ಫ್ಯಾಷನ್ ಇರಬಹುದು, ಆಹಾರ ಇರಬಹುದು ಹಳೆಯದೆಲ್ಲ ಮತ್ತೆ ಹೊಸ ಟ್ರೆಂಡ್ ಆಗಿ ಮರಳಿ ಬರುವುದುಂಟು. ಹಲೆಯ ಕಾಲದ ಪುರಾತನ ಪದ್ಧತಿಗಳು, ಆಹಾರ ಕ್ರಮ ಮತ್ತೆ ಒಳ್ಳೆಯದು ಎಂಬ ಹೆಸರಿನಲ್ಲಿ ಹೊಸ ರೂಪದಿಂದ ಆವರಿಸಿಕೊಳ್ಳುವುದುಂಟು. ಕೆಲವೊಮ್ಮೆ, ಹಳೆಯ ಆಹಾರ ಪದ್ಧತಿಗಳ ನಿಜವಾದ ಮಹತ್ವ ಈಗ ಅರಿವಾಗಿ ನಾವು ಹಿಂದಿನ ಆಹಾರಕ್ರಮಗಳ, ಆರೋಗ್ಯಕರ ಜೀವನ ಪದ್ಧತಿಗಳತ್ತ ಮತ್ತೆ ನಿಧಾನವಾಗಿ ಆಕರ್ಷಿತರಾಗುತ್ತಿದ್ದೇವೆ. ಇಂತಹುಗಳ ಪೈಕಿ ಬಾರ್ಲಿ ಎಂಬ ಧಾನ್ಯವೂ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ.
ಬಾರ್ಲಿಯ ಮಹತ್ವ ತಿಳಿದರೂ, ಬೇಸಗೆಯಲ್ಲಿ ಬಾರ್ಲಿ ದೇಹಕ್ಕೆ ತಂಪು (Summer drink) ಎಂಬುದು ಗೊತ್ತಿದ್ದರೂ ಇದನ್ನು ಬಳಸುವುದು ಹೇಗೆ ಎಂಬ ಸಂಶಯ ಹಲವರದ್ದು. ಇದಕ್ಕೆ ಉತ್ತರ ಬಾರ್ಲಿ ನೀರು (Barley water benefits). ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೆ, ಹಲವು ಆರೋಗ್ಯಕರ ಲಾಭಗಳನ್ನೂ ನಾವು ಪಡೆಯಬಹುದು.
ಬಾರ್ಲಿ ನೀರು ಮಾಡುವುದು ಹೇಗೆ?: ಎರಡು ಲೋಟ ನೀರಿಗೆ ಒಂದು ಚಮಚ ಬಾರ್ಲಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಬಾರ್ಲಿ ಕಾಳುಗಳು ಅನ್ನ ಬೆಂದಾಗ ಉಬ್ಬಿಕೊಳ್ಳುವ ಹಾಗೆ ಚೆನ್ನಾಗಿ ಉಬ್ಬಿಕೊಂಡ ಮೇಲೆ ಅಂದರೆ ಸಣ್ಣ ಉರಿಯಲ್ಲಿ ಸುಮಾರು ಅರ್ಧಗಂಟೆ ಕಾಲ ಕುದಿಸಿ ನಂತರ ಸೋಸಿಕೊಳ್ಳಿ. ಈ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಬಹುದು. ಉಪ್ಪು ಬೇಡವಾಗಿದ್ದರೆ, ನಿಂಬೆಹಣ್ಣು, ಜೇನುತುಪ್ಪವನ್ನೂ ಸೇರಿಸಿ ಕುಡಿಯಬಹುದು. ಸೋಂಪು ಹಾಗೂ ಚಿಟಿಕೆ ದಾಲ್ಚಿನಿ ಪುಡಿ ಸೇರಿಸಿಯೂ ಕುಡಿಯಬಹುದು.
ಹಾಗಾದರೆ, ಇನ್ನು ಉದ್ಭವಿಸುವ ಪ್ರಶ್ನೆ ಎಂದರೆ ದಿನವೂ ಬಾರ್ಲಿ ನೀರು ಕುಡಿಯಬಹುದೇ ಎಂಬುದು. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಬಾರ್ಲಿ ಒಳ್ಳೆಯದು, ತಂಪು ಎಂದುಕೊಂಡು ನಿತ್ಯವೂ ಬಾರ್ಲಿ ನೀರು ಕುಡಿಯುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ವಾರಕ್ಕೆ ಹೆಚ್ಚೆಂದರೆ ಎರಡು ಬಾರಿ ಬಾರ್ಲಿ ನೀರು ಕುಡಿಯಬಹುದು. ಮೂತ್ರನಾಳದ ಇನ್‌ಫೆಕ್ಷನ್ ಸಮಸ್ಯೆ ಆಗಾಗ ಎದುರಿಸುವ ಮಂದಿಗೆ ಬಾರ್ಲಿ ನೀರು ಅತ್ಯುತ್ತಮ. ಹೆಚ್ಚಿನ ಮಾಹಿತಿಗೆ ನಿಮ್ಮ ವೈದ್ಯರನ್ನೊಮ್ಮೆ ಭೇಟಿ ಮಾಡಿ ಅವರ ಸಲಹೆ ಪಡೆಯುವುದು ಒಳ್ಳೆಯದು.
ಬಾರ್ಲಿಯ ಪ್ರಯೋಜನಗಳು:
1. ಬಾರ್ಲಿಯಲ್ಲಿ ನಾರಿನಂಶ ಹೆಚ್ಚಿದೆ. ಹಾಗಾಗಿ ಇದು ಜೀರ್ಣಕ್ರಿಯೆಯ ಸಮಸ್ಯೆ ಇದರುವ ಮಂದಿಗೆ ಜೀರ್ಣವಾಗಲು ಸಹಾಯ ಮಾಡುತ್ತದೆ. ಬಾರ್ಲಿ ನೀರನ್ನು ಕುಡಿಯುವುದರಿಂದ ಈಂಥ ಸಮಸ್ಯೆಗಳನ್ನು ಸರಳವಾಗಿಸಬಹುದು. ತಲೆತಲಾಂತರಗಳಿಂದ ಬಾರ್ಲಿನೀರನ್ನು ಮನೆಗಳಲ್ಲಿ ಹೊಟ್ಟೆ ಸಂಬಂಧೀ ಸಮಸ್ಯೆಗಳ ಪರಿಹಾರಕ್ಕೆ ಮನೆಮದ್ದಾಗಿ ಬಳಸುತ್ತಿದ್ದರು.
ಇದನ್ನೂ ಓದಿ: Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್ ಡ್ರಿಂಕ್!
2. ನೀವು ತೂಕ ಇಳಿಸಲು ಸನ್ನದ್ಧರಾಗಿದ್ದರೆ, ಬಾರ್ಲಿ ನೀರು ಆರಾಮವಾಗಿ ಕುಡಿಯಬಹುದು. ಬಾರ್ಲಿ ನೀರು ತೂಕ ಇಳಿಸುವ ಮಂದಿಯ ಆಹಾರಕ್ರಮಕ್ಕೆ ಪೂರಕವಾಗಿ ವರ್ತಿಸುತ್ತದೆ. ಇದರಲ್ಲಿ ಕಡಿಮೆ ಕ್ಯಾಲರಿ ಇರುವುದುರಿಂದ ತೂಕ ಹೆಚ್ಚಾಗದೆ, ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.
3. ಮಧುಮೇಹಿಗಳಿಗೂ ಬಾರ್ಲಿ ನೀರು ಅತ್ಯುತ್ತಮ. ಬಾರ್ಲಿ ನೀರಿನಲ್ಲಿ ದೇಹದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಸಮತೋಲನಗೊಳಿಸುವ ಶಕ್ತಿ ಇರುವುದರಿಂದ ಹಾಗೂ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುವುದರಿಂದ ಮಧುಮೇಹಿಗಳು ಚಿಂತೆಯಿಲ್ಲದೆ ಇದನ್ನು ಸೇವಿಸಿ ಪ್ರಯೋಜನ ಪಡೆಯಬಹುದು.
4. ಬಾರ್ಲಿ ನೀರು ಅತ್ಯುತ್ತಮ ಡಿಟಾಕ್ಸ್ ಡ್ರಿಂಕ್ ಕೂಡಾ. ಇದು ದೇಹದಿಂದ ಕಶ್ಮಲಗಳನ್ನು ಹೊರಕ್ಕೆ ಕಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
5. ಬಾರ್ಲಿ ನೀರು ಕುಡಿಯುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ.
6. ಬಾರ್ಲಿ ನೀರು ಡೈ ಯುರೇಟಿಕ್ ಆಗಿರುವುದರಿಂದ ಇದು ಮೂತ್ರ ಸಂಬಂಧೀ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಮೂತ್ರನಾಳದ ಇನ್ಫೆಕ್ಷನ್ ಇರುವ ಮಂದಿ, ಉರಿಮೂತ್ರದ ಸಮಸ್ಯೆ ಇದ್ದವರು ಬಾರ್ಲಿ ನೀರನ್ನು ಕುಡಿಯುವ ಮೂಲಕ ಸಮಸ್ಯೆಯಿಂದ ಮುಕ್ತರಾಗಬಹುದು.
ಇದನ್ನೂ ಓದಿ: Health Tips: ನಿಮಗೆ ಈ ಸಮಸ್ಯೆಗಳಿದ್ದರೆ ಕ್ಯಾಲ್ಶಿಯಂ ಕೊರತೆಯಿದೆ ಎಂದರ್ಥ!