ನೋಡುವುದಕ್ಕೆ ನೆರಿಗೆ-ಮಡಿಕೆಗಳ ಮುದ್ದೆಯಂತೆ ಕಾಣುವ ವಾಲ್‌ನಟ್‌ಗಳು ಬೀಜಗಳ ಸಾಲಿನಲ್ಲೇ ಅನನ್ಯವಾದವು. ಕಾರಣ, ಅವುಗಳಲ್ಲಿರುವ ಸತ್ವಗಳ ಸಾಂದ್ರತೆ. ತಾಜಾ ವಾಲ್‌ನಟ್‌ಗಳು ಹಾಗೆಯೇ ತಿನ್ನುವುದಕ್ಕೆ ಇಷ್ಟವಾಗುತ್ತವೆ. ಅದರಲ್ಲೂ ದೊಡ್ಡ ಚಿಪ್ಪನ್ನು ಕುಟ್ಟಿ ಒಡೆದು, ಒಳಗಿನ ವಾಲ್‌ನಟ್ ತಿನ್ನುವುದು ಮಕ್ಕಳಿಗೆ ಪ್ರಿಯವಾದ ಕೆಲಸ. ಅವುಗಳನ್ನು ಸಲಾಡ್‌ಗಳಲ್ಲಿ ಬಳಸಿ, ಮೆತ್ತನೆಯ ಸಲಾಡ್‌ಗಳಿಗೆ ಕರುಂಕುರುಂ ರುಚಿಯನ್ನು ನೀಡಬಹುದು. ಇಂತಿಪ್ಪ ವಾಲ್‌ನಟ್ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು?
ಹೃದಯದ ಮಿತ್ರ
ಒಳ್ಳೆಯ, ಆರೋಗ್ಯಕರ ಕೊಬ್ಬನ್ನು ದೇಹಕ್ಕೆ ನೀಡುವುದರಿಂದ ಕೆಟ್ಟ ಕೊಬ್ಬನ್ನು ನಿಯಂತ್ರಿಸಬಹುದು ಎನ್ನುವುದು ಶರೀರ ಸ್ವಾಸ್ಥ್ಯದ ಸರಳ ತತ್ವ. ಅಂತೆಯೇ ದೈನಂದಿನ ಆಹಾರದಲ್ಲಿ ಸ್ವಲ್ಪ ವಾಲ್‌ನಟ್‌ಗಳನ್ನು ಸೇರಿಸಿಕೊಳ್ಳುವುದರಿಂದ ಕೆಟ್ಟ ಕೊಬ್ಬು ಹೆಚ್ಚುವುದನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಬಹುದು. ಕೊಲೆಸ್ಟ್ರಾಲ್ ಜಮೆಯಾಗದಂತೆ ತಡೆಯುವ ಉದ್ದೇಶವಿದ್ದರೆ ವಾಲ್‌ನಟ್ ತಿನ್ನುವುದು ನೆರವಾಗಬಹುದು.
ಮೆದುಳಿನ ಕ್ಷೇಮಕ್ಕೆ
ನಮ್ಮ ಮಸ್ತಿಷ್ಕದ ಕ್ಷಮತೆ ಹೆಚ್ಚುವುದಕ್ಕೆ ಹಲವು ರೀತಿಯ ಸತ್ವಗಳು ಬೇಕಾಗುತ್ತವೆ. ಆ ಪೈಕಿ ಹೆಚ್ಚಿನ ಸತ್ವಗಳು ವಾಲ್‌ನಟ್‌ನಲ್ಲಿ ದೊರೆಯುತ್ತವೆ. ಅದರಲ್ಲೂ ಮುಖ್ಯವಾಗಿ ಈ ಬೀಜದಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲದಿಂದ ನೆನಪು ಮತ್ತು ಏಕಾಗ್ರತೆ ಹೆಚ್ಚುತ್ತದೆ ಎನ್ನುತ್ತವೆ ಅಧ್ಯಯನಗಳು. ಜೊತೆಗೆ, ವಾಲ್‌ನಟ್‌ನಲ್ಲಿರುವ ಪಾಲಿಫೆನಾಲ್‌ಗಳು, ಆಲ್ಫಾ ಲಿನೋಲಿಕ್ ಆಮ್ಲಗಳು ಮತ್ತು ಇತರ ಉತ್ಕರ್ಷಣ ನಿರೋಧಕಗಳು ಮೆದುಳಿನ ಉರಿಯೂತವನ್ನು ತಪ್ಪಿಸಿ, ಅದರ ಯೋಗಕ್ಷೇಮವನ್ನು ಕಾಪಾಡುತ್ತವೆ.
ತೂಕ ಇಳಿಕೆಗೆ
ಕಾಯಿ, ಬೀಜಗಳನ್ನು ತಿನ್ನುವುದರಿಂದ ತೂಕ ಹೆಚ್ಚುತ್ತದೆಂಬ ತಪ್ಪು ಕಲ್ಪನೆ ಹಲವರಲ್ಲಿದೆ. ನಿಜ ವಿಷಯವೇನೆಂದರೆ, ಕಾಯಿ-ಬೀಜಗಳಿಂದ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ನಿರ್ವಹಿಸಲು ನೆರವು ದೊರೆಯುತ್ತದೆ. ಉತ್ತಮ ಪ್ರಮಾಣದ ಕೊಬ್ಬು, ಪ್ರೊಟೀನ್, ನಾರು ಮತ್ತು ಸೂಕ್ಷ್ಮ ಪೋಷಕಾಂಶಗಳು ಸಾಂದ್ರವಾಗಿರುವ ಈ ತಿನಿಸುಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಿನ್ನದಂತೆ ಹಸಿವನ್ನು ನಿಯಂತ್ರಿಸುತ್ತವೆ. ಇದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವೇ ಉಳಿಯುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ.
ಜೀರ್ಣಾಂಗಗಳ ಕ್ಷಮತೆ ಹೆಚ್ಚಳ
ನಮ್ಮ ಜೀರ್ಣಾಂಗಗಳಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಗಳಿಗೆ ಗ್ರಾಸವಾಗಿ ಒದಗುವ ಆಹಾರಗಳನ್ನು ಪ್ರಿಬಯಾಟಿಕ್ ಎಂದು ಕರೆಯಲಾಗುತ್ತದೆ. ಈ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಹೆಚ್ಚಿಸುವ ಆಹಾರಗಳನ್ನು ಪ್ರೊಬಯಾಟಿಕ್ ಎನ್ನಲಾಗುತ್ತದೆ. ವಾಲ್‌ನಟ್ ಪ್ರಿಬಯಾಟಿಕ್‌ಗಳ ಸಾಲಿಗೆ ಸೇರಿದೆ. ಇದರಲ್ಲಿರುವ ನಾರು ಮತ್ತು ಪಾಲಿಫೆನಾಲ್‌ಗಳು ಕರುಳಿನ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಹೆಚ್ಚಿಸಿ, ಜೀರ್ಣಾಂಗಗಳ ಆರೋಗ್ಯ ಸುಧಾರಿಸಬಲ್ಲವು.
ಉರಿಯೂತ ನಿವಾರಣೆ
ಇದರಲ್ಲಿ ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿವೆ. ಮೆಲಟೋನಿನ್, ವಿಟಮಿನ್ ಇ, ಪಾಲಿಫೆನಾಲ್‌ಗಳು ದೇಹದಲ್ಲಿನ ಉರಿಯೂತ ಶಮನಕ್ಕೆ ಮಹತ್ವದ ನೆರವು ನೀಡುತ್ತವೆ. ಅದರಲ್ಲೂ ಅಂಡಲೆಯುವ ಮುಕ್ತ ಕಣಗಳನ್ನು ನಿರ್ಬಂಧಿಸಿ, ಅವುಗಳು ತಂದೊಡ್ಡುವ ವಿಪತ್ತನ್ನು ದೂರ ಮಾಡುವಲ್ಲಿ ಉತ್ಕರ್ಷಣ ನಿರೋಧಕಗಳು ಅಗತ್ಯವಾಗಿ ಬೇಕು. ಮಧುಮೇಹ, ಹೃದ್ರೋಗಗಳು, ಕ್ಯಾನ್ಸರ್‌ನಂಥ ತೊಂದರೆಗಳನ್ನು ದೂರೀಕರಿಸಲು ಇಂಥ ಸತ್ವಗಳು ಅಗತ್ಯ. ಇವೆಲ್ಲವೂ ಇರುವುದಕ್ಕೇ ವಾಲ್‌ನಟ್ ನಮ್ಮ ಆಹಾರದ ಅತ್ತ್ಯುತ್ತಮ ಭಾಗ ಎಂದೆನಿಸಿಕೊಳ್ಳಬಲ್ಲದು.