ಹುಟ್ಟಿದ ಮೇಲೆ ಜೀವಿತಾವಧಿಯಲ್ಲಿ ನೂರಾರು ತಲೆನೋವು ತಪ್ಪಿದ್ದಲ್ಲ ನಿಜ. ಆದರೆ, ತಲೆನೋವು ಎಂಬ ತೊಂದರೆಯನ್ನು ಜೀವನದಲ್ಲಿ ಅನುಭವಿಸದವರು ಇರಲಿಕ್ಕಿಲ್ಲ. ಪ್ರತಿಯೊಬ್ಬರೂ ತಲೆಶೂಲೆ ಅಥವಾ ತಲೆನೋವಿನ ಬಾಧೆಗೆ ಒಳಪಟ್ಟವರೇ. ತಲೆ ಇದ್ದ ಮೇಲೆ ತಲೆನೋವು ಬರದೇ ಇದ್ದೀತೇ ಎಂದು ತಮಾಷೆ ಮಾಡಿಕೊಳ್ಳುವಷ್ಟರರೆಗೆ ತಲೆನೋವು ಸಾಮಾನ್ಯ ಹಾಗೂ ಜನಜನಿತ. ಹಾಗಾಗಿಯೇ ತಲೆನೋವಿನ ಬಗೆಗೆ ಅಷ್ಟಾಗಿ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.
ಆದರೆ ಈ ತಲೆನೋವಿನ ಬಗೆಗೂ ಕೆಲವೊಮ್ಮೆ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ವರ್ಷದಲ್ಲಿ ಎಷ್ಟು ಬಾರಿ ಕಾಣಿಸಿಕೊಳ್ಳುತ್ತದೆ ಹಾಗೂ ಎಷ್ಟು ತೀವ್ರವಾಗಿ ಕಾಣಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಆಗಾಗ ತಲೆನೋವು ಕಾಣಿಸುತ್ತಿದೆಯಾದರೆ, ಖಂಡಿತವಾಗಿಯೂ ಏನಾದರೊಂದು ಮುಖ್ಯ ಕಾರಣವಿದ್ದಿರಬಹುದು. ಉದಾಹರಣೆಗೆ, ಒತ್ತಡ, ಯಾವುದಾದರೂ ಇಂದ್ರಿಯಗಳಲ್ಲಿ ಏನಾದರೂ ತೊಂದರೆಗಳು, ದೇಹದಲ್ಲಿ ನೀರಿನಂಶ ಕಡಿಮೆಯಾಗಿರುವುದು, ಹೈಪರ್ ಟೆನ್ಶನ್ ಮತ್ತಿತರ ಕಾರಣಗಳೂ ಇರಬಹುದು.
ಬಹಳಷ್ಟು ಮಂದಿಗೆ ತಲೆನೋವು ಎಂದರೆ ನಿಜವಾಗಿಯೂ ತಲೆನೋವೇ. ಏಕೆಂದರೆ ಇದು ಕೊಡುವ ಯಾತನೆ, ನೋವು, ಇನ್ನಾರಿಗೂ ಬೇಡ ಎನಿಸುವಷ್ಟು ಕಷ್ಟ ಈ ತಲೆನೋವು ಎಂದೆನಿಸುತ್ತದೆ. ತಲೆನೋವಿನಲ್ಲೂ ಹಲವು ಬಗೆಗಳಿವೆ. ಬಹಳಷ್ಟು ಮಂದಿಗೆ ತಲೆಯ ಒಂದು ಬದಿಯಿಂದ ನೋವು ತೀವ್ರವಾಗುತ್ತಾ, ಇನ್ನೊಂದು ಬದಿಯಲ್ಲಿ ಸಹಜವಾಗಿರುವಂತೆ ಇರುತ್ತದೆ. ಇನ್ನೂ ಕೆಲವರಿಗೆ ಮಧ್ಯರಾತ್ರಿಯಲ್ಲೆಲ್ಲೋ ಎಚ್ಚರವಾಗಿ ತಲೆ ವಿಪರೀತ ನೋವಾಗಬಹುದು. ಇನ್ನೂ ಕೆಲವರ ನೋವು ತಲೆಯಿಂದ ಶುರುವಾಗಿ ಕಣ್ಣು, ತಲೆಯ ಹಿಂಬದಿಯವರೆಗೆ ನೋಯಬಹುದು.
ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್ ಸ್ಕ್ರೀನ್ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ
೧. ಕ್ಲಸ್ಟರ್ ತಲೆನೋವು: ಈ ಪ್ರಕಾರದ ತಲೆನೋವು ಇದ್ದಕ್ಕಿದ್ದಂತೆ ಅತೀವ ನೋವಿನಿಂದ ಶುರುವಾಗುತ್ತದೆ. ಮಧ್ಯರಾತ್ರಿಯೂ ದಿಢೀರ್ ಆಗಿ ಕಾಣಿಸಬಹುದು ವರ್ತುಲಾಕಾರದಲ್ಲಿರುವ ಈ ತಲೆನೋವು ಬಹಳ ಸಾರಿ ಕಣ್ಣಿನ ಸುತ್ತ ಅಥವಾ ಹಣೆಯ ಒಂದು ಬದಿ ಮಾತ್ರ ಕಾಣಿಸಿಕೊಳ್ಳುತ್ತದೆ. ಇದು ತೀವ್ರ ಸ್ವರೂಪಕ್ಕೆ ಹೋದಾಗ ತಲೆಯಿಂದ ಇತರ ಭಾಗಗಳಿಗೂ ಎಳೆಯುವಂಥ ನೋವುಂಟಾಗುವ ಸಂಭವವಿದೆ.
೨. ಮೈಗ್ರೇನ್: ಇದು ಬಹಳ ಸಾಮಾನ್ಯವಾದ ತಲೆನೋವು. ಒಂದು ಭಾಗದ ತಲೆ ವಿಪರೀತ ನೋವಾಗುವುದು, ತೀವ್ರ ಶಬ್ದ, ಬೆಳಕಿನಿಂದ ತೀವ್ರ ಅಸಹನೆಯಾಗುವುದು, ತಲೆಸುತ್ತು ಇದರ ಲಕ್ಷಣಗಳು. ಇದರಿಂದ ಮೂಡ್ ಮೇಲೆ ಕೂಡಾ ಪರಿಣಾಮ ಬೀರುವುದು. ಕತ್ತು ಹಿಡಿದಂತಾಗುವುದು, ಮಲಬದ್ಧತೆ ಕೂಡಾ ಕೆಲವರಿಗೆ ಕಾಡಬಹುದು.
೩. ಒತ್ತಡದ ತಲೆನೋವು: ಅತಿಯಾದ ಕೆಲಸದ ಒತ್ತಡ, ಕೆಟ್ಟ ಹವಾಮಾನ, ಸಿಟ್ಟು, ಬೇಸರ ಇತ್ಯಾದಿಗಳಿಂದ ಉಂಟಾಗುವ ತಲೆನೋವು. ತಲೆಯ ಮೇಲೆ ಒತ್ತಡ ಇರುವಂತೆ ಅನುಭವವಾಗುವುದು, ಸಣ್ಣ ತಲೆನೋವಿನ ಅನುಭವವಿದು. ಕೆಲವೊಮ್ಮೆ ಒಂದರ್ಧ ಗಂಟೆ ತಲೆನೋವಾದರೆ, ಕೆಲವೊಮ್ಮೆ ದಿನಗಟ್ಟಲೆ ಅಥವಾ ವಾರವಿಡೀ ತಲೆನೋವೂ ಇರಬಹುದು. ಇದು ಪದೇ ಪದೇ ಆಗುತ್ತಿದ್ದರೆ ತೀವ್ರ ಸ್ವರೂಪಕ್ಕೂ ತಿರುಗಬಹುದು.
೪. ಹೈಪರ್‌ಟೆನ್ಶನ್ ತಲೆನೋವು: ಅಧಿಕ ರಕ್ತದೊತ್ತಡದ ಸಮಸ್ಯೆ ಇರುವ ಮಂದಿಗೆ ಬರುವ ತಲೆನೋವು ಇದು. ಇಂಥ ತಲೆನೋವು ಕೊಂಚ ಅಪಾಯಕಾರಿ. ರಕ್ತದೊತ್ತಡ ಸಮತೋಲನಕ್ಕೆ ಬಾರದಿದ್ದರೆ ಸಮಸ್ಯೆಯಾಗಬಹುದು. ಇಂತಹ ತಲೆನೋವಿನ ಸಮಸ್ಯೆಯಿರುವ ಮಂದಿಗೆ ಕಣ್ಣು ಮಂಜಾದಂತಾಗುವುದು, ಕೈಕಾಲುಗಳು ಜೋಮು ಹಿಡಿದಂತಾಗುವುದು, ಉಸಿರಾಡಲು ಕಷ್ಟವಾಗುವುದು, ಮೂಗಿನಲ್ಲಿ ರಕ್ತಸ್ರಾವದಂತಹ ಇತರ ಲಕ್ಷಣಗಳೂ ಇರಬಹುದು. ಇದ್ದಕ್ಕಿದ್ದಂತೆ ತೀವ್ರತರದ ತಲೆನೋವು ಕಾಣಿಸಿಕೊಂಡರೆ ಇಂಥವರು ಕೂಡಲೇ ವೈದ್ಯರನ್ನು ಕಾಣಬೇಕು.
ಇದನ್ನೂ ಓದಿ | Health Tips For Diabetes | ಮಧುಮೇಹ ಬಾರದಿರಲು ಈ ಆರು ಆಹಾರಗಳನ್ನು ಬಿಟ್ಟುಬಿಡಿ!
೫. ಔಷಧಿಯ ಅಡ್ಡ ಪರಿಣಾಮದ ತಲೆನೋವು: ಬಹಳಷ್ಟು ಔಷಧಿಗಳ ಅಡ್ಡ ಪರಿಣಾಮದಿಂದಲೂ ಕೆಲವೊಮ್ಮೆ ತಲೆನೋವು ಬರುತ್ತದೆ. ಪದೇ ಪದೇ ಈ ಬಗೆಯ ತಲೆನೋವು ಬರುತ್ತಿದೆ ಹಾಗೂ ಆ ಔಷಧಿಗಳನ್ನು ದಿನನಿತ್ಯ ಸೇವಿಸುವುದು ನಿಮಗೆ ಅತ್ಯಂತ ಮುಖ್ಯ ಅಂತಾದಲ್ಲಿ, ನಿಮ್ಮ ವೈದ್ಯರ ಜೊತೆಗೆ ಈ ಬಗ್ಗೆ ಮಾತನಾಡಿ ಪರ್ಯಾಯ ಉಪಾಯಗಳ ಬಗ್ಗೆ ಯೋಚಿಸಬಹುದು.
ಹಾಗಾದರೆ ಈ ತಲೆನೋವನ್ನು ಮನೆಯಲ್ಲೇ ಕೊಂಚ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಬಹುದು. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದಲೂ ತಲೆನೋವು ಬಂದಿರಬಹುದಾದ ಸಂಭವವಿರುವುದರಿಂದ ಹಾಕಷ್ಟು ನೀರು ಕುಡಿಯಿರಿ. ಮೆಗ್ನೀಷಿಯಂ ಹೆಚ್ಚಿರುವ ಆಹಾರಗಳಾದ ಬಾಳೆಹಣ್ಣು, ಅವಕಾಡೋ, ಡಾರ್ಕ್ ಚಾಕೋಲೇಟ್, ಮೀನು ಇತ್ಯಾದಿಗಳನ್ನು ತಿನ್ನಬಹುದು. ಆಲ್ಕೋಹಾಲ್ ಈ ಸಂದರ್ಭ ಕುಡಿಯದಿರುವುದು ಒಳ್ಳೆಯದು. ಒಳ್ಳೆಯ ನಿದ್ದೆ ಮಾಡಿ. ಕಾಫಿ ಕುಡಿಯುವುದರಿಂದಲೂ ಕೊಂಚ ಪರಿಸ್ಥಿತಿ ಸುಧಾರಿಸಬಹುದು. ಶುಂಠಿಯನ್ನು ಬಿಸಿನೀರಿಗೆ ತುರಿಉ ಹಾಕಿ ಕುಡಿಯುವುದರಿಂದಲೂ ಕೊಂಚ ಸಮಾಧಾನ ಸಿಗಬಹುದು. ಅರೋಮಾಥೆರಪಿಯ ಕೆಲವು ಎಸೆನ್ಶಿಯಲ್ ಆಯಿಲ್ ಬಳಕೆಯಿಂದಲೂ ಪರಿಹಾರ ಕಂಡುಕೊಳ್ಳಬಹುದು.