Site icon Vistara News

Mango Seed: ಮಾವಿನಹಣ್ಣಿನ ವಾಟೆಯ ಉಪಯೋಗ ತಿಳಿದರೆ ಎಂದೂ ಬಿಸಾಡಲಾರಿರಿ!

mango seed

ಮಾವಿನ ಹಣ್ಣಿನ (Mango) ಕಾಲ ಇನ್ನೇನು ಮುಗಿಯುತ್ತಾ ಬಂತು. ಆದರೆ ಇಷ್ಟರವರೆಗೆ ತಿಂದ ಹಣ್ಣಿನ ಅಷ್ಟೂ ವಾಟೆಗಳನ್ನೇನು (Mango seed) ಮಾಡಿದಿರಿ? ಖಂಡಿತವಾಗಿಯೂ ಹಣ್ಣನ್ನು ಚಪ್ಪರಿಸಿ ತಿಂದು ಎಸೆದಿರುತ್ತೀರಿ. ಅಥವಾ ಎಲ್ಲೋ ನಾಲ್ಕೈದು ಬೀಜಗಳನ್ನು ಎತ್ತಿಟ್ಟು ಸಸಿ ಮಾಡಿರಲೂಬಹುದು. ಆದರೆ, ಅಷ್ಟೂ ವಾಟೆಗಳನ್ನು ಹಿಂದೆ ಮುಂದೆ ಯೋಚನೆ ಮಾಡದೆ ಕಸದ ಬುಟ್ಟಿಯೊಳಗೆ ಸುರಿವಾಗ ಒಮ್ಮೆಯಾದರೂ ನೀವು, ಹೇರಳವಾದ ವಿಟಮಿನ್‌ ಎ, ಬಿ1, ಬಿ2, ಬಿ6, ಬಿ12, ಇ, ಕೆ ಮತ್ತು ಸಿ1ಗಳಂತಹ ಅಮೂಲ್ಯ ಪೋಷಕಾಂಶಗಳನ್ನು ವ್ಯರ್ಥವಾಗಿ ಎಸೆದಂತಾಯಿತು ಎಂದು ಯೋಚನೆ ಮಾಡಿದ್ದಿದ್ದರೆ…! ಹೌದು, ಇನ್ನಾದರೂ ಎಸೆವ ವಾಟೆಗಳನ್ನು ತೆಗೆದಿಟ್ಟು ಅದರೊಳಗಿನ ಬೀಜಗಳನ್ನು ಒಣಗಿಸಿ ಪುಡಿ ಮಾಡಿಡಿ. ಅಥವಾ ಎಣ್ಣೆ ಮಾಡಿಡಿ. ಅಥವಾ ಬೀಜಗಳ ಬಟರ್‌ ಮಾಡಿಡಿ. ಯಾಕೆ ಅಂತೀರಾ? ಇದು ಸೌಂದರ್ಯವರ್ಧಕವೂ ಹೌದು, ಆರೋಗ್ಯವರ್ಧಕವೂ (Health tips) ಹೌದು.

ಮಧುಮೇಹಿಗಳು, ಹೃದಯದ ತೊಂದರೆಯಿರುವ ಮಂದಿಗೆ ಮಾವಿನಹಣ್ಣು ತಿನ್ನಬೇಡಿ ಎಂದು ವೈದ್ಯರು ಹೇಳೋದು ನಿಜವೇ. ಆದರೆ ಮಾವಿನಹಣ್ಣಿನ ಬೀಜ ತಿನ್ನಬೇಡಿ ಎಂದು ಹೇಳುವುದಿಲ್ಲ! ಮಾವಿನಹಣ್ಣು ಮಧುಮೇಹಿಗಳಿಗೆ, ಆಧಿಕ ರಕ್ತದೊತ್ತಡ ಇರುವವರಿಗೆ, ಕೊಲೆಸ್ಟೆರಾಲ್‌ ಹೊಂದಿರುವವರಿಗೆ, ಹೃದಯ ಸಂಬಂಧೀ ತೊಂದರೆ ಇರುವರಿಗೆ ಒಳ್ಳೆಯದಲ್ಲವೆಂದರೂ, ಇದರ ಬೀಜ ಮಾತ್ರ ಇವೆಲ್ಲವಕ್ಕೆ ಮದ್ದು! ಹಾಗಾದರೆ, ಬೀಜದ ಉಪಯೋಗಗಳನ್ನು ಸವಿಸ್ತಾರಾಗಿ ತಿಳಿಯೋಣ ಬನ್ನಿ.

1. ತಲೆಹೊಟ್ಟು: ಮಾವಿನ ಹಣ್ಣಿನ ಬೀಜದ ಬಟರ್‌ ಅನ್ನು ಹರಳೆಣ್ಣೆ ಜೊತೆ ಮಿಶ್ರ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಕಾಲ ಬಿಟ್ಟು ಸ್ನಾನ ಮಾಡುವುದರಿಂದ ತಲೆಹೊಟ್ಟಿಗೆ ಪರಿಹಾರ ಸಿಗುತ್ತದೆ. ಕೂದಲು ಸಮೃದ್ಧವಾಗಿ, ದಟ್ಟವಾಗಿ ಬೆಳೆಯುತ್ತದೆ. ಕೂದಲುದುರುವಿಕೆ, ಅಕಾಲದಲ್ಲಿ ಬಿಳಿಯಾಗುವ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರ.

2. ಮಾವಿನ ಹಣ್ಣಿನ ಬೀಜದ ಪುಡಿ ಉತ್ತಮ ಹಲ್ಲುಪುಡಿ ಕೂಡಾ. ಈ ಪುಡಿಯನ್ನು ಬ್ರಷ್‌ಗೆ ಹಾಕಿ ಹಲ್ಲುಜ್ಜಿದರೆ ನಿಮ್ಮ ಹಲ್ಲು ಪಳಪಳ. ಹುಳುಕು ಮುಕ್ತ.

3. ಬೇಧಿಯಾಗುತ್ತಿದ್ದರೆ, ಮಾವಿನ ಹಣ್ಣಿನ ಬೀಜದ ಪುಡಿ ಅತ್ಯುತ್ತಮ ಮನೆಮದ್ದು. ಒಂದೆರಡು ಚಮಚ ಪುಡಿಯನ್ನು ಜೇನಿನೊಂದಿಗೆ ಕಲಸಿ ತಿಂದರೆ ಬೇದಿ ನಿಯಂತ್ರಣಕ್ಕೆ ಬರುತ್ತದೆ.

4. ಪುಡಿಯನ್ನು ದಿನವೂ ಸೇವಿಸುತ್ತಿದ್ದರೆ, ತೂಕ ನಿಯಂತ್ರಣಕ್ಕೆ ಬರುತ್ತದೆ. ಬೊಜ್ಜು ಕರಗುತ್ತದೆ.

5. ಕೊಲೆಸ್ಟೆರಾಲ್‌ಗೂ ಇದು ಉತ್ತಮ. ರಕ್ತ ಪರಿಚಲನೆಯನ್ನು ಸುಗಮಗೊಳಿಸಿ, ಪರೋಕ್ಷವಾಗಿ ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆಯಾಗುವಂತೆ ಮಾಡುತ್ತದೆ.

6. ಪ್ರತಿನಿತ್ಯ ಸಣ್ಣ ಪ್ರಮಾಣದಲ್ಲಿ ಈ ಪುಡಿಯನ್ನು ಬಳಸುತ್ತಾ ಬರುವುದರಿಂದ ಹೃದಯ ಸಂಬಂಧೀ ಸಮಸ್ಯೆಗಳು ಹಾಗೂ ಅಧಿಕ ರಕ್ತದೊತ್ತಡದಂಥ ಸಮಸ್ಯೆಗಳನ್ನು ದೂರವಿಡಬಹುದು.

7. ಒಣತುಟಿಗಳಿಗೆ ಮಾವಿನಹಣ್ಣಿನ ಬೀಜದ ಬಟರ್‌ ಬಹಳ ಉತ್ತಮ. ನೈಸರ್ಗಿಕ ಲಿಪ್‌ಬಾಮ್‌ ಆಗಿರುವ ಇದು ಒಣತುಟಿಗಳನ್ನು ನಯವಾಗಿಸುತ್ತದೆ. ಒಡಕು ಮೂಡುವುದಿಲ್ಲ.

8. ಇದರ ಬಟರ್‌ ಒಂದೊಳ್ಳೆ ಮಾಯ್‌ಶ್ಚರೈಸರ್‌. ಒಣ ಚರ್ಮಕ್ಕಿದು ವರದಾನ. ಕೆನ್ನೆ, ಕಣ್ಣಿನ ಸುತ್ತ ಮತ್ತಿತರ ಸೂಕ್ಷ್ಮ ಚರ್ಮಕ್ಕೆ ಇದು ಒಳ್ಳೆಯದು. ಒಣ ಚರ್ಮವನ್ನು ನಯವಾಗಿಸಿ ಹೊಳಪನ್ನು ನೀಡುತ್ತದೆ.

ಇದನ್ನೂ ಓದಿ: Skin Health Tips: ಚರ್ಮದ ಆರೋಗ್ಯಕ್ಕೂ ಕಾರ್ಬೋನೇಟೆಡ್‌ ಪೇಯಗಳಿಗೂ ಏನು ಸಂಬಂಧ ಗೊತ್ತೇ?

9. ಮೊಡವೆಗೂ ಇದು ಉತ್ತಮ. ಮಾವಿನ ಹಣ್ಣಿನ ಬೀಜವನ್ನು ಟೊಮೇಟೋ ಜೊತೆ ರುಬ್ಬಿ ಮುಖಕ್ಕೆ ಲೇಪಿಸಿದರೆ ಚರ್ಮದ ಸಮಸ್ಯೆಗಳಿಗೆ ರಾಮಬಾಣ. ಮೊಡವೆಗಳಿಂದ ಕೆಂಪು ಕೆಂಪಾದ ಮುಖವನ್ನು ಸಹಜ ಬಣ್ಣಕ್ಕೆ ತರುವುದಲ್ಲದೆ, ಬ್ಲ್ಯಾಕ್‌ ಹೆಡ್‌, ಸುಕ್ಕು, ಕಪ್ಪು ಕಲೆ, ಮೊಡವೆ ಕಲೆಗಳನ್ನು ಕಡಿಮೆ ಮಾಡುತ್ತದೆ.

10. ಒಡೆದ ಹಿಮ್ಮಡಿಗೂ ಮಾವಿನಹಣ್ಣಿನ ಬೀಜದ ಬಟರ್‌ ಅತ್ಯುತ್ತಮ ಮನೆಮದ್ದು.

ಮಾವಿನಹಣ್ಣಿನ ಬೀಜದ ಬಟರ್‌ ಮಾಡುವ ವಿಧಾನ: ಹಣ್ಣನ್ನು ತಿಂದ ಮೇಲೆ ವಾಟೆಯನ್ನು ಒಡೆದು ಒಳಗಿನ ಬೀಜ ತೆಗೆಯಿರಿ. ಇಂತಹ ನಾಲ್ಕೈದು ಬೀಜಗಳನ್ನು ತುರಿದಿಡಿ. ಎರಡು ಕಪ್‌ ತೆಂಗಿನೆಣ್ಣೆಯನ್ನು ಬಿಸಿ ಮಾಡಲು ಇಟ್ಟು ಅದಕ್ಕೆ ತುರಿದಿಟ್ಟ ಬೀಜವನ್ನು ಸೇರಿಸಿ. ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಯಲು ಬಿಡಿ. ಗುಳ್ಳೆಗಳು ಬರುವುದು ನಿಂತ ಮೇಲೆ, ಕೆಳಗಿಳಿಸಿ ಸೋಸಿ. ಇದನ್ನು ಎಣ್ಣೆಯಾಗಿ ಬಳಸಬಹುದು. ಅಥವಾ ಈ ಎಣ್ಣೆಯನ್ನು ಫ್ರಿಡ್ಜ್‌ನಲ್ಲಿಟ್ಟು ಬಟರ್‌ ಆಗಿಯೂ ಕ್ರೀಮ್‌ನಂತೆ ಬಳಸಬಹುದು. ಎಣ್ಣೆಗೆ ಶಿಯಾ ಬಟರ್‌, ವಿಟಮಿನ್‌ ಇ ಎಣ್ಣೆ ಮತ್ತು ಮ್ಯಾಂಗೋ ಎಸೆನ್ಶಿಯಲ್‌ ಆಯಿಲ್‌ ಸೇರಿಸಿ ಈ ಬಟರ್‌ ಅನ್ನೂ ಇನ್ನೂ ಸಮೃದ್ಧವಾಗಿಸಿ ಬಳಸಬಹುದು. ಇಂತಹ ಬಟರ್‌ ಮಾರುಕಟ್ಟೆಯಲ್ಲಿಯೂ ಸಿಗುತ್ತವೆ.

ಇದನ್ನೂ ಓದಿ: Mansoon Health Tips : ಮಳೆಗಾಲದಲ್ಲಿ ವೈರಲ್‌ ಸೋಂಕು ತಡೆಯುವುದು ಹೇಗೆ?

Exit mobile version