ಕೆಲವು ಆರೋಗ್ಯಕರ ಅಭ್ಯಾಸಗಳು ನಮ್ಮನ್ನು ದೀರ್ಘಕಾಲದವರೆಗೆ ನಿರೋಗಿಯಾಗ ಇಡಬಲ್ಲವು. ಈಗಿನಂತೆ ಹೆಜ್ಜೆಹೆಜ್ಜೆ ವೈದ್ಯರು, ಆಸ್ಪತ್ರೆ ಎಂದೆಲ್ಲಾ ಇಲ್ಲದ ಕಾಲದಲ್ಲಿ ಜನರಿಗೆ ರೋಗವೇ ಬರುತ್ತಿರಲಿಲ್ಲವೇ? ಯಾಕಿಲ್ಲ! ಆದರೆ ಅವರ ದೈನಂದಿನ ಜೀವನಶೈಲಿಯೇ ಅವರನ್ನು ರೋಗರಹಿತರಾಗಿ ಇರುವುದಕ್ಕೆ ಸಹಾಯ ಮಾಡುತ್ತಿತ್ತು. “ಉಂಡು ನೂರಡಿ ಇಟ್ಟು/ ಕೆಂಡದಲಿ ಕೈಕಾಸಿ/ ಗಂಡು ಮೇಲಾಗಿ ಮಲಗಿದರೆ ವೈದ್ಯನೇ ದಂಡನಾಗಿರಲಕ್ಕು/” ಎಂದು ಸರ್ವಜ್ಞ ಕವಿ ಹೇಳಿದ್ದು ಸುಮ್ಮನೆಯಲ್ಲ. ಇದರರ್ಥ- ಊಟದ ನಂತರ ಸ್ವಲ್ಪ ಕಾಲಾಡಿ, ಶರೀರವನ್ನು ಬೆಚ್ಚಗಿಟ್ಟುಕೊಂಡು, ಬಲಭಾಗ ಮೇಲೆ ಬರುವಂತೆ ಎಡ ಮಗ್ಗುಲಿನಲ್ಲಿ ಮಲಗಿದರೆ ವೈದ್ಯರ ಅಗತ್ಯ ಬರುವುದಿಲ್ಲ. ಹಾಗಾದರೆ ಸರ್ವಜ್ಞ ಹೇಳಿದಂತೆ ಊಟದ ನಂತರ ನೂರಡಿ ನಡೆಯುವುದು ಒಳ್ಳೆಯದೇ? ಇದರಿಂದ ಆರೋಗ್ಯಕ್ಕೆ ಅನುಕೂಲವೇ? ಊಟದ ನಂತರ ಲಘುವಾಗಿ ಕಾಲಾಡುವುದರಿಂದ ಏನೆಲ್ಲಾ ಲಾಭಗಳಿವೆ ನೋಡೋಣ.
ಪಚನಕಾರಿ: ಹೊಟ್ಟೆ ಭರ್ತಿ ಊಟ ಮಾಡುವುದಕ್ಕೆ ಹಬ್ಬ-ಹರಿದಿನಗಳೇ ಬೇಕೆಂದಿಲ್ಲ. ಹೊಟ್ಟೆಯ ಮಟ್ಟವನ್ನು ದಾಟಿ ಕಂಠ ಭರ್ತಿ ತಿನ್ನುವುದಕ್ಕೆ ಜೊತೆಗಿಬ್ಬರು ಸ್ನೇಹಿತರಿದ್ದರೂ ಸಾಕು. ಮಾತುಮಾತಲ್ಲಿ ಹೊಟ್ಟೆ ತುಂಬಿದ್ದೇ ಅರಿವಿಗೆ ಬಂದಿರುವುದಿಲ್ಲ. ಹಾಗಿದ್ದಾಗ, ಊಟದ ನಂತರ ೨೦ ನಿಮಿಷ ಲಘುವಾಗಿ ನಡೆದರೂ ಸಾಕು, ಆಹಾರ ಸುಲಭವಾಗಿ ಪಚನವಾಗುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಆಸಿಡಿಟಿಯಂಥ ಕೆಲವು ಜೀರ್ಣಾಂಗಗಳ ಸಮಸ್ಯೆಗಳು ಕಡಿಮೆಯಾಗುತ್ತವೆ.
ಮಧುಮೇಹಕ್ಕೆ ಸೂಕ್ತ: ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವುದಕ್ಕೆ ಇದು ಸಹಕಾರಿ. ಒಂದು ಸುದೀರ್ಘವಾದ ನಡಿಗೆಗಿಂತಲೂ ಆಗಾಗ ಇಂಥ ಸಣ್ಣ ನಡಿಗೆಗಳು, ಅದರಲ್ಲೂ ಊಟ-ತಿಂಡಿಯ ನಂತರದ ನಡಿಗೆಗಳು ಸಕ್ಕರೆಯ ಪ್ರಮಾಣ ನಿಯಂತ್ರಿಸುವಲ್ಲಿ ಒಳ್ಳೆಯ ಫಲಿತಾಂಶ ನೀಡುತ್ತವೆ. ರಕ್ತದೊತ್ತಡವನ್ನು ಕಡಿಮೆ ಮಾಡಿ, ಮನಸ್ಸಿನ ಆಯಾಸವನ್ನು ತಗ್ಗಿಸುವಲ್ಲೂ ಈ ಕ್ರಮ ಪರಿಣಾಮಕಾರಿ ಎನ್ನುತ್ತಾರೆ ತಜ್ಞರು.
ಹೃದಯಾರೋಗ್ಯ: ರಕ್ತದ ಒತ್ತಡವನ್ನು ಕಡಿಮೆ ಮಾಡಿ, ಮಧುಮೇಹವನ್ನು ನಿಯಂತ್ರಿಸುವಂಥ ನಡೆಗಳು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ದೇಹದ ಎಲ್ಲಾ ಅಂಗಗಳು ಸಮರ್ಪಕವಾಗಿ ಕೆಲಸ ಮಾಡಬೇಕೆಂದರೆ ಹೊಟ್ಟೆಯಿಂದ ಸರಿಯಾದ ರೀತಿಯಲ್ಲಿ ಶಕ್ತಿ ಪೂರೈಕೆಯಾಗುತ್ತಿರಬೇಕು- ಇದು ಹೆಚ್ಚೂ ಆಗಬಾರದು, ಕೊರತೆಯೂ ಇರಬಾರದು.
ಇದನ್ನೂ ಓದಿ | International men’s day | ಓ ಗಂಡಸರೇ, ಈ ಒಂಬತ್ತು ಆಹಾರ ನಿಮ್ಮ ತಟ್ಟೆಯಲ್ಲಿರಲಿ!
ಹೊಟ್ಟೆ ಸಮಸ್ಯೆಗಳಿಗೆ ತಡೆ: ಕೆಲವು ಆಹಾರಗಳಿಗೆ ಸೂಕ್ಷ್ಮವಾಗಿ ವರ್ತಿಸಿ ಅಲರ್ಜಿಯಂಥ ಪ್ರತಿಕ್ರಿಯೆ ತೋರಿಸಬಹುದು ನಮ್ಮ ಹೊಟ್ಟೆ. ಹೀಗೆ ಇರಿಟಬಲ್ ಬವೆಲ್ ಸಮಸ್ಯೆಗಳು, ಅಜೀರ್ಣ, ಹೊಟ್ಟೆಯುಬ್ಬರ, ಹುಳಿತೇಗು, ಆಸಿಡಿಟಿಯಂಥ ಜೀರ್ಣಾಂಗದ ಸಮಸ್ಯೆಗಳು ಇದರಿಂದ ಕಡಿಮೆಯಾಗುತ್ತವೆ. ಆದರೆ ಊಟವಾದ ಕೆಲವೇ ನಿಮಿಷಗಳಲ್ಲಿ ಈ ಲಘು ನಡಿಗೆಯಲ್ಲಿ ತೊಡಗಬೇಕು. ಚನ್ನಾಗಿ ತಿಂದು, ಮಲಗೆದ್ದು ನಂತರ ಕಾಲಾಡುವ ಯೋಚನೆಯಿದ್ದರೆ- ಬೇಡ ಬಿಡಿ. ಪ್ರಯೋಜನವಾಗಲಾರದು!
ಇದು ಸಲ್ಲದು!: ತುಂಬಿದ ಹೊಟ್ಟೆಯಲ್ಲಿ ಬೆವರು ಕಿತ್ತುಬರುವಂತೆ ಅತಿಯಾಗಿ ನಡೆಯುವುದು ಸಲ್ಲದು. ಮಾತ್ರವಲ್ಲ, ಗಂಟೆಗಟ್ಟಳೆ ನಡೆಯುವ ಸಮಯವೂ ಇದಲ್ಲ. ಇಂಥ ಅತಿರೇಕಗಳಿಂದ ಸಮಸ್ಯೆಗಳು ತಲೆದೋರಬಹುದು. ತಿಂದಿದ್ದೆಲ್ಲವನ್ನೂ ಒಂದು ನಡಿಗೆಯಲ್ಲಿ ಕರಗಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಹಾಗೆಂದೇ ೨೦ ನಿಮಿಷಗಳ ಅಂದಾಜು ಕಾಲಮಿತಿಯಲ್ಲಿ ಲಘುವಾದ ಕಾಲ್ನಡಿಗೆಯನ್ನು ತಜ್ಞರು ಶಿಫಾರಸು ಮಾಡುತ್ತಾರೆ. ಇದನ್ನು ದಿನಚರಿಯಂತೆ ರೂಢಿಸಿಕೊಳ್ಳಲು ಸಾಧ್ಯವಾದರೆ ಇನ್ನೂ ಕ್ಷೇಮ.
ಇದನ್ನೂ ಓದಿ | ನಿಮ್ಮ ನಗರದ ಎಲ್ಲ ರಸ್ತೆಗಳಲ್ಲೂ ನಡೆದಿದ್ದೀರಾ? ಇವನು ಸಿಟಿಯ 4669 ರಸ್ತೆ, 2000 ಮೈಲು ನಡೆದು ಮುಗಿಸಿದ!