ಪ್ರಸ್ತುತ ಎಲ್ಲರ ಜೀವನಶೈಲಿಯು (Life style) ಒತ್ತಡದಿಂದಲೇ (Stress Anxiety) ಕೂಡಿದೆ. ಹೀಗಾಗಿ ಅನೇಕರು ಸಣ್ಣ ವಯಸ್ಸಿಗೆ ಹೃದಯಾಘಾತಕ್ಕೊಳಗಾಗುತ್ತಿದ್ದಾರೆ (heart attack), ಅನೇಕ ರೀತಿಯ ಮಾನಸಿಕ ಸಮಸ್ಯೆಗಳನ್ನು (mental problem) ಅನುಭವಿಸುತ್ತಿದ್ದಾರೆ. ಒತ್ತಡ (stress) ಎನ್ನುವುದು ಜೀವನದ ಒಂದು ನೈಸರ್ಗಿಕ ಭಾಗ. ಆದರೆ ಅದು ಹೆಚ್ಚಾದಾಗ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತದೆ.
ಮಾನಸಿಕ ಆರೋಗ್ಯದ ಬಗ್ಗೆ ನಾವು ಸಂಭಾಷಣೆಗಳನ್ನು ನಡೆಸುವುದು ಬಹುಮುಖ್ಯ. ಇಲ್ಲವಾದರೆ ಇದು ಗಂಭೀರ ಸ್ವರೂಪ ತೋರಬಹುದು. ಒತ್ತಡವನ್ನು ನಿರ್ವಹಿಸಲು ಮತ್ತು ಅದನ್ನು ನಿಯಂತ್ರಣದಿಂದ ಹೊರಗಿಡಲು ಅನೇಕ ದಾರಿಗಳಿವೆ. ಅವುಗಳಲ್ಲಿ ಕೆಲವು ಬಹುತೇಕ ಎಲ್ಲರಿಗೂ ಮಾಡಲು ಅನುಕೂಲಕರವಾಗಿದೆ.
ಧ್ಯಾನ ಅಭ್ಯಾಸ
ಒತ್ತಡವನ್ನು ನಿರ್ವಹಿಸಲು ಧ್ಯಾನ ಅತ್ಯಂತ ಸುಲಭವಾದ ದಾರಿಯಾಗಿದೆ. ಇದರ ಅಭ್ಯಾಸಕ್ಕೆ ಕೆಲವು ದಿನಗಳು ಬೇಕಾದರೂ ಕ್ರಮೇಣ ಇದು ನಮ್ಮ ಮನಸ್ಸಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡಿ ಉಲ್ಲಾಸದ ಅನುಭವವನ್ನು ಕೊಡುತ್ತದೆ. ಧ್ಯಾನದ ಮೂಲಕ ನಾವು ಮನಸ್ಸನ್ನು ಕೇಂದ್ರೀಕರಿಸಲು ಕೊಂಚ ಸಮಯ ತಗೆದುಕೊಳ್ಳಬೇಕಾಗಬಹುದು. ಇದು ಮನಸ್ಸನ್ನು ಶಾಂತಗೊಳಿಸಲು, ನಕಾರಾತ್ಮಕ ಚಿಂತನೆಯನ್ನು ಕಡಿಮೆ ಮಾಡಲು ಮತ್ತು ಆಂತರಿಕ ಶಾಂತಿಯ ಉತ್ತೇಜಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಕೇವಲ 5- 10 ನಿಮಿಷಗಳಿಂದ ಪ್ರಾರಂಭಿಸಿ.
ವ್ಯಾಯಾಮ
ದೈಹಿಕ ಚಟುವಟಿಕೆಯು ಶಕ್ತಿಯುತವಾದ ಒತ್ತಡ ನಿವಾರಣೆಯ ದಾರಿಯಾಗಿದೆ. ವ್ಯಾಯಾಮವು ಎಂಡಾರ್ಫಿನ್ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ದಿನದಲ್ಲಿ ಕನಿಷ್ಠ 30- 60 ನಿಮಿಷಗಳ ವ್ಯಾಯಾಮ ಮಾಡುವುದು ಗುರಿಯಾಗಿರಲಿ. ಅದು ಚುರುಕಾದ ನಡಿಗೆ, ಯೋಗ ಅಥವಾ ನೃತ್ಯ ತರಗತಿ ಹೀಗೆ ಯಾವುದೇ ಆಗಿರಲಿ.
ಉತ್ತಮ ನಿದ್ರೆ
ನಿದ್ರೆಯ ಕೊರತೆಯು ಒತ್ತಡವನ್ನು ಹೆಚ್ಚಿಸುತ್ತದೆ. ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಪ್ರತಿ ರಾತ್ರಿ 7- 9 ಗಂಟೆಗಳ ಗುಣಮಟ್ಟದ ನಿದ್ರೆ ಎಲ್ಲರಿಗೂ ಅಗತ್ಯ. ಹೀಗಾಗಿ ಮನಸ್ಸನ್ನು ಶಾಂತಗೊಳಿಸುವ ದಿನಚರಿ ನಿಮ್ಮದಾಗಿರಲಿ. ಮಲಗುವ ಕೋಣೆಯನ್ನು ತಂಪಾಗಿ ಮತ್ತು ಗಾಢವಾಗಿ ಇರಿಸಿ. ಮಲಗುವ ಮುನ್ನ ಕಂಪ್ಯೂಟರ್, ಟಿವಿ, ಮೊಬೈಲ್ ನೋಡುವುದನ್ನು ತಪ್ಪಿಸಿ. ನಿದ್ರಿಸಲು ತೊಂದರೆ ಹೆಚ್ಚಾಗಿದ್ದರೆ ವೈದ್ಯರೊಂದಿಗೆ ಮಾತನಾಡಿ.
ಆರೋಗ್ಯಕರ ಆಹಾರ ಪದ್ಧತಿ
ಏನು ತಿನ್ನುತ್ತೀರೋ ಅದು ಮನಸ್ಸಿನ ಒತ್ತಡದ ಮಟ್ಟಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಹಣ್ಣು, ತರಕಾರಿ, ನೇರ ಪ್ರೋಟೀನ್‌ಗಳು ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಂತಹ ಸಾಕಷ್ಟು ಸಂಪೂರ್ಣ ಆಹಾರಗಳೊಂದಿಗೆ ಸಮತೋಲಿತ, ಪೋಷಕಾಂಶವಿರುವ ಆಹಾರದ ಮೇಲೆ ಗಮನ ಕೇಂದ್ರೀಕರಿಸಿ. ಸಂಸ್ಕರಿಸಿದ ಆಹಾರ, ಸಕ್ಕರೆ ಮತ್ತು ಕೆಫೀನ್ ಅನ್ನು ಮಿತಿಗೊಳಿಸಿ. ಇದು ದೇಹದ ಒತ್ತಡದ ಪ್ರತಿಕ್ರಿಯೆಯನ್ನು ಅಡ್ಡಿಪಡಿಸುತ್ತದೆ.
ಪ್ರೀತಿಪಾತ್ರರೊಂದಿಗೆ ಸಂವಹನ
ಒತ್ತಡವನ್ನು ನಿರ್ವಹಿಸಲು ಬಲವಾದ ಸಾಮಾಜಿಕ ಸಂಪರ್ಕಗಳು ಅತ್ಯಗತ್ಯ. ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿಯಮಿತವಾಗಿ ಸಂಪರ್ಕ ಸಾಧಿಸಲು ಸಮಯ ಮಾಡಿಕೊಳ್ಳಿ. ಭಾವನೆಗಳನ್ನು ಹಂಚಿಕೊಳ್ಳುವುದು ಮತ್ತು ಪ್ರೀತಿಪಾತ್ರರಿಂದ ಬೆಂಬಲವನ್ನು ಪಡೆಯುವುದು ಸಾಕಷ್ಟು ಹಿತಕರವಾದ ಅನುಭವ ಕೊಡುತ್ತದೆ.
ಇದನ್ನೂ ಓದಿ: Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ
ವಿಶ್ರಾಂತಿ ಅಭ್ಯಾಸ
ಆಳವಾದ ಉಸಿರಾಟದಂತಹ ಅಭ್ಯಾಸಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸಲು ಬಳಸಬಹುದಾದ ವಿಶೇಷ ತಂತ್ರವಾಗಿದೆ. ದಿನಕ್ಕೆ ಕೇವಲ 10- 15 ನಿಮಿಷಗಳ ಕಾಲ ಇದನ್ನು ನಿಯಮಿತ ಅಭ್ಯಾಸವಾಗಿಸಿ.ಕ್ರಮೇಣ ಒತ್ತಡ ಹೆಚ್ಚಾದಾಗ ನೀವು ಈ ರೀತಿಯ ತಂತ್ರವನ್ನು ಸುಲಭವಾಗಿ ಅನುಸರಿಸುತ್ತೀರಿ. ಇದು ದೇಹ ಮತ್ತು ಮನಸ್ಸಿಗೆ ಸಾಕಷ್ಟು ಪ್ರಯೋಜನವನ್ನೂ ಕೊಡುತ್ತದೆ.