Site icon Vistara News

Health tips | ನಿದ್ದೆಯೇ ಸಮಸ್ಯೆಯೇ? ನಿದ್ದೆ ಬರದೇ ಇರಲು ಈ ಕಾರಣವೂ ಇರಬಹುದು!

sleep

ಪ್ರತಿಯೊಬ್ಬ ಜೀವಿಗೂ ನಿದ್ದೆಯೆಂಬುದು ಅತೀ ಮುಖ್ಯ. ಮನುಷ್ಯನೂ ಆರೋಗ್ಯದಿಂದಿರಲು ನಿದ್ದೆ ಅತ್ಯವಶ್ಯಕ. ಆರೋಗ್ಯವಂತ ಮನುಷ್ಯನಿಗೆ ಪ್ರತಿನಿತ್ಯ ಎಂಟು ಗಂಟೆಗಳ ನಿದ್ಯೆ ಬೇಕೆಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಕೆಲವರಿಗೆ ನಿದ್ದೆಯೇ ಸಮಸ್ಯೆ. ಅತಿಯಾದ ಕೆಲಸದಿಂದಾಗಿ ಕೆಲವರಿಗೆ ನಿಜವಾಗಿಯೂ ಅಗತ್ಯವಿರುವ ನಿದ್ದೆ ಸಿಕ್ಕದಿದ್ದರೆ, ಇನ್ನೂ ಕೆಲವರಿಗೆ ಮಲಗಿದರೂ ನಿದ್ದೆ ಬಾರದು. ಕಣ್ಣು ಮುಚ್ಚಿದರೂ ನಿದ್ದೆ ಕಣ್ಣಿಗೆ ಹತ್ತಲು ಗಂಟೆಗಟ್ಟಲೆ ಸಮಯ ಬೇಕು. ದಿನಕ್ಕೆ ನಾಲ್ಕೈದು ಗಂಟೆ ನಿದ್ದೆ ಮಾಡುವವರೂ ಇದ್ದಾರೆ. ಕೆಲವರಿಗೆಇದು ಸಮಸ್ಯೆಯಲ್ಲದಿದ್ದರೂ ಹಲವರಿಗೆ ಇದು ಸಮಸ್ಯೆಯೇ. ಆದರೆ, ನಮ್ಮ ಆರೋಗ್ಯ ಸಮಸ್ಥಿತಿಯಲ್ಲಿರಲು ನಿದ್ದೆ ಮಾಡುವುದರ ಮಹತ್ವ ನಾವು ಅರಿಯಬೇಕು.

ನಿದ್ದೆ ಬರದಿರಲು ಕಾರಣ ಹಲವು. ನಿದ್ದೆ ಬರುತ್ತಿಲ್ಲ ಎಂದಾದರೆ ನಿದ್ದೆ ಯಾಕೆ ಬರುತ್ತಿಲ್ಲ ಎಂದು ಕಾರಣ ಹುಡುಕುವುದೂ ಮುಖ್ಯ. ನಿರ್ಲಕ್ಷ್ಯ ಸಲ್ಲ. ಹಾಗಾದರೆ ನಿದ್ದೆ ಬರದೇ ಇರಲು ಕೆಲವು ಸಾಮಾನ್ಯ ಕಾರಣಗಳು ಯಾವುದಿರಬಹುದು ಎಂಬುದನ್ನು ನೋಡೋಣ.

೧. ನಿದ್ದೆಯ ಅವಧಿಯಲ್ಲಿ ವ್ಯತ್ಯಾಸವಾದರೂ ತೊಂದರೆಯೇ. ಆರೋಗ್ಯದಿಂದಿರಲು ನಿದ್ದೆಯಲ್ಲಿ ಶಿಸ್ತು ಮುಖ್ಯ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಮತೂಕದ ನಿದ್ದೆ ನಿತ್ಯ ಅವಶ್ಯಕ. ಅದಕ್ಕೊಂದು ನಿರ್ಧಿಷ್ಟ ಸಮಯವನ್ನು ಪಾಲಿಸಬೇಕು. ಉದಾಹರಣೆಗೆ ಪ್ರತಿನಿತ್ಯ ೧೦ ಗಂಟೆಗೆ ನೀವು ಮಲಗಲು ಹೋಗುತ್ತೀರೆಂದಾದರೆ ಹೆಚ್ಚುಕಮ್ಮಿ ಅದೇ ಸಮಯವನ್ನು ನಿತ್ಯ ಪಾಲಿಸಲು ಪ್ರಯತ್ನಪಡಿ. ಇದು ಉತ್ತಮ ಆರೋಗ್ಯದ ಕೀಲಿಕೈ.

೨. ನಿಮ್ಮ ಕೊಠಡಿಯಲ್ಲಿ ಹೆಚ್ಚು ಬೆಳಕಿದೆಯೇ ಎಂಬುದನ್ನು ಗಮನಿಸಿ. ಆದಷ್ಟು ರೂಮನ್ನು ಕತ್ತಲಾಗಿಸಲು ಪ್ರಯತ್ನಿಸಿ. ಮೊಬೈಲ್‌ ಫೋನ್‌, ಲ್ಯಾಪ್‌ಟಾಪಿನ ತೀಕ್ಷ್ಣ ಬೆಳಕು ಮಲಗುವಾಗ ಇರದಿರಲಿ. ಬೆಡ್‌ ಲ್ಯಾಂಪ್‌ ಉರಿಸುವ ಅಭ್ಯಾಸ ಕಡಿಮೆ ಮಾಡಿ ನೋಡಿ.

೩. ವ್ಯಾಯಾಮ ಒಳ್ಳೆಯದು ನಿಜ. ಆದರೆ, ಹೆಚ್ಚು ವ್ಯಾಯಾಮದಿಂದಾದ ಹೃದಯ ಬಡಿತ ವೇಗವಾಗಿ, ಇದು ನಿಮ್ಮ ನಿದ್ದೆಗೆ ತೊಂದರೆ ಕೊಡಬಹುದುದ. ಹಾಗಾಗಿ, ರಾತ್ರಿ ವರ್ಕ್‌ಔಟ್‌ ಮಾಡುತ್ತಿದ್ದರೆ, ಬೆಳಗ್ಗಿನ ಸಮಯ ಅದನ್ನು ಮಾಡಲು ಪ್ರಯತ್ನಿಸಿ. ರಾತ್ರಿಯ ವ್ಯಾಯಾಮ ಬಿಟ್ಟು ನೋಡಿ.

೪. ವ್ಯಾಯಾಮವಿಲ್ಲದ ಆಲಸಿ ಜೀವನಶೈಲಿಯಿಂದಲೂ ನಿದ್ದೆ ಬರದಿರಬಹುದು. ಹಾಗಾಗಿ ವ್ಯಾಯಾಮ ಹಾಗೂ ಚುರುಕಿನ ಜೀವನಶೈಲಿಯನ್ನು ರೂಪಿಸಿಸ. ದಿನಕ್ಕೊಂದಿಷ್ಟು ಸಮಯ ನಡಿಗೆ, ವ್ಯಾಯಾಮ ಇತ್ಯಾದಿಗಳು ಇರಲಿ.

೫. ಸರಿಯಾದ ಆಹಾರಶೈಲಿಯ ಸಮಸ್ಯೆಯೂ ಆಗಿರಬಹುದು. ಹೆಚ್ಚು ಖಾರ, ಮಸಾಲೆಯುಕ್ತ ಊಟವನ್ನು ಪ್ರತಿನಿತ್ಯ ರಾತ್ರಿ ಮಾಡುವುದರಿಂದ ಎದೆಯುರಿಯಂತಹ ಸಮಸ್ಯೆಯೂ ಬರಬಹುದುದ. ನಿದ್ದೆ ಹಾರಿಹೋಗಬಹುದು. ರಾತ್ರಿ ಯಾವಾಗಲೂ ಸರಳ ಸಮತೂಕದ ಊಟ ಮಾಡಿ.

೬. ಕೊರೋನಾದಿಂದಾಗಿ ವೃತ್ತಿಯ ಶೈಲಿಯಲ್ಲೇ ಇಂದು ಬದಲಾಗಿದೆ. ಮನೆಯಲ್ಲೇ ಹೊತ್ತಲ್ಲದ ಹೊತ್ತಿನಲ್ಲಿ ಕೆಲಸ ಮಾಡುವ ಅಭ್ಯಾಸವೂ ಹೆಚ್ಚಾಗಿದೆ. ಇದು ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಮನೆಯಿಂದಲೇ ಕೆಲಸ ಮಾಡುವವರು ಒಂದು ನಿರ್ಧಿಷ್ಟ ಸಮಯದವನ್ನು ಕೆಲಸಕ್ಕಾಗಿ ಮೀಸಲಿಡುವುದುದ ಒಳ್ಳೆಯದು. ಬೆಡ್‌ರೂಮಿನಿಂದಲ್ಲೇ ಕೂತು ಕೆಲಸ ಮಾಡುವುದು, ಕೂರುವ ಭಂಗಿ, ಎಲ್ಲವೂ ನಿದ್ದೆಯ ಮೇಲೆ ಪರಿಣಾಮ ಬೀರುವುದರಿಂದ ಬೆಡ್‌ರೂಮಿನಲ್ಲಿ ಹಾಸಿಗೆಯ ಮೇಲೆ ಕೂತು ಕೆಲಸ ಮಾಡುವ ಆಭ್ಯಾಸವನ್ನು ಬಿಡಿ.

ಇದನ್ನೂ ಓದಿ | Health Tips | ಹಣ್ಣುಗಳನ್ನೇಕೆ ತಿನ್ನಬೇಕು? ಇಲ್ಲಿವೆ ಸರಳ ಕಾರಣಗಳು!

೭.ರಾತ್ರಿಯಾದ ಮೇಲೆ ಕೆಫಿನ್‌ ಅಂಶವಿರುವ ಪೇಯಗಳನ್ನು, ಕಾಫಿ ಚಹಾ ಕುಡಿಯದಿರಿ. ಇವು ಹೆಚ್ಚು ಹೊತ್ತು ಎಚ್ಚರವಿರುವಂತೆ ಮಾಡುತ್ತದೆ. ಕೆಫಿನ್‌ ಅಂಶ ದೇಹಕ್ಕೆ ಹೋದರೆ ಅದು ನಮ್ಮ ದೇಹವನ್ನು ಬಿಟ್ಟು ಹೋಗಲು ಆರು ಗಂಟೆಗಳ ಕಾಲ ಬೇಕಾಗುತ್ತದೆ. ಹಾಗಾಗಿ ರಾತ್ರಿಯಾದ ಮೇಲೆ ಇವುಗಳಿಂದ ದೂರವಿರಿ.

೮.ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದೂ ಕೂಡಾ ನಿದ್ದೆಗೆ ಸಮಸ್ಯೆಯೇ. ತಡರಾತ್ರಿಯ ಊಟ, ಹೆಚ್ಚು ಉಣ್ಣುವುದು ಇತ್ಯಾದಿಗಲೂ ಕೂಡಾ ನಿದ್ದೆಯನ್ನು ಕೆಡಿಸುತ್ತದೆ.

೯. ಮಾನಸಿಕ ಆರೋಗ್ಯ ಸಮತೋಲನದಲ್ಲಿ ಇಲ್ಲದಿದ್ದರೂ ನಿದ್ದೆಯ ಸಮಸ್ಯೆಯಾಗುತ್ತದೆ. ಇದು ಮಹಿಳೆಯರಲ್ಲಿ ಜಾಸ್ತಿ. ಖಿನ್ನತೆ, ಒತ್ತಡಗಳೂ ಕೂಡಾ ನಿದ್ದೆ ಬರದಂತೆ ಮಾಡಬಹುದು.

೧೦. ಅಪ್ನಿಯಾ ಕೂಡಾ ಕಾರಣವಾಗಿರಬಹುದು. ಸ್ಥೂಲಕಾಯದ ಮಂದಿಗೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ದವಡೆಯ ಮಾಂಸಖಂಡಗಳಲ್ಲಾಗುವ ಸಣ್ಣ ಬದಲಾವಣೆಯೂ ಕೂಡಾ ಗೊರಕೆಯಂತಹ ಸಮಸ್ಯೆ ತರಬಹುದು. ಇವೂ ಕೂಡಾ ನಿದ್ದೆಗೆ ತೊಂದರೆ ಕೊಡುತ್ತವೆ. 

ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್‌ ಸ್ಕ್ರೀನ್‌ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ

Exit mobile version