡೀಶನರ್‌ಗಳ ಮೊರೆ ಹೋದರೆ ಖಂಡಿತವಾಗಿಯೂ ಉತ್ತಮ ಪ್ರಯೋಜನ ಪಡೆಯಬಲ್ಲರು. ಮಾರುಕಟ್ಟೆಯ ಕಂಡೀಶನರ್‌ಗೆ ಸೆಡ್ಡು ಹೊಡೆಯುವಂಥ ನೈಸರ್ಗಿಕ ಕಂಡೀಷನರ್‌ಗಳೇ ಇರುವಾಗ ರಾಸಾಯನಿಕ ಸಹಾಯ ಯಾಕೆ ಬೇಕು ಹೇಳಿ? ಬನ್ನಿ, ನೈಸರ್ಗಿಕ ಹೇರ್‌ ಕಂಡೀಷನರ್‌ಗಳಾಗಿ (Hair conditioner) ಯಾವುದನ್ನು ಬಳಸಬಹುದು ಎಂಬುದನ್ನು ನೋಡೋಣ.

ಮೊಟ್ಟೆಯ ಕಂಡೀಷನರ್‌

ಇದು ಕೂದಲ ಪೋಷಣೆಗೆ ಹೇಳಿ ಮಾಡಿಸಿದಂತಹ ಕಂಡೀಷನರ್‌. ಒಂದೇ ಬಳಕೆಯಲ್ಲಿ ನಿಮ್ಮ ಕೂದಲಲ್ಲಿ ಗಣನೀಯ ಬದಲಾವಣೆಯನ್ನು ನೀವು ಕಾಣುತ್ತೀರಿ. ಕೂದಲ ಮೇಳೆ ಅಡ್ಡ ಪರಿಣಾಮಗಳಾಗಬಹುದು ಎಂಬ ಭಯವೂ ಇಲ್ಲ. ಮೊಟ್ಟೆಯ ಬಿಳಿ ಲೋಳೆ, ಆಲಿವ್‌ ಎಣ್ಣೆ, ಜೇನುತುಪ್ಪ ಹಾಗೂ ವಿನೆಗರ್‌ ಇವನ್ನೆಲ್ಲ ಸೇರಿಸಿ ಚೆನ್ನಾಗಿ ಕಲಕಿಕೊಂಡು ಪೇಸ್ಟ್‌ನಂತೆ ತಲೆಗೆ ಕೂದಲ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಇದನ್ನು ಹಾಗೆಯೇ ತಲೆಯಲ್ಲಿರಲು ಬಿಟ್ಟು ನಂತರ ಮೆದುವಾದ ಶಾಂಪೂವಿನಿಂದ ತೊಳೆಯಿರಿ. ಯಾವ ಕಂಡೀಷನರ್‌ ಅಗತ್ಯವೂ ಇಲ್ಲದೆ ನಿಮ್ಮ ಕೂದಲು ಕಂಡೀಷನರ್‌ ಬಳಸಿದಂತೆ ಪಳಪಳಿಸುತ್ತದೆ.

ಬಾಳೆಹಣ್ಣಿನ ಕಂಡೀಷನರ್

ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಂಡು ಒಂದು ಚಮಚ ಜೇನುತುಪ್ಪ, ಆಲಿವ್‌ ಎಣ್ಣೆ ಇವಿಷ್ಟನ್ನೂ ತೆಗೆದುಕೊಂಡು ಪೇಸ್ಟ್‌ ಮಾಡಿ ತಲೆಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡುವುದರಿಂದ ಕೂದಲು ನಯವಾಗಿ ಹೊಳೆಯುತ್ತದೆ.‌ ಈ ಪೇಸ್ಟ್‌ ಜೊತೆಗೆ ಏಕಿದ್ದರೆ ಮೊಟ್ಟೆಯ ಬಿಳಿ ಲೋಳೆಯನ್ನೂ ಸೇರಿಸಬಹುದು.

ತೆಂಗಿನೆಣ್ಣೆ ಕಂಡೀಷನರ್

ತೆಂಗಿನ ಎಣ್ಣೆಗೆ ಒಂದು ಚಮಚ ಜೇನುತುಪ್ಪ, ನಿಂಬೆಹಣ್ಣಿನ ರಸ, ಮೊಸರು ಹಾಗೂ ರೋಸ್‌ ವಾಟರ್‌ ಸೇರಿಸಿ. ಇವನ್ನು ಚೆನ್ನಾಗಿ ಮಿಕ್ಸ್‌ ಮಾಡಿ ತಲೆಗೆ ಹಚ್ಚಿ ಮಸಾಜ್‌ ಮಾಡಿಕೊಳ್ಳಿ. ನಂತರ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಕೂದಲು ಆರೋಗ್ಯಯುತವಾಗಿ ಕಂಗೊಳಿಸುತ್ತದೆ.

ಇದನ್ನೂ ಓದಿ: Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ

ಅಗಸೆಬೀಜದ ಕಂಡೀಷನರ್

ಎರಡು ಚಮಚ ಅಗಸೆ ಬೀಜವನ್ನು ನೀರಿಗೆ ಹಾಕಿ ಸ್ವಲ್ಪ ಹೊತ್ತು ಕುದಿಸಿ. ಅದು ಕುದಿರುವ ಸಂದರ್ಭ ಜೆಲ್‌ನಂತಾಗುತ್ತದೆ. ಸ್ವಲ್ಪ ಆರಿದ ಮೇಲೆ ಅದನ್ನು ಸೋಸಿಕೊಂಡು ಅದರಿಂದ ದೊರೆತ ಜೆಲ್‌ಗೆ, ಆಲೊವೆರಾ ಜೆಲ್‌ ಹಾಗೂ ತೆಂಗಿನೆಣ್ಣೆ ಸ್ವಲ್ಪ ಸೇರಿಸಿ. ಈ ಮೂರನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ, ಕೂದಲ ಬುಡದಿಂದ ತುದಿಯವರೆಗೂ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆದರೆ, ಯಾವ ಕಂಡೀಷನರ್‌ ಕೂಡಾ ಅಗತ್ಯವೇ ಇಲ್ಲ. ನಿಸ್ತೇಜವಾಗಿದ್ದ ಕೂದಲು ಒಂದೇ ಸಲಕ್ಕೆ ಪಳಪಳಿಸುವ ಹೊಳಪನ್ನು ಪಡೆಯುತ್ತದೆ.

ಮೊಸರಿನ ಕಂಡೀಷನರ್

ಒಂದು ಬೌಲ್‌ನಲ್ಲಿ ಗಟ್ಟಿ ಮೊಸರು ತೆಗೆದುಕೊಂಡು ಅದಕ್ಕೆ, ಮೊಟ್ಟೆಯ ಬಿಳಿ ಲೋಳೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನು ತಲೆ ಕೂದಲಿಂದ ಬುಡದವರೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಕೂದಲು ತೊಳೆಯಿರಿ. ಯಾವ ಕಂಡೀಷನರ್‌ ಹಾಕುವ ಅಗತ್ಯವೇ ಇಲ್ಲ. ಕೂದಲು ಸೊಂಪಾಗಿ ಬೆಳೆಯುತ್ತದೆ. ಹೊಟ್ಟಿನ ಸಮಸ್ಯೆಯಿದ್ದರೂ ಮಂಗಮಾಯ. ರಾಸಾಯನಿಕಯುಕ್ತ ಕಂಡೀಷನರ್‌ ಬಳಸುವ ಬದಲು, ವಾರಕ್ಕೊಮ್ಮೆಯಾದರೂ ಇಂತಹ ನೈಸರ್ಗಿಕ ಕಂಡೀಷನಿಂಗ್‌ ಮಾಡುವುದರಿಂದ ಕೂದಲನ್ನು ಯಾವ ಸಮಸ್ಯೆಯೂ ಬಾಧಿಸುವುದಿಲ್ಲ.

Exit mobile version