Site icon Vistara News

Health Tips: ಆರೋಗ್ಯ ಬೇಕೆ? ಹಾಗಿದ್ದರೆ ತಡಸಂಜೆಯ ಹೊಟ್ಟೆ ತುಂಬಿಸುವ ಸ್ನ್ಯಾಕ್‌ಗೆ ಕಡಿವಾಣ ಹಾಕಿ!

evening snacks

ಬಹಳಷ್ಟು ಮಂದಿಗೆ ಸಂಜೆಯ ಹೊತ್ತು ಏನಾದರೊಂದು ಹೊಟ್ಟೆಗಿಳಿಸುವ (Evening snacks) ಅಭ್ಯಾಸವಿರುತ್ತದೆ. ಮಧ್ಯಾಹ್ನದ ಊಟ ನಿಧಾನವಾಗಿ ಕರಗುತ್ತಾ ಸಂಜೆ ಐದರ ಮೇಲೆ ಹೊಟ್ಟೆ ಮೆತ್ತಗೆ ಚುರುಗುಟ್ಟಲು ಆರಂಭಿಸುವಾಗ, ಮೆಲ್ಲಗೆ ಆಫೀಸಿನಿಂದ ಏನಾದರೊಂದು ಹೊಟ್ಟೆ ತುಂಬಿಸುವ ಎಂದು ದರ್ಶಿನಿಗೋ, ರಸ್ತೆಬದಿ ಚಾಟ್‌ ಅಂಗಡಿಗೋ ಎಡತಾಕುವುದುಂಟು. ದಿನವೂ ಗೆಳೆಯರೊಡನೆ ಹರಟೆ ಹೊಡೆಯುತ್ತಾ ಸಿಕ್ಕಾಪಟ್ಟೆ ಹಸಿವು ಎಂದು ಗಬಗಬನೆ ಸಮೋಸವನ್ನೋ, ಪಾವ್‌ ಭಾಜಿಯನ್ನೋ ಅಥವಾ ಬಜ್ಜಿ ಬೋಂಡಾ ಥರದ ಇನ್ನೇನಾದರೂ ಹೊಟ್ಟೆ ತುಂಬಿಸಬಲ್ಲ ತಿನಿಸುಗಳನ್ನು ಯಾವ ನಿಯಂತ್ರಣವೂ ಇಲ್ಲದೆ ತಿಂದು ಒಂದು ಚಹಾ ಕುಡಿದು ಮತ್ತೆ ಬಂದು ಆಫೀಸು ಡೆಸ್ಕಿನಲ್ಲಿ ಕೂತು, ಪಡೆದ ಒಂದಷ್ಟು ಶಕ್ತಿಯನ್ನು ಪಡೆದು ಇನ್ನೊಂದೆರಡು ಗಂಟೆ ಕೆಲಸ ಮಾಡಿ ಮನೆಗೆ ಮರಳುವುದುಂಟು. ಮನೆಗೆ ಬಂದು ಫ್ರೆಶ್ಶಾಗಿ, ಹತ್ತು ಗಂಟೆಗೋ, ಹನ್ನೊಂದಕ್ಕೋ ಊಟ ಮಾಡಿ ಸ್ವಲ್ಪ ಹೊತ್ತು ನೆಟ್‌ಫ್ಲಿಕ್ಸನ್ನೋ, ಪ್ರೈಮನ್ನೋ ಜಾಲಾಡಿ (Binge watch) ನಿದ್ದೆಗೆ ಜಾರುವುದು ಇಂದು ಬಹುತೇಕರಿಗೆ ಅಭ್ಯಾಸವಾಗಿ ಹೋದ ದಿನಚರಿ. ಇದರಿಂದ ಆರೋಗ್ಯಕ್ಕೆ (health tips) ಏನಾಗುತ್ತದೆ? ಗಮನಿಸೋಣ.

ಆದರೆ, ಈ ದಿನಚರಿಯಿಂದಲೇ ಆಗಿರುವ ಅಥವಾ ಆಗುತ್ತಿರುವ ಅಡ್ಡ ಪರಿಣಾಮಗಳನ್ನು ಎಂದಾದರೂ ಗಮನಿಸಿದ್ದೀರಾ? ಸಮೋಸಾ, ಪಕೋಡಾ, ಬ್ರೆಡ್‌ ರೋಲ್‌, ನೂಡಲ್ಸ್ ಇತ್ಯಾದಿ ಇತ್ಯಾದಿ ಜಂಕ್‌ ಆಹಾರವನ್ನು ಸಾಮಾನ್ಯವಾಗಿ ಭಾರತೀಯರಿಗೆ ಸಂಜೆಯ ಹೊತ್ತಿನಲ್ಲಿ ತಿಂದು ರೂಢಿ. ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸಂಜೆಯ ಹೊತ್ತು, ಮನಸ್ಸು ಇಂತಹ ಆಹಾರಕ್ಕಾಗಿ ಹಾತೊರೆಯುತ್ತಿರುತ್ತದೆ. ಆದರೆ, ಬಹಳಷ್ಟು ಮಂದಿ ಇದರಿಂದಾಗಿ, ತಡವಾಗಿ ಉಣ್ಣುವುದು ಅಥವಾ ರಾತ್ರಿಯ ಊಟವನ್ನು ಬಿಡುವುದು ಇತ್ಯಾದಿಗಳನ್ನು ಮಾಡುತ್ತಾರೆ. ದೇಹಕ್ಕೆ ಸರಿಯಾದ ಸಮಯಕ್ಕೆ ಕೊಡಬೇಕಾದ ಪೋಷಕಾಂಶಗಳೂ (Nutrients) ದಕ್ಕುವುದಿಲ್ಲ. ಬಹುತೇಕ ಎಲ್ಲರೂ ಇಂದು ಅನುಭವಿಸುತ್ತಿರುವ ತೂಕ ಹೆಚ್ಚಳ (weight gain), ಬೊಜ್ಜಿನ (cholesterol) ಸಮಸ್ಯೆಗೆ ಇದೂ ಪ್ರಮುಖ ಕಾರಣವಾಗಿದೆ ಎಂದರೆ ನೀವು ನಂಬಲೇಬೇಕು.

ಈ ಎಲ್ಲ ಸ್ನ್ಯಾಕ್‌ಗಳನ್ನು ಬಿಡಿ: ಮುಖ್ಯವಾಗಿ, ತಡ ಸಂಜೆಯ ಇಂಥ ಆಹಾರ ಸೇವನೆಯಿಂದ ರಾತ್ರಿಯ ಊಟ ನಿಧಾನವಾಗುತ್ತದೆ. ಬ್ರೆಡ್‌ ರೋಲ್‌, ಸ್ಯಾಂಡ್‌ವಿಚ್‌, ಪಕೋಡಾ, ನೂಡಲ್ಸ್‌, ಸಮೋಸ ಇತ್ಯಾದಿಗಳಿಂದ ದೇಹಕ್ಕೆ ಮೈದಾ, ಅತಿಯಾದ ಎಣ್ಣೆಯಂಶ, ಆಲೂಗಡ್ಡೆ ಇತ್ಯಾದಿಗಳು ಸೇರಿ, ನಿಧಾನವಾಗಿ ಜೀರ್ಣಕ್ರಿಯೆ ಶುರುವಾಗುತ್ತದೆ. ಇದರಿಂದ ಹಸಿವು ಮಾಯವಾಗಿ, ರಾತ್ರಿ ಹತ್ತು ಹನ್ನೊಂದರ ವೇಳೆಗೆ ಹಸಿವಾಗುತ್ತದೆ. ಪರಿಣಾಮ ತಡವಾಗಿ ಊಟದಿಂದ ಮತ್ತೆ ಆರೋಗ್ಯ ಹದ ತಪ್ಪುತ್ತದೆ. ತೂಕ, ಬೊಜ್ಜು ಹೆಚ್ಚುತ್ತದೆ.

ಅಷ್ಟೇ ಅಲ್ಲ, ಇಂಥ ಆಹಾರಗಳಲ್ಲಿ ಪೋಷಕಾಂಶ ಕಡಿಮೆ, ಬದಲಾಗಿ ಸಕ್ಕರೆ, ಕಾರ್ಬೋಹೈಡ್ರೇಟ್‌ ಪ್ರಮಾಣ ಹೆಚ್ಚು. ಇದರಿಂದ ಪಿತ್ತಕೋಶ, ಹೃದಯ, ಮೆದೋಜೀರಕಾಂಗ ಇತ್ಯಾದಿಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅಲ್ಲದೆ ಇಂತಹ ಬೀದಿಬದಿಯ ತಿಂಡಿಗಳು ಮನೆಯ ತಿಂಡಿಯಷ್ಟು ಆರೋಗ್ಯಕರವೂ ಅಲ್ಲ. ಪದೇ ಪದೇ ಕರಿದ ಎಣ್ಣೆಯಲ್ಲೇ ಕರಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತದೆ. ಈ ಕಾರಣಗಳಿಂದ ಇಂದು ಬಹುತೇಕರು ಅನುಭವಿಸುವ ಬೊಜ್ಜಿನ ಸಮಸ್ಯೆ, ತೂಕದಲ್ಲಿ ಹೆಚ್ಚಳ, ಫ್ಯಾಟಿ ಲಿವರ್‌, ಮಧುಮೇಹ, ನಿದ್ದೆಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆಗಳು, ಅಧಿಕ ಕೊಲೆಸ್ಟೆರಾಲ್‌, ಸಂಧಿವಾತ ಸೇರಿದಂತೆ ನಾನಾ ಸಮಸ್ಯೆಗಳು ಆರಂಭವಾಗುತ್ತದೆ.

ಇದನ್ನೂ ಓದಿ: Health Tips: ನಮ್ಮ ಆಹಾರದಲ್ಲಿ ಪ್ರೊಟೀನ್‌ ಎಷ್ಟಿರಬೇಕು?

ಇಂತಹ ಎಣ್ಣೆಯುಕ್ತ ಆಹಾರಗಳು, ಜಂಕ್‌ ಸಂಜೆಯ ಹೊತ್ತು ತಿನ್ನುವುದರಿಂದಲೇ, ಬಹಳ ಮಂದಿ, ಹೊಟ್ಟೆಯುಬ್ಬರ, ದುರ್ಬಲ ಜೀರ್ಣಕ್ರಿಯೆ, ಗ್ಯಾಸ್‌ ಮತ್ತಿತರ ಸಾಮಾನ್ಯ ತೊಂದರೆಗಳಿಂದಲೂ ಬಳಲುತ್ತಿರುತ್ತಾರೆ. ಎದೆಯುರಿ, ಹೊಟ್ಟೆನೋವು ಮತ್ತಿತರ ಸಮಸ್ಯೆಗಳೂ ಸಾಮಾನ್ಯ. ಹಲ್ಲಿನ ಸವಕಳಿ, ಹಲ್ಲು ಹುಳ ಹಿಡಿಯುವುದು ಇತ್ಯಾದಿಗಳೂ ಕೂಡಾ ಬರಬಹುದು. ಇಂತಹ ಆಹಾರ ಸೇವಿಸಿದಾಗಲೇ ಹಲ್ಲಿಗೆ ಬ್ಯಾಕ್ಟೀರಿಯಾಗಳು ಬಹುಬೇಗನೆ ದಾಳಿ ಮಾಡುತ್ತವೆ. ಹಾಗಾಗಿ, ಇಂತಹ ಆಹಾರ ಸೇವಿಸಿದರೆ, ಒಮ್ಮೆ ಹಲ್ಲುಜ್ಜಿ, ಶುಚಿಯಾಗಿ ಹಲ್ಲನ್ನು ಇಟ್ಟುಕೊಳ್ಳುವುದು ಉತ್ತಮ.

ಏನು ತಿನ್ನಬೇಕು!: ಹಾಗಾದರೆ, ʻಇಂಥ ಹೊತ್ತಿನಲ್ಲೇ ನಮಗೆ ಹಸಿವಾಗುತ್ತದಲ್ಲ, ಊಟ ಮಾಡುವ ಹೊತ್ತಲ್ಲ ಇದು, ಹಸಿವಿಗೇನು ಮಾಡುವುದು?ʼ ಎಂದು ನೀವು ಮರುಪ್ರಶ್ನೆ ಹಾಕಬಹುದು. ಖಂಡಿತವಾಗಿಯೂ ಕಡಿಮೆ ಕ್ಯಾಲರಿಯ, ಎಣ್ಣೆರಹಿತ, ಭಾರತೀಯ ಸರಳ ಆಹಾರಗಳಿವೆ. ಕೊಂಚ ಪ್ರಯತ್ನಪಟ್ಟರೆ ಹುಡುಕುವುದು, ಮಾಡಿ ತರುವುದೇನೂ ಕಷ್ಟವಲ್ಲ. ಬೇಯಿಸಿದ ಮೊಟ್ಟೆ, ಪೋಹಾ, ಒಣ ಬೀಜಗಳು, ಚುರುಮುರಿ, ಸ್ಮೂದಿಗಳು, ಹಣ್ಣುಗಳು, ಬೇಯಿಸಿದ ಕಡಲೆ ಅಥವಾ ಹೆಸರು ಕಾಳು, ಒಂದೆರಡು ಓಟ್ಸ್‌ ಬಿಸ್ಕತ್ತುಗಳು ಇತ್ಯಾದಿ ಹಲವು ಆಯ್ಕೆಗಳಿವೆ. ಅಂತಹ ಆಯ್ಕೆಗಳನ್ನು ಮಾಡಿ ಹೊಟ್ಟೆಯನ್ನು ಲಘುವಾಗಿ ತುಂಬಿಸಿ. ನಂತರ ಒಂದೆರಡು ಗಂಟೆಯೊಳಗೆ ಊಟ ಮುಗಿಸಿ. ರಾತ್ರಿ ಮಲಗುವ ವೇಳೆಗೆ ಹೊಟ್ಟೆ ಆದಷ್ಟು ಹಗುರಾಗಿರುವುದನ್ನು ನೋಡಿಕೊಂಡರೆ, ನೀವೇ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಕಾಣುವಿರಿ!

ಇದನ್ನೂ ಓದಿ: Health Tips For Rainy Season: ಮಳೆಗಾಲದಲ್ಲಿ ಹೆಚ್ಚುವ ನೋವುಗಳನ್ನು ಕಡಿಮೆ ಮಾಡುವುದು ಹೇಗೆ?

Exit mobile version