Site icon Vistara News

Curry Leaves Uses: ಕರಿಬೇವು ಎಂಬ ಹಸಿರು ಚಿನ್ನ: ಎಸೆಯುವ ಬದಲು ಹೀಗೆಲ್ಲಾ ಬಳಸಿ!

Curry-Leaves

ದಕ್ಷಿಣ ಭಾರತೀಯರ ಒಗ್ಗರಣೆಯ ಸೀಕ್ರೆಟ್‌ ಕರಿಬೇವು! ಇದಿಲ್ಲದಿದ್ದರೆ ನಮ್ಮ ಊಟ ಮುಂದೆ ಸಾಗದು ಎಂಬಂಥ ನಂಟು ದಕ್ಷಿಣ ಭಾರತೀಯರಿಗೆ ಕರಿಬೇವಿನ (Curry Leaves) ಜೊತೆಗಿದೆ. ಕೇವಲ ಒಗ್ಗೆರಣೆಗೆ ಮಾತ್ರವಲ್ಲ, ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗುವ ಪೋಷಕಾಂಶಗಳನ್ನು ಕೊಡುವ ಆಗರವೂ (Curry Leaves benefits) ಇದುವೇ. ಆದರೆ, ಬಹಳಷ್ಟು ಸಾರಿ, ಒಗ್ಗರಣೆಗೆ ಬಳಕೆಯಾಗಿ ಎಸೆಯಲ್ಪಡುವ ಎಲೆಯಾಗಿ ಮಾತ್ರ ಬಳಕೆಯಾಗುವುದು ವಿಪರ್ಯಾಸ. ಒಗ್ಗರಣೆಗೆಂದು ಮನೆಗೆ ತಂದು, ಕೆಲದಿನ ಫ್ರಿಡ್ಜ್‌ನಲ್ಲಿಟ್ಟು ಆಮೇಲೆ ಎಸೆದುಬಿಡುವ ಮಂದಿಯೂ ಅನೇಕ. ಆದರೆ, ಎಸೆಯುವ ಮೊದಲು ಒಮ್ಮೆ ಯೋಚಿಸಿ. ಇದನ್ನೊಮ್ಮೆ ಓದಿದರೆ, ಎಷ್ಟೊಂದು ಪೋಷಕಾಂಶಗಳನ್ನು (nutrients) ಅಂಗೈಯಲ್ಲೇ ಇಟ್ಟುಕೊಂಡು ಹಾಳು ಮಾಡಿಬಿಟ್ಟೆನಲ್ಲ ಎಂಬ ವ್ಯಥೆ ನಿಮ್ಮನ್ನು ಕಾಡದೆ ಇರದು. ಹಾಗಾಗಿ, ಕೇವಲ ಒಗ್ಗರಣೆಗೆ ಬಳಸುವ ಮಂದಿಯೆಲ್ಲ, ಇಲ್ಲಿ ಕಿವಿಗೊಟ್ಟು ಕೇಳಿ, ಬೇಕಾದಷ್ಟು ಲಭ್ಯವಿರುವ ಕರಿಬೇವನ್ನು ಸಮರ್ಪಕವಾಗಿ ಆಹಾರದಲ್ಲಿ ಬಳಸಲು (Curry Leaves Uses) ಆರಂಭಿಸಿ. ಒಗ್ಗರಣೆಯ ಜೊತೆಜೊತೆಗೇ, ಅಳಿದುಳಿದ ಎಲೆಗಳನ್ನು ಸ್ವಚ್ಛಮಾಡಿ ಒಣಗಿಸಿಟ್ಟುಕೊಳ್ಳಲು ಆರಂಭಿಸಿ. ನಿಮ್ಮ ಆರೋಗ್ಯ ಒಟ್ಟಾರೆಯಾಗಿ ಸುಧಾರಣೆಯಾಗುವುದನ್ನು (Health tips) ನೀವೇ ಕಂಡು ಆಶ್ಚರ್ಯಪಡುವಿರಿ! ಹಾಗಾದರೆ, ಕರಿಬೇವನ್ನು ಏನೇನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

೧. ಕರಿಬೇವಿನ ಎಲೆಯ ಪುಡಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಇದರಲ್ಲಿ, ಹೇರಳವಾಗಿ ಆಂಟಿಆಕ್ಸಿಡೆಂಟ್‌ಗಳಿದ್ದು, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಕಬ್ಬಿಣಾಂಶ, ಕ್ಯಾಲ್ಶಿಯಂ, ವಿಟಮಿನ್‌ ಎ ಹಾಗೂ ಸಿಗಳು ಇದರಲ್ಲಿ ಯಥೇಚ್ಛವಾಗಿದೆ.

೨. ನೀವು ಮಧುಮೇಹಿಗಳಾಗಿದ್ದರೆ, ಕರಿಬೇವು ನಿಮಗೆ ಅತ್ಯಂತ ಒಳ್ಳೆಯ ಮನೆಮದ್ದೂ ಹೌದು. ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನದಲ್ಲಿಟ್ಟುಕೊಳ್ಳುವಲ್ಲಿ ಇದು ಶತಾಯಗತಾಯ ಶ್ರಮಿಸುತ್ತದೆ.

೩. ಕೂದಲುದುರುತ್ತದೆ ಎಂಬ ತಲೆಬಿಸಿ ನಿಮ್ಮದಾಗಿದ್ದರೆ, ನಿಮ್ಮ ಮನೆಯಲ್ಲೇ ಇರುವ ಈ ಕರಿಬೇವು ಎಂಬ ಅನರ್ಘ್ಯ ರತ್ನವನ್ನು ನೀವು ಮರೆತರೆ ಹೇಗೆ? ಕೂದಲಿಗೆ ಕರಿಬೇವಿನ ಎಣ್ಣೆಯನ್ನು ಮಾಡಿ ಹಚ್ಚುವುದರಿಂದ ಕೂದಲ ಎಲ್ಲ ಸಮಸ್ಯೆಗಳೂ ನಿವಾರಣೆಯಾಗಿ ದಟ್ಟವಾದ ಸೊಂಪಾದ ಕಪ್ಪಗಿನ ಕೇಶರಾಶಿ ನಿಮ್ಮದಾಗುತ್ತದೆ.

೪. ಜೀರ್ಣಶಕ್ತಿ ವೃದ್ಧಿಗೂ ಕರಿಬೇವು ಒಳ್ಳೆಯದು. ಅರಿಶಿನ, ಕೊತ್ತಂಬರಿ, ಕರಿಬೇವು ಈ ಮೂರನ್ನೂ ಪುಡಿ ಮಾಡಿ ಆಹಾರದಲ್ಲಿ ಬಳಸುವುದರಿಂದ ಜೀರ್ಣಾಂಗವ್ಯೂಹದ ಆರೋಗ್ಯ ವೃದ್ಧಿಯಾಗುತ್ತದೆ.

೫. ಇವಿಷ್ಟೇ ಅಲ್ಲ, ಬೊಜ್ಜಿಗೂ, ರಕ್ತಹೀನತೆಗೂ, ಮರೆವಿಗೂ, ತಲೆಸುತ್ತು, ವಾಯು, ಹೊಟ್ಟೆಯುಬ್ಬರ ಹೀಗೆ ಒಂದೇ ಎರಡೇ? ಹಲವಾರು ಸಮಸ್ಯೆಗಳಿಗೆ ಕರಿಬೇವಿನಲ್ಲಿದೆ ಉತ್ತರ.

ಹಾಗಾಗಿ, ತಂದಿಟ್ಟ ಕರಿಬೇವನ್ನು ಬೇಡ ಎಂದು ಎಸೆಯುವ ಬದಲು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಸಾಂಬಾರು, ರಸಂ, ಅಥವಾ ಇನ್ನಾವುದೇ ಅಡುಗೆಗೆ, ಈ ಪುಡಿಯನ್ನೂ ಸೇರಿಸಬಹುದು. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ನಿಮ್ಮ ದೇಹಕ್ಕೆ ಸೇರುವ ಪೋಷಕಾಂಶವೂ ಹೆಚ್ಚುತ್ತದೆ. ಇಷ್ಟೇ ಏಕೆ, ಸೂಪ್‌ ಮಾಡುತ್ತಿದ್ದರೆ ಅದಕ್ಕೆ ಮೇಲಿನಿಂದ ಕರಿಬೇವಿನ ಪುಡಿಯನ್ನೂ ಉದುರಿಸಬಹುದು. ಸಲಾಡ್‌ ಮಾಡುವಾಗಲೂ ಸಹ ಕರಿಬೇವಿನ ಪುಡಿಯನ್ನು ಡ್ರೆಸ್ಸಿಂಗ್‌ ಮಾಡುವಾಗ ಬಳಸಬಹುದು.

ಕರಿಬೇವಿನ ಪುಡಿಯನ್ನು ಅನ್ನಕ್ಕೆ ತುಪ್ಪದ ಜೊತೆ ಸೇರಿಸಿಯೂ ಉಣ್ಣಬಹುದು. ಇದು ರುಚಿ ಹೆಚ್ಚಿಸುತ್ತದೆ. ಅಥವಾ ಕರಿಬೇವಿನ ಪುಡಿಯಿಂದ ಚಟ್ನಿಪುಡಿ ಮಾಡಿಟ್ಟುಕೊಂಡರೆ ನಿತ್ಯವೂ ಇದನ್ನು ಅನ್ನದ ಜೊತೆಗೆ ಕಲಸಿಕೊಂಡು ಉಣ್ಣುವ ಅಭ್ಯಾಸ ರೂಢಿಸಿಕೊಳ್ಳಿ. ನಿಮ್ಮ ಹೊಟ್ಟೆಯ ಸಮಸ್ಯೆಗಳೆಲ್ಲ ನಿಧಾನವಾಗಿ ಶಮನವಾಗುತ್ತದೆ. ಒಣಗಿಸಿ ಮಾಡಿಟ್ಟುಕೊಂಡ ಕರಿಬೇವಿನ ಪುಡಿಯ ಜೊತೆಗೆ, ಕೊಬ್ಬರಿ ತುರಿ, ಕಡಲೆಬೇಳೆ, ಜೀರಿಗೆ, ಕೊತ್ತಂಬರಿ, ಮೆಂತೆ, ಇಂಗು, ಕರಿಮೆಣಸು, ಕೆಂಪುಮೆಣಸು ಇತ್ಯಾದಿಗಳನ್ನು ಹುರಿದುಕೊಂಡು ಪುಡಿ ಮಾಡಿ ಕರಿಬೇವಿನ ಪುಡಿಯನ್ನು ಕೂಡಾ ಸ್ವಲ್ಪ ಹುರಿದುಕೊಂಡು ಸೇರಿಸಿ ಚಟ್ನಿಪುಡಿ ಮಾಡಿಟ್ಟುಕೊಂಡರೆ ಬಹಳ ದಿನಗಳ ಕಾಲ ಊಟದ ಜೊತೆಗೆ ಬಳಸಬಹುದು. 

ಇದನ್ನೂ ಓದಿ: Thyroid Health Tips: ಥೈರಾಯ್ಡ್‌ ಸಮಸ್ಯೆ ಎಂಬ ಸಾಮಾನ್ಯ ತೊಂದರೆ: ಆಹಾರಕ್ರಮದಲ್ಲೇ ಪರಿಹಾರವಿದೆ!

Exit mobile version