ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರ ಇರಿಸಬಹುದು ಎನ್ನುತ್ತದೆ ಜನಪ್ರಿಯ ಇಂಗ್ಲಿಷ್ ಗಾದೆ. ಸುಮ್ಮನೆ ಹೇಳುವುದಲ್ಲ, ಅಷ್ಟೊಂದು ಸತ್ವಗಳು ಸೇಬಿನಲ್ಲಿ ಇರುವುದರಿಂದಲೇ ಇಂಥ ಮಾತು ಹುಟ್ಟಿಕೊಂಡಿದ್ದು. ನೋಡುವುದಕ್ಕೆ ಆರ್ಷಕವಾಗಿರುವ, ತಿನ್ನುವುದಕ್ಕೂ ರುಚಿಯಾಗಿರುವ ಈ ಹಣ್ಣು, ಕಿಸೆಗೆ ತೂಕವಾಗಿದ್ದರೂ ಆರೋಗ್ಯಕ್ಕೆ ಬೇಕಾದಂಥದ್ದು. ದಿನಕ್ಕೊಂದಂತೂ ಖಂಡಿತ ತಿನ್ನಬಹುದಾದ ಈ ಹಣ್ಣಿನಲ್ಲಿ ಏನೆಲ್ಲಾ ಇವೆ ಸತ್ವಗಳು (Health benefits of apple) ಎನ್ನುವುದನ್ನು ನೋಡೋಣ
ಏನೆಲ್ಲಾ ಇದೆ ಸೇಬಿನಲ್ಲಿ?
ಒಂದು ಮಧ್ಯಮ ಗಾತ್ರದ ಸೇಬಿನಲ್ಲಿರುವ ಪೋಷಕಾಂಶಗಳನ್ನು ನೋಡಿದರೆ-95 ಕ್ಯಾಲರಿಗಳಲ್ಲಿ, 25 ಗ್ರಾಂ ಪಿಷ್ಟ, 19 ಗ್ರಾಂ ಸಕ್ಕರೆ, 4 ಗ್ರಾಂ ನಾರು, 0.5 ಗ್ರಾಂ ಪ್ರೊಟೀನ್ ದೊರೆಯಬಹುದು. ದಿನದಲ್ಲಿ ನಮಗೆ ಅಗತ್ಯವಾಗುವ ಉಳಿದ ಪೋಷಕಾಂಶಗಳಲ್ಲಿ ಶೇ. 14ರಷ್ಟು ವಿಟಮಿನ್ ಎ ಮತ್ತು ಸಿ, ಶೇ. 6ರಷ್ಟು ಪೊಟಾಶಿಯಂ, ಶೇ. 5ರಷ್ಟು ವಿಟಮಿನ್ ಕೆ, ವಿಟಮಿನ್ ಬಿ೬- 3%, ರೈಬೊಫ್ಲೆವಿನ್- 2% ರಷ್ಟು ದೊರೆಯಬಹುದು. ಇದಲ್ಲದೆ ಅಲ್ಪ ಪ್ರಮಾಣದಲ್ಲಿ ಮ್ಯಾಂಗನೀಸ್, ಮೆಗ್ನೀಶಿಯಂ, ಫೋಲೇಟ್, ಕ್ಯಾಲ್ಶಿಯಂ, ಕಬ್ಬಿಣ, ಫಾಸ್ಫರಸ್‌ಗಳು (Health benefits of apple) ದೊರೆಯುತ್ತವೆ.
ಪಚನಕಾರಿ
ನಮ್ಮ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡುವುದಕ್ಕೆ ನಾರು ಅಗತ್ಯವಾಗಿ ಬೇಕು. ಸೇಬಿನಲ್ಲಿ ಕರಗಬಲ್ಲ ಮತ್ತು ಕರಗದೇ ಇರುವಂಥ ನಾರುಗಳೆರಡೂ ಇವೆ. ಇದರಿಂದ ಜೀರ್ಣಾಂಗಗಳ ದಕ್ಷತೆ ಹೆಚ್ಚಿ, ಮಲಬದ್ಧತೆಯಂಥ ಸಮಸ್ಯೆಯನ್ನು ದೂರ ಮಾಡಲು ಸಾಧ್ಯವಾಗುತ್ತದೆ
ಹೃದಯಕ್ಕೆ ಒಳ್ಳೆಯದು
ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುವುದು ಆತಂಕವನ್ನೂ ಹೆಚ್ಚಿಸುತ್ತದೆ. ಸೇಬಿನಲ್ಲಿರುವ ಕರಗಬಲ್ಲಂಥ ನಾರುಗಳು ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಾಧ್ಯತೆಯನ್ನು ಹೊಂದಿವೆ. ಈ ನಿಟ್ಟಿನಲ್ಲಿ ಕೆಂಬಣ್ಣದ ಸೇಬುಗಳು ಹೆಚ್ಚು ಸಹಾಯಕ ಎನ್ನುತ್ತವೆ ಕೆಲವು ಅಧ್ಯಯನಗಳು.
ಉತ್ಕರ್ಷಣ ನಿರೋಧಕಗಳು
ದೇಹದಲ್ಲಿ ಅಂಡಲೆಯುವ ಮುಕ್ತ ಕಣಗಳನ್ನು ನಿರ್ಬಂಧಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯ. ಬೇಡದ ರೋಗಗಳನ್ನು ಆಹ್ವಾನಿಸುವುದರಲ್ಲಿ ಇವುಗಳದ್ದು ದೊಡ್ಡ ಪಾಲು. ಇಂಥವುಗಳನ್ನು ನಿಯಂತ್ರಿಸಲು ಉತ್ಕರ್ಷಣ ನಿರೋಧಕಗಳು ಬೇಕು. ಸೇಬಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಈ ದಿಸೆಯಲ್ಲಿ ಆರೋಗ್ಯಕ್ಕೆ ನೆರವಾಗುತ್ತವೆ
ತೂಕ ಇಳಿಕೆ
ನಾರು ಹೆಚ್ಚಿರುವಂಥ ಆಹಾರಗಳು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಬಲ್ಲವು. ಇದರಿಂದ ಆಗಾಗ ಕಾಡುವ ಹಸಿವನ್ನು ನಿಯಂತ್ರಿಸಲು ಸಾಧ್ಯವಿದೆ. ತೂಕ ಇಳಿಸಲು ಉತ್ಸುಕರಾಗಿರುವವರಿಗೆ ಇಂಥ ಆಹಾರಗಳು ಗುರಿ ತಲುಪಲು ನೆರವಾಗಬಲ್ಲವು.
ಮೂಳೆಗಳಿಗೆ ಬಲ
ಎಲುಬುಗಳಿಗೆ ಶಕ್ತಿ ತುಂಬುವ ಆಹಾರಗಳೆಂದರೆ ಹೆಚ್ಚಿನ ಕ್ಯಾಲ್ಶಿಯಂ ಅಥವಾ ವಿಟಮಿನ್ ಡಿ೩ ಇರುವಂಥ ಆಹಾರಗಳೆಂದೇ ಪ್ರತೀತಿ. ಆದರೆ ಸೇಬಿನಲ್ಲಿರುವ ಬೋರಾನ್‌ನಂಥ ಸತ್ವಗಳು ಸಹ ಮೂಳೆಗಳಿಗೆ ಶಕ್ತಿ ಒದಗಿಸಬಲ್ಲವು.
ಮಧುಮೇಹ ನಿಯಂತ್ರಣ
ಸೇಬು ಹಣ್ಣಿನಲ್ಲಿರುವ ನಾರು ಮತ್ತು ಉತ್ಕರ್ಷಣ ನಿರೋಧಕಗಳು ಟೈಪ್-2 ಮಧುಮೇಹದ ಭೀತಿಯನ್ನು ದೂರ ಮಾಡಬಲ್ಲವು. ಅಂದರೆ, ಮಧುಮೇಹಿಗಳು ಸಹ ಮಿತವಾಗಿ ಇದನ್ನು ಸೇವಿಸಬಹುದು.
ಚರ್ಮದ ರಕ್ಷಣೆ
ಇದರಲ್ಲಿರುವ ವಿಟಮಿನ್ ಸಿ ಸತ್ವದಿಂದಾಗಿ ಕೊಲಾಜಿನ್ ಉತ್ಪಾದನೆಗೆ ಪ್ರಚೋದನೆ ದೊರೆಯುತ್ತದೆ. ಕೊಲಾಜಿನ್ ಹೆಚ್ಚಾದಂತೆ ಚರ್ಮದ ಹಿಗ್ಗುವ ಸಾಮರ್ಥ್ಯ ಹೆಚ್ಚುತ್ತದೆ. ಸುಕ್ಕುಗಳು ಕಡಿಮೆಯಾಗಿ, ವಯಸ್ಸಾದಂತೆ ಕಾಣುವುದೂ ಕಡಿಮೆಯಾಗುತ್ತದೆ. ಸೇಬಿನಂತೆ ಕೆಂಪಗಿದ್ದಾರೆ ಎಂಬ ಉಪಮೆಯೇ ಸಾಲದೇ ಒಬ್ಬರ ಚಂದ ವರ್ಣಿಸಲು!
ಶ್ವಾಸಕೋಶದ ಬಲವೃದ್ಧಿ
ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಶ್ವಾಸಕೋಶದ ಬಲವನ್ನೂ ಹಿಗ್ಗಿಸುತ್ತವೆ ಎನ್ನುತ್ತವೆ ಅಧ್ಯಯನಗಳು. ಜೊತೆಗೆ ಸೇಬಿನಲ್ಲಿ ನೀರಿನ ಅಂಶ ಹೆಚ್ಚಿದ್ದು, ಶರೀರವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ದೇಹಕ್ಕೆ ನೀರು ಸಾಕಷ್ಟು ಸಿಕ್ಕಿದಾಗ, ಬಿಗಿದ ಶ್ವಾಸಕೋಶಗಳು ಸಡಿಲವಾಗಿ, ಕಫ ಹೊರಹೋಗುವುದಕ್ಕೆ ಸಹಾಯವಾಗುತ್ತದೆ.
ಇದನ್ನೂ ಓದಿ: Cinnamon Health Benefits: ದಾಲ್ಚಿನ್ನಿಯಲ್ಲಿದೆ ಚಿನ್ನದಂಥಾ ಆರೋಗ್ಯಕಾರಿ ಗುಣ!