Site icon Vistara News

Health Tips: ಒಗ್ಗರಣೆಗೆ ಹಾಕುವ ಕರಿಬೇವನ್ನು ನಾವು ನಿತ್ಯವೂ ಏಕೆ ತಿನ್ನಬೇಕು ಗೊತ್ತೇ?

Health Tips curry leaves benefits to hair

ದಕ್ಷಿಣ ಭಾರತೀಯರಿಗೆ ಕರಿಬೇವಿನ ಸೊಪ್ಪಿಲ್ಲದೆ (Curry leaves) ಅಡುಗೆ ಮುಂದೆ ಸಾಗದು. ಅದು ಉಪ್ಪಿಟ್ಟಿನಿಂದ ಹಿಡಿದು ಸಾಂಬಾರು, ರಸಂ, ಪಲ್ಯಗಳ ಒಗ್ಗರಣೆಗಳಿಗೆ ಕರಿಬೇವಿನ ಸೊಪ್ಪು ಬೇಕೇ ಬೇಕು. ಒಂದು ಒಗ್ಗರಣೆಯಲ್ಲಿ ಕರಿಬೇವಿನ ಸೊಪ್ಪು ಹಾಕುವುದರಿಂದ ಮಹಾ ಏನಾದೀತು ಎಂದು ನಾವು ಯೋಚಿಸಬಹುದು. ಆದರೆ, ನಿಜವಾಗಿ ನೋಡಿದರೆ, ಕರಿಬೇವು ಈ ಎಲ್ಲ ಅಡುಗೆಯಲ್ಲಿ ಒಂದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದು ಅಪ್ಪಟ ಸತ್ಯ. ಇದೇ ಕರಿಬೇವು ಒಗ್ಗರಣೆಯಲ್ಲಿ ಇಲ್ಲದೆ ಇರುವುದನ್ನು ಒಮ್ಮೆ ಊಹಿಸಿ ನೋಡಿ. ಕಷ್ಟವಾಗುತ್ತದೆ ಅಲ್ಲವೇ? ಹೌದು, ಒಗ್ಗರಣೆಯ ಮೂಲಕ ಆಹಾರಕ್ಕೆ ತನ್ನದೇ ಆದ ಸ್ವಾದ, ಘಮವನ್ನ ನೀಡುವ ಗುಣ ಕರಿಬೇವಿಗಿದೆ. ಇಷ್ಟೇ ಇದ್ದರೆ ಕರಿಬೇವು ನಮ್ಮ ಅಡುಗೆ ಮನೆಯಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಳ್ಳುತ್ತಿರಲಿಲ್ಲ.

ಕರಿಬೇವಿನಲ್ಲಿ ಸಾಕಷ್ಟು ಪೋಷಕಾಂಶಗಳೂ, ಜೀವಸತ್ವಗಳೂ ಇವೆ. ಅದಕ್ಕಾಗಿಯೇ ಕರಿಬೇವು ಇಂದು ಹಲವಾರು ಆರೋಗ್ಯಕರ ಲಾಭಗಳನ್ನು ತನ್ನೊಳಗೆ ಬಚ್ಚಿಟ್ಟಿದೆ. ಇದರಲ್ಲಿ ಕಬ್ಬಿಣಾಂಶ, ತಾಮ್ರ, ಕ್ಯಾಲ್ಶಿಯಂ, ಪಾಸ್ಪರಸ್‌, ಹಾಗೂ ನಾರಿನಂಶ ಇದ್ದು ಇದು ಆಹಾರದಲ್ಲಿ ನಿತ್ಯವೂ ಸೇರಿಸಬಹುದಾದ ಉತ್ತಮ ಆಯ್ಕೆ. ಇದರಲ್ಲಿ ವಿಟಮಿನ್‌ ಕೆ, ಬಿ, ಸಿ ಮತ್ತು ಇ ಹೇರಳವಾಗಿದ್ದು, ನಮ್ಮನ್ನು ಹಲವು ರೋಗಗಳಿಂದ ರಕ್ಷಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾದರೆ ಬನ್ನಿ, ಕರಿಬೇವಿನ ಯಾವ ಗುಣಗಳಿಗಾಗಿ ನಾವು ಅದನ್ನು ನಿತ್ಯವೂ ಸೇವಿಸಬೇಕು ಎಂಬುದನ್ನು ನೋಡೋಣ.

ತೂಕ ಇಳಿಕೆ: ಕರಿಬೇವು ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂದರೆ ನಂಬುತ್ತೀರಾ? ಹೌದು. ಕರಿಬೇವಿನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿರುವ ಕೆಟ್ಟ ಕೊಲೆಸ್ಟೆರಾಲ್‌ ಕರಗಿಸುವುದರಲ್ಲಿ ಸಹಾಯ ಮಾಡುತ್ತದೆ.

ಮಲಬದ್ಧತೆ: ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೆ ಕರಿಬೇವು ಒಳ್ಳೆಯದು. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಇದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಮಲಬದ್ಧತೆ, ಅಜೀರ್ಣ, ಅಸಿಡಿಟಿಯಂತಹ ತೊಂದರೆಗಳೂ ಹತೋಟಿಗೆ ಬರುತ್ತದೆ.

ಮಧುಮೇಹ: ಕರಿಬೇವಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು ಇದು ಇನ್ಸುಲಿನ್‌ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.

ಇದನ್ನೂ ಓದಿ: Health Tips: ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ರಾಮಬಾಣ: ಇಂಗು ಹಾಗೂ ಓಮದ ನೀರು!

ಗಾಯಕ್ಕೆ: ಕರಿಬೇವಿನಲ್ಲಿ ಆಲ್ಕನಾಯ್ಡ್‌ಗಳಿದ್ದು ಇದು ಗಾಯ ಬೇಗ ಗುಣವಾಗುವುದಕ್ಕೆ, ಗಾಯ ಬೇಗನೆ ಮಾಸುವುದಕೆ ನೆರವಾಗುತ್ತದೆ. ಅಡುಗೆ ಮಾಡುವಾಗ ಆಗೀಗ ನಡೆಯುವ ಸಣ್ಣಪುಟ್ಟ ಬೆಂಕಿಯ ಗಾಯಗಳಿಗೂ ಕೂಡಾ ಇದು ಒಳ್ಳೆಯ ಮನೆಮದ್ದು. ಕರಿಬೇವಿನ ಸೊಪ್ಪಿನ ಪೇಸ್ಟನ್ನು ಅಂಥ ಜಾಗಕ್ಕೆ ಹಚ್ಚುವ ಮೂಲಕ ನೋವಿನಿಂದ ಹಾಗೂ ಉರಿಯಿಂದ ತಕ್ಕಮಟ್ಟಿಗಿನ ಫಲ ಪಡೆಯಬಹುದು.

ಬೆಳಗಿನ ತಲೆಸುತ್ತುವಿಕೆಗೆ: ಬೆಳಗಿನ ಹೊತ್ತು ಕೆಲವರಿಗೆ ಉಂಟಾಗುವ ತಲೆಸುತ್ತು ನಿತ್ರಾಣದಂತಹ ಸಮಸ್ಯೆಗಳಿಗೆ ಕರಿಬೇವು ಉತ್ತಮ ಔಷಧಿ.

ಕಣ್ಣಿನ ಆರೋಗ್ಯಕ್ಕೆ: ಕರಿಬೇವಿನಲ್ಲಿ ವ್ಯಾಪಕವಾಗಿ ಎ ವಿಟಮಿನ್‌ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ಒಳ್ಳೆಯದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕಣ್ಣಿನ ಪೊರೆ ಹೆಚ್ಚಾಗದಂತೆ ತಡೆಯುತ್ತದೆ. 

ಇದನ್ನೂ ಓದಿ: Health Tips: ಸೂಕ್ಷ್ಮ ಜೀರ್ಣಕ್ರಿಯೆಯ ಮಂದಿ ರಾತ್ರಿಯೂಟಕ್ಕೆ ಇವುಗಳಿಂದ ದೂರವಿರಿ!

Exit mobile version