Site icon Vistara News

Head Phone Side Effect | ಹೆಡ್‌ಫೋನ್‌, ಇಯರ್‌ ಬಡ್‌ಗಳಿಂದ ಕಿವಿ ಢಮಾರ್!

Head Phone Side Effect

ಬೆಂಗಳೂರು : ನಾವು ದಿನನಿತ್ಯ ಉಪಯೋಗಿಸುವ ಇಯರ್‌ ಬಡ್‌ ಮತ್ತು ಹೆಡ್‌ಫೋನ್‌ಗಳ ಮಾರಾಟದಲ್ಲಿ ಆತಂಕ ಹುಟ್ಟಿಸುವಷ್ಟು ಏರಿಕೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ಸುಮಾರು ನೂರು ಕೋಟಿ ಯುವಜನತೆಯ ಶ್ರವಣ ಸಾಮರ್ಥ್ಯ ಕುಂಠಿತಗೊಳ್ಳಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. ಕೇವಲ ಕಿವಿಗೆ ಹಾಕುವ ಉಪಕರಣಗಳು ಮಾತ್ರವಲ್ಲ, ನಾನಾ ಕಾರಣಗಳಿಗಾಗಿ ಕಿವಿಗಡಚಿಕ್ಕುವ ಸಂಗೀತ ಮತ್ತು ಶಬ್ದಗಳಿಗೆ ತೆರೆದುಕೊಳ್ಳುತ್ತಿರುವ ಕರಣಗಳ ಕೇಳುವ ಸಾಮರ್ಥ್ಯ ಕುಂದಬಹುದು (Head Phone Side Effect) ಎನ್ನುತ್ತವೆ ಇತ್ತೀಚಿನ ಅಧ್ಯಯನಗಳು.

“ಸರಕಾರಗಳು, ಉದ್ಯಮ ಮತ್ತು ಸಾರ್ವಜನಿಕ ಹಿತ ಬಯಸುವ ಸಮಾಜಗಳೆಲ್ಲವೂ ಈ ಬಗ್ಗೆ ಚಿಂತಿಸಬೇಕಾದ ತುರ್ತು ಸ್ಥಿತಿಯಿದು. ಜಾಗತಿಕವಾಗಿ ಯುವಜನತೆಯ ಶ್ರವಣ ಸಾಮರ್ಥ್ಯವನ್ನು ಕಾಪಾಡಿ, ಸುರಕ್ಷಿತ ಕೇಳುವಿಕೆಯನ್ನು ಖಾತ್ರಿ ಪಡಿಸುವುದು ಈಗಿನ ಅಗತ್ಯಗಳಲ್ಲಿ ಒಂದು” ಎಂಬುದು ತಜ್ಞರ ನುಡಿ. ಇಯರ್‌ ಫೋನ್‌, ಇಯರ್‌ ಬಡ್‌, ಹೆಡ್‌ ಫೋನ್‌ಗಳಂತಹ ಖಾಸಗಿ ಶ್ರವಣ ಪರಿಕರಗಳ ಬಳಕೆ ಸಿಕ್ಕಾಪಟ್ಟೆ ಹೆಚ್ಚಿದೆ. ಈ ಉದ್ದಿಮೆ ಸತತ ಎರಡನೇ ತ್ರೈಮಾಸಿಕದಲ್ಲೂ ಅತಿ ಹೆಚ್ಚು ವಹಿವಾಟು ದಾಖಲಿಸಿದೆ. ಇದಕ್ಕೆ ಪೂರಕವಾಗಿ, ಈ ಉದ್ದಿಮೆಯಲ್ಲಿ ಹಲವಾರು ಹೊಸ ಕಂಪನಿಗಳು ತಲೆ ಎತ್ತುತ್ತಿದ್ದು, ಕಡಿಮೆ ಬೆಲೆಯಲ್ಲಿ ಈ ಉಪಕರಣಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಈಗಿನ ಕೋವಿಡ್‌ ನಂತರದ ಜೀವನಶೈಲಿಯಲ್ಲಿ ಮನೆಯಿಂದ ಕೆಲಸ ಮಾಡುವ ಕಾಲಕ್ಕೆ, ಮೀಟಿಂಗ್‌ಗಳ ನೆವದಲ್ಲಿ ಶ್ರವಣ ಉಪಕರಣಗಳ ಬಳಕೆ ಈಗಾಗಲೇ ಅಭ್ಯಾಸವಾಗಿದೆ. ಇಂಥ ಹಲವು ಕಾರಣಗಳಿಂದ ಇಯರ್‌ ಬಡ್‌ಗಳು ನಿತ್ಯದ ಸಂಗಾತಿಗಳು ಎನ್ನುವಂಥವರ ಶ್ರವಣ ಸಾಮರ್ಥ್ಯದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ | Vistara News Launch | ಆರೋಗ್ಯಕರ ಸುದ್ದಿಯೊಂದಿಗೆ ವಿಸ್ತಾರ ನ್ಯೂಸ್‌ ಗಟ್ಟಿಯಾಗಿ ನಿಲ್ಲಲಿ: ನಿಜಗುಣ ಶಿವಯೋಗಿ ಸ್ವಾಮೀಜಿ

ಕಿವಿಗೆ ಮಾರಕ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕವಾಗಿ 43 ಕೋಟಿ ಜನ ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪರಿಣಿತರ ಪ್ರಕಾರ, ವಯಸ್ಕರಿಗೆ 80 ಡಿಬಿ ಮತ್ತು ಮಕ್ಕಳಿಗೆ 79 ಡಿಬಿ ಪ್ರಮಾಣಕ್ಕಿಂತ ಹೆಚ್ಚು ಶಬ್ದವಿದ್ದರೆ ಕಿವಿಗೆ ಸೂಕ್ತವಲ್ಲ. ಆದರೆ ಖಾಸಗಿ ಬಳಕೆಯ ಶ್ರವಣ ಉಪಕರಣಗಳಲ್ಲಿ 105 ಡಿಬಿವರೆಗೆ ಯುವಕರು ಕೇಳುತ್ತಿದ್ದಾರೆ. ಇನ್ನು ಪಾರ್ಟಿಗಳಲ್ಲಿ 112 ಡಿಬಿಗಳವರೆಗೂ ಗಲಾಟೆ ಇರುತ್ತದೆ. ಹಾಗಾಗಿಯೇ ಯುವಜನತೆಯಲ್ಲಿ ಶ್ರವಣ ದೋಷ ಉಂಟಾಗಬಹುದೆಂಬ ಆತಂಕ ವ್ಯಕ್ತವಾಗುತ್ತಿದೆ.

ಹಾಗಾದರೆ ಖಾಸಗಿ ಬಳಕೆಯ ಹೆಡ್‌ ಫೋನ್‌ ಅಥವಾ ಇಯರ್‌ ಬಡ್‌ಗಳ ಬಗ್ಗೆ ತಜ್ಞರು ಹೇಳುವುದೇನು? “80ಕ್ಕೆ 80 ಎನ್ನುವ ನಿಯಮವನ್ನು ಎಲ್ಲರೂ ಕಡ್ಡಾಯ ಪಾಲಿಸಬೇಕು. ಅಂದರೆ ನಿಮ್ಮ ಇಯರ್‌ ಫೋನ್‌ನ ಗರಿಷ್ಠ ಸಾಮರ್ಥ್ಯದ ಶೇ. 80ರಷ್ಟು (ಅಂದಾಜು 85 ಡಿಬಿಯಷ್ಟು) ಧ್ವನಿಯಲ್ಲಿ ನೀವು ಕೇಳುತ್ತಿದ್ದೀರಿ ಎಂದಾದರೆ, ದಿನಕ್ಕೆ 80 ನಿಮಿಷ ಮಾತ್ರ ಇಯರ್‌ ಫೋನ್‌ ಉಪಯೋಗಿಸಬಹುದು. ಇದು ಗರಿಷ್ಠ ಸಮಯ.‌ ಹುಲ್ಲು ಕತ್ತರಿಸುವ ಲಾನ್‌ ಮೂವರ್ ಮಾಡುವಷ್ಟೇ ಗಲಾಟೆ ಇದರಿಂದ ಉಂಟಾಗುತ್ತದೆ. ಇದಕ್ಕಿಂತ ಹೆಚ್ಚು ಸಮಯ ಇಯರ್‌ ಫೋನ್‌ ಉಪಯೋಗಿಸುವ ಅನಿವಾರ್ಯತೆ ಇದ್ದರೆ, ವಾಲ್ಯೂಮ್‌ ಕಡಿಮೆ ಇಟ್ಟುಕೊಳ್ಳಿ. ಶೇ. 70ರಷ್ಟು ಇದ್ದರೆ, ಮನೆಯಲ್ಲಿ ಉಪಯೋಗಿಸುವ ವಾಷಿಂಗ್‌ ಮಷೀನ್‌ ಗದ್ದಕ್ಕೆ ಹೋಲಿಸಬಹುದು. ಹಾಗಾಗಿ ಕಡಿಮೆ ಇಟ್ಟಷ್ಟೂ ಕಿವಿಗೆ ಕ್ಷೇಮ. ಶೇ. 40ರಷ್ಟು ಇದ್ದರೆ ದಿನಕ್ಕೆ ಹಲವಾರು ಗಂಟೆಗಳ ಕಾಲ ಉಪಯೋಗಿಸಿದರೂ ಕಿವಿಗೆ ಹಾನಿಯಾಗುವುದಿಲ್ಲ”

ಹಾಗೆ ನೋಡಿದರೆ ಕಿವಿಗೆ ಕ್ಷೇಮ ಎನ್ನುವಂಥ ಹೆಡ್‌ ಫೋನ್‌ಗಳು ಇಲ್ಲವೇನೋ. ಯಾವುದೇ ಶಬ್ದವನ್ನು ಕಿವಿಯೊಳಗೆ ತುರುಕುವುದರಿಂದ ಅದರದ್ದೇ ಆದ ಸಮಸ್ಯೆ ಇದ್ದೇ ಇರುತ್ತದೆ. ಆದರೆ ಹೊರಗಿನ ಗದ್ದಲದಲ್ಲಿ ಸರಿಯಾಗಿ ಕೇಳುವುದಿಲ್ಲ ಎನ್ನುವ ಕಾರಣಕ್ಕಾಗಿ ಹೆಚ್ಚಿನ ಶಬ್ದ ಇರಿಸಿಕೊಳ್ಳುವುದು ಅನಿವಾರ್ಯ ಎಂದರೆ, ಹೊರಗಿನ ಗಲಾಟೆಯನ್ನು ಕೇಳದಂತೆ ಮಾಡುವ ಇಯರ್‌ ಫೋನ್‌ಗಳಿವೆ. ಇವುಗಳಲ್ಲಿ ಕಡಿಮೆ ವಾಲ್ಯೂಮ್‌ ಇದ್ದರೂ ಸ್ಪಷ್ಟವಾಗಿ ಕೇಳುವುದಕ್ಕೆ ಸಾಧ್ಯವಿದೆ. ಕೆಲವು ಸ್ಮಾರ್ಟ್‌ ಫೋನ್‌ ಅಥವಾ ಇಯರ್‌ ಬಡ್‌ಗಳು ವಾಲ್ಯೂಮ್‌ ಮಿತಿಮೀರಿದರೆ ಎಚ್ಚರಿಕೆ ಸಂದೇಶವನ್ನೂ ನೀಡುತ್ತವೆ. ಇಂಥವೆಲ್ಲ ಬಳಕೆದಾರರ ಶ್ರವಣ ಸಾಮರ್ಥ್ಯವನ್ನು ಕಾಪಾಡಲು ಉಪಯುಕ್ತ ಎನಿಸಬಹುದು.

ಇದನ್ನೂ ಓದಿ | Aindrila Sharma | ಬೆಂಗಾಲಿ ನಟಿ ಐಂದ್ರಿಲಾ ಶರ್ಮಾಗೆ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ

Exit mobile version