Site icon Vistara News

Health Tips: ಸಿಪ್ಪೆ ಎಂಬ ಪೋಷಕಾಂಶಗಳ ಪ್ಯಾಕೇಜ್:‌ ತರಕಾರಿ ಹಣ್ಣುಗಳ ಸಿಪ್ಪೆಯನ್ನು ತಿಪ್ಪೆಗೆ ಎಸೆಯದಿರಿ!

vegetable peels

ಹಣ್ಣುಗಳು ಹಾಗೂ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ, ಈ ಹಣ್ಣು ತರಕಾರಿಗಳ ಸಿಪ್ಪೆಯ ಬಗ್ಗೆ ಯಾರಾದರೂ ಮಾತಾಡುತ್ತಾರಾ? ಎಲ್ಲ ಹಣ್ಣು ತರಕಾರಿಗಳ ಸಿಪ್ಪೆಯನ್ನು ತಿನ್ನಲಂತೂ ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿ ಬಹುತೇಕ ಸಿಪ್ಪೆ ತಿಪ್ಪೆ ಸೇರುವುದಂತೂ ನಿಶ್ಚಿತ. ಆದರೆ, ತಿಪ್ಪೆ ಸೇರಿಸುವ ಬದಲು, ಸಿಪ್ಪೆಯಲ್ಲಿರುವ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿಯೂ ಬಳಸಬಹುದು. ಬಹುತೇಕ ಎಲ್ಲ ತರಕಾರಿ ಹಣ್ಣುಗಳ ಸಿಪ್ಪೆಗಳಲ್ಲಿ ಸಾಕಷ್ಟು ನಾರಿನಂಶ ಇದ್ದು ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ. ದೇಹವನ್ನು ಆರೋಗ್ಯವಾಗಿಡುವ ಜೊತೆಗೆ ದೇಹದಲ್ಲಿರುವ ಕಶ್ಮಲಗಳನ್ನು ಹೊರಗೆ ಕಳಿಸುತ್ತದೆ. ಬನ್ನಿ, ದೇಹಕ್ಕೆ ಸಾಕಷ್ಟು ಪೋಷಕಾಂಶಗಳ ಪ್ಯಾಕೇಜನ್ನೇ ರವಾನಿಸುವ ಈ ಸಿಪ್ಪೆಗಳನ್ನು ಹೇಗೆ ಆರೋಗ್ಯಕ್ಕೆ ಸಹಾಯವಾಗುವ ರೀತಿಯಲ್ಲಿ ಬಳಸಬಹುದು ಎಂಬುದನ್ನು ನೋಡೋಣ.

1. ಆಲೂಗಡ್ಡೆ: ಆಲೂಗಡ್ಡೆಯನ್ನು ಇಷ್ಟಪಡದವರು ಕಡಿಮೆ. ಆಲೂಗಡ್ಡೆಯ ಚಿಪ್ಸ್‌ ಎಲ್ಲರ ಫೇವರಿಟ್‌. ಉತ್ತರ ಭಾರತೀಯರಿಗಂತೂ ಆಲೂಗಡ್ಡೆಯಿಲ್ಲದೆ ಬದುಕುವುದೇ ಕಷ್ಟ ಎಂಬಷ್ಟು ನಂಟು. ಇಂತಹ ಆಲೂಗಡ್ಡೆಯ ಸಿಪ್ಪೆಯನ್ನು ಏನು ಮಾಡುತ್ತೀರಿ? ಸಿಪ್ಪೆ ತೆಗೆದು ಅಡುಗೆ ಮಾಡುತ್ತೀರೋ? ಹಾಗಿದ್ದರೆ ಇಲ್ಲಿ ಕೇಳಿ. ಆಲೂಗಡ್ಡೆ ಸಿಪ್ಪೆಯಲ್ಲಿ ಹೇರಳವಾಗಿ ವಿಟಮಿನ್‌ ಬಿ, ಸಿ ಹಾಗೂ ಕಬ್ಬಿಣಾಂಶ, ಕ್ಯಾಲ್ಶಿಯಂ ಹಾಗೂ ನಾರಿನಂಶವಿದೆ. ಬಿಸಾಡುವ ಬದಲು, ತೆಳುವಾಗಿ ಕತ್ತರಿಸಿದ ಸಿಪ್ಪೆಯನ್ನು ಫ್ರೈ ಮಾಡಿ. ಅನ್ನ ದಾಲ್‌ ಜೊತೆಗೆ ನೆಂಜಿಕೊಳ್ಳಲು ಬಹಳ ರುಚಿ.

aloo peel

2. ಸೋರೆಕಾಯಿ: ನಿಮಗೆ ಇಷ್ಟವೋ ಇಲ್ಲವೋ ಸೋರೆಕಾಯಿಯನ್ನು ನೀವು ನಿಮ್ಮ ನಿತ್ಯಾಹಾರದಿಂದ ಬಿಡುವ ಹಾಗಿಲ್ಲ. ಯಾಕೆಂದರೆ ಮುಖ್ಯವಾಗಿ ಬೇಸಿಗೆಯಲ್ಲಿ ಸೋರೆಕಾಯಿಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇನ್ನು ಸೋರೆಕಾಯಿಯ ಸಿಪ್ಪೆಯ ಮಹಿಮೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದರ ಸಿಪ್ಪೆಯಲ್ಲಿ ಸಾಕಷ್ಟು ನಾರಿನಂಶ, ವಿಟಮಿನ್‌ ಸಿ, ಆಂಟಿ ಆಕ್ಸಿಡೆಂಟ್ಸ್‌ಗಳಿವೆ. ಹಾಗಾದರೆ, ಈ ಸೋರೆಕಾಯಿ ಸಿಪ್ಪೆಯನ್ನು ಏನು ಮಾಡಬಹುದು ಅಂತೀರಾ? ಆಲೂಗಡ್ಡೆಯ ಸಿಪ್ಪೆಯನ್ನು ಹುರಿದಂತೆ ತೆಳುವಾದ ಸಿಪ್ಪೆಯನ್ನು ಹುರಿದು ಅನ್ನದ ಜೊತೆಗೆ ತಿನ್ನಬಹುದು. ಅಥವಾ, ಸಿಪ್ಪೆಯನ್ನು ತೆಗೆದಿಟ್ಟು ಚಟ್ನಿ ಮಾಡಿ, ಅನ್ನದ ಜೊತೆಗೋ ದೋಸೆಯ ಜೊತೆಗೋ ನೆಂಜಿಕೊಳ್ಳಬಹುದು.

3. ಕಲ್ಲಂಗಡಿ ಹಣ್ಣು: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಮಹಿಮೆ ನಮಗೆ ಗೊತ್ತೇ ಇದೆ. ಅಂಥದ್ದರಲ್ಲಿ, ಪ್ರತಿದಿನ ಕಲ್ಲಂಗಡಿ ಹಣ್ಣು ತಂದು ಅದರ ಅಮೂಲ್ಯ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೀರೆಂದರೆ ನಿಮ್ಮಷ್ಟು ದುರಾದೃಷ್ಟವಂತರು ಇನ್ನೊಬ್ಬರಿಲ್ಲ. ಯಾಕೆಂದರೆ, ಕಲ್ಲಂಗಡಿ ಹಣ್ಣಿನ ದಪ್ಪ ಸಿಪ್ಪೆಯಿಂದ ಬಹಳಷ್ಟು ತಿನಿಸುಗಳನ್ನು ಟ್ರೈ ಮಾಡಬಹುದು. ಸಿಪ್ಪೆಯ ಹಸಿರು ಭಾಗವನ್ನು ತೆಗೆದು ಬಿಳಿ ಭಾಗವನ್ನು ಸಣ್ಣದಾಗಿ ಹೆಚ್ಚಿ ಪಲ್ಯ ಮಾಡಬಹುದು. ಅಥವಾ ಸಿಪ್ಪೆಯ ಚಟ್ನಿ ಮಾಡಿ ದೋಸೆಯ ಜೊತೆಗೆ ತಿನ್ನಬಹುದು. ತುರಿದ ಸಿಪ್ಪೆಯಿಂದ ಹಲ್ವಾ ಮಾಡಿದರೆ ಕಾಶಿ ಹಲ್ವಾದಂತೆಯೇ ರುಚಿ.

ಇದನ್ನೂ ಓದಿ: Health Tips: ಮೊಟ್ಟೆ ತಿನ್ನದವರು ಪ್ರೊಟೀನ್‌ಗಾಗಿ ಈ ಸಸ್ಯಾಹಾರಗಳನ್ನು ಸೇವಿಸಬಹುದು!

4. ಕಿತ್ತಳೆ: ಕಿತ್ತಳೆಯ ಸಿಪ್ಪೆಯನ್ನು ಎಸೆಯುವವರೇ ಹೆಚ್ಚು. ಆದರೆ, ಕಿತ್ತಳೆಯ ಸಿಪ್ಪೆಯಿಂದ ಸಾಕಷ್ಟು ಉಪಯೋಗಗಳಿವೆ. ಕಿತ್ತಳೆ ಸಿಪ್ಪೆಯ್ನು ತೊಳೆದು ಒಣಗಿಸಿ ಪುಡಿ ಮಾಡಿ ಇಟ್ಟು ಕೊಂಡರೆ, ಅದನ್ನು ಮುಖಕ್ಕೆ ವಿಟಮಿನ್‌ ಸಿ ಫೇಸ್‌ಪ್ಯಾಕ್‌ ಆಗಿ ಬಳಸಬಹುದು. ಅಥವಾ ಆ ಪುಡಿಯನ್ನು ಸಲಾಡ್‌ ಅಲಂಕರಿಸಲು ಬಳಸಬಹುದು. ಇದು ಸಲಾಡ್‌ಗೆ ಉತ್ತಮ ಘಮವನ್ನೂ ನೀಡುತ್ತದೆ. ಸಿಪ್ಪೆಯನ್ನು ನಿಂಗೆಹಣ್ಣಿನ ರೀತಿಯಲ್ಲಿ ಉಪ್ಪಿನಕಾಯಿಯಾಗಿಯೂ ಮಾಡಬಹುದು.

5. ಸೌತೆಕಾಯಿ: ಬೇಸಿಗೆಯಲ್ಲಿ ಸೌತೆಕಾಯಿ ದೇಹಕ್ಕೆ ತಂಪು ಎಂದು ಎಲ್ಲರಿಗೂ ಗೊತ್ತಿರುವುದೇ. ಇಂತಹ ಸೌತೆಕಾಯಿಯ ಸಿಪ್ಪೆಯಲ್ಲಿ ವಿಟಮಿನ್‌ ಕೆ, ಪೊಟಾಶಿಯಂ, ಹಾಗೂ ನಾರಿನಂಶ ಹೇರಳವಾಗಿದೆ. ಇದನ್ನೂ ಎಸೆಯುವ ಬದಲು ಚಟ್ನಿ ಮತ್ತಿತರ ಬಗೆಗಳನ್ನು ಟ್ರೈ ಮಾಡಬಹುದು.

ಇದನ್ನೂ ಓದಿ: Health Tips: ಮೊಸರಿನ ಜೊತೆಗೆ ಯಾವೆಲ್ಲ ಆಹಾರಗಳನ್ನು ತಿನ್ನಬಾರದಂತೆ ಗೊತ್ತೇ?

Exit mobile version