Site icon Vistara News

Health Tips For Monsoon: ಮಳೆಗಾಲದ ಸೋಂಕುಗಳನ್ನು ದೂರ ಇರಿಸುವುದು ಹೇಗೆ?

Health Tips For Monsoon

ಋತುಮಾನಗಳಿಗೆ ತಕ್ಕಂತೆ ನಮ್ಮ ಆರೋಗ್ಯದ ಸ್ಥಿತಿಗತಿಗಳೂ ಬದಲಾಗುತ್ತವೆ. ಈಗಂತೂ ಮಳೆ ಜಡಿಯುತ್ತಿರುವ ದಿನಗಳು. ಅಂದರೆ ಮಳೆಯಲ್ಲಿ ಒದ್ದೆಯಾಗದೆ ಇರುವುದಕ್ಕೆ ಕಷ್ಟವಾಗುವ ದಿನಗಳು. ಇಂಥ ಸನ್ನಿವೇಶಗಳಲ್ಲೇ ನಾವು ರೋಗಾಣುಗಳಿಗೆ ಇಷ್ಟ ಆಗುವುದು! ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ವಯಸ್ಕರು, ವೃದ್ಧರವರೆಗೆ ಶೀತ-ಜ್ವರದಿಂದ ಹಿಡಿದು ಕಣ್ಣಿನ ಸೋಂಕಿನವರೆಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಗಂಟು ಬೀಳುತ್ತವೆ. ಇವುಗಳಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲದಿದ್ದರೂ, ಅಸಾಧ್ಯವೇನಲ್ಲ. ಜೀವನಶೈಲಿಯಲ್ಲಿನ ಕೆಲವು ಸರಳ ಬದಲಾವಣೆಗಳು ಮತ್ತು ಆಹಾರದ ಜಾಗ್ರತೆಯಿಂದ ಮಳೆಗಾಲದ ಸೋಂಕುಗಳಿಗೆ ಬೆಚ್ಚದೆ ಬೆಚ್ಚಗಿರಬಹುದು. ಹಾಗಾದರೆ ಮಳೆ-ಗಾಳಿಯ ಈ ದಿನಗಳಲ್ಲಿ ಪದೇಪದೆ ಕಾಡುವ ಸೋಂಕುಗಳ ಬಾಧೆಯಿಂದ (Health tips for monsoon) ತಪ್ಪಿಸಿಕೊಳ್ಳುವುದು ಹೇಗೆ?

ಮಲೇರಿಯಾ, ಡೆಂಗು, ಚಿಕುನ್‌ಗುನ್ಯಾ, ಟೈಫಾಯ್ಡ್‌, ಕಾಲರಾ, ಫ್ಲೂ ಮತ್ತಿತರ ವೈರಸ್‌ ಸೋಂಕುಗಳು, ಡಯರಿಯಾ ಮುಂತಾದ ಹಲವು ಸಮಸ್ಯೆಗಳು ಗಾಳಿ ಮತ್ತು ಕಲುಷಿತ ಆಹಾರ-ನೀರಿನಿಂದ ಅಮರಿಕೊಳ್ಳುತ್ತವೆ. ವೈರಸ್‌ ಸೋಂಕುಗಳು ಹೆಚ್ಚಿನ ಸಾರಿ ವೈದ್ಯರ ದರ್ಶನವಿಲ್ಲದೆಯೇ ಗುಣವಾಗುವಂಥವು. ಬ್ಯಾಕ್ಟೀರಿಯಾ ಉಪಟಳವಾದರೆ ಇದಕ್ಕೆ ವೈದ್ಯರ ಭೇಟಿ ಅಗತ್ಯವಾಗುತ್ತದೆ. ಸಾಮಾನ್ಯವಾಗಿ ಕಣ್ಣು ಕೆಂಪಾಗುವುದು, ಗಂಟಲು ಕೆರೆತ ಅಥವಾ ನೋವು, ಮೈಕೈ ನೋವು, ಸ್ನಾಯು ಸೆಳೆತ, ಕೆಮ್ಮು, ಸೀನು, ನೆಗಡಿ, ಜ್ವರದಂಥ ಲಕ್ಷಣಗಳು ವೈರಸ್‌ ಸೋಂಕಿನಿಂದ ಬಂದಿದ್ದಾಗಿರಬಹುದು. ಗಂಟಲು ನೋವು ಅಥವಾ ಕಿವಿ ನೋವಿನಂಥ ಲಕ್ಷಣಗಳಿದ್ದರೆ, ಇತ್ತೀಚೆಗೆ ಹೊಸದಾಗಿ ಹಬ್ಬುತ್ತಿರುವ ಐ-ಫ್ಯೂ ಲಕ್ಷಣಗಳಿದ್ದರೆ (Health tips for monsoon) ವೈದ್ಯರನ್ನು ಕಾಣಬೇಕಾಗುತ್ತದೆ.

ವಿಟಮಿನ್‌ ಡಿ

ಮಳೆಗಾಲದ ಮೋಡ ಮುಸುಕಿದ ವಾತಾವರಣದ ಕಾರಣದಿಂದ ಬಿಸಿಲು ಕಡಿಮೆ. ಆದರೆ ಎಂದಾದರೂ ಬಿಸಿಲಿದ್ದಾಗ ಕೊಂಚ ಮೈಯೊಡ್ಡಿಕೊಳ್ಳಿ. ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್‌ ಡಿ ದೊರೆಯುತ್ತದೆ. ಮನಸ್ಸಿನ ಮಬ್ಬು ಕಳೆದು ಚೈತನ್ಯ ಆವರಿಸುತ್ತದೆ. ವಿಟಮಿನ್‌ ಡಿ ಕೊರತೆಯಿಂದಲೂ ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳಬಹುದು. ಹಾಗಾಗಿ ಮಳೆಗಾಲದ ಅಣಬೆಗಳು, ಚೀಸ್‌, ಕೊಬ್ಬು ಹೆಚ್ಚಿರುವ ಮೀನುಗಳು, ಮೊಟ್ಟೆಯ ಹಳದಿ ಭಾಗಗಳಿಂದಲೂ ದೊರೆಯುವ ಡಿ ಜೀವಸತ್ವವನ್ನು ದೇಹಕ್ಕೆ ಒದಗಿಸಿ.

ಅರಿಶಿನದ ಕಷಾಯ

ಪ್ರಬಲವಾದ ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಅರಿಶಿನವನ್ನು ಹಾಲಿಗೆ ಹಾಕಿಕೊಂಡು ಅಥವಾ ಕಷಾಯದೊಂದಿಗೆ ಸೇವಿಸುವುದು ಒಳ್ಳೆಯದು. ಕರಿಮೆಣಸಿನ ಪುಡಿಯೂ ಇದರೊಂದಿಗೆ ಹಿತ. ಮಾಮೂಲಿ ಚಹಾದ ಬದಲು ಯಾವುದೇ ರೀತಿಯ ಗ್ರೀನ್‌ ಟೀಯನ್ನೂ ಈ ದಿನಗಳಲ್ಲಿ ಬಳಸುವುದು ಹಿತವಾಗುತ್ತದೆ.

ನೆಗಡಿ-ಕೆಮ್ಮಿನ ಮನೆಮದ್ದುಗಳು

ಮೊದಲನೇ ಕ್ರಮವೆಂದರೆ ಬೆಚ್ಚಗಿನ ಉಪ್ಪುನೀರಿನ ಗಾರ್ಗಲ್‌. ನೆಗಡಿ-ಕೆಮ್ಮು-ಗಂಟಲ ಕೆರೆತದಂಥ ಸಮಸ್ಯೆಗಳನ್ನು ಬಹುಮಟ್ಟಿಗೆ ತಹಬಂದಿಗೆ ತರುತ್ತದೆ. ದಿನಕ್ಕೆ ಮೂರ್ನಾಲ್ಕು ಬಾರಿ ಮಾಡುವುದರಿಂದ ಈ ಸಮಸ್ಯೆ ಆಳಕ್ಕಿಳಿದಂತೆ ತಡೆಯಬಹುದು.

ದೊಡ್ಡಪತ್ರೆಯನ್ನು ಬಿಸಿ ಮಾಡಿ ಎರಡು ಚಮಚದಷ್ಟು ರಸ ತೆಗೆದು ಜೊತೆಗೆ ಒಂದು ಚಮಚದಷ್ಟು ತುಳಸಿ ರಸವನ್ನು ಮತ್ತು ಜೇನುತುಪ್ಪವನ್ನು ಮಿಶ್ರ ಮಾಡಿ ಸೇವಿಸುವುದರಿಂದ ಥಂಡಿ-ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ

ಕೆಮ್ಮು, ಗಂಟಲು ಕೆರೆತಕ್ಕೆ ಮತ್ತೊಂದು ಜನಪ್ರಿಯ ಮನೆ ಮದ್ದೆಂದರ ಶುಂಠಿ-ಕೊತ್ತಂಬರಿ ಕಾಫಿ ಅಥವಾ ಕಷಾಯ. ನಾಲು ಚಮಚ ಕೊತ್ತಂಬರಿ ಬೀಜ ಮತ್ತು ಒಂದಿಂಚುದ್ದದ ಶುಂಠಿಯನ್ನು ಅರ್ಧ ಲೀ. ನೀರಿಗೆ ಹಾಕಿ ಹತ್ತಾರು ನಿಮಿಷಗಳ ಕಾಲ ಕುದಿಸಿ. ಅದನ್ನು ಆಗಾಗ ಬೆಚ್ಚಗೆ ಮಾಡಿ ಕುಡಿಯುತ್ತಿರಿ.

ಒಂದು ಮಧ್ಯಮ ಗಾತ್ರದ ಈರುಳ್ಳಿಯನ್ನು ಹೆಚ್ಚಿ ಒಂದು ಲೋಟ ನೀರಿನೊಂದಿಗೆ ಕುದಿಸಿ ಕಷಾಯ ಮಾಡಿ. ಇದಕ್ಕೆ ಒಂದು ಸಣ್ಣ ತುಂಡು ಕಲ್ಲುಸಕ್ಕರೆ ಮತ್ತು ಆರೆಂಟು ಹನಿ ನಿಂಬೆರಸ ಸೇರಿಸಿ, ಬಿಸಿ ಇರುವಾಗಲೇ ಸೇವಿಸಿದರೆ ನೆಗಡಿ, ಕೆಮ್ಮು, ಕಫದ ಸಮಸ್ಯೆಗೆ ಉಪಶಮನ ದೊರೆಯುತ್ತದೆ.

ಸ್ವಲ್ಪ ಹಸಿಶುಂಠಿ, 1 ಲವಂಗ, ಕೊಂಚ ಹಿಪ್ಪಲಿ, ನಾಲ್ಕಾರು ಕಾಳು ಮೆಣಸು, ಸ್ವಲ್ಪ ಬೆಲ್ಲ, 2 ಸಣ್ಣ ಹರಳು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ, ಶೋಧಿಸಿಕೊಂಡು ಕುಡಿಯುವುದರಿಂದ ನೆಗಡಿ, ಕೆಮ್ಮು ಹತೋಟಿಗೆ ಬರುತ್ತದೆ

ಬಿಸಿಯಾದ ಹಾಲಿಗೆ ಚಿಟಿಕೆ ಅರಿಶಿನ, ಚಿಟಿಕೆ ಕಾಳು ಮೆಣಸಿನ ಪುಡಿ, ಚಿಟಿಕೆ ಜ್ಯೇಷ್ಠಮಧುವಿನ ಪುಡಿ ಅಥವಾ ಕೊಂಚ ಕಲ್ಲುಸಕ್ಕರೆಯನ್ನು ಸೇರಿಸಿ ಕುಡಿಯುವುದು ಶೀತ-ಕೆಮ್ಮಿಗೆ ಸೂಕ್ತ ಮದ್ದಾಗಬಲ್ಲುದು. ಕಫದ ಲಕ್ಷಣಗಳಿದ್ದರೆ ಜ್ಯೇಷ್ಠಮಧುವಿಗೆ ಒಂದೆರಡು ಹನಿ ಕರಗಿದ ತುಪ್ಪ ಸೇರಿಸಿ ಜೇನುತುಪ್ಪದ ಜೊತೆಗೆ ಸೇವಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬಿಸಿನೀರಿನಲ್ಲಿ ದಿನಕ್ಕೆ ನಾಲ್ಕಾರು ಬಾರಿ ಚೆನ್ನಾಗಿ ಆವಿ ತೆಗೆದುಕೊಳ್ಳುವುದು ಕಫ, ಕೆಮ್ಮಿಗೆ ಉತ್ತಮ ಉಪಶಮನ ನೀಡುತ್ತದೆ.

ಹತ್ತನ್ನೆರಡು ದೊಡ್ಡ ತುಳಸಿ ದಳಗಳು ಮತ್ತು ನಾಲ್ಕು ಏಲಕ್ಕಿ ಮತ್ತು ಒಂದೆರಡು ಲವಂಗ ಸೇರಿಸಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ನೆಗಡಿಯೊಂದಿಗೆ ಬರುವ ಸಣ್ಣ ಜ್ವರಕ್ಕೂ ಮದ್ದಾಗುತ್ತದೆ. ಗಂಟಲು ನೋವಿದ್ದರೆ ತುಳಸಿಯ ಕಷಾಯಕ್ಕೆ ಚಿಟಿಕೆ ಅರಿಶಿನ ಹಾಕಿ ಗಾರ್ಗಲ್‌ ಮಾಡಬಹುದು

ಇಷ್ಟಾಗಿಯೂ ನೆಗಡಿ, ಗಂಟಲುರಿ, ತಲೆಭಾರ ಮುಂತಾದ ಫ್ಲೂ ಲಕ್ಷಣಗಳು ಕಾಣಿಸಿಕೊಂಡರೆ- ನಿಮ್ಮನ್ನು ಉಳಿದವರಿಂದ ಬೇರ್ಪಡಿಸಿಕೊಳ್ಳಿ. ಕೆಮ್ಮುವಾಗ, ಸೀನುವಾಗ ಮೂಗು-ಬಾಯಿ ಮುಚ್ಚಿಕೊಳ್ಳುವುದು ಅಗತ್ಯ. ಅರಿಶಿನದ ಕಷಾಯ ಅಥವಾ ಶುಂಠಿ ಕಷಾಯಗಳು ನೆರವಾಗಬಹುದು. ಬಿಸಿ ಆವಿ ತೆಗೆದುಕೊಳ್ಳುವುದು ಗಂಟಲುರಿ ಮತ್ತು ಕಟ್ಟಿದ ಮೂಗಿನ ಪರಿಣಾಮಕಾರಿಯಾಗ ಉಪಶಮನ ನೀಡುತ್ತದೆ. ಕೆಮ್ಮು ಹೆಚ್ಚಾದರೆ ಜೇನುತುಪ್ಪದಲ್ಲಿ ಅತಿಮಧುರ ಅಥವಾ ಜೇಷ್ಠಮಧುವಿನ ಪುಡಿಯನ್ನು ತೆಗೆದುಕೊಳ್ಳುವುದು ಅನುಕೂಲ ಎನಿಸಬಹುದು. ಅಡುಗೆಯಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ-ಬೆಳ್ಳಿಳ್ಳಿ ಬಳಸುವುದೂ ಲಾಭದಾಯಕ. ಆಹಾರವನ್ನು ಬಿಸಿಯಿರುವಾಗಲೇ ಸೇವಿಸಿ. ಸಾಕಷ್ಟು ದ್ರಾವಾಹಾರವನ್ನು ಸೇವಿಸಿ, ವಿಶ್ರಾಂತಿ ಪಡೆಯಿರಿ. ಒಂದೆರಡು ದಿನಗಳಲ್ಲಿ ಜ್ವರ ಮತ್ತಿತರ ಲಕ್ಷಣಗಳು ನಿಯಂತ್ರಣಕ್ಕೆ ಬಾರದಿದ್ದರೆ ವೈದ್ಯರ ಸಲಹೆ ಪಡೆಯಿರಿ.

FAQ

ನೆಗಡಿ ಇನ್ನೂ ಪ್ರಾರಂಭವಾಗಿಲ್ಲ, ಆದರೆ ಆಗುವಂತಿದೆ. ಇದನ್ನು ತಡೆಯಲಾಗದೇ?

ಆಹಾರದಲ್ಲಿ ವಿಟಮಿನ್‌ ಸಿ ಪ್ರಮಾಣವನ್ನು ಹೆಚ್ಚಿಸಿ. ಬೆಚ್ಚನೆಯ ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪ ಹಾಕಿ ದಿನಕ್ಕೆ ಒಂದೆರಡು ಬಾರಿ ಸೇವಿಸಿ. ಚೆನ್ನಾಗಿ ನೀರು ಕುಡಿಯಿರಿ ಮತ್ತು ದಿನಕ್ಕೆಂಟು ತಾಸು ನಿದ್ದೆ ಮಾಡಿ. ಇವೆಲ್ಲವುಗಳಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ

ನನಗೆ ನೆಗಡಿಯಿದೆ. ಉಳಿದವರಿಗೆ ಹಬ್ಬದಂತೆ ತಡೆಯುವುದು ಹೇಗೆ?

ಎಲ್ಲರಿಂದ ದೂರ ಇರಿ. ಕೈಗಳನ್ನು ಆಗಾಗ ತೊಳೆದು ಶುಚಿಯಾಗಿರಿಸಿಕೊಳ್ಳಿ. ಮಕ್ಕಳು, ವೃದ್ಧರನ್ನು ಹತ್ತಿರ ಸೇರಿಸಬೇಡಿ. ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಬಾಯಿ-ಮೂಗು ಮುಚ್ಚಿಕೊಳ್ಳಿ.

ಇದನ್ನೂ ಓದಿ: Late Night Snacks: 10 Healthy Late Night Snacks

Exit mobile version