Site icon Vistara News

Health Benefits of Mango Leaves: ಮಾವಿನೆಲೆಗಳು ತೋರಣ ಕಟ್ಟಲಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು!

Health Benefits of Mango Leaves

ಇದು ಮಾವಿನ ಕಾಲ. ಹಾಗೆನ್ನುತ್ತಿದ್ದಂತೆ ಮಾವಿನ ಹಣ್ಣಿನ ಘಮ್ಮೆನ್ನುವ ಪರಿಮಳ, ರುಚಿಯೆಲ್ಲ ನೆನಪಾಗಿ ಬಾಯಲ್ಲಿ ನೀರೂರುತ್ತದೆ. ಮಾವಿನ ಹಣ್ಣಿಗಾದರೆ ಇದೊಂದೇ ಋತುವಿಗೆ ಕಾಯಬೇಕು. ಆದರೆ ಮಾವಿನ ಎಲೆಗಳ ಉಪಯೋಗಕ್ಕೆ ವರ್ಷವಿಡೀ ಒಳ್ಳೆಯ ಕಾಲ. ಆದರೆ ಹಣ್ಣಿಗಿರುವ ಉಪಯೋಗ ಮಾವಿನ ಎಲೆಗಳಿಗೆ ಇಲ್ಲವಲ್ಲ. ಹಾಗಿರುವಾಗ ವರ್ಷವಿಡೀ ಎಲೆ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಯೋಚಿಸಬೇಡಿ. ಮಾವಿನ ಎಲೆಗಳಲ್ಲಿ ಉಪ್ಪಿನಕಾಯಿ ಹಾಕುವುದೋ ಸೀಕರಣೆ ಮಾಡುವುದೋ ಆಗದಿದ್ದರೂ, ಅದಕ್ಕೂ ತನ್ನದೇ ಆದ ಉಪಯೋಗಗಳಿವೆ. ಏನವು Health (Benefits of Mango Leaves) ಎಂಬುದನ್ನು ಗಮನಿಸೋಣ. ಮಾವಿನೆಲೆ ಎನ್ನುತ್ತಿದ್ದಂತೆ ತೋರಣಗಳೇ ನೆನಪಾಗುತ್ತವೆ ನಮಗೆ. ಮನೆಯಲ್ಲಿ ಯಾವುದೇ ಶುಭಕಾರ್ಯವಿದ್ದರೂ ಒಂದು ಮಾವಿನ ತೋರಣ, ಹಸಿರು ಚಪ್ಪರ ಆಗಲೇ ಬೇಕು. ಹಬ್ಬವಾಗಲೀ ಹರಿದಿನವಾಗಲಿ, ಮಾವಿನ ತೋರಣವಿದ್ದರೆ ಶೋಭೆ. ಕಳಶಗಳಿಗೆ ಮಾವಿನೆಲೆ ಬೇಕು. ಯಾವುದೋ ದೇವರ ಪ್ರತಿಷ್ಠಾಪನೆ, ಪೂಜೆ ಇದ್ದರೆ ಅದಕ್ಕೂ ಮಾವಿನೆಲೆ ಅಗತ್ಯ. ಒಳ್ಳೆಯ ಕೆಲಸಗಳು ಏನೇ ಇದ್ದರೂ ಅದಕ್ಕೆ ಮಾವಿನೆಲೆ ಇಲ್ಲದಿದ್ದರಾಗದು. ಹೀಗೆ ಧರ್ಮ, ಸಂಪ್ರದಾಯ, ಸಂಸ್ಕೃತಿಯ ಉತ್ಸವಗಳಿಗೆ ಮಾವಿನೆಲೆ ಅಲಂಕಾರಕ್ಕೂ ಬೇಕು, ಅಗತ್ಯಕ್ಕೂ ಸೈ. ಇದಕ್ಕಿಂತ ಹೆಚ್ಚು ಇನ್ನೇನು?
ಕೆಲವು ಬಗೆಯ ಸಾಂಪ್ರದಾಯಿಕ ಔಷಧಿಗಳಿಗೆ ಮಾವಿನೆಲೆ ಅಗತ್ಯ. ಬೆಳಗ್ಗೆ ಏಳುತ್ತಿದ್ದಂತೆ, ಮಾವಿನೆಲೆಯನ್ನು ಹಲ್ಲುಜ್ಜುವುದಕ್ಕೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು. ಚಿಗುರೆಲೆಗಳನ್ನು ಕಷಾಯ ಮಾಡಿ, ಅದನ್ನು ಹಲವು ಸಮಸ್ಯೆಗಳಿಗೆ ಮದ್ದಾಗಿ ಉಪಯೋಗಿಸುತ್ತಿದ್ದರು. ಜೀರ್ಣಾಂಗಗಳ ಸಮಸ್ಯೆ ಇದ್ದರೆ, ಮಧುಮೇಹ ನಿಯಂತ್ರಣಕ್ಕೆ, ಕೆಲವು ಬಗೆಯ ಶ್ವಾಸಕೋಶದ ತೊಂದರೆಗಳಿಗೆಲ್ಲ ಮಾವಿನೆಲೆ ಕಷಾಯವನ್ನು ಔಷಧಿಯಾಗಿ ಬಳಸುತ್ತಿದ್ದರು. ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಎಲೆಗಳು ಒಟ್ಟಾರೆ ದೇಹಸ್ವಾಸ್ಥ್ಯಕ್ಕೆ ಅನುಕೂಲ ಒದಗಿಸುತ್ತವೆ.

ಕೊಲೆಸ್ಟ್ರಾಲ್‌ ಕಡಿತ

ಮಾವಿನೆಲೆಯನ್ನು ಗ್ರೀನ್‌ ಟೀ ರೀತಿಯಲ್ಲಿ ಅಥವಾ ಕಷಾಯದ ರೀತಿಯಲ್ಲಿ ಔಷಧಿಗಾಗಿ ಉಪಯೋಗಿಸುವ ವಾಡಿಕೆಯಿದೆ. ಇದನ್ನು ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದಕ್ಕೆ ಬಳಸಲಾಗುತ್ತದೆ. ಇದರಲ್ಲಿರುವ ಮ್ಯಾಗ್ನಿಫೆರಿನ್‌ ಮತ್ತು ಕ್ವೆರ್ಸೆಟಿನ್‌ ಎಂಬ ಸಂಯುಕ್ತಗಳು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವನ್ನು ಹೊಂದಿವೆ. ಜೀರ್ಣಾಂಗಗಳಲ್ಲಿ ಕೊಲೆಸ್ಟ್ರಾಲ್‌ ಹೀರಲ್ಪಡದೆ ಇರುವಂತೆ, ಈ ಕೊಬ್ಬು ದೇಹದಿಂದ ಹೊರ ಹೋಗುವಂತೆ ಮಾಡುತ್ತವೆ. ಈ ಮೂಲಕ ಹೃದಯದ ಆರೋಗ್ಯ ಚೆನ್ನಾಗಿರುವಂತೆ ಮಾಡುತ್ತವೆ.

ಮಧುಮೇಹ ನಿಯಂತ್ರಣ

ಮಾವಿನೆಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ರೋಗ ನಿಯಂತ್ರಣದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದರಲ್ಲಿರುವ ಮ್ಯಾಗ್ನಿಫೆರಿನ್‌ ಅಂಶವು ಮಧುಮೇಹ ನಿಯಂತ್ರಣಕ್ಕೆ ನೆರವಾಗಬಲ್ಲವು. ಇದು ದೇಹದಲ್ಲಿ ನೈಸರ್ಗಿಕವಾಗಿ ಇನ್‌ಸುಲಿನ್‌ ಉತ್ಪಾದನೆಯನ್ನು ಹೆಚ್ಚಿಸಲು ಯತ್ನಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗುತ್ತದೆ.

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಪಚನಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧ್ಯತೆ ಈ ಎಲೆಗಳಿಗಿದೆ. ಡಯರಿಯಾದಂಥ ತೊಂದರೆಗಳಿದ್ದಾಗ ಇದನ್ನು ಮದ್ದಾಗಿ ಬಳಸುವ ಅಭ್ಯಾಸ ಕೆಲವೆಡೆಗಳಲ್ಲಿದೆ. ಜೊತೆಗೆ ದೇಹದ ಚಯಾಪಚಯ ಹೆಚ್ಚು ಮಾಡುವ ಗುಣವಿದೆ ಇದಕ್ಕೆ. ಹಾಗಾಗಿ ಅಜೀರ್ಣದಂಥ ತೊಂದರೆಗಳು ಬಗೆಹರಿಯಬಹುದು. ಜೊತೆಗೆ, ತೂಕ ಇಳಿಕೆಗೆ ಸ್ವಲ್ಪ ನೆರವೂ ನೀಡಬಹುದು.

ಶ್ವಾಸಕೋಶ ಸಬಲ

ಕಫ, ಕೆಮ್ಮು, ದಮ್ಮಿನಂಥ ತೊಂದರೆಗಳ ನಿವಾರಣೆಗೆ ಮಾವಿನೆಲೆ ಉಪಯುಕ್ತ. ಶ್ವಾಸನಾಳದಲ್ಲಿ ಬಿಗಿದಿರುವ ಕಫವನ್ನು ಸಡಿಲಿಸಿ, ಕೆಮ್ಮು ಕಡಿಮೆ ಮಾಡುವ ಗುಣಗಳು ಇದಕ್ಕಿವೆ. ಕಫ ಹೆಚ್ಚಾಗಿದ್ದರಿಂದ ಕಾಡುವ ದಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಈ ಮೂಲಕ ಮಾವಿನೆಲೆಗಳು ಕಡಿಮೆ ಮಾಡುತ್ತವೆ.

ಇದನ್ನೂ ಓದಿ: Shikakai For Hair: ತಲೆ ಕೂದಲಿಗೆ ಶ್ಯಾಂಪೂ ಒಳ್ಳೆಯದೋ ಸೀಗೆಕಾಯಿ ಸೂಕ್ತವೋ?

ಉತ್ಕರ್ಷಣ ನಿರೋಧಕಗಳು

ಇದರಲ್ಲಿ ಫ್ಲೆವನಾಯ್ಡ್‌ಗಳು, ಫೆನಾಲ್‌ಗಳು ಮತ್ತು ಆಸ್ಕಾರ್ಬಿಕ್‌ ಆಮ್ಲ (ವಿಟಮಿನ್‌ ಸಿ)ಯಂಥ ಉರಿಯೂತ ಶಾಮಕಗಳು ಹೇರಳವಾಗಿವೆ. ಇದರಿಂದ ಶರೀರದಲ್ಲಿ ಅಂಡಲೆಯುವ ಮುಕ್ತ ಕಣಗಳನ್ನು ಹಿಡಿತಕ್ಕೆ ತರಬಹುದು. ಜೊತೆಗೆ ಹೃದಯ ತೊಂದರೆಗಳು, ಮಧುಮೇಹ ಮತ್ತು ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ದೂರ ಇರಿಸಬಹುದು.

Exit mobile version