Site icon Vistara News

Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

fruits and cold cough

ಶೀತ, ನೆಗಡಿ (Cold, runny nose) ಆದಾಗ, ಮೂಗು ಹಿಡಿದುಕೊಂಡು ಸೀನುತ್ತಾ, ಅಯ್ಯೋ, ನನ್ನ ಶತ್ರುವಿಗೂ ಶೀತ ನೆಗಡಿ ಆಗೋದು ಮಾತ್ರ ಬೇಡಪ್ಪಾ ಅನ್ನುವಷ್ಟು ಕಿರಿಕಿರಿ ಆಗೋದು ಸಹಜ. ʻಔಷಧಿ ತೆಗೆದುಕೊಳ್ಳದಿದ್ರೆ ಒಂದು ವಾರದಲ್ಲಿ ಶೀತ ಕಡಿಮೆಯಾಗುತ್ತೆ, ಔಷಧಿ ತೆಗೊಂಡ್ರೆ ಒಂದೇ ವಾರದಲ್ಲಿ ಶೀತ ಮಾಯʼ ಎಂಬ ಜೋಕುಗಳೂ ಜನಜನಿತ. ʻಶೀತ ಬಂತೆಂದು ಮೂಗೇ ಕೊಯ್ದುಕೊಂಡರೆ ಆದೀತೇʼ ಎಂಬ ನುಡಿಗಟ್ಟೂ ಚಾಲ್ತಿಯಲ್ಲಿರುವುದು ನಮಗೆ ಗೊತ್ತು. ಇಂತಿಪ್ಪ ಶೀತದ ಮಹಾತ್ಮೆಯನ್ನು ಎಷ್ಟು ವಿವರಿಸಿದರೂ ಸಾಲದು. ಯಾಕೆಂದರೆ, ಎಷ್ಟೇ ಔಷಧಿ, ಮನೆಮದ್ದು ಮಾಡಿದರೂ ಶೀತ ಮಾತ್ರ ಅಷ್ಟು ಸುಲಭದಲ್ಲಿ ಹೋಗದು. ಆದರೆ, ಬಹಳಷ್ಟು ಸಾರಿ ನಮಗೆ, ಶೀತ, ನೆಗಡಿ ಆಗಿದ್ದಾಗ ಎಂಥ ಆಹಾರ ತಿಂದರೆ ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಾಗುತ್ತವೆ. ಯಾಕೆಂದರೆ, ಒಬ್ಬೊಬ್ಬರು ಒಂದೊಂದು ವಿಧವಾಗಿ ತಮ್ಮ ಜ್ಞಾನವನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳುವವರೇ, ಸಲಹೆ ಕೊಡುವವರೇ. ಹಾಗಾದರೆ, ಬನ್ನಿ, ಯಾವೆಲ್ಲ ಹಣ್ಣುಗಳನ್ನು ಶೀತ, ನೆಗಡಿಯಾಗಿದ್ದಾಗ ತಿನ್ನುವುದು ಅಷ್ಟಾಗಿ ಒಳ್ಳೆಯದಲ್ಲ (health tips) ಎಂಬುದನ್ನು ನೋಡೋಣ.

1. ಸಿಟ್ರಸ್‌ ಹಣ್ಣುಗಳು: ಸಿಟ್ರಸ್‌ ಹಣ್ಣುಗಳಾದ ಮುಸಂಬಿ, ನಿಂಬೆ, ಕಿತ್ತಳೆ ಮತ್ತಿತರ ಹಣ್ಣುಗಳು ವಿಟಮಿನ್‌ ಸಿಯಿಂದ ಶ್ರೀಮಂತವಾದ ಹಣ್ಣುಗಳು. ವಿಟಮಿನ್‌ ಸಿ ಶೀತ, ನೆಗಡಿಗೆ ಒಳ್ಳೆಯದು ನಿಜ. ಆದರೆ, ಮುಖ್ಯವಾಗಿದು ಶೀತ ನೆಗಡಿಗೂ ಮುನ್ನ ಇಂತಹ ಹಣ್ಣುಗಳನ್ನು ತಿನ್ನುತ್ತಿದ್ದರೆ, ನಮ್ಮ ನಿತ್ಯಾಹಾರ ಪದ್ಧತಿಯಲ್ಲಿದ್ದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ, ಶೀತ ನೆಗಡಿ ನಮ್ಮ ಬಳಿ ಅಷ್ಟು ಸುಲಭವಾಗಿ ಸುಳಿಯದು. ಆದರೆ, ಶೀತ, ನೆಗಡಿ ಅತಿಯಾದಾಗ ಇಂತಹ ಹಣ್ಣುಗಳನ್ನು ತಿಂದರೆ ನೆಗಡಿ ಅತಿಯಾಗುವ ಸಂಭವವೂ ಇದೆ. ಕಾರಣವೇನೆಂದರೆ, ಇದರಲ್ಲಿರುವ ಆಸಿಡ್‌ ಅಂಶ ಶೀತವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಅದಕ್ಕಾಗಿ, ಶೀತ ಅಥವಾ ನೆಗಡಿಯಾದ ಮೇಲೆ ಈ ಹಣ್ಣುಗಳನ್ನು ತಿನ್ನುವುದರಿಂದ ದೂರ ಇರುವುದು ಒಳ್ಳೆಯದು.

2. ಅನನಾಸು: ಕೆಲವು ಮಂದಿಗೆ ಅನನಾಸಿನಲ್ಲಿರುವ ಬ್ರೊಮೆಲನಿನ್‌ ಎಂಬ ಕಿಣ್ವವು ಅಲರ್ಜಿಯನ್ನು ತರುವ ಸಂಭವ ಇರುತ್ತದೆ. ಶೀತದ ಜೊತೆಗೆ ಗಂಟಲು ನೋವೂ ಇದ್ದರೆ, ಅನನಾಸಿನಿಂದ ಅದು ಹೆಚ್ಚಾಗು ಸಂಭವವೂ ಇರುತ್ತದೆ.

3. ಟೊಮೇಟೋ: ಟೊಮೇಟೋ ಹಣ್ಣಿನಂತೆ ಬಳಸುವುದಿಲ್ಲವಾದರೂ ನಿತ್ಯವೂ ತರಕಾರಿಯಂತೆ ಊಟದಲ್ಲಿ ಬಳಸುವುದೇ ಹೆಚ್ಚು. ಆದರೆ, ಶೀತ, ನೆಗಡಿಯಾದಾಗ, ಈ ಟೊಮೇಟೋ ಹಣ್ಣಿನಿಂದ ದೂರವಿರುವುದು ಒಳ್ಳೆಯದು. ಟೊಮೇಟೋ ಸಾಸ್‌, ಕೆಚಪ್‌, ರಸಂ ಇತ್ಯಾದಿಗಳನ್ನು ತಿನ್ನುವುದರಿಂದ ಗಂಟಲು ಇನ್ನಷ್ಟು ಕೆಡುವ ಸಂಭವವಿರುತ್ತದೆ.

4. ಕಿವಿ: ಕಿವಿ ಹಣ್ಣಿನಲ್ಲಿ ಅತ್ಯಧಿಕ ಸಿ ವಿಟಮಿನ್‌ ಇದ್ದರೂ ಇದರಿಂದ ಶೀತ, ನೆಗಡಿಯ ಸಂದರ್ಭ ಮಾತ್ರ ಇದರಿಂದ ಗಂಟಲು ಕೆರೆತ ಉಂಟಾಗುವ ಸಂಭವ ಹೆಚ್ಚು. ಹೀಗಾಗಿ ನೆಗಡಿಯ ಸಂದರ್ಭ ಕಿವಿ ಹಣ್ಣನ್ನು ತಿನ್ನುವ ಮೊದಲು ಯೋಚಿಸಿ.

5. ಬೆರ್ರಿ: ಬೆರ್ರಿ ಹಣ್ಣುಗಳಾದ, ಸ್ಟ್ರಾಬೆರಿ, ರಸ್‌ಬೆರ್ರಿ, ಬ್ಲೂಬೆರ್ರಿ ಹಣ್ಣುಗಳಲ್ಲೂ ಅಸಿಡಿಕ್‌ ಅಂಶಗಳಿರುವುದರಿಂದ ಗಂಟಲಿಗೆ ಕೊಂಚ ಕಿರಿಕಿರಿ ಮಾಡುವ ಸಂಭವ ಹೆಚ್ಚು. ಹೀಗಾಗಿ ಇಂತಹ ಹುಳಿ ಹಣ್ಣುಗಳನ್ನು ಶೀತ, ನೆಗಡಿಯ ಸಂದರ್ಭ ಅತಿಯಾಗಿ ತಿನ್ನುವುದರಿಂದ ದೂರ ಉಳಿಯುವುದೇ ಒಳ್ಳೆಯದು.

ಇದನ್ನೂ ಓದಿ: Dates Health Benefits: ಸಮೃದ್ಧ ಹಣ್ಣು ಖರ್ಜೂರವನ್ನು ನಾವು ಏಕೆ ಬೆಳಗ್ಗೆ ತಿನ್ನಬೇಕು ಗೊತ್ತೇ?

6. ಪಪ್ಪಾಯಿ: ಪಪ್ಪಾಯಿಯಲ್ಲಿ ಏನಿದೆ ಎನ್ನಬಹುದು. ಆದರೆ, ಪಪ್ಪಾಯಿಯಲ್ಲಿರುವ ಪಪೈನ್‌ ಎಂಬ ಕಿಣ್ವವು ಗಂಟಲಿಗೆ ಕಿರಿಕಿರಿ ಮಾಡುವ ಕಾರಣ ಹೆಚ್ಚು ತಿನ್ನದಿರುವುದು ಒಳ್ಳೆಯದು.

7. ದ್ರಾಕ್ಷಿ: ದ್ರಾಕ್ಷಿಯಲ್ಲಿ ನೈಸರ್ಗಿಕ ಸಕ್ಕರೆ ಹೇರಳವಾಗಿದ್ದು ಇದರಿಂದಾಗಿ ಕೆಲವೊಮ್ಮೆ ಒಳಗೆ ಕಫ ಗಟ್ಟಿಯಾಗುತ್ತದೆ. ಆಮೇಲೆ ಕಫವನ್ನು ಹೊರಗೆ ತೆಗೆಯುವುದೇ ಕಷ್ಟವಾಗಬಹುದು. ಕೆಮ್ಮು ಹಾಗೂ ಕಫದ ಪರಿಣಾಮ ತೀವ್ರವಾಗುವ ಸಂಭವ ಇರುವುದರಿಂದ ದ್ರಾಕ್ಷಿಯಿಂದ ಶೀತ ಹಾಗೂ ನೆಗಡಿಯಂತಹ ಸಂದರ್ಭಗಳಲ್ಲಿ ದೂರ ಇರುವುದೇ ಒಳ್ಳೆಯದು.

ಇದನ್ನೂ ಓದಿ: Fruits To Lower Cholesterol: ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಹಣ್ಣುಗಳ ಬಗ್ಗೆ ಗೊತ್ತೇ?

Exit mobile version