Site icon Vistara News

Health Tips: ಮಧ್ಯಾಹ್ನದ ನಂತರ ಏನಾದರು ಸಿಹಿತಿನಿಸು ತಿನ್ನಬೇಕು ಅನಿಸುತ್ತಿದೆಯೆ? ಇದಕ್ಕೂ ಇದೆ ಕಾರಣ

sweets Gujiya peda barfi Motichoor Laddu Indian Sweet dessert mithai festival dish

ನೀವು ಯಾವತ್ತಾದರೂ ನಿಮ್ಮ ಆಹಾರ (Health Tips) ಅಭ್ಯಾಸದ ಬಗ್ಗೆ ಕೊಂಚ ಸೂಕ್ಷ್ಮವಾಗಿ ಗಮನಿಸಿದ್ದೀರಾ? ನಿಮಗೆ ಯಾವ ಹೊತ್ತಿನಲ್ಲಿ ಹಸಿವಾಗುತ್ತದೆ, ಯಾವ ಹೊತ್ತಿನಲ್ಲಿ ಏನಾದರೊಂದು ಮೆಲ್ಲಬೇಕೆಂಬ ಬಯಕೆಯಾಗುತ್ತದೆ, ಯಾವ ಹೊತ್ತಿನಲ್ಲಿ ಸಿಹಿ ತಿನ್ನಬೇಕೆನಿಸುತ್ತದೆ ಇತ್ಯಾದಿಗಳನ್ನು ನೀವು ಗಮನಿಸಿದ್ದರೆ, ಇವೆಲ್ಲವಕ್ಕೂ ಇಂಥದ್ದೆ ಒಂದು ನಿರ್ಧಿಷ್ಟ ಹೊತ್ತಿರುತ್ತದೆ ಎಂಬುದು ನಿಮಗೆ ಅರ್ಥವಾಗುತ್ತದೆ. ಉದಾಹರಣೆಗೆ ನಿಮ್ಮಲ್ಲಿ ಕೆಲವರಿಗೆ ಸಿಹಿತಿನಿಸು ಮಧ್ಯಾಹ್ನ ಊಟವಾದ ತಕ್ಷಣ ತಿನ್ನಬೇಕೆನಿಸಬಹುದು. ಇನ್ನೂ ಕೆಲವರಿಗೆ ಊಟವಾಗಿ ಕೆಲ ಗಂಟೆ ಕಳೆದ ಮೇಲೆ ಚಹಾದ ಹೊತ್ತಿನಲ್ಲಿ ಏನಾದರೂ ಸಿಹಿಯಾಗಿರುವುದನ್ನು ತಿನ್ನೋಣ ಅನಿಸಬಹುದು. ಇದು ಕೇವಲ ಒಂದೇ ದಿನದ ಕಥೆಯಲ್ಲ, ಹೀಗೆ ತಿನ್ನಬೇಕೆನ್ನುವ ಮನಸ್ಥಿತಿ ಸದಾ ಕಾಲ ಒಂದೇ ರೀತಿ ಇದೆ ಎಂಬುದು ನಿಮಗೆ ಅರ್ಥವಾಗಬಹುದು. ಹೀಗೆ ಅನಿಸುವುದು ಕೇವಲ ನಿಮಗಷ್ಟೇ ಅಲ್ಲ, ನಿಮ್ಮಂತೆ ಚಹಾದ ಹೊತ್ತಿಗೆ ಸಕ್ಕರೆಯುಕ್ತ ಏನಾದರೊಂದು ತಿನ್ನುವ ಖಯಾಲಿ ಹಲವರಿಗಿದೆ. ಸಿಹಿತಿನಿಸಾದರೂ ಆದೀತು, ಕುಕ್ಕೀಸ್‌ ಬಿಸ್ಕತ್ತುಗಳೂ ಆದಾವು, ಏನಾದರೊಂದು ಸಿಹಿಯಾದ ತಿಂಡಿ ಚಹಾದ ಜೊತೆಗಿರಬೇಕು ಎಂಬ ಆಸೆ. ನಿಮಗೆ ಹಸಿವೇನೂ ಆಗದೆ ಇದ್ದರೂ, ಏನಾದರೂ ಈ ಹೊತಿಗೆ ತಿನ್ನಬೇಕೆಂಬ ಚಪಲ ಇದ್ದೇ ಇರುತ್ತದೆ. ತಿನ್ನದಿದ್ದರೆ ಏನೋ ಒಂದು ಕಸಿವಿಸಿ, ಕಳೆದುಕೊಂಡ ಭಾವ. ಹೀಗೆ ಕೇವಲ ನಿಮಗಷ್ಟೇ ಅಲ್ಲ, ನಿಮ್ಮಂತೆ ಹಲವಾರು ಮಂದಿಗೂ ಈ ಸಮಸ್ಯೆಯಿದೆ. ಬನ್ನಿ, ಈ ಅನುಭವ ನಿಮಗಾಗಿದ್ದರೆ, ಸಂಜೆಯ ಸ್ವೀಟ್‌ ಕ್ರೇವಿಂಗ್‌ ಇದ್ದರೆ ಇದಕ್ಕೆ ಕಾರಣಗಳೇನು, ಹೇಘೆ ಈ ಅಭ್ಯಾಸ ಕಡಿಮೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಆರೋಗ್ಯ ತಜ್ಞರ ಪ್ರಕಾರ, ನಮ್ಮ ದೇಹದ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾದಾಗ ನಮಗೆ ಸಿಹಿ ತಿನ್ನಬೇಕೆಂಬ ಪ್ರಚೋದನೆಯಾಗುತ್ತದೆ. ಸಾಮಾನ್ಯವಾಗಿ ಮಧ್ಯಾಹ್ನ ಊಟವಾಗಿ ಕೆಲ ಗಂಟೆಗಳ ನಂತರ ದೇಹದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾದ ಹೊತ್ತಿನಲ್ಲಿ ಮತ್ತಷ್ಟು ಶಕ್ತಿವರ್ಧನೆಗಾಗಿ, ಸಿಹಿಯನ್ನು ಬೇಡುತ್ತದೆ. ಕೂಡಲೇ ಏನಾದರೊಂದು ಸಿಹಿ ತಿಂದಾಕ್ಷಣ, ಮುಖ್ಯವಾಗಿ ಸಂಸ್ಕರಿಸಿದ ಸಕ್ಕರೆಯಿಂದ ಮಾಡಿದ ಸಿಹಿತಿನಿಸುಗಳನ್ನು ತಿಂದಾಗ ತಾತ್ಕಾಲಿಕವಾಗಿ ದೇಹದಲ್ಲಿ ಶಕ್ತಿವರ್ಧನೆಯಾಗಿ ಸಕ್ಕರೆಯ ಮಟ್ಟವೂ ಏರುತ್ತದೆ.

ನಿತ್ಯವೂ ಏನಾದರೊಂದು ಇಂಥದ್ದೇ ಹೊತ್ತಿಗೆ ಎಂದು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಅದೇ ಹೊತ್ತಿಗೆ ಸರಿಯಾಗಿ ಸಿಹಿ ತಿನ್ನಬೇಕೆಂಬ ಕ್ರೇವಿಂಗ್‌ ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು. ನಾಲ್ಕು ದಿನ ಇದೇ ಹೊತ್ತಿಗೆ ಸಿಹಿ ತಿಂದರೂ ಸಾಕು, ಐದನೇ ದಿನ ಅದೇ ಹೊತ್ತಿಗೆ ಸರಿಯಾಗಿ ಮನಸ್ಸು ದೇಹ ಎರಡೂ ಅದನ್ನೇ ಬೇಡುತ್ತದೆ. ಸಂಜೆ ಚಹಾದ ಹೊತ್ತಿಗೆ ನೀವು ಬಿಸ್ಕತ್ತು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಆ ಅಭ್ಯಾಸವನ್ನು ಕಷ್ಟಪಟ್ಟು ಬಿಡಬೇಕಾಗುತ್ತದೆ. ಇಲ್ಲವಾದರೆ, ಆ ಹೊತ್ತಿನಲ್ಲಿ ಏನಾದರೂ ಸಿಹಿ ತಿನ್ನಬೇಕೆನಿಸುತ್ತದೆ.

ನೀವು ಬೆಳಗಿನ ಉಪಾಹಾರವನ್ನು ಸರಿಯಾಗಿ ಸೇವಿಸದೆ ಇರುವುದೂ ಕೂಡಾ ಈ ಕ್ರೇವಿಂಗ್‌ಗೆ ಕಾರಣವಾಗಿರಬಹುದು. ಬೆಳಗಿನ ಉಪಹಾರ ಬಿಡುವುದು, ಅಥವಾ ಮಧ್ಯಾಹ್ನದೂಟ ಬಿಡುವುದು ಇತ್ಯಾದಿ ಮಾಡುವುದರಿಂದಲೂ ನಿಮಗೆ ಸಂಜೆಯ ಹೊತ್ತಿಗೆ ಸಿಹಿ ತಿನ್ನಬೇಕೆನಿಸಬಹುದು. ಹೆಚ್ಚು ಹೊತ್ತು ತಿನ್ನದೆ ಇರುವ ಸಂದರ್ಭ ದೇಹ ಬಹುಬೇಗನೆ ಶಕ್ತಿ ಪಡೆದುಕೊಳ್ಳುವ ಮಾರ್ಗವನ್ನೇ ಬಯಸುತ್ತದೆ.

ನಿದ್ದೆಯ ಕೊರತೆಯೂ ಕಾರಣವಾಗಿರಬಹುದು. ನಿದ್ದೆಯಿಲ್ಲದ ರಾತ್ರಿ ಕಳೆದಿದ್ದರೆ, ಅತಿಯಾದ ಒತ್ತಡದಿಂದ ರಾತ್ರಿಯಲ್ಲಿ ಕೆಲಸ ಮಾಡಿದ್ದರೆ, ನಿದ್ದೆ ಸರಿಯಾಗಿ ಆಗಿರದಿದ್ದರೆ, ದೇಹ ಸುಸ್ತಾಗಿ ಬಿಟ್ಟಿರುತ್ತದೆ. ಇಂತಹ ಸಮಯದಲ್ಲಿ ತಕ್ಷಣದ ಶಕ್ತಿವರ್ಧನೆಗೆ ದೇಹ ಸಿಹಿಯಾದುದನ್ನೇ ಬಯಸುತ್ತದೆ.

ಹಾಗಾದರೆ, ಈ ಅಭ್ಯಾಸದಿಂದ ಹೊರಬರುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಮನಸ್ಸಿದ್ದರೆ ಮಾರ್ಗ ಎಂಬುದು ಗಾದೆಯನ್ನು ನೀವು ಕೇಳಿರಬಹುದು. ಎಲವೂ ನೀವು ಮನಸ್ಸು ಮಾಡಿದರೆ ಸಾಧ್ಯ. ಸಿಹಿತಿಂಡಿ ತಿನ್ನಬಾರದು ಎಂಬ ನಿರ್ಧಾರ ನೀವು ಮಾಡಿದ್ದರೆ, ಅದಕ್ಕೆ ಪೂರಕವಾದ ಆಹಾರಕ್ರಮವನ್ನೂ ನೀವು ಬೆಳೆಸಿಕೊಳ್ಳಿ.

ಇದನ್ನೂ ಓದಿ: Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

Exit mobile version