Site icon Vistara News

Health Tips: ಬಿಸಿ ಕಾಫಿಗೆ ಬಾಯಿ ಸುಟ್ಟಿತೇ? ಇಲ್ಲಿದೆ ಉಪಶಮನ!

Tea vs Coffee

ಸಂಜೆ ಐದರ ಮಳೆಯ ಹೊತ್ತಿಗೆ (Health Tips) ಬಿಸಿಯಾಗಿ ಕಾಫಿ/ ಚಹಾ ಹೀರಬೇಕೆಂಬ ಮನಸ್ಸಾಗಿದೆ. ನಿಮಗೆ ಬೇಕೆಂದಲ್ಲ, ಮಳೆಗೆ ಬೇಕೆಂದು ಕಾಫಿ ಕುಡಿಯುವಾಗ ಬಿಸಿಯಾಗಿಲ್ಲದಿದ್ದರೆ ಹೇಗೆ? ಸುಡುವ ಕಾಫಿ ಹೀರುವಾಗ ನಾಲಿಗೆ ಕೆಲವೊಮ್ಮೆ ʻಚುರ್‌…ʼ ಆಗುತ್ತದೆ. ಅದರಲ್ಲೂ ಕೊಂಚ ಸಿಹಿ ಹೆಚ್ಚಿರುವ ಮತ್ತು ಮಂದವಾಗಿರುವ ಬಿಸಿ ಪಾನೀಯಗಳು ಮರೆಯದೇ ನಾಲಿಗೆ ಸುಡುತ್ತವೆ! ಉದಾ, ಖೀರು, ಗಂಜಿ ತಿಳಿಗಳೆಲ್ಲ ಇದೇ ಸಾಲಿಗೆ ಸೇರಿದವು. ಒಮ್ಮೆ ಇವುಗಳಿಂದ ಬಾಯಿ, ನಾಲಿಗೆ ಅಥವಾ ಗಂಟಲನ್ನು ಸುಟ್ಟುಕೊಂಡರೆ, ಸರಿಯಾಗುವುದಕ್ಕೆ ನಾಲ್ಕಾರು ದಿನಗಳು ಬೇಕು. ಅದಷ್ಟೂ ದಿನ ಬಾಯಿ ದೊರಗಾಗಿ, ಉರಿಯುವುದು ಮಾತ್ರವಲ್ಲ, ಬೊಬ್ಬೆಗಳೂ ಎದ್ದು, ತಿನ್ನುವ ಇತರ ವಸ್ತುಗಳ ರುಚಿಯೂ ತಿಳಿಯದೆ ಒದ್ದಾಡಬೇಕಾಗುತ್ತದೆ. ಇವೆಲ್ಲವೂ ವಾರದೊಳಗೆ ಕಡಿಮೆ ಆಗುವುದು ಹೌದಾದರೂ, ಸುಟ್ಟ ಉರಿ ತಡೆಯುವುದಕ್ಕೆ, ನೋವಿನ ಉಪಶಮನಕ್ಕೆ ಏನನ್ನಾದರೂ ತ್ವರಿತವಾಗಿ ಮಾಡಬಹುದೇ?

aloe vera

ಐಸ್‌ ಹಾಕಿ

ಖಂಡಿತವಾಗಿ! ಬಾಯಿ ಸುಟ್ಟ ನೋವಿನ ಉಪಶಮನಕ್ಕೆ ಹಲವು ರೀತಿಯ ಮನೆಮದ್ದುಗಳನ್ನು ಪ್ರಯೋಗಿಸಬಹುದು. ಇವು ಆ ಹೊತ್ತಿನ ನೋವನ್ನು ಕಡಿಮೆ ಮಾಡುವುದರ ಜೊತೆಗೆ, ಬೇಗನೆ ಗುಣ ಆಗುವುದಕ್ಕೂ ನೆರವಾಗುತ್ತವೆ. ಬಿಸಿ ಆಹಾರ ಬಾಯಿ ಸುಡುತ್ತಿದ್ದಂತೆಯೇ ತಕ್ಷಣವೇ ತಣ್ಣೀರಿನಿಂದ ಬಾಯಿ ಮುಕ್ಕಳಿಸಿ, ಫ್ರಿಜ್‌ನಲ್ಲಿ ಐಸ್‌ ಇದ್ದರೆ, ಅದನ್ನೂ ಬಾಯಿಗೆ ಹಾಕಿಕೊಳ್ಳಬಹುದು. ಐಸ್‌ ಹಾಕುವುದರಿಂದ ಸುಡುತ್ತಾ ಹೋಗುವುದನ್ನು ತಕ್ಷಣ ನಿಲ್ಲಿಸಬಹುದು. ಜೊತೆಗೆ, ಕೆಂಪಾಗಿ ಊತ ಬರುವುದನ್ನೂ ತಡೆಯಬಹುದು.

ಮೊಸರು, ಹಾಲು

ತಂಪಾದ ಹಾಲನ್ನು ಬಾಯಿಗೆ ತುಂಬಿಸಿಕೊಳ್ಳುವುದು ಒಳ್ಳೆಯ ಉಪಾಯ. ಕೊಂಚವೂ ಹುಳಿಯಿಲ್ಲದ ಮೊಸರು ಇದ್ದರೆ ಅದೂ ಸಹ ಸುಟ್ಟ ಉರಿಯನ್ನು ತಂಪಾಗಿಸುತ್ತದೆ. ಮಾತ್ರವಲ್ಲ, ಈ ಡೇರಿ ಉತ್ಪನ್ನಗಳು ಸುಟ್ಟ ಗಾಯಗ ಸುತ್ತಲೂ ರಕ್ಷಣಾ ಕವಚವೊಂದನ್ನು ನಿರ್ಮಿಸಿ, ಈ ಗಾಯ ಗುಣವಾಗುವವರೆಗೆ ಆರೈಕೆ ಮಾಡುತ್ತವೆ.

aloe vera

ಜೇನುತುಪ್ಪ

ಇದರಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಸುಟ್ಟ ಜಾಗದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತವೆ. ಅಲ್ಪ ಪ್ರಮಾಣದ ಜೇನು ತುಪ್ಪವನ್ನು ನೇರವಾಗಿ ಬಾಯೊಳಗಿನ ಸುಟ್ಟ ಭಾಗಕ್ಕೆ ಲೇಪಿಸಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸಬಹುದು. ಬ್ಯಾಕ್ಟೀರಿಯ ವಿರೋಧಿ ಗುಣಗಳೂ ಜೇನುತುಪ್ಪಕ್ಕೆ ಇರುವುದರಿಂದ, ಸುಟ್ಟ ಜಾಗಕ್ಕೆ ಸೋಂಕಾಗದಂತೆ ತಡೆಯುತ್ತದೆ.

ಲೋಳೆಸರ

ಇದಕ್ಕೆ ಅಂಗಡಿಯಿಂದ ತಂದ ಅಲೋವೇರಾ ಜೆಲ್‌ ಬದಲು, ನಿಜವಾದ ಲೋಳೆಸರದ ಜೆಲ್‌ ಲೇಪಿಸುವುದು ಸೂಕ್ತ. ಅಂಗಡಿಯ ಜೆಲ್‌ಗಳಲ್ಲಿ ಪ್ರಿಸರ್ವೇಟಿವ್‌ ಅಥವಾ ಇನ್ನಾವುದಾದರೂ ರಾಸಾಯನಿಕಗಳು ಸೇರಿರಬಹುದು. ಇದರಿಂದ ಸುಟ್ಟ ಗಾಯಗಳಿಗೆ ಉಪಕಾರಕ್ಕಿಂತ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಕೇವಲ ನಾಲಿಗೆ ಸುಟ್ಟಿದ್ದಕ್ಕೆಂದಲ್ಲ, ಯಾವುದೇ ಸುಟ್ಟ ಗಾಯಕ್ಕೆ ನಿಜವಾದ ಲೋಳೆಸರದ ಜೆಲ್‌ ಅನುಕೂಲವಾದೀತು. ಉರಿ ಶಮನ ಮಾಡಿ, ಬೇಗನೇ ಗುಣವಾಗಲು ನೆರವಾಗುತ್ತವೆ.

ಉಪ್ಪು ನೀರಿನ ಗಾರ್ಗಲ್‌

ಮೊದಲಿಗೆ ಹಾಲಿಗೆ ಕೊಂಚ ಅರಿಶಿನ ಪುಡಿಯನ್ನು ಸೇರಿಸಿ ಪೇಸ್ಟ್‌ ಮಾಡಿ. ಇದನ್ನು ಸುಟ್ಟ ಭಾಗಕ್ಕೆ ನೇರವಾಗಿ ಲೇಪಿಸಿ. ಉರಿ ಕಡಿಮೆಯಾದ ನಂತರ ಬೆಚ್ಚಗಿನ ನೀರಿಗೆ ಉಪ್ಪ ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸಿ ಅಥವಾ ಗಾರ್ಗಲ್‌ ಮಾಡಿ. ಇದರಿಂದ ಉರಿ ಕಡಿಮೆಯಾಗಿ, ಊತವೂ ತಗ್ಗುತ್ತದೆ. ಇದನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಮಾಡಬಹುದು.

ಇದನ್ನೂ ಓದಿ: Intermittent Fasting: ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಮಾಡುವವರೇ ಹುಷಾರ್! ಈ ಸಂಗತಿ ಗೊತ್ತಿರಲಿ

ಇವು ಬೇಡ

ನಾಲಿಗೆ/ ಬಾಯಿ/ ಗಂಟಲು ಸುಟ್ಟ ಉರಿ ಕಡಿಮೆಯಾಗುವವರೆಗೂ ತೀಕ್ಷ್ಣವಾದ ರುಚಿಗಳನ್ನು ದೂರ ಇಡಿ. ಇಷ್ಟಾದ ಮೇಲೆ ಇನ್ನೂ ಸುಡು ಬಿಸಿಯನ್ನೇ ಸೇವಿಸುತ್ತಿದ್ದರೆ ಕಷ್ಟ! ತೀವ್ರ ಹುಳಿ ಅಥವಾ ಖಾರದ ಆಹಾರಗಳು ಸುಟ್ಟ ಭಾಗದಲ್ಲಿ ಉರಿಯನ್ನು ಬಡಿದೆಬ್ಬಿಸುತ್ತವೆ. ಈ ವಿಷಯದಲ್ಲಿ ಉಪ್ಪೇನೂ ಕಡಿಮೆಯಿಲ್ಲ, ಹಾಗಾಗಿ ನಿಮ್ಮ ಗಾಯಕ್ಕೆ ನೀವೇ ಉಪ್ಪು ಸವರಿಕೊಳ್ಳಬೇಡಿ. ಸುಟ್ಟ ಗಾಯ ಗುಣವಾಗುವುದನ್ನು ಆಲ್ಕೋಹಾಲ್‌ ಮುಂದೂಡುತ್ತದೆ. ಜೊತೆಗೆನಾಲಿಗೆಯ ಕಿರಿಕಿರಿಯನ್ನು ಹೆಚ್ಚಿಸುತ್ತದೆ.

Exit mobile version