Site icon Vistara News

Hairstyle Tips : ಹೆಚ್ಚು ಯಂಗ್‌ ಆಗಿ ಕಾಣಿಸಬೇಕೆಂದರೆ ಹೇರ್‌ಸ್ಟೈಲ್‌ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ!

ಪ್ರತಿಯೊಬ್ಬರಿಗೂ ತಾವು ಯೌವನದಿಂದ ಕಂಗೊಳಿಸಬೇಕು ಎಂಬ ಬಯಕೆಯಿರುವುದು ಸಾಮಾನ್ಯ. ಅದಕ್ಕಾಗಿ ಬಹುತೇಕರು ಹಲವಾರು ಬಗೆಗಳಲ್ಲಿ ತಮ್ಮ ಸೌಂದರ್ಯ ಹೆಚ್ಚಿಸಲು ಪಾರ್ಲರ್‌ಗೆ ಎಡತಾಕುವುದುಂಟು. ಆದರೆ, ಬಹಳಷ್ಟು ಮಂದಿಗೆ ನಮ್ಮದೇ ಕೆಲವು ಅಭ್ಯಾಸಗಳಿಂದ, ಶೈಲಿಯಿಂದಲೂ ನಮ್ಮ ಒಟ್ಟು ವ್ಯಕ್ತಿತ್ವ ಹಳಬರಂತೆ ಕಾಣುವಂತೆ ಹಾಗೂ ನಮಗೆ ಆಗಿರುವ ವಯಸ್ಸಿಗಿಂತಲೂ ಹೆಚ್ಚು ವಯಸ್ಸಾದಂತೆ ಕಾಣುವಂತೆ ಮಾಡಿಸುತ್ತದೆ ಎಂಬುದು ತಿಳಿದಿಲ್ಲ. ಹೌದು, ಕೆಲವೊಮ್ಮೆ ನಮ್ಮ ಕೂದಲು ಬಾಚುವ ಶೈಲಿ, ನಮ್ಮ ಹೇರ್‌ಕಟ್‌ ಕೂಡಾ ನಮ್ಮ ನಿಜವಾದ ವಯಸ್ಸಿಗಿಂತ ಹೆಚ್ಚು ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ. ಎಷ್ಟೋ ಸಾರಿ, ಹಲವು ದುಬಾರಿ ಟ್ರೀಟ್‌ಮೆಂಟ್‌ಗಳಿಗೆ ದುಡ್ಡು ಸುರಿವ ಮುನ್ನ ಕೆಲವು ಸರಳ ವಿಧಾನಗಳಿಂದ ನಮ್ಮನ್ನು ನಾವು ಸ್ಮಾರ್ಟ್‌ ಆಗಿ ಕಾಣುವಂತೆ ಹೇಗೆ ಮಾಡಬಹುದು. ಕೇವಲ ಒಂದು ಹೇರ್‌ಸ್ಟೈಲ್‌ನಿಂದಲೂ ಕೂಡಾ ನಮ್ಮ ಒಟ್ಟು ವ್ಯಕ್ತಿತ್ವದ ಹೊರ ಸ್ವರೂಪವನ್ನೇ ಸ್ಮಾರ್ಟ್‌ ಆಗಿ ಕಾಣುವಂತೆಯೂ ಮಾಡಬಹುದು. ಬನ್ನಿ, ಯಾವ ಸಿಂಪಲ್‌ ಹೇರ್‌ಕಟ್‌ಗಳು ಹಾಗೂ ಹೇರ್‌ಸ್ಟೈಲ್‌ಗಳು (Hairstyle Tips) ನಮ್ಮನ್ನು ವಯಸ್ಸಾದವರಂತೆ ಕಾಣುವಂತೆ ಮಾಡುತ್ತವೆ ಎಂಬುದನ್ನು ನೋಡೋಣ.

ಶಾರ್ಟ್‌ ಹೇರ್‌ಕಟ್‌

ಶಾರ್ಟ್‌ ಹೇರ್‌ಕಟ್‌ ಮಾಡಿದರೆ ಯಂಗ್‌ ಆಗಿ ಕಾಣುತ್ತೇನೆ ಎಂದು ಹಲವರು ಅಂದುಕೊಳ್ಳುವುದು ನಿಜ. ಆದರೆ ಇದು ಶುದ್ಧ ತಪ್ಪು ತಿಳಿವಳಿಕೆ. ಯಾಕೆಂದರೆ, ಶಾರ್ಟ್‌ ಹೇರ್‌ಕಟ್‌ ಎಲ್ಲರಿಗೂ ಹೊಂದುವುದಿಲ್ಲ. ತೀರಾ ಚಿಕ್ಕದಾಗಿ ಕಟ್‌ ಮಾಡಿಕೊಳ್ಳುವುದು ಬಹಳ ಸಾರಿ ನೀವು ಇರುವುದಕ್ಕಿಂತಲೂ ವಯಸ್ಸಾದವರಂತೆ ಕಾಣಿಸುತ್ತದೆ. ಆದರೆ, ನಿಮ್ಮ ಕೂದಲು ತೆಳುವಾಗುತ್ತಾ ಬರುತ್ತಿದೆ ಅನಿಸಿದರೆ, ನೀವು ಶಾರ್ಟ್‌ ಹೇರ್‌ಕಟ್‌ ಮೊರೆ ಹೋಗಬಹುದು. ಆದರೆ, ಸಾಕಷ್ಟು ಲೇಯರ್‌ ಇರುವಂತೆ ಕತ್ತರಿಸಿಕೊಳ್ಳಿ.

ಲೇಯರ್‌ ಇಲ್ಲದ ಉದ್ದ ಕೂದಲು

ಕೆಲವರಿಗೆ ಉದ್ದ ಕೂದಲೆಂದರೆ ಪ್ರಾಣ. ಹಾಗಾಗಿ ತಮ್ಮ ಕೂದಲ ವಿಷಯಕ್ಕೆ ಬಂದರೆ ಇವರು ಕೂದಲಿಗೆ ಕತ್ತರಿ ಸೋಕಿಸಲೂ ಬಿಡುವುದಿಲ್ಲ. ಆದರೆ, ಇಂಥವರ ಕೂದಲು, ತುದಿಯಲ್ಲಿ ತೆಳುವಾಗುತ್ತಾ ಕೊನೆಗೆ ಹಾವಿನ ಬಾಲದ ಹಾಗೆ ಸುರುಳಿ ಸುತ್ತಿ ಆಕರ್ಷಕವಾಗಿ ಕಾಣುವುದಿಲ್ಲ. ಹಾಗಾಗಿ, ಉದ್ದ ಕೂದಲಿದ್ದರೂ, ಆಗಾಗ ಕೂದಲ ತುದಿಯನ್ನು ಸ್ಮಾರ್ಟ್‌ ಆಗಿ ಟ್ರಿಮ್‌ ಮಾಡಿಸಿ, ಒಂದೇ ಸಮನಾಗಿ ಕತ್ತರಿಸಿ ಸೆಟ್‌ ಮಾಡಿಸಿಕೊಳ್ಳುವುದು ಉತ್ತಮ. ಆಗ, ನಿಮ್ಮ ಲುಕ್ಕೇ ಬದಲಾಗುತ್ತದೆ.

ತೆಳುಬಣ್ಣಗಳ ಆಯ್ಕೆ

ಕೂದಲಿಗೆ ಕಲರಿಂಗ್‌ ಮಾಡಿಸಿಕೊಳ್ಳುವಾಗ ಅನೇಕರು ವಯಸ್ಸಾದಂತೆ ಗಾಢ ಬಣ್ಣಗಳ ಮೊರೆ ಹೋಗುವುದುಂಟು. ಆದರೆ, ನಿಮ್ಮ ಕೂದಲ ಬಣ್ಣಕ್ಕೆ ಹತ್ತಿರದಲ್ಲೇ ಇರುವ ತೆಳುಬಣ್ಣವನ್ನು ಹಾಕಿಸಿ ನೋಡಿ. ನೀವು ಇನ್ನೂ ಯಂಗ್‌ ಆಗಿ ಕಾಣುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ತೀರಾ ತೆಳು ಬಣ್ಣದ ಆಯ್ಕೆ ಕೊಂಚ ರಿಸ್ಕೇ ಆದರೂ, ಕೆಲವೊಮ್ಮೆ, ತೆಳು ಬಣ್ಣದ ಕಲರಿಂಗ್‌ ಅದ್ಭುತವಾಗಿ ಕಾಣುವಂತೆಯೂ ಮಾಡುತ್ತದೆ ನೆನಪಿಡಿ.

ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್

ಬಹಳಷ್ಟ ಮಂದಿ ಟ್ರೆಂಡ್‌ಗಾಗಿ ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ಗೆ ಮಾರು ಹೋಗುವುದುಂಟು. ಆದರೆ, ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ ನಿಮ್ಮನ್ನು ಹೆಚ್ಚು ಯಂಗ್‌ ಆಗಿ ಕಾಣಿಸುತ್ತದೆ ಎಂಬ ಭ್ರಮೆ ಖಂಡಿತ ಬೇಡ. ಇದು ನಿಮ್ಮನ್ನು ಹೆಚ್ಚು ಅನುಭವಿಗಳ ಹಾಗೆ ಸ್ಮಾರ್ಟ್‌ ಆಗಿ ಕಾಣುವಂತೆ ಮಾಡಬಹುದಷ್ಟೇ ವಿನಃ, ಯಂಗ್‌ ಆಗಿ ಅಲ್ಲ. ಯಂಗ್‌ ಆಗಿ ಕಾಣಬೇಕೆಂದರೆ ಅಥವ ನಿಮ್ಮ ವಯಸ್ಸಿನಷ್ಟಾದರೂ ಯಂಗ್‌ ಕಾಣಬೇಕೆಂದರೆ, ಕೂದಲು ಬಿಳಿಯಾಗಿದ್ದರೆ ನಿಮ್ಮ ಕೂದಲ ಬಣ್ಣಕ್ಕೆ ಹೊಂದುವ ಕಲರ್‌ ಮಾಡಿಸಿಕೊಳ್ಳಿ.

ಬದಲಾವಣೆಗೆ ನೋ

ನನಗೆ ಇದು ಮಾತ್ರ ಸರಿ ಹೊಂದುತ್ತದೆ ಎಂದುಕೊಂಡು ಎಂದೆಂದಿಗೂ ಒಂದೇ ಹೇರ್‌ಸ್ಟೈಲ್‌ಗೆ ಅಂಟಿಕೊಂಡಿರುವುದು ಕೂಡಾ ನೀವು ನಿಮ್ಮ ವಯಸ್ಸಿಗಿಂತ ಹೆಚ್ಚಾದವರಂತೆ ಕಾಣಿಸುತ್ತದೆ. ಆಗಾಗ ಕೂದಲ ವಿಷಯದಲ್ಲಿಯೂ ಬದಾಲವಣೆ ಮಾಡಿ. ಹೇರ್‌ಸ್ಟೈಲ್‌ ಬದಲಾಯಿಸಿ. ಹೇರ್‌ಕಟ್‌ ಬದಲಾಯಿಸಿ ನೋಡಿ. ಈ ಬದಲಾವಣೆ ನಮ್ಮನ್ನು ನಾವು ಇನ್ನಷ್ಟು ಬೆಳೆಯಲು ಹಾಗೂ ಹೆಚ್ಚು ಆತ್ಮವಿಶ್ವಾಸಿಗಳಾಗಿ ಮಾಡುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: Health Benefits of Dates: ಖರ್ಜೂರ ರುಚಿಗಷ್ಟೆ ಅಲ್ಲ, ಆರೋಗ್ಯಕ್ಕೂ ಹಿತ

Exit mobile version