ಮಳೆಗಾಲವೆಂದರೆ ಎಲ್ಲವೂ (Health Tips for Monsoon) ಜೀವ ತಳೆಯುವ ಕಾಲ… ರೋಗಾಣುಗಳೂ ಸಹ! ಬೇಸಿಗೆಯಲ್ಲಿ ರೋಗವೇ ಇರುವುದಿಲ್ಲ ಎಂದಲ್ಲ. ಆದರೆ ಮಳೆಗಾಲದಲ್ಲಿ ಬರುವ ರೋಗಗಳ ಪ್ರಮಾಣ ಸ್ವಲ್ಪ ಹೆಚ್ಚು. ನೀರು, ಆಹಾರ, ಗಾಳಿ, ಸೊಳ್ಳೆ- ಹೀಗೆ ನಾನಾ ಮೂಲಗಳಿಂದ ಮಳೆಗಾಲವು ರೋಗಗಳನ್ನು ಆಹ್ವಾನಿಸುತ್ತದೆ. ಅಷ್ಟು ಸಾಲದೆಂಬಂತೆ ನಾವೂ ಮಳೆಯಲ್ಲಿ ನೆನೆಯುವ ಪ್ರಸಂಗಗಳು ಬಂದರೆ, ನಮ್ಮ ರೋಗನಿರೋಧಕ ಶಕ್ತಿಯೂ ದುರ್ಬಲವಾಗಬಹುದು. ಇಂಥ ದಿನಗಳಲ್ಲಿ ನಮ್ಮ ಆಹಾರ ಹೇಗಿರಬೇಕು?
ಆಹಾರವೇ ಔಷಧವಾಗಿ ನಮ್ಮನ್ನು ಕಾಯುತ್ತಿದ್ದ ಕಾಲವೊಂದಿತ್ತು, ಈಗಲೂ ಇದೆ… ನಮ್ಮ ಆಹಾರವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ. ಇದರಿಂದ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶರೀರವನ್ನು ಸಶಕ್ತವಾಗಿ ಇರಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಮಳೆಗಾಲದಲ್ಲಿ ನಮ್ಮ ಆರೋಗ್ಯವನ್ನೂ ಹಸಿರಾಗಿ ಇರಿಸಿಕೊಳ್ಳಬಹುದು. ಹಾಗಾಗಿ ಮಳೆಗಾಲಕ್ಕೆ ಪೂರಕವಾದಂಥ ಆಹಾರ ಹೇಗಿರಬೇಕು, ಯಾವ ಆಹಾರಗಳು ಹಿತವೆನಿಸುತ್ತವೆ ಎಂಬೆಲ್ಲ ಮಾಹಿತಿಗಳು ಇಲ್ಲಿವೆ.
ಹಣ್ಣುಗಳು
ಈ ಋತುವಿನಲ್ಲಿ ದೊರೆಯುವ ಹಣ್ಣುಗಳನ್ನು ಕಡ್ಡಾಯವಾಗಿ ಸೇವಿಸಿ. ಈಗಿನ್ನೂ ಮಾವಿನ ಹಣ್ಣಿನ ಋತು ಮುಗಿದಿಲ್ಲ. ಜೊತೆಗೆ ಹಲಸು, ನೇರಳೆ, ಲಿಚಿ, ದಾಳಿಂಬೆ, ಪೇರ್, ಮರಸೇಬು ಮುಂತಾದ ಹಲವು ರೀತಿಯ ಹಣ್ಣುಗಳು ದೊರೆಯುವ ಕಾಲವಿದು. ಇವೆಲ್ಲ ಆಹಾರದ ಭಾಗವಾದರೆ ಒಳ್ಳೆಯದು. ಈ ಹಣ್ಣುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಎ, ನಾರು, ಖನಿಜಗಳು ಮತ್ತು ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಯಥೇಚ್ಛವಾಗಿ ದೊರೆಯುತ್ತವೆ.
ತರಕಾರಿಗಳು
ಈ ದಿನಗಳಲ್ಲಿ ಸೊಪ್ಪು ತರಕಾರಿಗಳು ದೊರೆಯುವುದು ಕಷ್ಟವಾಗಬಹುದು. ಮಳೆನೀರಿಗೆ ಸಿಕ್ಕ ಕಾಯಿಪಲ್ಲೆಗಳು ಉಳಿಯುವುದಕ್ಕಿಂತ ಕೊಳೆಯುವುದೇ ಹೆಚ್ಚು. ಆದಾಗ್ಯೂ, ಹಾಗಲ, ಹೀರೆ, ಸೋರೆ, ಸೌತೆ, ಕುಂಬಳ, ಬೂದುಗುಂಬಳದಂಥ ತರಕಾರಿಗಳು ಈ ದಿನಗಳಿಗೆ ಆಪ್ಯಾಯಮಾನ ಎನಿಸುತ್ತವೆ. ಜೊತೆಗೆ, ಹಸಿ ಅರಿಶಿನ, ಹಸಿ ಶುಂಠಿಯಂಥ ಬೇರುಗಳು ಅಡುಗೆಯಲ್ಲಿ ಬಳಕೆಯಾಗುವುದು ಮುಖ್ಯ. ಇವುಗಳು ಶರೀರದ ರೋಗ ನಿರೋಧಕತೆಯನ್ನು ಉದ್ದೀಪಿಸುತ್ತವೆ. ಜೋಳವನ್ನು ಬೇಯಿಸಿ ಅಥವಾ ಸುಟ್ಟುಕೊಂಡು, ಬಾಯಿ ಸುಟ್ಟುಕೊಳ್ಳುತ್ತಾ ತಿನ್ನುವುದು ಬಹಳ ಮಂದಿಗೆ ಇಷ್ಟವಾಗುವಂಥದ್ದು.
ಕಾಳು-ಬೇಳೆಗಳ ಕಟ್ಟು
ಮಳೆಗಾಲದ ಶೀತ-ಥಂಡಿ-ಒದ್ದೆಯ ದಿನಗಳಿಗೆ ಸರಿಯಾಗಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದು ಅಗತ್ಯ. ಹಾಗಾಗಿ ಬೇಳೆ-ಕಾಳುಗಳ ಕಟ್ಟಿನ ಸಾರುಗಳು ಹಿತವೆನಿಸುತ್ತವೆ. ಹುರುಳಿ ಕಟ್ಟು, ತೊಗರಿ ಕಟ್ಟು, ಹೆಸರು ಕಟ್ಟುಗಳನ್ನು ವಿಫುಲವಾಗಿ ಸೇವಿಸಿ. ಇಂತಹ ಕಟ್ಟಿನ ಸಾರುಗಳು ಜೀರ್ಣಕ್ರಿಯೆ ನಿಧಾನವಾಗದಂತೆ ನೋಡಿಕೊಳ್ಳುತ್ತವೆ. ಇದನ್ನು ಊಟಕ್ಕಾದರೂ ಬಳಸಿ, ಸೂಪ್‌ನಂತಾದರೂ ಕುಡಿಯಿರಿ. ಇದರಿಂದ ದೇಹಕ್ಕೆ ಬೇಕಾದ ನೀರಿನಂಶವೂ ದೊರೆಯುತ್ತದೆ. ಇಂಥ ಕಟ್ಟಿನ ಸೂಪ್ ಅಥವಾ ಸಾರುಗಳ ಜೊತೆಗೆ ನಿಂಬೆಹಣ್ಣನ್ನು ವಿಫುಲವಾಗಿ ಬಳಸಿ.
ನೀರು
ಇದೀಗ ನೀರು ಬದಲಾಗುವ ಸಮಯ. ಹಾಗಾಗಿ ನೀರನ್ನು ಕುದಿಸಿ ಕುಡಿಯುವುದು ಕ್ಷೇಮ. ಹಾಗಿಲ್ಲದಿದ್ದರೆ ಆರ್‌ಒ ನೀರು ಬಳಸುವುದು ಸಹ ಸುರಕ್ಷಿತ. ಹೊರಗಿನ ಯಾವುದೇ ಆಹಾರಗಳು, ತೆರೆದಿಟ್ಟ ತಿನಿಸುಗಳು ಈ ದಿನಗಳಲ್ಲಿ ಖಂಡಿತ ಕ್ಷೇಮವಲ್ಲ. ಕಾಲರಾ, ಕರುಳುಬೇನೆ, ಟೈಫಾಯ್ಡ್‌ನಂಥ ಸಾಂಕ್ರಾಮಿಕಗಳು ಕಲುಷಿತ ಆಹಾರ-ನೀರಿನ ಮೂಲಕವೇ ಹರಡುವಂಥವು. ಹಸಿ ಆಹಾರವನ್ನು ಎಲ್ಲಿಯೂ ತಿನ್ನಬೇಡಿ. ಆಹಾರವನ್ನು ಚೆನ್ನಾಗಿ ಬೇಯಿಸಿಕೊಂಡೇ ಸೇವಿಸಿ.
ಮಸಾಲೆಗಳು
ನಮ್ಮ ಅಡುಗೆಮನೆಗಳೇ ಕೆಲವೊಮ್ಮೆ ಕಿರುವೈದ್ಯರಂತೆ ವರ್ತಿಸುತ್ತವೆ. ನಿತ್ಯದ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು, ಜೀರಿಗೆ, ಧನಿಯಾ, ದಾಲ್ಚಿನಿ, ಲವಂಗ, ಅರಿಶಿನ, ಇಂಗು ಮುಂತಾದ ಮಸಾಲೆಗಳು ಇರಲಿ. ಇವೆಲ್ಲ ಹಲವು ರೀತಿಯ ಉತ್ಕರ್ಷಣ ನಿರೋಧಕಗಳನ್ನು ತುಂಬಿಕೊಂಡಂಥವು. ಮಾತ್ರವಲ್ಲ, ಇವುಗಳಲ್ಲಿ ಸೋಂಕು ನಿರೋಧಕ ಗುಣವೂ ಇದ್ದು, ರೋಗಾಣುಗಳೊಂದಿಗೆ ಹೋರಾಡಲು ದೇಹಕ್ಕೆ ಶಕ್ತಿ ನೀಡುತ್ತದೆ.
ಹರ್ಬಲ್ ಚಹಾ
ಇಂಥ ಚಹಾಗಳನ್ನು ತುಳಸಿ, ಅಶ್ವಗಂಧ, ಪುದೀನಾ, ನಿಂಬೆ, ಸೋಂಪು, ಏಲಕ್ಕಿ, ಶುಂಠಿ, ದಾಲ್ಚಿನಿ ಮುಂತಾದ ಮೂಲಿಕೆಗಳನ್ನು ಬಳಸಿ ತಯಾರಿಸಿಕೊಳ್ಳಬಹುದು. ಕೆಫೇನ್ ಪೇಯಗಳ ಬದಲಿಗೆ ಇಂಥವುಗಳ ಬಿಸಿ ಚಹಾಗಳನ್ನು ಸೇವಿಸಿದರೆ ಶೀತ-ಥಂಡಿಯ ದಿನಗಳಲ್ಲಿ ಚಳಿಯೂ ಮಾಯ, ಆರೋಗ್ಯಕ್ಕೂ ಇಲ್ಲ ಅಪಾಯ.