Site icon Vistara News

Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?

Health Benefits Of Okra

ಬೆಂಡೆಕಾಯಿಯನ್ನು ಇಷ್ಟಪಟ್ಟು ತಿನ್ನುವವರು ಎಷ್ಟು ಮಂದಿ ಇದ್ದಾರೋ, ಕಷ್ಟಪಟ್ಟು ತಿನ್ನುವವರೂ ಅಷ್ಟೇ ಮಂದಿ ಇದ್ದಾರೆ. ಇದನ್ನು ಬಳಸಿ ರುಚಿಕಟ್ಟಾಗಿ ಅಡುಗೆ ಮಾಡುವವರು ಇರುವಂತೆಯೇ, ಲೋಳೆಯ ಮುದ್ದೆ ಮಾಡಿಕೊಂಡು ಒದ್ದಾಡುವವರೂ ಇದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಾವಿಂದು ಹೇಳುವುದಕ್ಕೆ ಹೊರಟಿದ್ದು ಬೆಂಡೆಕಾಯಿಯೆಂಬ ಲೋಳೆ ಕೊಳವೆಯ ಆರೋಗ್ಯಕಾರಿ ಗುಣಗಳ ಬಗ್ಗೆ. ಇದರ ಪ್ರಯೋಜನಗಳನ್ನು ತಿಳಿದಾಗ, ಇಂಥದ್ದೊಂದು ತರಕಾರಿ ನಮ್ಮ ಪಾಲಿಗೆ ಇದೆಯಲ್ಲ ತಿನ್ನುವುದಕ್ಕೆ ಎಂದು ಸಂತೋಷವಾಗದಿದ್ದರೆ, ಮತ್ತೆ ಕೇಳಿ! ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಹೇರಳವಾದ ನಾರು, ಪಿಷ್ಟ, ಖನಿಜಗಳು ಮತ್ತು ವಿಟಮಿನ್‌ಗಳು ಬೆಂಡೆಕಾಯಿಯಲ್ಲಿವೆ. ಹಾಗಾಗಿಯೇ ಟೈಪ್‌ 2 ಮಧುಮೇಹದಿಂದ ಹಿಡಿದು, ಜೀರ್ಣಾಂಗಗಳ ತೊಂದರೆಯನ್ನು ಸುಧಾರಿಸುವವರೆಗೆ, ಹೃದಯ ರೋಗಗಳಿಂದ ಹಿಡಿದು ಕೆಲವು ಕ್ಯಾನ್ಸರ್‌ಗಳನ್ನು ದೂರ ಮಾಡುವವರೆಗೆ ಬೆಂಡೆಕಾಯಿ ಆರೋಗ್ಯಕ್ಕೆ ಬಹೂಪಯೋಗಿ ಎನಿಸಿದೆ. ಹಾಗಾದರೆ ಏನೆಲ್ಲ ಲಾಭಗಳಿವೆ (Health Benefits Of Okra) ಬೆಂಡೆಕಾಯಿ ತಿನ್ನುವುದರಲ್ಲಿ?

ನಾರು ಹೇರಳ

ಬೆಂಡೆಕಾಯಿಯಲ್ಲಿರುವ ಕರಗಬಲ್ಲ ನಾರುಗಳು ಎಲ್‌ಡಿಎಲ್‌ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ಅಂಶವನ್ನು ಕರಗಿಸುವಲ್ಲಿ ನೆರವಾಗುತ್ತವೆ. ಹಾಗಾಗಿ ಕೊಲೆಸ್ಟ್ರಾಲ್‌ ತೊಂದರೆಯಿಂದ ಬಳಲುತ್ತಿರುವವರು ಬೆಂಡೆಕಾಯಿಯ ಸೇವನೆಯನ್ನು ಹೆಚ್ಚಿಸಬಹುದು. ಇದರಲ್ಲಿರುವ ಕರಗದಂಥ ನಾರುಗಳು ಜೀರ್ಣಾಂಗದ ಆರೋಗ್ಯ ಏರುಪೇರಾಗದಂತೆ ನೋಡಿಕೊಳ್ಳುತ್ತವೆ. ಮಲಬದ್ಧತೆಯಿಂದ ಮುಕ್ತಿ ನೀಡುತ್ತವೆ.

ಸಕ್ಕರೆಯಂಶ ಸ್ಥಿರ

ಇದರಲ್ಲಿರುವ ನಾರಿನಂಶದಿಂದಾಗಿ ರಕ್ತದಲ್ಲಿರುವ ಸಕ್ಕರೆಯಂಶವನ್ನು ಸ್ಥಿರವಾಗಿ ಇರಿಸಲು ಅನುಕೂಲ. ಪರಂಪರಾಗತವಾಗಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿರಿಸಲು ಇದನ್ನು ಬಳಸಲಾಗುತ್ತದೆ. ಆಹಾರ ಗ್ಲೂಕೋಸ್‌ ಆಗಿ ಪರಿವರ್ತನೆಯಾಗುವುದನ್ನು ನಿಧಾನವಾಗಿಸಿ, ಸಕ್ಕರೆಯಂಶ ಏರಿಳಿತ ಆಗದಂತೆ ತಡೆಯುವ ಸಾಧ್ಯತೆ ಇದಕ್ಕಿದೆ.

ಕಣ್ಣಿಗೆ ಕ್ಷೇಮ

ಇದಲ್ಲಿರುವ ವಿಟಮಿನ್‌ ಎ ಅಂಶವು ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಒಳ್ಳೆಯ ನೆರವು ನೀಡುತ್ತದೆ. ಕಾರ್ನಿಯ ರಕ್ಷಣೆಗೆ ಬೇಕಾದ ಅಂಶಗಳು ಬೆಂಡೆಕಾಯಿಯಲ್ಲಿವೆ. ಇದಲ್ಲದೆ, ಕಣ್ಣಿನ ಸೋಂಕುಗಳನ್ನು ದೂರ ಮಾಡುವಂಥ ಸಾಧ್ಯತೆಯೂ ಈ ತರಕಾರಿಗಿದೆ.

ಕೇಶ, ಚರ್ಮ ಕಾಂತಿಯುತ

ಚರ್ಮದ ಕಾಂತಿ ಹೆಚ್ಚಳಕ್ಕೂ ಇದು ಕೊಡುಗೆಯನ್ನು ನೀಡುತ್ತದೆ. ಕೂದಲಿನ ಬೆಳವಣಿಗೆಗೆ ಬೇಕಾದಂಥ ಖನಿಜಗಳು ಮತ್ತು ವಿಟಮಿನ್‌ಗಳು ಇದರಲ್ಲಿ ವಿಫುಲವಾಗಿವೆ. ಜೊತೆಗೆ, ವಿಟಮಿನ್‌ ಸಿ ಅಧಿಕವಾಗಿದ್ದು, ಕೊಲಾಜಿನ್‌ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಇದರಿಂದ ಚರ್ಮದ ಸುಕ್ಕು ನಿವಾರಣೆಯಾಗಿ, ವಯಸ್ಸಾದಂತೆ ಕಾಣುವುದನ್ನು ಮುಂದೂಡಬಹುದು.

ಪ್ರತಿರೋಧಕತೆ ಹೆಚ್ಚಳ

ಬೆಂಡೆಕಾಯಿಯಲ್ಲಿ ವಿಟಮಿನ್‌ ಸಿ ವಿಫುಲವಾಗಿದೆ. ಇದು ಬಿಳಿರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಈ ಬಿಳಿ ರಕ್ತ ಕಣಗಳು ವಿಫುಲವಾಗಿ ಇದ್ದಷ್ಟೂ ಸೋಂಕುಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ. ಜೊತೆಗೆ, ಬೆಂಡೆಕಾಯಿಯನ್ನು ಪ್ರಿಬಯಾಟಿಕ್‌ ಎಂದೇ ಪರಿಗಣಿಸಲಾಗಿದೆ. ಅಂದರೆ, ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಸಹಾಯವಾಗುತ್ತದೆ ಎನ್ನುತ್ತವೆ ಅಧ್ಯಯನಗಳು.

ಫೋಲೇಟ್‌

ಕೆಂಪು ರಕ್ತ ಕಣಗಳ ಹೆಚ್ಚಳಕ್ಕೆ ಅಗತ್ಯವಾದ ಅಂಶವೆಂದು ಫೋಲೇಟನ್ನು ಪರಿಗಣಿಸಲಾಗಿದೆ. ಇದರಿಂದ ರಕ್ತಹೀನತೆಯನ್ನು ನಿವಾರಿಸಬಹುದು. ಇದಲ್ಲದೆ, ಹೊಟ್ಟೆಯಲ್ಲಿರುವ ಭ್ರೂಣದ ಬೆಳವಣಿಗೆಗೆ ಫೋಲೇಟ್‌ ಅತಿ ಮುಖ್ಯ. ಈ ಅಂಶ ಬೆಂಡೆಕಾಯಿಯಲ್ಲಿ ದೊರೆಯುತ್ತದೆ.

ಮೂಳೆ ಗಟ್ಟಿ

ಇದರಲ್ಲಿ ವಿಟಮಿನ್‌ ಕೆ ಮತ್ತು ಕ್ಯಾಲ್ಶಿಯಂ ಅಂಶವಿದೆ. ಇದರಿಂದ ಮೂಳೆಗಳ ಬಲವರ್ಧನೆಗೆ ಅನುಕೂಲ ದೊರೆಯುತ್ತದೆ. ಜೊತೆಗೆ ಪೊಟಾಶಿಯಂ, ಮೆಗ್ನೀಶಿಯಂನಂಥ ಖನಿಜಗಳೂ ಇರುವುದರಿಂದ ಮೂಳೆಗಳು ಟೊಳ್ಳಾಗದಂತೆ, ಸಾಂದ್ರತೆ ಕಡಿಮೆಯಾಗದಂತೆ ಕಾಪಾಡುವುದು ಸುಲಭವಾಗುತ್ತದೆ.

ಇದನ್ನೂ ಓದಿ: Health Tips Kannada: ಸನ್‌ಸ್ಕ್ರೀನ್‌ ಕುರಿತು ನಿಮಗೆಷ್ಟು ಗೊತ್ತು?

ಕರುಳಿನ ಸೋಂಕು ನಿವಾರಣೆ

ಎಳೆಯ ಬೆಂಡೆಕಾಯಿಗಳಲ್ಲಿರುವ ಪಾಲಿಸ್ಯಾಕರೈಡ್‌ಗಳು ಜೀರ್ಣಾಂಗಗಳಲ್ಲಿರುವ ಸೋಂಕುಗಳ ನಿವಾರಣೆಗೆ ಉಪಯುಕ್ತ. ಕರುಳಿನ ಗೋಡೆಗೆ ಅಂಟಿಕೊಳ್ಳುವಂಥ ಹಾನಿಕಾರಕ ಬ್ಯಾಕ್ಟೀರಿಯಗಳ ಅಂಟಿನಂಶವನ್ನು ಲುಪ್ತಗೊಳಿಸುವ ಸಾಮರ್ಥ್ಯ ಇವುಗಳಿಗಿವೆ.

Exit mobile version