ಭಾರತದಲ್ಲಿ ಮಹಿಳೆಯರು ಉಪಯೋಗಿಸುವ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಬಳಸಲಾಗುತ್ತಿರುವ ರಾಸಾಯನಿಕಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿವೆ. ದೆಹೆಲಿ ಮೂಲದ ʻಟಾಕ್ಸಿಕ್ ಲಿಂಕ್ʼ ಎನ್ನುವ ಸ್ವಯಂಸೇವಾ ಸಂಸ್ಥೆ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಈ ಪ್ಯಾಡ್‌ಗಳಲ್ಲಿ ಬಳಸಲಾಗುತ್ತಿರುವ ರಾಸಾಯನಿಕಗಳು ಮಹಿಳೆಯರನ್ನು ಕ್ಯಾನ್ಸರ್ ಮತ್ತು ಫಲವಂತಿಕೆಯ ಸಮಸ್ಯೆಗಳತ್ತ ದೂಡಬಲ್ಲವು.
ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಅತಿ ಹೆಚ್ಚಿನ ಸ್ವಾತಂತ್ರ್ಯ ನೀಡಬಲ್ಲ ಸ್ಯಾನಿಟರಿ ಪ್ಯಾಡ್‌ಗಳು ಈಗ ಆರೋಗ್ಯ ಸಮಸ್ಯೆಯನ್ನೂ ನೀಡಬಲ್ಲವು ಎಂಬ ಮಾಹಿತಿ ನಿಜಕ್ಕೂ ಕಳವಳಕಾರಿ ಎನಿಸಿದೆ. ಈ ಅಧ್ಯಯನಕ್ಕಾಗಿ ಭಾರತದಲ್ಲಿ ತಯಾರಾಗುತ್ತಿರುವ ಹತ್ತು ಜನಪ್ರಿಯ ಬ್ರಾಂಡ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಎಲ್ಲಾ ಬ್ರಾಂಡ್‌ನ ಪ್ಯಾಡ್‌ಗಳಲ್ಲೂ ಹಾನಿಕಾರಕವಾದ ಫ್ಯಾಲೇಟ್ (phthalates) ಮತ್ತು ಆವಿಯಾಗುವ ಸಾವಯವ ಸಂಯುಕ್ತಗಳು (volatile organic compounds) ಪತ್ತೆಯಾಗಿವೆ. ಈ ರಾಸಾಯನಿಕಗಳಿಂದ ಕ್ಯಾನ್ಸರ್, ಫಲವಂತಿಕೆ ಸಮಸ್ಯೆ, ಅಂತಃಸ್ರಾವಕಗಳ (endocrine) ಏರುಪೇರು, ಅಲರ್ಜಿಯಂಥ ನಾನಾ ಸಮಸ್ಯೆಗಳು ಉದ್ಭವಿಸಬಹುದು. ಈ ರಾಸಾಯನಿಕಗಳ ಬಳಕೆಯ ಬಗ್ಗೆ ನಿರ್ದಿಷ್ಟ ಮಾನದಂಡಗಳು ನಮ್ಮಲ್ಲಿ ಇಲ್ಲದಿರುವ ಹಿನ್ನೆಲೆಯಲ್ಲಿ, ಉತ್ಪಾದಕರು ತಮ್ಮಿಷ್ಟದಂತೆ ಈ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ ಎನ್ನುತ್ತದೆ ಅಧ್ಯಯನದ ವರದಿ.
ಏಕೆ ಆತಂಕ?: ಸ್ಯಾನಿಟರಿ ಪ್ಯಾಡ್‌ನ ನಾನಾ ಹಾಸುಗಳನ್ನು ಒಂದಕ್ಕೊಂದು ಜೋಡಿಸಲು ಬಳಸುವ ರಾಸಾಯನಿಕಗಳಲ್ಲಿ ಫ್ಯಾಲೆಟ್‌ನಂಥ ವಸ್ತುಗಳು ಪತ್ತೆಯಾಗಿವೆ. ಪ್ಯಾಡ್‌ಗಳನ್ನು ಮೃದುವಾಗಿಸಿ, ಅವುಗಳನ್ನು ಹಿಗ್ಗುವಂತೆ ಮಾಡುವ, ಅಂದರೆ ಫ್ಲಾಸ್ಟಿಸೈಜ್ ಮಾಡುವ ವಸ್ತುವಾಗಿ ಫ್ಯಾಲೇಟ್ ಬಳಕೆಯಾಗುತ್ತಿದೆ. ಮಾನವನ ಇತಿಹಾಸದಲ್ಲಿ ದೀರ್ಘಕಾಲದಿಂದ ಹಲವು ರೀತಿಯ ಪ್ಲಾಸ್ಟಿಕ್‌ನಂಥ ಫ್ಯಾಲೇಟ್‌ಗಳು ಬಳಕೆಯಲ್ಲಿವೆ. ಒಟ್ಟು ೧೨ ರೀತಿಯ ಫ್ಯಾಲೇಟ್‌ಗಳು ಪರೀಕ್ಷೆಗೆ ಒಳಪಟ್ಟ ಪ್ಯಾಡ್‌ಗಳಲ್ಲಿ ಕಂಡುಬಂದಿದ್ದು, ಅವುಗಳಲ್ಲಿ ಪ್ರತಿ ಕೆ.ಜಿ.ಗೆ ೧೦ರಿಂದ ೧೯,೬೦೦ ಮೈಕ್ರೋಗ್ರಾಂ ವರೆಗೆ ಫ್ಯಾಲೇಟ್ ಸಾಂದ್ರತೆ ವರದಿಯಾಗಿದೆ. ಇಂಥ ಪ್ಯಾಡ್‌ನೊಂದಿಗೆ ಸಂಪರ್ಕಕ್ಕೆ ಬರುವ ದೇಹದ ಆ ಭಾಗದ ಅಂಗಾಂಶಗಳು ಈ ರಾಸಾಯನಿಕಗಳನ್ನು ಹೀರಿಕೊಳ್ಳುವ ಸಾಧ್ಯತೆ ಅಧಿಕವಾಗಿರುವುದು ಇದೀಗ ಆತಂಕ ಹೆಚ್ಚಿಸಿದೆ.
ಆವಿಯಾಗುವ ಸಾವಯವ ಸಂಯುಕ್ತಗಳಿರುವುದು ಸಹ ಆತಂಕದ ವಿಷಯ. ಗೋಡೆಗೆ ಬಳಿಯುವ ಪೇಂಟ್‌ನಿಂದ ಹಿಡಿದು ಹಲವಾರು ವಸ್ತುಗಳಲ್ಲಿ ಈ ರಾಸಾಯನಿಕಗಳು ಇರುತ್ತವೆ. ತಮ್ಮಷ್ಟಕ್ಕೆ ತಾವೇ ಆವಿಯಾಗಿ ವಾತಾವರಣದಲ್ಲಿ ಬೆರೆತು ನಮ್ಮ ಉಸಿರಾಟದೊಂದಿಗೆ ಸೇರುವಂಥ ರಾಸಾಯನಿಕಗಳಿವು. ಇವುಗಳು ಕೂಡಾ ಸುಲಭವಾಗಿ ನಮ್ಮ ದೇಹ ಸೇರಿ ಅಲರ್ಜಿ, ಉರಿಯೂತ, ಸುಸ್ತು, ಆಯಾಸ, ಯಕೃತ್ತು ಮತ್ತು ಕಿಡ್ನಿ ಸಮಸ್ಯೆಗಳನ್ನು ತರಬಲ್ಲವು. ಇಂಥ ಸುಮಾರು ೨೫ ಬೇರೆ ಬೇರೆ ಸಂಯುಕ್ತಗಳು ಪರೀಕ್ಷಿತ ಪ್ಯಾಡ್‌ಗಳಲ್ಲಿ ಪತ್ತೆಯಾಗಿವೆ ಎನ್ನುತ್ತದೆ ಅಧ್ಯಯನ.
ಇದನ್ನೂ ಓದಿ | Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ?
ಬಳಕೆಯೆಷ್ಟು?: ಇವುಗಳ ಬಳಕೆ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. ಕನಿಷ್ಟ ಶೇ. ೭೫ರಷ್ಟು ಹದಿಹರೆಯದ ಹುಡುಗಿಯರು ಸಾನಿಟರಿ ಪ್ಯಾಡ್ ಬಳಸುತ್ತಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಶೇ. ೬೪ರಷ್ಟು ಮಂದಿ ೧೫-೨೪ರ ವಯೋಮಾನದವರು ಇವುಗಳನ್ನೇ ಬಳಸುತ್ತಿದ್ದಾರೆ. ಇಷ್ಟೊಂದು ವ್ಯಾಪಕವಾಗಿ ಬಳಕೆಯಲ್ಲಿರುವ ಖಾಸಗಿ ಸ್ವಚ್ಛತೆಯ ವಸ್ತುವಿನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿರುವುದು ಅತ್ಯಂತ ಕಳವಳಕ್ಕೆ ಕಾರಣವೆನಿಸಿದೆ.
ಪರ್ಯಾಯವಿಲ್ಲವೇ?: ಇಲ್ಲವೆಂದಲ್ಲ. ಹಳೆಯ ಕಾಲದಂತೆ ತಿರುಗಿ ಬಟ್ಟೆಯನ್ನೇ ಬಳಸುವುದು ಖಂಡಿತ ಪರ್ಯಾಯವಲ್ಲ. ಟ್ಯಾಂಪನ್ಸ್ ಮತ್ತು ಮುಟ್ಟಿನ ಕಪ್‌ಗಳು ಉತ್ತಮ ಸುರಕ್ಷತೆಯನ್ನು ನೀಡಬಲ್ಲವು. ಆದರೆ ಅವುಗಳನ್ನು ಬಳಸುವಾಗ, ಉತ್ಪಾದಕರು ನೀಡಿದ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಕಪ್‌ಗಳನ್ನು ಸೂಕ್ತವಾಗಿ ಸ್ಯಾನಿಟೈಸ್ ಮಾಡುವುದು ಅತಿ ಮುಖ್ಯ. ಈ ವಸ್ತುಗಳನ್ನು ವಯಸ್ಕರಂತೆಯೇ ಹದಿಹರೆಯದ ಹುಡುಗಿಯರೂ ಸುರಕ್ಷಿತವಾಗಿ ಬಳಸಬಹುದು. ಇಷ್ಟಾಗಿಯೂ ಪ್ಯಾಡ್‌ಗಳನ್ನು ಬಳಸುವುದು ಅನಿವಾರ್ಯವಾದರೆ, ಸುವಾಸನೆಯುಕ್ತ ಪ್ಯಾಡ್‌ಗಳು ಬೇಡ, ಸಾದಾ ಪ್ಯಾಡ್ ಇರಲಿ. ಅವುಗಳನ್ನು ದೀರ್ಘಕಾಲದವರೆಗೆ ಬಳಸದೆ, ಆಗಾಗ ಬದಲಿಸಿ. ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳಿ.
ಇದನ್ನೂ ಓದಿ | Kangaroo care | ಅವಧಿಪೂರ್ವದಲ್ಲಿ ಜನಿಸಿದ ಮಗುವಿಗೆ ಬೆಚ್ಚಗಿನ ಅಪ್ಪುಗೆ: ವಿಶ್ವ ಆರೋಗ್ಯ ಸಂಸ್ಥೆ ಸೂಚನೆ