Site icon Vistara News

Health Benefits Of Coriander: ಕೊತ್ತಂಬರಿ ಬೀಜ, ಸೊಪ್ಪುಗಳ ಪ್ರಯೋಜನ ಎಷ್ಟೊಂದು!

Health Benefits Of Coriander

ಪುಳಿಯೋಗರೆ, ತಿಳಿಸಾರು, ಸಾಂಬಾರ್‌ಗಳಿಂದ ಹಿಡಿದು ಉತ್ತರ ಭಾರತೀಯ ಶೈಲಿಯ ಗ್ರೇವಿಗಳವರೆಗೆ ಎಲ್ಲದಕ್ಕೂ ಧನಿಯಾ ಬೇಕು. ಇವು ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸುವುದಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ (Health Benefits of Coriander) ಬಹುವಿಧದಲ್ಲಿ ಉಪಕಾರಿ. ಅಂದರೆ ಇದು ಮಸಾಲೆ ಪದಾರ್ಥವಾಗಿ ಉಪಯೋಗವಾದಷ್ಟೇ ಮೂಲಿಕೆಯಾಗಿಯೂ ಬಳಕೆಯಲ್ಲಿದೆ.

ಧನಿಯಾ ಅಥವಾ ಕೊತ್ತಂಬರಿ ಬೀಜ ಎಂದೇ ಕರೆಸಿಕೊಳ್ಳುವ ಈ ಸಣ್ಣ ಮಸಾಲೆ ವಸ್ತು ಇಲ್ಲದಿದ್ದರೆ ಭಾರತೀಯ ಅಡುಗೆ ಮನೆಗಳು ನಡೆಯುವುದೇ ಕಷ್ಟ. ಭಾರತದಲ್ಲಿರುವ ವೈವಿಧ್ಯಮಯ ಸಂಸ್ಕೃತಿಗಳಿಗೆ ಹೋಲಿಸಿದರೆ, ಬಹುತೇಕ ಎಲ್ಲಾ ರಾಜ್ಯಗಳ ಅಡುಗೆ ಮನೆಗಳಲ್ಲಿ ಕೊತ್ತಂಬರಿ ಬೀಜಗಳಿಗೆ (Health Benefits of Coriander) ಸ್ಥಾನವಿದೆ. ಪುಳಿಯೋಗರೆ, ತಿಳಿಸಾರು, ಸಾಂಬಾರ್‌ಗಳಿಂದ ಹಿಡಿದು ಉತ್ತರ ಭಾರತೀಯ ಶೈಲಿಯ ಗ್ರೇವಿಗಳವರೆಗೆ ಎಲ್ಲದಕ್ಕೂ ಧನಿಯಾ ಬೇಕು. ಇವು ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸುವುದಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಬಹುವಿಧದಲ್ಲಿ ಉಪಕಾರಿ. ಅಂದರೆ ಇದು ಮಸಾಲೆ ಪದಾರ್ಥವಾಗಿ ಉಪಯೋಗವಾದಷ್ಟೇ ಮೂಲಿಕೆಯಾಗಿಯೂ ಬಳಕೆಯಲ್ಲಿದೆ. ಏನಂಥ ಸದ್ಗುಣಗಳಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಪ್ರಾಚೀನ ಕಾಲದಲ್ಲಿ ಕೆಲವು ಐರೋಪ್ಯ ಸಂಸ್ಕೃತಿಗಳಲ್ಲಿ ಜೀರ್ಣಾಂಗಗಳ ಸಮಸ್ಯೆಗಳ ಪರಿಹಾರಕ್ಕೆ ಈ ಮೂಲಿಕೆ ಅಥವಾ ಮಸಾಲೆಯ ಬಳಕೆ ಜಾರಿಯಲ್ಲಿತ್ತು ಎಂದು ಹೇಳಲಾಗುತ್ತದೆ. ಬ್ರೆಡ್‌ನ ಘಮ ಹೆಚ್ಚಿಸುವುದಕ್ಕೆ ಈ ಬೀಜದ ಪುಡಿಗಳನ್ನು ಬಳಸುತ್ತಿದ್ದರೆ, ಉದ್ಯಾನವನಗಳಲ್ಲಿ ತಾಜಾತನ ತರುವುದಕ್ಕೆ ಸುವಾಸನೆ ಭರಿತ ಕೊತ್ತಂಬರಿ ಸೊಪ್ಪುಗಳನ್ನು ಬೆಳೆಯಲಾಗುತ್ತಿತ್ತಂತೆ. ಏಷ್ಯಾ ಖಂಡದ ಹಲವು ರಾಷ್ಟ್ರಗಳಲ್ಲಿ ಸುದೀರ್ಘಕಾಲದಿಂದ ಇದರ ಬಳಕೆಯಿದೆ. ಬ್ಯಾಬಿಲೋನ್‌ ನಾಗರಿಕತೆಯ ದಿನಗಳಷ್ಟು ಪ್ರಾಚೀನ ಕಾಲದಲ್ಲೇ ಧನಿಯಾ (Health Benefits of Coriander) ಔಷಧಿಯಾಗಿ ಬಳಕೆಯಲ್ಲಿತ್ತು ಎನ್ನುತ್ತವೆ ಇತಿಹಾಸದ ಪುಟಗಳು.

ಕೊಲೆಸ್ಟ್ರಾಲ್‌ ನಿಯಂತ್ರಣ

ಇದರಲ್ಲಿರುವ ಉತ್ಕೃಷ್ಟ ನೈಸರ್ಗಿಕ ಸತ್ವಗಳು ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ನೆರವು ನೀಡುತ್ತವೆ. ಜೊತೆಗೆ ನಾರಿನಂಶ ಭರಪೂರ ಇರುವುದರಿಂದ ಜೀರ್ಣಾಂಗಗಳನ್ನೂ ಸುವ್ಯವಸ್ಥಿತಗೊಳಿಸಿ, ಕೆಟ್ಟ ಕೊಬ್ಬು ಜಮೆಯಾಗದಂತೆ ತಡೆಯುತ್ತದೆ. ಇದರಲ್ಲಿರುವ ಫೈಟೊಸ್ಟೆರಾಲ್‌ಗಳು ಕರುಳಿನಲ್ಲಿ ಕೊಲೆಸ್ಟ್ರಾಲ್‌ ಹೀರಿಕೊಳ್ಳದಂತೆ ತಡೆಯುವ ಗುಣವನ್ನು ಹೊಂದಿವೆ. ಇದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್‌ ಸೇರುವುದನ್ನು ತಡೆಯಲು ಸಾಧ್ಯವಿದೆ. ಹಾಗಾಗಿ ಹೃದಯದ ಆರೋಗ್ಯಕ್ಕಿದು ಒಳ್ಳೆಯ ಸಂಗಾತಿ.

ಮಧುಮೇಹ ಹತೋಟಿ

ನಿಯಮಿತವಾಗಿ ಧನಿಯಾ ಬಳಸುವುದು ಇನ್ಸುಲಿನ್‌ ಉತ್ಪತ್ತಿಯನ್ನು ಪ್ರಚೋದಿಸುತ್ತದೆ ಎನ್ನುತ್ತವೆ ಅಧ್ಯಯನಗಳು. ಮಧುಮೇಹದ ಔಷಧಿ ಸೇವಿಸುವವರು ಮನೆಮದ್ದಾಗಿ ಧನಿಯಾ ಬಳಸುವ ಮುನ್ನ ವೈದ್ಯರ ಸಲಹೆ ಕೇಳುವುದು ಉತ್ತಮ.

ಉತ್ಕರ್ಷಣ ನಿರೋಧಕಗಳು

ಇದರಲ್ಲಿ ಹಲವಾರು ಪ್ರಬಲ ಉತ್ಕರ್ಷಣ ನಿರೋಧಕಗಳಿದ್ದು, ಮಾರಕ ರೋಗಗಳನ್ನು ದೂರ ಮಾಡುವಲ್ಲಿ ಪರಿಣಾಮಕಾರಿಯಾಗಿವೆ. ದೇಹದಲ್ಲಿ ಉರಿಯೂತ ತಗ್ಗಿಸುವುದೇ ಅಲ್ಲದೆ, ಹಲವು ರೀತಿಯ ಕ್ಯಾನ್ಸರ್‌ ಕೋಶಗಳ ಬೆಳವಣಿಗೆಯನ್ನು ತಡೆಯುವಲ್ಲಿ ಪರಿಣಾಮಕಾರಿ ಎಂಬುದನ್ನು ಅಧ್ಯಯನಗಳು ತಿಳಿಸಿವೆ. ಇದೇ ಕಾರಣದಿಂದ ರೋಗಗಳ ವಿರುದ್ಧ, ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನೂ ಹೊಂದಿದೆ.

ಮೆದುಳಿನ ಆರೋಗ್ಯಕ್ಕೆ ಪೂರಕ

ಉರಿಯೂತದ ಕಾರಣದಿಂದ ಅಮರಿಕೊಳ್ಳುವ ಬಹಳಷ್ಟು ರೋಗಗಳನ್ನು ದೂರ ಇರಿಸಬಲ್ಲವು ಈ ಬೀಜಗಳು. ಮರೆವಿನ ಖಾಯಿಲೆ ಎಂದೇ ಕರೆಸಿಕೊಳ್ಳುವ ಅಲ್‌ಜೈಮರ್ಸ್‌, ಪಾರ್ಕಿನ್ಸನ್‌ ಮುಂತಾದವುಗಳಿಂದ ಮೆದುಳನ್ನು ಕಾಪಾಡಬಲ್ಲದು. ನೆನಪಿನ ಶಕ್ತಿಯನ್ನು ಪ್ರಚೋದಿಸಿ, ನರಸಂವೇದಕಗಳನ್ನು ಆರೋಗ್ಯಯುತವಾಗಿ ಇರಿಸಬಲ್ಲದು.

ಜೀರ್ಣಾಂಗಗಳು ಕ್ಷೇಮ

ಅಜೀರ್ಣದ ತೊಂದರೆಯಿಂದಾಗಿ ಉದ್ಭವಿಸುವ ಹೊಟ್ಟೆಯುಬ್ಬರ, ಹೊಟ್ಟೆ ನೋವು ಮುಂತಾದ ಉದರದ ತೊಂದರೆಗಳನ್ನು ನಿವಾರಿಸುವಲ್ಲಿ ಇದು ಉತ್ತಮ ಮದ್ದಾಗಿದೆ. ಇದರಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಮಲಬದ್ಧತೆ ನಿವಾರಣೆಯಲ್ಲಿ ಇರು ಪರಿಣಾಮಕಾರಿ. ಈ ಮೂಲಕ ಜೀರ್ಣಾಂಗಗಳ ಆರೋಗ್ಯವನ್ನು ಇದು ಸುಧಾರಿಸುತ್ತದೆ

ಚರ್ಮದ ಕಾಂತಿಗೆ

ಡರ್ಮಟೈಟಿಸ್‌ನಂಥ ತೊಂದರೆಗಳಿಗೂ ಇದು ಪರಿಹಾರ ಒದಗಿಸಬಲ್ಲದು. ಆದರೆ ಮುಖ್ಯವಾಗಿ ಇದರ ಬಳಕೆ ಉಪಯುಕ್ತ ಎನಿಸುವುದು ಚರ್ಮ ಸುಕ್ಕುಗಳನ್ನು ತಡೆಯಲು. ಕೊತ್ತಂಬರಿ ಸೊಪ್ಪಿನ ಲೇಪವನ್ನು ಮೊಡವೆ ಮತ್ತು ಕಪ್ಪು ಕಲೆಗಳನ್ನು ತಡೆಯಲು ಉಪಯೋಗ ಮಾಡಲಾಗುತ್ತದೆ. ಸೂರ್ಯನ ಬಿಸಿಲಿನಿಂದ ಆದ ಹಾನಿಯನ್ನು ಶಮನ ಮಾಡಲೂ ಇದು ಉಪಯುಕ್ತವಾಗಬಹುದು.

ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!

Exit mobile version