Site icon Vistara News

Health Tips in Kannada: ಕಾಮಕಸ್ತೂರಿ ಬೀಜದ ಪಾನಕ ಕುಡಿದರೆ ಆರೋಗ್ಯ ವೃದ್ಧಿ ಪಕ್ಕಾ!

Health Tips in Kannada

ಹಲವು ಪ್ರಶ್ನೆಗಳಿಗೆ ಒಂದೇ (Health Tips in Kannada) ಉತ್ತರ ನೀಡುವ ಒಗಟನ್ನು ಚಿಕ್ಕಂದಿನಲ್ಲಿ ಆಡಿರಬಹುದು. ಆದರೆ ಆರೋಗ್ಯದ (health) ವಿಷಯದಲ್ಲಿ ಇಂಥ ಒಗಟುಗಳು ಕಡಿಮೆ. ಹಲವು ಸಮಸ್ಯೆಗಳಿಗೆ ಒಂದೇ ಮದ್ದು ಹುಡುಕುವುದು ಕೊಂಚ ಕಷ್ಟವೇ. ಆದರೂ ಸಬ್ಜ (sabja seeds) ಅಥವಾ ಕಾಮಕಸ್ತೂರಿ ಬೀಜಗಳು ಇಂಥ ಕೆಲಸವನ್ನು ಮಾಡಬಲ್ಲವು. ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು ಅನುಕೂಲಗಳನ್ನು ಒದಗಿಸಬಲ್ಲದು. ಈ ಬಗೆಗಿನ ವಿವರಗಳು ಇಲ್ಲಿವೆ.

ರಾತ್ರಿ (night) ಮಲಗುವಾಗ ಒಂದು ಗ್ಲಾಸ್‌ ನೀರಿಗೆ ಒಂದು ಚಮಚ ತುಂಬಾ ಕಾಮಕಸ್ತೂರಿ ಬೀಜಗಳನ್ನು ಹಾಕಿಟ್ಟರೆ ಕೆಲಸ ಮುಗಿಯಿತು. ಬೆಳಗಿನ ಹೊತ್ತಿಗೆ ಚೆನ್ನಾಗಿ ನೆನೆದ ಬೀಜಗಳು ಸೇವನೆಗೆ ಸಿದ್ಧವಾಗಿರುತ್ತವೆ. ಜೆಲ್‌ನಂತೆ ಕಾಣುವ ಇದಕ್ಕೆ ಹಾಲು ಹಾಕಿ ಸೇವಿಸಬಹುದು, ಇನ್ನಷ್ಟು ನೀರು, ನಿಂಬೆರಸ ಹಾಕಿ ಕುಡಿಯಬಹುದು. ಅಂತೂ ನಿಮ್ಮಿಷ್ಟದ ಯಾವುದನ್ನೂ ಇದಕ್ಕೆ ಸೇರಿಸಿಕೊಂಡು ಕುಡಿದರೆ ಆರೋಗ್ಯಕರ ಲಾಭಗಳು ದೊರೆಯುವುದು ನಿಶ್ಚಿತ.

ಪ್ರೊಟೀನ್‌ಗಳ ಖಣಜ

ಬೆಸಿಲ್‌ ಬೀಜಗಳೆಂದೂ ಕರೆಸಿಕೊಳ್ಳುವ ಇವುಗಳ ಬಳಕೆ ಇಂದು-ನಿನ್ನೆಯದಲ್ಲ. ಶತಮಾನಗಳಿಂದ ಚಾಲ್ತಿಯಲ್ಲಿ ಇರುವಂಥದ್ದು. ನೋಡುವುದಕ್ಕೆ ಚಿಯಾ ಬೀಜಗಳ ಸೋದರ ಸಂಬಂಧಿಯಂತೆ ಕಾಣುವ ಈ ಬೀಜಗಳು ಪ್ರೊಟೀನ್‌ಗಳ ಪುಟ್ಟ ಪೊಟ್ಟಣವಿದ್ದಂತೆ. ಜೊತೆಗೆ ಅಗತ್ಯವಾದ ನಾರು, ಖನಿಜಗಳು ಮತ್ತು ಜೀವಸತ್ವಗಳಿಂದ ಭರಿತವಾಗಿವೆ. ಇದರಿಂದ ಮೂಳೆಗಳು ಬಲವಾಗುವುದಲ್ಲದೆ, ಜೀರ್ಣಾಂಗಗಳ ಕ್ಷಮತೆಯೂ ಹೆಚ್ಚುತ್ತದೆ.

ಸತ್ವಗಳೇನಿವೆ?

ಪ್ರೊಟೀನ್‌ ಪರಿಪೂರ್ಣವಾಗುವಂಥ ಎಲ್ಲ ಅಮೈನೊ ಆಮ್ಲಗಳು ಮತ್ತು ಕೊಬ್ಬಿನಾಮ್ಲಗಳು ಇದರಲ್ಲಿವೆ. ಜೊತೆಗೆ ಹೇರಳವಾಗಿ ನಾರು, ಕ್ಯಾಲ್ಸಿಯಂ, ಮೆಗ್ನೀಶಿಯಂ, ಕಬ್ಬಿಣ ಮುಂತಾದ ಖನಿಜಗಳು ಮತ್ತು ವಿಟಮಿನ್‌ಗಳು ತುಂಬಿವೆ. ಈ ಸತ್ವಭರಿತ ಸಬ್ಜ ಬೀಜಗಳನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದಿನವಿಡೀ ದೇಹದ ಶಕ್ತಿ ಕುಂದದಂತೆ ಕಾಪಾಡಿಕೊಳ್ಳಬಹುದು.


ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಇದರಲ್ಲಿ ನಾರು ಅಧಿಕ ಪ್ರಮಾಣದಲ್ಲಿದೆ. ಹಾಗಾಗಿ ಮಲಬದ್ಧತೆಯನ್ನು ನಿವಾರಿಸುವಲ್ಲಿ ಇದು ಪ್ರಧಾನವಾಗಬಲ್ಲದು. ದಿನವೂ ಬೆಳಗಿನ ಹೊತ್ತು ಇದನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ, ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ನಿಯಮಿತವಾಗಿ ವಿರೇಚನದ ಕೆಲಸವನ್ನೂ ನಿರ್ವಹಿಸುತ್ತದೆ. ಹಾಗಾಗಿ ಹೊಟ್ಟೆಯುಬ್ಬರ, ಅಜೀರ್ಣದಂಥ ತೊಂದರೆಗಳನ್ನೂ ನಿವಾರಿಸಬಲ್ಲದು.

ತೂಕ ನಿರ್ವಹಣೆ

ನೆನೆದು ಜೆಲ್‌ನಂತಾಗುವ ಕಾಮಕಸ್ತೂರಿ ಬೀಜಗಳು ತೂಕ ನಿರ್ವಹಣೆಯಲ್ಲೂ ನೆರವಾಗಬಲ್ಲವು. ಇದರಲ್ಲಿರುವ ಅಧಿಕ ನಾರು ಮತ್ತು ಪ್ರೊಟೀನ್‌ ಅಂಶಗಳು ಹೆಚ್ಚು ಸಮಯ ಹೊಟ್ಟೆ ತುಂಬಿರುವ ಅನುಭವ ನೀಡಿ, ಕಳ್ಳ ಹಸಿವೆಯನ್ನು ನಿವಾರಿಸುತ್ತವೆ. ಜೊತೆಗೆ ಕಡಿಮೆ ಕ್ಯಾಲರಿಯನ್ನು ಹೊಂದಿರುವ ಈ ಬೀಜಗಳು ಅಧಿಕ ಪೋಷಕ ಸತ್ವಗಳನ್ನು ನೀಡುತ್ತವೆ. ಈ ಮೂಲಕ ತೂಕ ಇಳಿಸುವವರಿಗೆ ಉಪಯುಕ್ತ ಎನಿಸಿವೆ.

ಮಧುಮೇಹಿಗಳಿಗೆ ಸೂಕ್ತ

ದೇಹದಲ್ಲಿ ಪಿಷ್ಟವನ್ನು ದಿಢೀರನೆ ಹೀರಿಕೊಂಡು ರಕ್ತಕ್ಕೆ ಗ್ಲೂಕೋಸ್‌ ಬಿಡುಗಡೆ ಒಮ್ಮೆಲೆ ಆಗುವುದನ್ನು ಸಬ್ಜ ಬೀಜಗಳು ತಡೆಯುತ್ತವೆ. ಹಾಗಾಗಿ ರಕ್ತದಲ್ಲಿ ಸಕ್ಕರೆಯಂಶ ಏರಿಳಿತ ಆಗುವುದನ್ನು ತಡೆಯಬಹುದು. ಹಾಗಾಗಿ ಬೆಳಗಿನ ಹೊತ್ತು ಕಾಮಕಸ್ತೂರಿ ಬೀಜವನ್ನು ಕುಡಿಯುವುದು ಮಧುಮೇಹಿಗಳಿಗೆ ಒಳ್ಳೆಯ ಫಲಿತಾಂಶ ನೀಡಬಹುದು.

ಇದನ್ನೂ ಓದಿ: Skin Care Tips: ಬಿಸಿಲಿನಿಂದ ಚರ್ಮ ಕಪ್ಪಾಗಿದೆಯಾ? ಇಲ್ಲಿದೆ ಸರಳ ಮನೆಮದ್ದು

ಡಿಟಾಕ್ಸ್‌

ದೇಹದಲ್ಲಿ ಬೇಡದ ಅಂಶವನ್ನು ಹೊರಹಾಕುವಲ್ಲಿ ಕಾಮಕಸ್ತೂರಿ ಬೀಜಗಳು ಪ್ರಯೋಜನಕಾರಿ. ಬೆಳಗಿನ ಹೊತ್ತು ನೆನೆದು ಜೆಲ್‌ನಂತಾದ ಬೀಜಗಳನ್ನು ದೊಡ್ಡ ಗ್ಲಾಸ್‌ ನೀರಿಗೆ ಬೆರಸಿ, ಜೊತೆಗೆ ಕೆಲವು ಹನಿ ನಿಂಬೆರಸ ಸೇರಿಸಿ ಕುಡಿಯುವುದರಿಂದ ಡಿಟಾಕ್ಸ್‌ ಮಾಡುವುದಕ್ಕೆ ಅನುಕೂಲ. ಇದರಿಂದ ದೇಹದ ಚಯಾಪಚಯ ಕ್ರಿಯೆ ಸುಧಾರಿಸಿ, ಜೀರ್ಣಾಂಗಗಳು ಶುದ್ಧಗೊಂಡು, ದೇಹದ ಸ್ವಾಸ್ಥ್ಯ ಹೆಚ್ಚುತ್ತದೆ.

ಚರ್ಮದ ಕಾಂತಿ

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳಿಂದಾಗಿ ಕೂದಲು ಮತ್ತು ಚರ್ಮದ ಆರೋಗ್ಯ ಸುಧಾರಿಸುತ್ತದೆ. ಚರ್ಮದ ಮೇಲಿನ ಸುಕ್ಕುಗಳು ಕಡಿಮೆಯಾಗಿ, ಕಾಂತಿ ಹೆಚ್ಚುತ್ತದೆ. ಮೊಡವೆ ಮತ್ತು ಕಪ್ಪು ಕಲೆಗಳು ಮಾಯವಾಗಿ ವಯಸ್ಸಾಗುವುದನ್ನು ಮುಂದೂಡುತ್ತದೆ. ದೇಹಕ್ಕೆ ಬೇಕಾದ ಸೂಕ್ಷ್ಮ ಸತ್ವಗಳು ದೊರೆಯುತ್ತಿದ್ದಂತೆ ಕೂದಲಿನ ಸಮಸ್ಯೆಗಳು ಕಡಿಮೆಯಾಗಿ, ಕೇಶರಾಶಿ ನಳನಳಿಸಬಹುದು.

Exit mobile version