ಕೆಲವು ಆಹಾರಗಳೇ ಹಾಗೆ (Health Food Tips). ತಿಂದು ಸ್ವಲ್ಪ ಹೊತ್ತಿನಲ್ಲಿ ಬಾಯಾರುತ್ತದೆ. ಗಂಟಲು ಒಣಗುತ್ತದೆ. ದೇಹದ ನೀರೆಲ್ಲ ಬಸಿದು ಹೋದಂಥ ಅನುಭವ. ಮತ್ತೆ ಮತ್ತೆ ನೀರು ಕುಡಿಯಬೇಕೆನಿಸುತ್ತದೆ. ಎಷ್ಟು ನೀರು ಕುಡಿದರೂ, ಹೊಟ್ಟೆಯಲ್ಲಿ ನೀರು ಸದ್ದು ಮಾಡುವಷ್ಟರವರೆಗೆ ನೀರು ತುಂಬಿಸಿಕೊಂಡರೂ ಯಾಕೋ ತೃಪ್ತಿಯಿಲ್ಲದ ಅನುಭವ. ಪದೇ ಪದೇ ಗಂಟಲೊಣಗುವುದು, ಬಾತ್‌ರೂಂಗೆ ಹೋಗಬೇಕೆನಿಸುವುದು ಇತ್ಯಾದಿ ಸಾಮಾನ್ಯ. ಬೇಸಗೆಯಲ್ಲಂತೂ ಈ ಸಮಸ್ಯೆ ಹೇಳತೀರದು. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆಯೇ ಇದೆ. ಕೆಟ್ಟ ಕೆಲಸ ಮಾಡಿದವನು ಅದರ ಫಲ ಅನುಭವಿಸಲೇ ಬೇಕು ಎಂಬುದು ಇದರ ಒಳಾರ್ಥವಾದರೂ, ಉಪ್ಪಿನಂಶ ದೇಹಕ್ಕೆ ಹೆಚ್ಚು ಹೋದರೆ, ಸಹಜವಾಗಿಯೇ ನೀರು ಕುಡಿಯಲೇಬೇಕಾಗುತ್ತದೆ ಎಂಬುದು ಶಬ್ದಾರ್ಥವೂ ಹೌದು. ಇದು ನಿಜ ಕೂಡಾ. ಬನ್ನಿ, ಯಾವೆಲ್ಲ ಆಹಾರಗಳು ನಿಮ್ಮ ದೇಹದ ನೀರಿನಂಶವನ್ನು ಕ್ಷಣಮಾತ್ರದಲ್ಲಿ ಬಸಿದುಬಿಡುತ್ತದೆ ಎಂಬುದನ್ನು ನೋಡೋಣ ಬನ್ನಿ.
ಅತಿಯಾಗಿ ಸಂಸ್ಕರಿಸಿದ ಆಹಾರಗಳು
ಅತಿಯಾಗಿ ಸಂಸ್ಕರಿಸಿದ ಆಹಾರಗಳಾದ ಆಲೂಗಡ್ಡೆ ಚಿಪ್ಸ್, ಫ್ರೋಜನ್ ಪ್ಯಾಕೇಜ್ಡ್ ಆಹಾರಗಳು, ನಿಮ್ಮಿಷ್ಟದ ಕ್ಯಾಂಡಿ ಬಾರ್ ಇತ್ಯಾದಿಗಳಿಂದ ದೇಹದಲ್ಲಿ ನಿರ್ಜಲೀಕರಣದ ಸ್ಥಿತಿ ಅಂದರೆ ಡಿಹೈಡ್ರೇಶನ್ ಉಂಟಾಗುತ್ತದೆ. ಬಾಯಿ ಬಹುಬೇಗನೆ ಒಣಗಿದಂತಾಗುತ್ತದೆ. ನೀರು ಬೇಕೆನಿಸುತದೆ. ಈ ಆಹಾರಗಳಲ್ಲಿ ಸೋಡಿಯಂ ಹಾಗೂ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ದೇಹಕ್ಕೆ ಈ ಸ್ಥಿತಿ ಬರುತ್ತದೆ.
ಉಪ್ಪಿನಕಾಯಿ
ಉಪ್ಪಿನಕಾಯಿ ಇದ್ದರೆ ಊಟ ರುಚಿ ಹೌದು. ಆದರೆ, ಉಪ್ಪಿನಕಾಯಿಯಲ್ಲಿ ಉಪ್ಪು ಹೆಚ್ಚಿರುವುದರಿಂದ ಬಾಯಾರುವುದು ಹೆಚ್ಚು. ಈಗೆಲ್ಲ ಉಪ್ಪು ಕಡಿಮೆ ಇರುವ ಥರಥರದ ಉಪ್ಪಿನಕಾಯಿಗಳನ್ನೂ ಮಾಡಬಹುದಾದ್ದರಿಂದ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಉಪ್ಪಿನಕಾಯಿ ತಿನ್ನುವ ಆಸೆಯ ಮಂದಿ ತಮ್ಮ ಆಸೆಗೆ ಎಳ್ಳುನೀರು ಬಿಡಬೇಕಾಗಿಲ್ಲ.
ಸೋಯಾ ಸಾಸ್
ಯಾವುದೇ ಚೈನೀಸ್ ಅಡುಗೆ ಮಾಡುವುದಿದ್ದರೂ ಸೋಯಾ ಸಾಸ್ ಬಹುಮುಖ್ಯವಾದ ಪದಾರ್ಥ. ಆದರೆ ಇದರಲ್ಲೂ ಅಧಿಕ ಸೋಡಿಯಂ ಹಾಗೂ ಬ್ರಿಮ್ ಇರುವುದರಿಂದ ಇದು ಡಿಹೈಡ್ರೇಶನ್‌ಗೆ ದೂಡುತ್ತದೆ. ಇದರಲ್ಲೂ ಈಗ ಮಾರುಕಟ್ಟೆಯಲ್ಲಿ ಕಡಿಮೆ ಸೋಡಿಯಂ ಇರುವ ವೆರೈಟಿಗಳು ಲಭ್ಯವಿವೆ. ಹಾಗಾಗಿ ಅಂಥವುಗಳ ಆಯ್ಕೆಯನ್ನೂ ಮಾಡಬಹುದು.
ಸಿಹಿತಿನಿಸುಗಳು/ಡೆಸರ್ಟ್‌ಗಳು
ಸಿಹಿತಿನಿಸಿನಲ್ಲಿ ಹಾಗೂ ಯಾವುದೇ ಡೆಸರ್ಟ್ ವಿಚಾರಕ್ಕೆ ಬಂದರೆ ಅದರಲ್ಲಿ ಸಕ್ಕರೆಯಂಶ ಹೆಚ್ಚೇ. ಕೃತಕ ಸಿಹಿಗಳು ಇಂದು ಎಲ್ಲದರಲ್ಲೂ ಇರುವುದರಿಂದ ಕೇಕ್, ಕುಕ್ಕೀಸ್, ಐಸ್‌ಕ್ರೀಂ ಸೇರಿದಂತೆ ಯಾವುದೇ ಡೆಸರ್ಟ್ ತಿಂದರೆ ನೀವು ನೀರು ಹೆಚ್ಚು ಕುಡಿಯಲೇಬೇಕು. ಗಂಟಲೊಣಗಿ, ಬಾಯಾರುವುದು ನಿಶ್ಚಿತ. ಅದಕ್ಕೇ, ಮದುವೆ ಮನೆ, ಪಾರ್ಟಿ, ಸಮಾರಂಭಗಳ ಊಟ ಉಂಡು ಬಂದ ಮೇಲೆ ಹೆಚ್ಚು ಸುಸ್ತೂ, ಬಾಯಾರಿಕೆಯೂ ಆಗುತ್ತದೆ.
ಬೀಟ್‌ರೂಟ್
ತರಕಾರಿಗಳ ವಿಚಾರಕ್ಕೆ ಬಂದರೆ ಬೀಟ್‌ರೂಟ್ ಡಿಹೈಡ್ರೇಶನ್‌ಗೆ ದೂಡುವ ತರಕಾರಿ. ಬೀಟ್‌ರೂಟಿನಲ್ಲಿ ಪೊಟಾಶಿಯಂ ಹೇರಳವಾಗಿದೆ. ಹೀಗಾಗಿ ಇದು ದೇಹದಿಂದ ನೀರಿನಂಶವನ್ನು ಹೊರಕ್ಕೆ ದೂಡುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿಯೇ ಬೀಟ್‌ರೂಟ್ ಜ್ಯೂಸ್ ಕುಡಿದರೆ ಹೆಚ್ಚು ಬಾತ್‌ರೂಂಗೆ ಹೋಗಬೇಕೆನಿಸುತ್ತದೆ.
ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತಾ ಇದೆ. ಇಷ್ಟದ ತಿನಿಸನ್ನು ಈ ಕಾರಣಕ್ಕೆ ಬಿಡಬೇಕಾಗಿಲ್ಲ. ಆದರೆ, ಅತಿಯಾಗಿ ತಿನ್ನದಿರಿ. ಇಂತಹ ಆಹಾರ ಹಿತಮಿತವಾಗಿರಲಿ. ಈ ಸಂದರ್ಭ ಹಣ್ಣು ಹಂಪಲು, ತರಕಾರಿಗಳೂ ಜೊತೆಯಲ್ಲೇ ಹೊಟ್ಟೆ ಸೇರಲಿ. ಇವನ್ನು ತಿಂದ ಮೇಲೆ ಬಾಯಾರಿದರೆ, ಕಾಫಿ, ಚಹಾದಂತಹ ಕೆಫಿನ್‌ಯುಕ್ತ ಪದಾರ್ಥಗಳ ಮೊರೆ ಹೋಗದಿರಿ. ಆದಷ್ಟೂ ನೀರನ್ನೇ ಕುಡಿಯಿರಿ. ಆರೋಗ್ಯಕರ ಆಹಾರ ಸೇವನೆ ನಿಮ್ಮ ಮಂತ್ರವಾಗಲಿ.
ಇದನ್ನೂ ಓದಿ: Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?