ಬದುಕಿನಲ್ಲಿ ಕಡೆಯವರೆಗೆ ನಮ್ಮ ಜೊತೆಗಿರುವುದು ನಮ್ಮ ಆತಂಕ, ಒತ್ತಡಗಳು ಮಾತ್ರ ಎಂಬುದು ಆಧುನಿಕ ಕಾಲದ ಗಾದೆ. ಇವುಗಳಿಂದ ಬಿಡಿಸಿಕೊಳ್ಳಲು ಮಾಡದ ಸರ್ಕಸ್ ಯಾವುದಿದೆ? ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುವುದರಿಂದ ಹಿಡಿದು, ಲೋಕದ ಸಹವಾಸವೇ ಸಾಕೆಂದು ಆಶ್ರಮ ಸೇರಿ ಸನ್ಯಾಸ ತೆಗೆದುಕೊಂಡವರೂ ಇದ್ದಾರೆ. ಇದೆಲ್ಲ ಬಿಡಿ, ನಮ್ಮ-ನಿಮ್ಮ ಮಟ್ಟವನ್ನು ಮೀರಿದ್ದು. ಈಗ ಸಾಮಾನ್ಯರಿಗೆ ಆಗುವಂಥ ಸರಳವಾದ ವಿಷಯಕ್ಕೆ ಬರೋಣ. ಸರಳವಾದ ತಲೆಯ ಮಸಾಜ್ (Head Massage Tips) ಒತ್ತಡ ಕಡಿಮೆ ಮಾಡುವಲ್ಲಿ ಎಷ್ಟೊಂದು ಪರಿಣಾಮಕಾರಿ ಎನ್ನುವುದು ಗೊತ್ತೇ? ಆಯುರ್ವೇದವನ್ನು ಶತಶತಮಾನಗಳಿಂದ ಬದುಕಿನ ರೀತಿಯಂತೆ ಆಚರಿಸುತ್ತಾ ಬಂದಿರುವ ಭಾರತದಲ್ಲಿ ತಲೆಗೆ ಎಣ್ಣೆ ಮಸಾಜ್ ಮಾಡುವ ಬಗ್ಗೆ ಹೆಚ್ಚು ಹೇಳುವುದು ಬೇಕಿಲ್ಲ- ಎಂದು ತಿಳಿದಿದ್ದರೆ, ತಪ್ಪು! ತಲೆ ಕೂದಲಿಗೆ ಎಣ್ಣೆ ಹಚ್ಚುವುದಕ್ಕೂ ಜಾಹೀರಾತುಗಳನ್ನು ಕೊಡಬೇಕಾಗಿರುವ ಈ ಕಾಲದಲ್ಲಿ ಎಲ್ಲರೂ ಹಳೆಯ ಕಾಲದವರಂತೆ ಎಣ್ಣೆ ಮಸಾಜ್ ಮಾಡಿಕೊಳ್ಳುತ್ತಾರೆ ಎಂಬ ಭಾವಿಸುವುದಾದರೂ ಹೇಗೆ? ಹೀಗೆನ್ನುತ್ತಿದ್ದಂತೆ ತಲೆಯ ಕೂದಲೆಲ್ಲ ಕಿತ್ತು ಬರುವಂತೆ ಉಗ್ರವಾಗಿ ಮಸಾಜ್ ಮಾಡುವ ಚಿತ್ರವನ್ನು ಕಣ್ಣಿಗೆ ತಂದುಕೊಳ್ಳಬೇಡಿ. ಲಘುವಾದ ಆದರೆ ಸ್ಥಿರವಾದ ಲಯದಲ್ಲಿನ ಮಸಾಜ್ ಇದು. ತಲೆಯ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸಿ, ಆಮ್ಲಜನಕದ ಪೂರೈಕೆಯನ್ನು ವೃದ್ಧಿಸಿ, ಮನಸ್ಸನ್ನು ಶಾಂತಗೊಳಿಸುವ ಈ ಅಭ್ಯಾಸದಿಂದ ಇನ್ನೂ ಏನೇನು ಲಾಭಗಳಿವೆ (Head Massage Tips) ಎಂಬುದನ್ನು ನೋಡೋಣ.
ಸೆರೋಟೋನಿನ್ ಹೆಚ್ಚಳ
ಒತ್ತಡ ನಿವಾರಿಸುವಲ್ಲಿ ನಮ್ಮ ದೇಹದ ಹ್ಯಾಪಿ ಹಾರ್ಮೋನುಗಳ ಭೂಮಿಕೆ ಮಹತ್ವದ್ದು. ತಲೆಗೆ ಲಘುವಾದ ಎಣ್ಣೆ ಅಥವಾ ಜೆಲ್ ಮಸಾಜ್ ಮಾಡುವುದು ಸೆರೋಟೋನಿನ್ ಚೋದಕದ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ಆತಂಕ ನಿವಾರಣೆ ಮತ್ತು ಒತ್ತಡ ಪರಿಹಾರ ಸಾಧ್ಯವಿದೆ. ಇದು ನಮ್ಮ ಮೂಡ್ ಸರಿಪಡಿಸಿ, ಆಹ್ಲಾದದ ಭಾವವನ್ನು ಹೆಚ್ಚಿಸುತ್ತದೆ. ಹಣೆಯ ನರಗಳನ್ನು ಸಡಿಲಿಸಿ, ಕಣ್ಣಿನ ಒತ್ತಡ ಕಡಿಮೆ ಮಾಡಿ, ಮನಸ್ಸಿನ ಸಮಾಧಾನ ಹೆಚ್ಚಿಸುತ್ತದೆ.
ಕಾರ್ಟಿಸೋಲ್ ಕಡಿಮೆ
ನಮ್ಮ ದೇಹದಲ್ಲಿ ಒತ್ತಡ ಹೆಚ್ಚುತ್ತಿದ್ದಂತೆ ಕಾರ್ಟಿಸೋಲ್ ಪ್ರಮಾಣವೂ ಹೆಚ್ಚುತ್ತದೆ. ಒತ್ತಡಕ್ಕೆ ಪ್ರತಿಯಾಗಿ ಬಿಡುಗಡೆಯಾಗುವ ಹಾರ್ಮೋನು ಎಂದು ತಿಳಿಯಬಹುದು ಇದನ್ನು. ಈ ಚೋದಕದ ಪ್ರಮಾಣ ದೇಹದಲ್ಲಿ ಹೆಚ್ಚಿದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಮುತ್ತಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ, ಕಾರ್ಟಿಸೋಲ್ ಪ್ರಮಾಣ ಹೆಚ್ಚದಂತೆ ನಿಭಾಯಿಸುವುದು ಅತಿ ಮುಖ್ಯ.
ಇದನ್ನೂ ಓದಿ: Early Symptoms Of Menopause: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಋತುಚಕ್ರ ಸದ್ಯದಲ್ಲೇ ನಿಲ್ಲುತ್ತದೆ ಎಂದರ್ಥ
ಮಾಡುವುದು ಹೇಗೆ?
ನಮಗೆ ನಾವೇ ಮಸಾಜ್ ಮಾಡಿಕೊಳ್ಳುವುದು ಅಸಾಧ್ಯವಲ್ಲ, ಆದರೆ ಪರಿಣಾಮಕಾರಿ ಆಗದೆಯೇ ಹೋಗಬಹುದು. ಹಾಗಾಗಿ ಒಬ್ಬರಿಗೊಬ್ಬರು ತಲೆಗೆ ಎಣ್ಣೆ ಮಸಾಜ್ ಮಾಡುವ ಕ್ರಮ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ತಲೆಯ ಮಸಾಜ್‌ಗೆ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆಯಂಥ ಯಾವುದನ್ನಾದರೂ ಬಳಸಬಹುದು. ಇವುಗಳ ಜೊತೆಗೆ ಕೆಲವು ಹನಿಗಳಷ್ಟು ಯಾವುದಾದರೂ ಸಾರಭೂತ ತೈಲವನ್ನು ಸೇರಿಸಿಕೊಂಡರೆ ಒತ್ತಡ ನಿವಾರಣೆಗೆ ಹೆಚ್ಚಿನ ಅನುಕೂಲವಾಗುತ್ತದೆ. ಮಸಾಜ್ ಮಾಡುವಾಗ ಇಡೀ ಅಂಗೈ ಹಾಕಿ ತಲೆಯನ್ನು ಉಜ್ಜುವ ಬದಲು, ಬೆರಳುಗಳ ತುದಿಯನ್ನು ಹೆಚ್ಚು ಬಳಸಿ. ತಲೆಯನ್ನು ತಿಕ್ಕಿ, ತೀಡಿ, ಲಘುವಾಗಿ ತಟ್ಟಬಹುದು. ಸಣ್ಣ ವೃತ್ತಾಕಾರದಲ್ಲಿ ತಿಕ್ಕುವುದು ಸರಿಯಾದ ಕ್ರಮ. ಹಣೆಯಿಂದ ಪ್ರಾರಂಭಿಸಿ, ತಲೆಯ ಹಿಂಭಾಗದತ್ತ ಮುಂದುವರಿಯಿರಿ. ಯಾವುದಾದರೂ ಭಾಗದಲ್ಲಿ ಹೆಚ್ಚಿನ ಒತ್ತಡವಿದೆ ಎನಿಸಿದರೆ, ಆ ಭಾಗಕ್ಕೆ ಹೆಚ್ಚು ಹೊತ್ತು ಮಸಾಜ್ ಮಾಡಿ. ಮುಖ್ಯವಾಗಿ ಹುಬ್ಬಿನ ಪಕ್ಕದ ಭಾಗ, ಮೂರನೇ ಕಣ್ಣಿನ ಭಾಗ, ನೆತ್ತಿ, ಕುತ್ತಿಗೆಯ ಹಿಂಭಾಗ- ಇಲ್ಲೆಲ್ಲ ಮಸಾಜ್ ಮಾಡಿದರೆ ಬೇಗ ಆರಾಮ ದೊರೆಯುತ್ತದೆ. ಕಣ್ಣಿನ ಸುತ್ತ ವೃತ್ತಾಕಾರದಲ್ಲೂ ಹಗುರವಾಗಿ ತಿಕ್ಕಬಹುದು. ಆದರೆ ಈ ಭಾಗಕ್ಕೆ ಹೆಚ್ಚಿನ ತೈಲ ಬಳಸುವುದು ಬೇಡ. ಕಣ್ಣಿಗೆ ಎಣ್ಣೆ ತಾಗಿದರೆ ವಿಪರೀತ ಉರಿಯಾಗುತ್ತದೆ. ಇದನ್ನು ವಾರಕ್ಕೊಮ್ಮೆ ನಿಶ್ಚಿತವಾಗಿ ಮಾಡಬಹುದು. ಹೆಚ್ಚು ಬಾರಿ ಮಾಡಿದರೆ, ಅನುಕೂಲ ಹೆಚ್ಚು. ಸಾಧಾರಣವಾಗಿ 10-15 ನಿಮಿಷಗಳ ಲಘುವಾದ ಮಸಾಜ್ ಒತ್ತಡ ನಿರ್ವಹಣೆಯಲ್ಲಿ ಹೆಚ್ಚಿನ ಪರಿಣಾಮ ನೀಡುತ್ತದೆ. ರಾತ್ರಿ ಮಲಗುವ ಮುನ್ನ ಇದನ್ನು ಮಾಡಿದರೆ, ಆರಾಮದಾಯಕ ನಿದ್ರೆ ನಿಮ್ಮದಾಗುತ್ತದೆ.