ನಲವತ್ತಕ್ಕೆ ಪದಾರ್ಪಣೆ (Health tips for Over 40) ಮಾಡುವುದು ಎಂದರೆ, ದೇಹ ಹಲವಾರು ಬದಲಾವಣೆಗಳಿಗೆ ಒಳಗೊಳ್ಳುವುದು. ಹೌದು. ನಲವತ್ತಕ್ಕೆ ಕಾಲಿಡುತ್ತಿರುವಾಗಲೇ ದೇಹದಲ್ಲಿ ಹಲವಾರು ಬದಲಾವಣೆಗಳು ನಿಧಾನವಾಗಿ ಕಾಣಿಸಿಕೊಳ್ಳಲಾರಂಭಿಸುತ್ತದೆ. ಎಲುಬಿನ ಸಾಂದ್ರತೆ, ಮಾಂಸಖಂಡಗಳು ಇಳಿಮುಖವಾಗುವುದು, ಜೀರ್ಣಕ್ರಿಯೆ ನಿಧಾನವಾಗುವುದು, ಹಾರ್ಮೋನಿನ ಬದಲಾವಣೆಗಳು ಇವೆಲ್ಲವೂ ಬಹಳ ಸಾಮಾನ್ಯ. ಕೆಲವು ಸಪ್ಲಿಮೆಂಟ್‌ಗಳು, ಪೋಷಕಾಂಶಯುಕ್ತ ಆಹಾರ, ವ್ಯಾಯಾಮ, ಚಟುವಟಿಕೆಯಿಂದಿರುವುದು ಇತ್ಯಾದಿಗಳು ಅತ್ಯಂತ ಮುಖ್ಯ. ಬನ್ನಿ, ನಲವತ್ತು ದಾಟುತ್ತಿದ್ದಂತೆ, ಅಗತ್ಯವಾಗಿ ಬೇಕಾಗುವ ಸಪ್ಲಿಮೆಂಟ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ವಿಟಮಿನ್ ಡಿ
ನಮಗೆ ವಯಸ್ಸಾಗುತ್ತಿದ್ದಂತೆಯೇ, ನಮ್ಮ ಚರ್ಮಕ್ಕೆ ಸೂರ್ಯನ ಬೆಳಕಿನಲ್ಲಿರುವ ವಿಟಮಿನ್ ಡಿಯನ್ನು ಸಂಸ್ಕರಿಸಿ ಪಡೆಯುವ ಶಕ್ತಿ ಕುಂಠಿತವಾಗುತ್ತದೆ. ವಿಟಮಿನ್ ಡಿ ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಹೀರಿಕೆಗೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶವಾದ್ದರಿಂದ ಇದರ ಕೊರತೆ ಕಾಡದಂತೆ ನೋಡಬೇಕು. ಹಾಗಾಗಿ ಆಗಾಗ, ಪರೀಕ್ಷೆಗಳಿಂದ ವಿಟಮಿನ್ ಡಿಯ ಕೊರತೆಯಿದ್ದರೆ ಅದನ್ನು ದೃಢಪಡಿಸಿಕೊಂಡು ವೈದ್ಯರ ಸಲಹೆಯಂತೆ ವಿಟಮಿನ್ ಡಿ ಸಪ್ಲಿಮೆಂಟ್ ಸೇವನೆ ಮಾಡುವುದು ಒಳ್ಳೆಯದು.
ಕ್ಯಾಲ್ಶಿಯಂ
ಎಲುಬಿನ ಸಾಂದ್ರತೆಯನ್ನು ಕಾಯ್ದುಕೊಳ್ಳಲು ಕ್ಯಾಲ್ಶಿಯಂ ಅಗತ್ಯವಾಗಿ ಬೇಕು. ನಲವತ್ತಾಗುತ್ತಿದ್ದಂತೆ ನಿಧಾನವಾಗಿ ಮೂಳೆ ಸವೆತ, ಸಂಧಿನೋವುಗಳು ಇತ್ಯಾದಿಗಳು ಕಾಡಲಾರಂಭಿಸುತ್ತದೆ. ಮುಖ್ಯವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಬರುವುದು ಹೆಚ್ಚು. ಕಾರಣ ಆಕೆ ಹೆರಿಗೆ ಇತ್ಯಾದಿಗಳಿಂದಾಗಿ ಸಾಕಷ್ಟು ಬದಲಾವಣೆಗಳನ್ನು ಕಾಣುವುದರಿಂದ ಹಾಗೂ ಮೆನೋಪಾಸ್ ಇತ್ಯಾದಿಗಳಿಂದಾಗಿಯೂ ಕ್ಯಾಲ್ಶಿಯಂ ದೇಹಕ್ಕೆ ಕೊರತೆಯಾಗುತ್ತದೆ. ಹೀಗಾಗಿ ಕ್ಯಾಲ್ಶಿಯಂ ಶ್ರೀಮಂತವಾಗಿರುವ ಆಹಾರ ಸೇವನೆ ಹಾಗೂ ಅಗತ್ಯ ಬಿದ್ದರೆ ವೈದ್ಯರ ಸಲಹೆಯಂತೆ, ಸಪ್ಲಿಮೆಂಟ್ ಸೇವನೆಯ ಮೊರೆ ಹೋಗಬಹುದು.
ಇದನ್ನೂ ಓದಿ: Actor Kiran Raj: ಕಿರಣ್‌ರಾಜ್ `ರಾನಿ’ ಸಿನಿಮಾಗೆ ಯು/ಎ ಸರ್ಟಿಫಿಕೇಟ್; ತೆರೆಗೆ ಯಾವಾಗ?
ಒಮೆಗಾ 3 ಫ್ಯಾಟಿ ಆಸಿಡ್
ಒಮೆಗಾ 3 ಫ್ಯಾಟಿ ಆಸಿಡ್‌ಗಳು ಮೀನಿನ ಎಣ್ಣೆ ಸಪ್ಲಿಮೆಂಟ್‌ಗಳ ಮೂಲಕ ಪಡೆಯಬಹುದು. ಇವುಗಳಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿದ್ದು, ಇವು ಹೃದಯದ ಆರೋಗ್ಯವನ್ನು ವರ್ಧಿಸುತ್ತದೆ. ಇದು ಟ್ರೈಗ್ಲಿಸರಾಯ್ಡ್‌ಗಳನ್ನು ಇಳಿಸಿ, ಹೃದಯಾಘಾತ ಇತ್ಯಾದಿಗಳಿಂದ ರಕ್ಷಣೆ ನೀಡುತ್ತದೆ. ಮಿದುಳಿನ ಕೆಲಸವನ್ನು ಚುರುಕುಗೊಳಿಸುತ್ತದೆ. ಅಷ್ಟೇ ಅಲ್ಲ, ಸಂಧಿನೋವು, ಆರ್ಥೈಟಿಸ್ ಇತ್ಯಾದಿಗಳಿಗೂ ಒಳ್ಳೆಯದು.
ಮೆಗ್ನೀಶಿಯಂ
ದೇಹದ ಶಕ್ತಿವರ್ಧನೆಗೆ, ಮಾಂಸಖಂಡಗಳು ಕೆಲಸ ಮಾಡಲು, ನರಮಂಡಲದ ಚುರುಕಿಗೆ ಮೆಗ್ನೀಶಿಯಂ ಬೇಕು. ಹೃದಯದ ಆರೋಗ್ಯಕ್ಕೂ ಮೆಗ್ನೀಶಿಯಂ ಒಳ್ಳೆಯದು. ನಿದ್ದೆಯ ಗುಣಮಟ್ಟ ವೃದ್ಧಿಸಲು, ಮೂಳೆ ಗಟ್ಟಿಗೊಳ್ಳಲೂ ಮೆಗ್ನೀಶಿಯಂ ಸಹಾಯ ಮಾಡುತ್ತದೆ.
ಪ್ರೊಬಯಾಟಿಕ್‌ಗಳು
ಇಡಿಯ ಜೀರ್ಣಾಂಗ ವ್ಯೂಹ ಸಮರ್ಪಕವಾಗಿ ಕೆಲಸ ಮಾಡಲು ಸಹಾಯ ಮಾಡುವ ಬ್ಯಾಕ್ಟೀರಿಯಾ, ಪ್ರೊಬಯಾಟಿಕ್‌ನಲ್ಲಿದೆ. ನಲುವತ್ತು ದಾಟುತ್ತಿದ್ದಂತೆ, ಜೀರ್ಣಕ್ರಿಯೆ ಕುಂಠಿತವಾಗುತ್ತಿರುವಾಗ ಪ್ರೊಬಯಾಟಿಕ್‌ನ ಸಹಾಯವಿದ್ದರೆ ಒಳ್ಳೆಯದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕವಾಗಿ ಸದೃಢವಾಗಿರಲೂ ಕೂಡಾ ಇದು ಒಳ್ಳೆಯದು.
ವಿಟಮಿನ್ ಬಿ
ವಿಟಮಿನ್ ಬಿ6, ಬಿ12, ಫೋಲೇಟ್ ಸೇರಿದಂತೆ ವಿಟಮಿನ್ ಬಿ ದೇಹದ ಶಕ್ತಿವರ್ಧನೆಗೆ ನಲುವತ್ತರ ನಂತರ ಅತೀ ಅಗತ್ಯ. ಕೆಂಪು ರಕ್ತಕಣಗಳು ವೃದ್ಧಿಯಾಗಲು ಕೂಡಾ ಇದರಿಂದ ಸಹಾಯವಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ, ವಿಟಮಿನ್ ಬಿಯ (ಮುಖ್ಯವಾಗಿ ಬಿ12) ಹೀರಿಕೆಯ ಸಾಮರ್ಥ್ಯ ದೇಹಕ್ಕೆ ಕಡಿಮೆಯಾಗುತ್ತಾ ಬಂದಂತೆ ದೇಹದ ಶಕ್ತಿ ಕುಂದದಂತೆ, ಅನೀಮಿಯಾದಂತಹ ಕಾಯಿಲೆ ಬರದಂತೆ ತಡೆಯಲು ಸಪ್ಲಿಮೆಂಟ್‌ಗಳನ್ನು ನೀಡಬೇಕಾಗುತ್ತದೆ.
ಕೊಲಾಜೆನ್
ಕೊಲಾಜೆನ್ ಇಂದು ಕೇಳಿಬರುತ್ತಿರುವ ದೊಡ್ಡ ಹೆಸರು. ವಯಸ್ಸಾಗುತ್ತಾ ಸೌಂದರ್ಯ ಕಳೆದು ಹೋಗದಂತೆ ಇಂದು ಸಾಕಷ್ಟು ಮಂದಿ ಕೊಲಾಜೆನ್ ಸಪ್ಲಿಮೆಂಟ್ ಸೇವಿಸುತ್ತಿರುವುದು ಸಾಮಾನ್ಯವಾಗಿದೆ. ಚರ್ಮದಲ್ಲಿ ನೆರಿಗೆಗಳು, ವಯಸ್ಸಾದ ಲಕ್ಷಣಗಳನ್ನು ಕಡಿಮೆಗೊಳಿಸಲು ಇದು ನೆರವಾಗುತ್ತದೆ. ಅಷ್ಟೇ ಅಲ್ಲ, ಚರ್ಮಕ್ಕೆ ಮೃದುತ್ವವನ್ನು ನೀಡಿ, ಚರ್ಮದಲ್ಲಿ ನೀರಿನಂಶವನ್ನು ಉಳಿಸುವಂತೆ ಮಾಡಿ, ನಯವೂ ಹೊಳಪೂ ಆಗಿಸುತ್ತದೆ.
ವಿಟಮಿನ್ ಸಿ
ವಿಟಮಿನ್ ಸಿ ಅತ್ಯಂತ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್. ಇದು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗಲೇಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಚರ್ಮದ ಆರೋಗ್ಯವೂ ಹೆಚ್ಚುತ್ತದೆ. ಅಗತ್ಯವಿದ್ದರೆ ಮಾತ್ರ ಇವುಗಳ ಸಪ್ಲಿಮೆಂಟ್ ಸೇವಿಸಬಹುದು.