Site icon Vistara News

Amruthaballi Kadha: ಪ್ರತಿ ಮನೆಯಲ್ಲಿ ಮಳೆಗಾಲದಲ್ಲಿ ಬೇಕೇ ಬೇಕು ಈ ಅಮೃತಬಳ್ಳಿ ಕಷಾಯ!

amrithaballi

ಅಮೃತಬಳ್ಳಿ (amruthaballi) ಅಥವಾ ಗಿಲೋಯ್‌ (giloy) ಎಂಬ ಬಳ್ಳಿಯೊಂದು ತಲೆತಲಾಂತರಗಳಿಂದ ಭಾರತೀಯರ ಮನೆಮನಗಳಲ್ಲಿ ನೆಲೆಸಿರುವ ಸಸ್ಯ. ರುಚಿಯಲ್ಲಿ ಕಹಿಯಾದರೂ ಗುಣದಲ್ಲಿ ದೇಹಕ್ಕೆ ಸಿಹಿ. ರೋಗನಿರೋಧಕ ಶಕ್ತಿಯನ್ನು ತುಂಬಿಕೊಂಡಿರುವ ಈ ಬಳ್ಳಿ ತನ್ನ ಹೆಸರಿನಂತೆಯೇ ಅಮೃತದಂತೆಯೇ. ಯಾಕೆಂದರೆ, ಇದು ನಮಗೆ ಮೊಗೆಮೊಗೆದು ಕೊಡುವ ಆರೋಗ್ಯವೇ (health benefits) ಅಂಥದ್ದು. ಮಳೆಗಾಲದಲ್ಲಿ ಅಮೃತಬಳ್ಳಿಯ ಕಷಾಯವನ್ನು (amruthaballi kadha) ಆಗಾಗ ಮಾಡಿ ಕುಡಿಯುತ್ತಿದ್ದರೆ, ಈ ಕಾಲದಲ್ಲಿ ಸದಾ ಕಾಡುವ ಶೀತ, ಜ್ವರದಂತಹ ಸಮಸ್ಯೆಗಳೆಲ್ಲ ಹತ್ತಿರವೂ ಸುಳಿಯದು ಎಂಬ ನಂಬಿಕೆ ನಮ್ಮ ಹಿರಿಯರದ್ದು. ಈಗಲೂ ಆಯುರ್ವೇದದಲ್ಲಿ, ಜ್ವರಕ್ಕೆ ನೀಡುವ ಔಷಧಿಗಳಲ್ಲಿ ಅಮೃತಬಳ್ಳಿಯೂ ಒಂದು ಮುಖ್ಯ ವಸ್ತುವಾಗಿ ಬಳಸಲ್ಪಡುತ್ತದೆ. ಇಂಥ ಅಪರೂಪದ ವೈದ್ಯಕೀಯ ಗುಣಗಳಿರುವ ಅಮೃತಬಳ್ಳಿ ಇತ್ತೀಚಿಗಿನ ಕೊರೋನೋತ್ತರ ದಿನಗಳಲ್ಲಿ ಜನರಲ್ಲಿ ಅರಿವು ಮೂಡಿಸುತ್ತಲೂ ಇದೆ. ಹಾಗಾದರೆ, ಬನ್ನಿ, ಅಮೃತಬಳ್ಳಿಯ ಸೇವನೆಯಿಂದ ಯಾವೆಲ್ಲ ಬಗೆಯ ಆರೋಗ್ಯಕರ ಲಾಭಗಳನ್ನು (health tips) ನಾವು ಪಡೆಯಬಹುದು ಎಂಬುದನ್ನು ನೋಡೋಣ.

1. ಅಮೃತಬಳ್ಳಿಯಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳಿರುವುದರಿಂದ ಅದು ಅಂಗಾಂಶಗಳನ್ನು ಹಾಳು ಮಾಡುವ ಫ್ರೀ ರಾಡಿಕಲ್‌ಗಳ ಜೊತೆ ಹೋರಾಡಿ ರೋಗಗಳು ಬರದಂತೆ ತಡೆಯುತ್ತದೆ. ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಕಳಿಸಿ ರಕ್ತಶುದ್ಧಿ ಮಾಡುತ್ತದೆ. ಇದರಲ್ಲಿರುವ ಆಂಟಿ ಬ್ಯಾಕೀರಿಯಲ್‌ ಗುಣಗಳು, ರೋಗ ತರಿಸಬರಿಸಬಲ್ಲ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುತ್ತವೆ. ಜ್ವರ, ಕಫ, ಶೀತ, ನೆಗಡಿಗಳಂತಹ ಸಮಸ್ಯೆಗಳಿಗೆ ಅಮೃತಬಳ್ಳಿ ರಾಮಬಾಣ.

2. ಅಮೃತಬಳ್ಳಿಯ ಬಹುಮುಖ್ಯ ಅಂಶ ಎಂದರೆ ಇದರ ಹೈಪೋಗ್ಲಿಸೆಮಿಕ್‌ ಏಜೆಂಟ್‌ ಆಗಿ ವರ್ತಿಸುವ ಗುಣ. ಈ ಗುಣದಿಂದಾಗಿ ಇದು ಮಧುಮೇಹದ ಸಮಸ್ಯೆ ಇರುವ ಮಂದಿಗೆ ಅತ್ಯುತ್ತಮ ಔಷಧಿ. ಮುಖ್ಯವಾಗಿ ಟೈಪ್‌ ೨ ಮಧುಮೇಹ ಇರುವ ಮಂದಿ ನಿತ್ಯವೂ ಅಮೃತಬಳ್ಳಿ ಕಷಾಯ ಕುಡಿಯುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆಯ ಅಂಶಸಮತೋಲನಕ್ಕೆ ಬರುತ್ತದೆ. ಇದು ಅತಿಯಾಗಿರುವ ಸಕ್ಕರೆಯನ್ನು ಕರಗಿಸಿ ಸಕ್ಕರೆಯ ಮಟ್ಟ ಸಮತೋಲನಕ್ಕೆ ಬರುವಲ್ಲಿ ಸಹಾಯ ಮಾಡುತ್ತದೆ.

3. ಅಮೃತಬಳ್ಳಿಯ ಇನ್ನೊಂದು ಮುಖ್ಯ ಗುಣ ಎಂದರೆ ಅದು ತೂಕ ಇಳಿಕೆಗೆ ಸಹಾಯ ಮಾಡುವುದು. ಹೌದು. ಅಮೃತಬಳ್ಳಿಯಲ್ಲಿರುವ ಅಡಿಪೋನೆಕ್ಟಿನ್‌ ಹಾಗೂ ಲೆಪ್ಟಿನ್‌ ಎಂಬ ಎರಡು ಬಗೆಯ ಪೋಷಕಾಂಶಗಳು, ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಕ್ಕೆ ಕಳಿಸಿ, ಪಚನಕ್ರಿಯೆಯನ್ನು ಚುರುಕುಗೊಳಿಸಿ ಆರೋಗ್ಯಕರ ತೂಕವನ್ನು ಸಮತೋಲನಗೊಳಿಸುವಲ್ಲಿ ನೆರವಾಗುತ್ತದೆ.

4. ಅಮೃತಬಳ್ಳಿಯಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ಉಸಿರಾಟದ ಸಮಸ್ಯೆಗೂ ಕೂಡಾ ಪರಿಹಾರ ಒದಗಿಸುತ್ತದೆ. ಕಫ, ಕೆಮ್ಮು, ಶೀತ, ಟಾನ್ಸಿಲ್ಸ್‌ನಂತಹ ಸಮಸ್ಯೆಯನ್ನು ಕಡಿಮೆಗೊಳಿಸಿ, ಕಟ್ಟಿದ ಮೂಗು, ಉಸಿರಾಟ ಕಷ್ಟವಾಗುವುದು ಇತ್ಯಾದಿಗಳನ್ನು ಕಡಿಮೆ ಮಾಡಿ ಉಸಿರಾಟವನ್ನು ಸಹಜವಾಗಿ ಆಗುವಂತೆ ಮಾಡುತ್ತದೆ.

5. ಚರ್ಮದ ಆರೋಗ್ಯಕ್ಕೂ ಕೂಡಾ ಅಮೃತಬಳ್ಳಿ ಉತ್ತಮ ಮದ್ದು. ಅಮೃತಬಳ್ಳಿಯಲ್ಲಿರುವ ಆಂಟಿ ಏಜಿಂಗ್‌ ಗುಣಗಳು ಮುಖದಲ್ಲಿ ಸುಕ್ಕುಗಳನ್ನು ಕಡಿಮೆಗೊಳಿಸಿ, ಮೊಡವೆ, ಕಜ್ಜಿ, ಕಪ್ಪು ಕಲೆಗಳು ಇತ್ಯಾದಿಗಳಿಗೂ ಪರಿಹಾರ ಒದಗಿಸುತ್ತದೆ. ಮುಖ ಆರೋಗ್ಯದಿಂದ ಕಂಗೊಳಿಸುವಂತೆ ಮಾಡುತ್ತದೆ.

ಹಾಗಾದರೆ ಅಮೃತಬಳ್ಳಿಯನ್ನು ಕಷಾಯ ಮಾಡುವುದು ಹೇಗೆ ಎಂಬ ಪ್ರಶ್ನೆ ಎಲ್ಲರಿಗೂ ಬರಬಹುದು. ಮನೆಯಲ್ಲೊಂದು ಅಮೃತಬಳ್ಳಿಯನ್ನು ಬೆಳೆಸಿದ್ದರೆ, ಮನೆಯಲ್ಲೇ ವೈದ್ಯರಿದ್ದಂತೆ. ಅಮೃತಬಳ್ಳಿಯ ಎಲೆ ಹಾಗೂ ಬಳ್ಳಿಯ ತುಣುಕನ್ನು ಹಾಗೆಯೇ ಮುರಿದುಕೊಂಡು, ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಿ, ಬೇಕಾದಷ್ಟು ನೀರು ಹಾಕಿ ಸೋಸಿಕೊಂಡು, ಲಿಂಬೆರಸ ಹಿಂಡಿಕೊಂಡು ಕುಡಿಯಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅತ್ಯುತ್ತಮ ಫಲ ಸಿಗುತ್ತದೆ. ಮನೆಯಲ್ಲೇ ಫ್ರೆಶ್‌ ಆಗಿ ಮಾಡಿ ಕುಡಿಯುವುದು ಒಳ್ಳೆಯದು.

ಇದನ್ನೂ ಓದಿ: Monsoon Diet: ಮಳೆಗಾಲದಲ್ಲಿ ಆಹಾರ ಸೇವನೆ ಹೀಗಿರಲಿ

Exit mobile version