Site icon Vistara News

Health Benefits Of Jaggery: ಬೆಲ್ಲ ಉಳಿದ ಆಹಾರದಂಥಲ್ಲ; ಇದರ ಲಾಭಗಳು ಏನೇನು ತಿಳಿದುಕೊಂಡಿರಿ

Health Benefits Of Jaggery

ಬೆಲ್ಲವನ್ನು ಯಾವುದೇ ರೂಪದಲ್ಲಿ, ಅಂದರೆ ಅಚ್ಚು, ಪುಡಿ, ಜೋನಿ ಮುಂತಾದ ಯಾವುದೇ ರೂಪದಲ್ಲಿ ಸೇವಿಸಿದರೂ ಲಾಭವಿದೆ. ಖಾದ್ಯದ ರುಚಿ ಹೆಚ್ಚುವುದು ಮಾತ್ರವೇ ಅಲ್ಲ, ಆರೋಗ್ಯಕ್ಕೂ ಹಲವಾರು ಪ್ರಯೋಜನಗಳಿವೆ. ಅತಿ ಕಡಿಮೆ ಸಂಸ್ಕರಣೆಗೆ ಒಳಗಾಗುವ ಬೆಲ್ಲದಲ್ಲಿ ಅತಿ ಹೆಚ್ಚಿನ ಖನಿಜಗಳು ಕಂಡುಬರುತ್ತವೆ. ಬೆಲ್ಲದ ಸವಿಯನ್ನು ತಿಂದವನೇ ಬಲ್ಲ. ನೈಸರ್ಗಿಕ ಸಿಹಿ ಎಂದೇ ಖ್ಯಾತವಾದ ಈ ಬೆಲ್ಲ ಪೊಂಗಲ್‌, ಪಾಯಸದಂಥ ಸಿಹಿತಿಂಡಿಗಳಿಗೆ ಅಥವಾ ಎಳ್ಳಿನೊಂದಿಗೆ ಹಂಚುವುದಕ್ಕೆ ಮಾತ್ರವೇ ಬಳಸುವುದಲ್ಲ. ಶತಮಾನಗಳಿಂದ ಭಾರತೀಯ ಅಡುಗೆ ಮನೆಗಳಲ್ಲಿ ಖಾದ್ಯಗಳನ್ನು ರುಚಿಗಟ್ಟಿಸುತ್ತಲೇ ಬಂದಿದೆ. ಒದ್ದೆ ಮಣ್ಣಿನ ಪರಿಮಳದಂಥ ಘಮವನ್ನು ಹೊಂದಿದ ಈ ಸಿಹಿಯ ಮೂಲ ಕಬ್ಬು. ಸಕ್ಕರೆಯಂತೆ ತರಹೇವಾರಿ ಸಂಸ್ಕರಣೆಗಳಿಗೆ ಒಳಗಾಗದೆ, ಆಲೆಮನೆಗಳಲ್ಲಿ ಸರಳವಾಗಿ ಕಣ್ಣೆದುರಿಗೇ ತಯಾರಾಗುವ ಬೆಲ್ಲದ ಬಗ್ಗೆ ಸಿಹಿ ಪ್ರಿಯರಿಗೆ ಕೊಂಚ ಹೆಚ್ಚೇ ಮೋಹ. ಬೆಲ್ಲ ಖಾದ್ಯದ ರುಚಿ ಹೆಚ್ಚುವುದು ಮಾತ್ರವೇ ಅಲ್ಲ, ಆರೋಗ್ಯಕ್ಕೂ ಹಲವಾರು ಪ್ರಯೋಜನಗಳಿವೆ. ಆಯುರ್ವೇದ ಮತ್ತು ಪರಂಪರಾಗತ ಔಷಧಪ್ರಕಾರಗಳಲ್ಲಿ ಬೆಲ್ಲ ಹಲವು ಮದ್ದುಗಳಲ್ಲಿ ಬಳಕೆಯಾಗುತ್ತದೆ. ಅತಿ ಕಡಿಮೆ ಸಂಸ್ಕರಣೆಗೆ ಒಳಗಾಗುವ ಬೆಲ್ಲದ ಸ್ವರೂಪಗಳಲ್ಲಿ ಅತಿ ಹೆಚ್ಚಿನ ಖನಿಜಗಳು ಕಂಡುಬರುತ್ತವೆ. ಕಬ್ಬಿಣ, ಮ್ಯಾಂಗನೀಸ್‌, ಪೊಟಾಶಿಯಂ ಮತ್ತು ಹಲವು ಬಗೆಯ ಬಿ ಜೀವಸತ್ವಗಳು ಬೆಲ್ಲದಲ್ಲಿವೆ. ಇವೆಲ್ಲವೂ ಆರೋಗ್ಯದ (Health Benefits Of Jaggery) ಗುಣಮಟ್ಟವನ್ನು ಸುಧಾರಿಸಬಲ್ಲವು.

ಉರಿಯೂತ ಶಮನ

ಸಿಹಿಯನ್ನು ತಿಂದರೆ ಉರಿಯೂತ ಹೆಚ್ಚುವ ಎನ್ನುವುದು ಸತ್ಯ. ಆದರೆ ಶ್ವಾಸನಾಳಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು, ಇದರಿಂದ ಉಂಟಾಗುವ ಅಸ್ತಮಾದಂಥ ಸಮಸ್ಯೆ ಹೆಚ್ಚದಂತೆ ಮಾಡಲು ಇದು ಪ್ರಯೋಜನವಾದೀತು. ಇದರಲ್ಲಿರುವ ಸೆಲೆನಿಯಂ ಮತ್ತು ಕಬ್ಬಿಣದ ಅಂಶಗಳು ರಕ್ತದಲ್ಲಿನ ಹಿಮೊಗ್ಲೋಬಿನ್‌ ಮಟ್ಟವನ್ನು ಸುಧಾರಿಸಿ, ಈ ಮೂಲಕ ಆಮ್ಲಜನಕದ ಪ್ರಮಾಣವನ್ನು ವೃದ್ಧಿಸುತ್ತವೆ

ಸೂಕ್ಷ್ಮ ಸತ್ವಗಳು

ಇದರಲ್ಲಿರುವ ಪೊಟಾಶಿಯಂ ರಕ್ತದೊತ್ತಡ ಶಮನಕ್ಕೆ ನೆರವಾದರೆ, ಮೆಗ್ನೀಶಿಯಂ ಸ್ನಾಯುಗಳಿಗೆ ಬಲ ತುಂಬಬಲ್ಲದು. ಕ್ಯಾಲ್ಸಿಯಂ ಮೂಳೆಗಳನ್ನು ಸದೃಢ ಮಾಡಿದರೆ, ಜಿಂಕ್‌ ಅಂಶವು ಪ್ರತಿರೋಧಕತೆಯನ್ನು ಹೆಚ್ಚಿಸಬಲ್ಲದು. ದೇಹದಿಂದ ಕಶ್ಮಲಗಳನ್ನು ತೆಗೆಯುವ ಮತ್ತು ಮಲಬದ್ಧತೆ ನಿವಾರಿಸುವ ಗುಣವೂ ಬೆಲ್ಲಕ್ಕಿದೆ. ಜೀರ್ಣಾಂಗಗಳನ್ನು ಶುದ್ಧಗೊಳಿಸಿ, ಪಚನಕ್ರಿಯೆಯನ್ನು ಉದ್ದೀಪಿಸುತ್ತದೆ.

ಪ್ರತಿರೋಧಕತೆ ಚುರುಕು

ಬೆಲ್ಲದಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಉರಿಯೂತ ಶಮನಕ್ಕೆ ನೆರವಾಗಬಲ್ಲವು. ಜೊತೆಗೆ ಇದರಲ್ಲಿರುವ ಸತು ಮತ್ತು ಸೆಲೆನಿಯಂ ಅಂಶಗಳು ರೋಗ ನಿರೋಧಕತೆಯನ್ನು ಚುರುಕಾಗಿಸುತ್ತವೆ. ಹಾಗಾಗಿ ಚಳಿಗಾಲದ ಹಬ್ಬ ಸಂಕ್ರಾಂತಿಯಲ್ಲಿ ಎಳ್ಳಿನೊಂದಿಗೆ ಬೆಲ್ಲದ ಬಳಕೆಯೂ ಇರುವುದು ಗಮನಾರ್ಹ.

ರಕ್ತಹೀನತೆಗೆ

ಬೆಲ್ಲದಲ್ಲಿ ಕಬ್ಬಿಣದ ಸತ್ವ ಹೇರಳವಾಗಿ ಇರುವುದರಿಂದ ದೇಹದಲ್ಲಿನ ರಕ್ತಹೀನತೆ ಗುಣಕಾಣಲು ನೆರವಾಗುತ್ತದೆ. ದೇಹದಲ್ಲಿನ ಹಿಮೋಗ್ಲೋಬಿನ್‌ ಮಟ್ಟವನ್ನಿದು ಸುಧಾರಿಸುತ್ತದೆ. ಇದರ ಪಿತ್ತ ಸಮತೋಲನದ ಗುಣಗಳಿಂದಾಗಿ ಆಯುರ್ವೇದದಲ್ಲಿ ಔಷಧವಾಗಿಯೂ ಇದು ಬಳಕೆಯಲ್ಲಿದೆ.

ಸಕ್ಕರೆಯಂಶ ನಿಯಂತ್ರಣ

ಸಿಹಿ ತಿಂದರೆ ಸಕ್ಕರೆಯ ಮಟ್ಟ ಏರುಪೇರಾಗುವುದು ನಿಜ. ಆದರೆ ಸಂಸ್ಕರಿತ ಬಿಳಿ ಸಕ್ಕರೆಯಷ್ಟು ಬೆಲ್ಲ ಹಾಳಲ್ಲ. ಬಿಳಿ ಸಕ್ಕರೆಗಿಂತ ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ. ಹಾಗಾಗಿ ರಕ್ತದಲ್ಲಿನ ಸಕ್ಕರೆಯಂಶವು ದಿಢೀರ್‌ ಏರುಪೇರಾಗುವ ಸಾಧ್ಯತೆ ಸಕ್ಕರೆಗಿಂತ ಬೆಲ್ಲದಲ್ಲಿ ಕಡಿಮೆ. ಹಾಗೆಂದು ಮಧುಮೇಹಿಗಳಾದರೆ ಬೆಲ್ಲವನ್ನೇ ಸೇವಿಸಿದರೂ ಮಿತಿ ಹೇರಿಕೊಳ್ಳುವುದು ಅಗತ್ಯ.

ಶಕ್ತಿ ಹೆಚ್ಚು

ಬಿಸಿಲಿನಲ್ಲಿ ದಣಿದು ಬಂದಿದ್ದೀರಿ ಅಥವಾ ವ್ಯಾಯಾಮದ ನಂತರ ಬೆವರು ಹರಿಸುತ್ತಾ ಕುಳಿತಿದ್ದೀರಿ. ಇಂಥ ಯಾವುದೇ ದಣಿದಂಥ ಸನ್ನಿವೇಶಗಳಲ್ಲೂ ಬೆಲ್ಲದ ನೀರು ಅಥವಾ ಬೆಲ್ಲದ ಪಾನಕದ ಸೇವನೆಯು ದೇಹಕ್ಕೆ ಶಕ್ತಿ ನೀಡಬಲ್ಲದು, ಚೈತನ್ಯ ಹೆಚ್ಚಿಸಬಲ್ಲದು. ಹಳೆಯ ತಲೆಮಾರಿನವರು ತೀವ್ರ ದಣಿದಾಗ ಉಪಯೋಗಿಸುತ್ತಿದ್ದ ʻಎನರ್ಜಿ ಡ್ರಿಂಕ್‌ʼ ಎಂದರೆ ಬೆಲ್ಲದ ಪಾನಕವೇ. ಯಾವುದೇ ಕೃತಕ ಸಿಹಿಗಳಿಲ್ಲದ ಖನಿಜಭರಿತ ನೈಸರ್ಗಿಕ ಸಿಹಿ ಪೇಯ ಯಾವಾಗಲೂ ಕ್ಷೇಮ, ಆರೋಗ್ಯಕರ.

ಇದನ್ನೂ ಓದಿ: Cervical Cancer: ಮಹಿಳೆಯರ ಗರ್ಭಕಂಠದ ಕ್ಯಾನ್ಸರ್‌; ಪುರುಷರಿಗೂ ಇದೆ ಅಪಾಯ!

ಮಹಿಳೆಯರಿಗೆ ಉತ್ತಮ

ಇದರಲ್ಲಿರುವ ಕಬ್ಬಿಣದ ಅಂಶವು ಮುಟ್ಟಿನ ದಿನಗಳ ಹೊಟ್ಟೆನೋವನ್ನು ಶಮನ ಮಾಡುವ ಗುಣ ಹೊಂದಿದೆ. ಜೊತೆಗೆ ಆ ದಿನಗಳಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ನೀಡಿ, ಮೂಡ್‌ ಏರುಪೇರಾಗುವುದನ್ನು ತಡೆಯುತ್ತದೆ. ಜೊತೆಗೆ, ಇದರಲ್ಲಿರುವ ಕ್ಯಾಲ್ಶಿಯಂ, ಫಾಸ್ಫರಸ್‌ ಮತ್ತು ಮೆಗ್ನೀಶಿಯಂ ಅಂಶಗಳು ಮೂಳೆಗಳು ಟೊಳ್ಳಾಗದಂತೆ ತಡೆದು, ಆಸ್ಟಿಯೊಪೊರೊಸಿಸ್‌ ಬಾರದಂತೆ ಕಾಪಾಡುತ್ತವೆ.

Exit mobile version