Site icon Vistara News

Health Tips: ಹಬ್ಬದ ಸಂದರ್ಭ ಅತಿಯಾಗಿ ತಿನ್ನದೆ ಆರೋಗ್ಯ ಕಾಪಾಡಲು ಈ ಟಿಪ್ಸ್‌ ನೆನಪಿಡಿ!

sweets

ಭಾರತದಲ್ಲಿ ಹಬ್ಬ ಎಂದರೆ, ಬೇರೆ ಆಚರಣೆಗಳಷ್ಟೇ ಮಹತ್ವವಿರುವುದು (Festival foods) ತಿನಿಸುಗಳಿಗೆ. ಸಮೃದ್ಧ ಪುಷ್ಕಳ ಭೋಜನವಿಲ್ಲದಿದ್ದರೆ ಅದು ಹಬ್ಬ ಹೇಗಾದೀತು ಅಲ್ಲವೇ? ಹೌದು. ಹಬ್ಬದ ಮುಖ್ಯ ಉದ್ದೇಶವೇ ಬಂಧು ಬಳಗ ಗೆಳೆಯ ಗೆಳತಿಯರೆಲ್ಲ ಒಂದೆಡೆ ಸೇರಿ ನಗು, ತಮಾಷೆ, ಖುಷಿಗಳನ್ನು ಹಂಚಿಕೊಂಡು, ಆಚರಣೆಗಳ ಜೊತೆಜೊತೆಗೆ ಚೆನ್ನಾಗಿ ತಿನ್ನುವುದು ಅಲ್ಲವೇ? ಆದರೆ, ಆಗಸ್ಟ್‌ ಬಂತೆಂದರೆ ಹಬ್ಬಗಳ ಸಾಲು ಸಾಲು (festival season) ಅಕ್ಟೋಬರ್‌ ಸಮೀಪಿಸುತ್ತಿದ್ದಂತೆ ಉತ್ತುಂಗಕ್ಕೇರುತ್ತದೆ. ದಸರಾ, ದೀಪಾವಳಿಗಳೆಂಬ (Dussehra, Diwali) ಎರಡು ದೊಡ್ಡ ಹಬ್ಬಗಳು ಬರುವಷ್ಟರಲ್ಲಿ ಎಂತಹ ತೂಕ ಇಳಿಸುವ ಗುರಿ (weight loss) ಇಟ್ಟುಕೊಂಡ ವ್ಯಕ್ತಿಗಳಿದ್ದರೂ ಒಮ್ಮೆ ಮನಸ್ಸು ಜಾರಿ ಹಬ್ಬದ ಖುಷಿಯನ್ನು ಸಂಪೂರ್ಣ ಅನುಭವಿಸೋಣ ಎಂದೆನಿಸದೆ ಇರುವುದಿಲ್ಲ. ಹಬ್ಬದ ಸಿಹಿತಿಂಡಿ, ಊಟದ ಖುಷಿಯಲ್ಲಿ ಕಳೆದುಹೋಗಿ ತೂಕ ಕಾಯ್ದುಕೊಳ್ಳುವ ತಪಸ್ಸೆಲ್ಲ ನೀರಿನಲ್ಲಿ ಮಾಡಿದ ಹೋಮವಾಗಿಬಿಡುತ್ತದೆ. ಹಾಗಾದರೆ, ಆರೋಗ್ಯವನ್ನೂ (health guide) ಗಣನೆಗೆ ತೆಗೆದುಕೊಂಡು, ಹಬ್ಬದ ಖುಷಿಯನ್ನು‌ ಕಳೆದುಕೊಳ್ಳದೆ, ಸುಖವಾಗಿ ತಿಂದುಂಡುಕೊಂಡಿರಬೇಕಾದರೆ (health tips) ಏನು ಮಾಡಬಹುದು ಗೊತ್ತೇ? ಇವಿಷ್ಟು ಟಿಪ್ಸ್‌ ನೆನಪಿನಲ್ಲಿಟ್ಟುಕೊಳ್ಳಿ ಸಾಕು!

1. ಹಿತಮಿತವಾಗಿ ತಿನ್ನಿ: ಹಬ್ಬದ ಸಂದರ್ಭ ಮನೆಯಲ್ಲಿ ಬೇಕಾಬಿಟ್ಟಿ ಸಿಹಿತಿನಿಸುಗಳಿರುವುದು, ಬಗೆಬಗೆಯ ಭಕ್ಷ್ಯಗಳಿರುವುದು ಸಾಮಾನ್ಯ. ಒಂದಿಷ್ಟು ನೆಂಟರಿಷ್ಟರು, ಗೆಳೆಯರು ಮನೆಗೆ ಬರುವಾಗ ಕೊಂಡು ತಂದದ್ದು ಇರಬಹುದು. ಇನ್ನೊಂದಿಷ್ಟು ನೀವೇ ಕೊಂಡು ತಂದದ್ದು, ಮನೆಯಲ್ಲೇ ಮಾಡಿದ್ದೂ ಇರಬಹುದು. ಆದರೆ, ನೆನಪಿಡಿ, ಸಿಕ್ಕಾಪಟ್ಟೆ ತಿಂಡಿಗಳಿವೆ ಎಂದು ಹೊಟ್ಟೆಯೇ ಅದರ ಅಲ್ಟಿಮೇಟ್‌ ಜಾಗವೆಂದುಕೊಂಡು ಹೊಟ್ಟೆಗೆ ಎಲ್ಲವನ್ನೂ ಸುರಿದುಕೊಳ್ಳಬೇಡಿ. ರುಚಿಯೆನಿಸಿದರೂ, ಹಿತಮಿತವಾಗಿ ತಿನ್ನಿ. ಎಲ್ಲವನ್ನೂ ಕೊಂಚ ಕೊಂಚ ರುಚಿ ನೋಡಿ.

2. ನೀರು ಕುಡಿಯಿರಿ: ಹೆಚ್ಚು ನೀರು ಕುಡಿಯಿರಿ. ದೇಹವನ್ನು ಹಬ್ಬದ ಸಮಯದಲ್ಲಿ ಹೈಡ್ರೇಟೆಡ್‌ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹಸಿವಿನ ಸಂದರ್ಭ ಹೆಚ್ಚು ಸಿಹಿತಿಂಡಿಗಳು ಹಾಘೂ ಹಬ್ಬದಡುಗೆಯನ್ನು ಹೆಚ್ಚು ಹೆಚ್ಚು ಉಂಡುಬಿಡುವ ಸಾಧ್ಯತೆಗಳು ಹೆಚ್ಚಿರುವುದರಿಂದ, ಆಗಾಗ ನೀರು ಕುಡಿದು ದೇಹವನ್ನು ಹೈಡ್ರೇಟೆಡ್‌ ಆಗಿ ಇಟ್ಟುಕೊಳ್ಳಿ. ಆಗ, ಅನಗತ್ಯ ಹೊಟ್ಟೆ ಸೇರುವ ಪ್ರಮಾಣ ತಾನೇತಾನಾಗಿ ಕಡಿಮೆಯಾಗುತ್ತದೆ. ಜೊತೆಗೆ ಅತಿಯಾಗಿ ತಿನ್ನಬೇಕೆಂಬ ಬಯಕೆಯೂ ತಪ್ಪುತ್ತದೆ.

3. ಗಿಲ್ಟ್‌ ಇಲ್ಲದೆ ತಿನ್ನಿ: ಅಯ್ಯೋ, ಎಷ್ಟು ತಿನ್ನುತ್ತಿದ್ದೇನೆ ಎಂದು ಹಳಹಳಿಸುತ್ತಾ ತಿನ್ನುವುದನ್ನು ಖುಷಿಯಿಂದ ಪ್ರೀತಿಯಿಂದ ತಿನ್ನಿ. ಪ್ರತಿ ತಿನಿಸನ್ನೂ ಬಾಯಿಗಿಡುವ ಸಂದರ್ಭ ಪಶ್ಚಾತ್ತಾಪ ಅಥವಾ ಗಿಲ್ಟ್‌ ಮಾಡಿಕೊಳ್ಳುತ್ತಾ ತಿಂದರೆ ನೀವು ಮಾನಸಿಕವಾಗಿಯೂ ಆರೋಗ್ಯ ಹಾಳು ಮಾಡಿಕೊಳ್ಳಿತ್ತೀರಿ. ಅದರ ಬದಲು ಖುಷಿಯಾಗಿ ತಿನ್ನಿ. ಮತ್ತೆ, ನಿಮ್ಮ ಎಂದಿನ ಆಹಾರ ಶೈಲಿಗೆ ಬೇಗ ಮರಳಿ.

ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

4. ಪ್ರವಾಸದಲ್ಲಿ ಆರೋಗ್ಯಕರ ಸ್ನ್ಯಾಕ್‌ ತಿನ್ನಿ: ಬಹಳಷ್ಟು ಮಂದಿ ಹಬ್ಬದ ಸಂದರ್ಭ ಪ್ರವಾಸಗಳನ್ನು ಪ್ಲಾನ್‌ ಮಾಡುವುದುಂಟು. ಇಂತಹ ಸಂದರ್ಭಗಳಲ್ಲಿ, ದಾರಿಯುದ್ದಕ್ಕೂ ತಿನ್ನಲು ಕೆಲವು ಆರೋಗ್ಯಕರ ಆಯ್ಕೆಗಳನ್ನು ಮಾಡಿಕೊಳ್ಳಿ. ಆಗ, ನಿಮ್ಮ ಆಹಾರಶೈಲಿಯಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ.

5. ಕೆಲವನ್ನು ತಿರಸ್ಕರಿಸಿ: ಹಬ್ಬ ಎಂದ ಕೂಡಲೇ ಎಲ್ಲವನ್ನೂ ತಿನ್ನಲೇಬೇಕೆಂದೇನಿಲ್ಲ. ಕೆಲವನ್ನು ರುಚಿ ನೋಡಿದ ಮೇಲೆ, ಕೆಲವನ್ನು ಬೇಡವೆಂದು ಬಿಡಬಹುದು. ಆದಷ್ಟೂ, ಹೆಚ್ಚು ಸಕ್ಕರೆಯಿರುವ, ಗ್ಲುಟೆನ್‌ ಇರುವ ಹಾಗೂ ಹೆಚ್ಚು ಡೈರಿ ಉತ್ಪನ್ನಗಳಿರುವ ಆಹಾರವನ್ನು ಹಿತಮಿತವಾಗಿ ತಿನ್ನಿ. ಉಳಿದಂತೆ ನಿಮ್ಮ ನಿತ್ಯದ ಆಹಾರವನ್ನೇ ಮುಂದುವರಿಸುತ್ತಾ ಹಬ್ಬದ ಆಚರಣೆ ಮಾಡಬಹುದು. ಆದರೆ, ಸಿಹಿಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ. ತಿನ್ನಲೇ ಬೇಕೆನಿಸಿ ತಿಂದರೂ, ಹಬ್ಬ ಮುಗಿದ ತಕ್ಷಣ ನಿಮ್ಮ ಎಂದಿನ ಶೈಲಿಗೆ ಮರಳಿ.

ಇದನ್ನೂ ಓದಿ: Health Tips: ಈ ಆಹಾರಗಳನ್ನು ಸೇವಿಸಿದರೆ ಸರಸದ ಸಮಯ ಆದೀತು ವಿರಸಮಯ!

Exit mobile version